ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲ ವಿಶ್ವಾಸ ಇದ್ದರೆ ಬಡತನ ಅಡ್ಡಿಯಲ್ಲ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸೂಪರ್ 30 ಆನಂದಕುಮಾರ್~-ಬಿಹಾರ ಹಾಗೂ ಛತ್ತೀಸ್‌ಗಡ ರಾಜ್ಯದ ಐಐಟಿ (ಭಾರತೀಯ ತಾಂತ್ರಿಕ ಸಂಸ್ಥೆ) ಕೋಚಿಂಗ್ ವಲಯದಲ್ಲಿ ಈ ಹೆಸರು ಕಳೆದ ಒಂಬತ್ತು ವರ್ಷಗಳಿಂದ ಚಿರಪರಿಚಿತ.

ನಂತರ ಈ ಹೆಸರು ಭಾರತದಾದ್ಯಂತ ಹರಡಿ, ಅಮೆರಿಕದ ನ್ಯೂಯಾರ್ಕ್ ಟೈಮ್ಸ ಪತ್ರಿಕೆಯ ಅಂಗಳವನ್ನೂ ತಲುಪಿತು. ಕಾರಣ ಒಂದೇ. 2002ರಿಂದ ಇವರ ಕೋಚಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದವರು ಜರ್ಮನಿ, ಅಮೆರಿಕ ಹಾಗೂ ಭಾರತದ ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ.

ಬಿಹಾರದ ಮೂಲೆ-ಮೂಲೆಯಲ್ಲಿರುವ ಬಡತನದಲ್ಲಿ ನರಳುತ್ತಿರುವ ಪ್ರತಿಭೆಗಳನ್ನು ವರ್ಷಕ್ಕೆ 30 ಮಂದಿಯಂತೆ ಆರಿಸಿ ತಮ್ಮದೇ ಖರ್ಚಿನಲ್ಲಿ ತರಬೇತಿ ಸಾಮಗ್ರಿ, ಊಟ, ವಾಸದ ವ್ಯವಸ್ಥೆ ಮಾಡಿ ಐಐಟಿ ತರಬೇತಿ ನೀಡುತ್ತಿದ್ದಾರೆ.

`ಪ್ರಜಾವಾಣಿ,~ `ಡೆಕ್ಕನ್‌ಹೆರಾಲ್ಡ್~ ಪತ್ರಿಕಾ ಸಮೂಹ ನಗರದ ಶಿಕ್ಷಕರ ಸದನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಮಿಷನ್ ಅಡ್ಮಿಷನ್~ ಕೌನ್ಸೆಲಿಂಗ್ ಕಾರ್ಯಕ್ರಮದ ನಂತರ ಪ್ರಜಾವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

* ನಿಮ್ಮ ಕೌಟುಂಬಿಕ ಹಿನ್ನೆಲೆ?

ನನ್ನ ಊರು ಬಿಹಾರ ರಾಜಧಾನಿ ಪಟ್ನಾ ಬಳಿಯ ದೇವದಹಾ. ತಂದೆ ಅಂಚೆ ಇಲಾಖೆ ನೌಕರರಾಗಿದ್ದ ದಿ.ರಾಜೇಂದ್ರ, ತಾಯಿ ಜಯಂತಿದೇವಿ. ಪತ್ನಿ ರಿತು ಬೆಂಗಳೂರಿನ ವಿಪ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಪಾಟ್ನಾಕ್ಕೆ ಬಂದು ನನ್ನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. 

 *ಸಂಸ್ಥೆಗೆ `ಸೂಪರ್ 30~ ಹೆಸರಿಡಲು ಕಾರಣ?

 ಅದೊಂದು ವಿಶಿಷ್ಟ ಸಂಗತಿ. ಬಡತನದ ಕುಟುಂಬವಿದ್ದರೂ ಸಹ ನನ್ನ ಪ್ರಾಧ್ಯಾ  ಕರ ಸಹಕಾರದಿಂದ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ನಾನು ಹೋದ ಕೆಲ ತಿಂಗಳಲ್ಲಿಯೇ ತಂದೆ ತೀರಿ ಹೋದರು. ಆದ್ದರಿಂದ ಶಿಕ್ಷಣವನ್ನು ಮೊಟಕುಗೊಳಿಸಿ ಬಿಹಾರಕ್ಕೆ ವಾಪಸಾದೆ.
 
ನಂತರ ಅಲ್ಲಿರುವ ರಿಕ್ಷಾ ಎಳೆಯುವ, ತರಕಾರಿ ಮಾರುವವರ ಮಕ್ಕಳು ಪ್ರತಿಭಾವಂತದಿದ್ದರೂ ಐಐಟಿ-ಜೆಇಇ ಅಥವಾ ನಾಗರಿಕ ಸೇವಾ ಪರೀಕ್ಷೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಯೋಚಿಸಿ ಈ ಸಂಸ್ಥೆ ಸ್ಥಾಪಿಸಿದೆ. 2002ರಲ್ಲಿ ಇದು ಆರಂಭವಾದಾಗ ಯಾವುದೇ ಶುಲ್ಕವಿಲ್ಲದೇ 30 ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಿದೆ. ಅವರು ಐಐಟಿ ಪರೀಕ್ಷೆ ಪಾಸಾದರು. ಹೀಗೆ ಉತ್ತಮ ಸಾಧನೆ ಮಾಡಿದ್ದ 30 ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು `ಸೂಪರ್ 30~ ಎಂದು ನಾಮಕರಣ ಮಾಡಿದೆ.

* ಖರ್ಚನ್ನು ಹೇಗೆ ನಿಭಾಯಿಸುತ್ತೀರಿ? 
 ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಅನಿವಾಸಿ ಭಾರತೀಯರು ಹಣಕಾಸು ನೆರವು ನೀಡಲು ಮುಂದೆ ಬಂದಿದ್ದರೂ, `ಆತ್ಮಾಭಿಮಾನವಿರುವ ವಿದ್ಯಾರ್ಥಿ ಹಣಕಾಸು ನೆರವು ಇಲ್ಲದೇ ಸಾಧನೆ ಮಾಡಲು ಸಾಧ್ಯ~ ಎಂದು ತೋರಿಸಲು ನಾವು ಯಾರಿಂದಲೂ ವಂತಿಗೆ ಪಡೆಯುವುದಿಲ್ಲ. ಪ್ರತಿ ವರ್ಷ 30 ಮಕ್ಕಳನ್ನು ಗುರುತಿಸಿ ಪ್ರವೇಶ ಪರೀಕ್ಷೆ ಮೂಲಕಆಯ್ಕೆ ಮಾಡಿಕೊಂಡು ತರಬೇತಿ ನೀಡುತ್ತೇವೆ. ಜೊತೆಗೆ ಶ್ರೀಮಂತರ ಮಕ್ಕಳಿಗೆ ತರಬೇತಿ ನೀಡುವಾಗ ಶುಲ್ಕ ಸಂಗ್ರಹಿಸಿ ಬಡ ಮಕ್ಕಳ ಊಟ, ವಸತಿ ಮತ್ತು ನಮ್ಮ ಕುಟುಂಬದ ಖರ್ಚನ್ನು ನಿಭಾಯಿಸುತ್ತೇವೆ. 

 * ರಾಜ್ಯ, ಕೇಂದ್ರ ಸರ್ಕಾರದ ಶೈಕ್ಷಣಿಕ ನೀತಿಗಳು ಸಮರ್ಪಕವಾಗಿವೆಯೇ?
ಕೆಲವೊಂದು ಲೋಪದೋಷಗಳಿವೆ. ವಿವಿಧ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ ಉತ್ತಮ ಶಿಕ್ಷಕರನ್ನು ತಯಾರಿಸಲು ಭಾರತೀಯ ಶಿಕ್ಷಕರ ಸೇವೆ (ಐಟಿಎಸ್) ಸ್ಥಾಪಿಸಬೇಕು. ಶಿಕ್ಷಣ ಹಳ್ಳಿಗಳನ್ನು ತಲುಪಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು. 

 * ನಿಮ್ಮ ಮುಂದಿನ ಯೋಜನೆಗಳು?
ಈಗ ಇರುವ 30 ವಿದ್ಯಾರ್ಥಿಗಳ ಮಿತಿಯನ್ನು ಹೆಚ್ಚಿಸಲಾಗುವುದು. ಬೆಂಗಳೂರಿನ ಕೆಲ ವಿದ್ಯಾರ್ಥಿಗಳನ್ನು ಪಾಟ್ನಾಕ್ಕೆ ಕರೆದೊಯ್ದು ತರಬೇತಿ ನೀಡುವ ಆಸೆ ಇದೆ. ಆನ್‌ಲೈನ್ ಮೂಲಕ ಉಚಿತವಾಗಿ ಪಾಠ ಮಾಡುವ ಉದ್ದೇಶವಿದೆ. ಐಐಟಿ ಓದುವ ಇತರ ರಾಜ್ಯ ವಿದ್ಯಾರ್ಥಿಗಳಿಗೂ ಉಚಿತ ಕ್ಯಾಸೆಟ್, ಟಿಪ್ಪಣಿಗಳನ್ನು ಒದಗಿಸುತ್ತೇನೆ. ನಮ್ಮ ಸೇವಾ ಕಾರ್ಯದಲ್ಲಿ ನಿಸ್ವಾರ್ಥ ಮನೋಭಾವದಿಂದ ಕೈಜೋಡಿಸುವ ಶಿಕ್ಷಕರನ್ನು ಆಹ್ವಾನಿಸಲು `ಟೀಚರ್ಸ್‌ ಬ್ಯಾಂಕ್~ ಸ್ಥಾಪಿಸಲಿದ್ದೇವೆ.


* ವಿದ್ಯಾರ್ಥಿಗಳಿಗೆ ನಿಮ್ಮ ಸಂದೇಶ?

 ಬಡವರಿದ್ದೇವೆಂದು ನಿರಾಶರಾಗಬೇಡಿ. ನಿರಂತರ ಪ್ರಯತ್ನ ಮಾಡುತ್ತಾ ಇರಿ. ನಿಮ್ಮ ಪ್ರತಿಭೆ ಗುರುತಿಸುವ ಸಮಯ ಬಂದೇ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT