ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.1ರಿಂದ 32467 ಮಂದಿಗೆ ನೇರ ಸಹಾಯಧನ

ಆಧಾರ್ ಆತಂಕ ಬೇಡ, 6 ತಿಂಗಳ ಕಾಲ ಆಧಾರ್ ಕೇಂದ್ರ
Last Updated 28 ಡಿಸೆಂಬರ್ 2012, 8:51 IST
ಅಕ್ಷರ ಗಾತ್ರ

ತುಮಕೂರು: ಆಧಾರ್ ಕಾರ್ಡ್ ಇಲ್ಲದಿದ್ದರೆ ಗೃಹ ಬಳಕೆ ಅನಿಲ ಸಿಲಿಂಡರ್ ಸಹಾಯಧನ ಬರುವುದಿಲ್ಲ ಎಂಬ ಆತಂಕ ಜಿಲ್ಲೆಯ ಜನತೆಗೆ ಬೇಡ. ಜ. 1ರಿಂದ ನೇರ ಸಹಾಯಧನ ಯೋಜನೆ ಜಿಲ್ಲೆಯಲ್ಲಿ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ ಕೇವಲ ಕೇಂದ್ರ ಸರ್ಕಾರದ 7 ಇಲಾಖೆಗಳ 19 ಯೋಜನೆಗಳಷ್ಟೇ ನೇರ ಸಹಾಯಧನ ಯೋಜನೆಗೆ ಒಳಪಡಲಿವೆ.

ಹತ್ತೊಂಬತ್ತು ಸೇವೆಗಳಲ್ಲಿ ಎಲ್ಲವೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಯೋಜನೆಗಳಾಗಿವೆ. ಇವುಗಳೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜನನಿ ಸುರಕ್ಷಾ ಯೋಜನೆ ಮಾತ್ರ ಸೇರಿಸಲಾಗಿದೆ. ಹೀಗಾಗಿ ಸಾಮಾನ್ಯ ಜನತೆ ಸದ್ಯಕ್ಕೆ ಆಧಾರ್ ಇಲ್ಲವೆಂಬ ಆತಂಕದಿಂದ ದೂರ ಇರಬಹುದು.

ನೇರ ಸಹಾಯಧನ ಯೋಜನೆ ಪ್ರಗತಿಯ ಕುರಿತು ವಿವರ ನೀಡಲು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್.ಕೆ.ರಾಜು, ಮೊದಲ ಹಂತದಲ್ಲಿ ಕೇಂದ್ರ ಸರ್ಕಾರದ 7 ಇಲಾಖೆಗಳ 19 ಯೋಜನೆಗಗಳ ಫಲಾನುಭವಿಗಳಿಗೆ ಮಾತ್ರ ನೇರ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಗಳಲ್ಲಿ ಜಿಲ್ಲೆಯಲ್ಲಿ 32,467 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇಷ್ಟು ಜನರ ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಇದಕ್ಕಾಗಿ ಇಡೀ ಜಿಲ್ಲಾಡಳಿತವೆ ಟೊಂಕಕಟ್ಟಿ ನಿಂತಿದೆ. ಎಲ್ಲ ಮಕ್ಕಳಿಗೂ ತಿಳಿವಳಿಕೆ ನೀಡಿ ಬ್ಯಾಂಕ್ ಖಾತೆ ತೆರೆಯಲಾಗುತ್ತಿದೆ ಎಂದರು.

ಯೋಜನಾ ಆಯೋಗದ ಸೂಚನೆಯಂತೆ ಜಿಲ್ಲೆಯ ಕಾರ್ಯಕ್ರಮ ಅನುಷ್ಠಾಧಿಕಾರಿಗಳ ಮತ್ತು ವಿವಿಧ ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಮುಖ್ಯಸ್ಥರ ಸಭೆ ನಡೆಸಲಾಗಿದೆ. ಪೂರ್ವಭಾವಿ ಸಭೆ ನಡೆದಿವೆ. ಗುರುತಿಸಲಾಗಿರುವ 32,467 ಫಲಾನುಭವಿಗಳಲ್ಲಿ ಜನನಿ ಸುರಕ್ಷಾ ಯೋಜನೆಯಡಿ 5475 ಫಲಾನುಭವಿಗಳಿದ್ದಾರೆ. ಉಳಿದವರು ಶಾಲಾ-ಕಾಲೇಜು ವಿದ್ಯಾರ್ಥಿಗಳು.

ಶಾಲಾ-ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ತಾಂತ್ರಿಕ ಸಂಸ್ಥೆಗಳಿಂದ ಪಟ್ಟಿ ತಯಾರಿಸಿ ಆಯಾ ಇಲಾಖೆಗಳ ಸರ್ಕಾರದ ಕಾರ್ಯದರ್ಶಿಗಳಿಂದ ದೃಢೀಕರಣ ಪಡೆದು ಬ್ಯಾಂಕ್ ಖಾತೆ ಇಲ್ಲದ ಪ್ರತಿ ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ವಿಶೇಷ ಶಿಬಿರಗಳ ಮೂಲಕ ತೆರೆಯಲಾಗುತ್ತಿದೆ. ಆಧಾರ್ ಕಾರ್ಡ್ ನೀಡಲು ವಿಶೇಷ ಶಿಬಿರ ನಡೆಸಲಾಗುತ್ತಿದೆ. ಡಿ. 29ರೊಳಗೆ ಈಗಾಗಲೇ ಗುರುತಿಸಲಾಗಿರುವ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಅಳವಡಿಸುವ ಕೆಲಸ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಫಲಾನುಭವಿಯದೇ ಖಾತೆ
ಶಾಲಾ-ಕಾಲೇಜು ಮಕ್ಕಳು ಪಡೆಯುವ ವಿದ್ಯಾರ್ಥಿ ವೇತನ, ಮತ್ತಿತರ ಪ್ರೋತ್ಸಾಹ ಧನ ಪಡೆಯಲು ಆಯಾ ಮಕ್ಕಳ ಹೆಸರಿನಲ್ಲೇ ಖಾತೆ ತೆರೆಯಬೇಕು. ಮಕ್ಕಳ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ. ಅಪ್ರಾಪ್ತ ಮಕ್ಕಳು, ಅಂಗವಿಕಲರು ಇದ್ದರೆ ಅವರ ಹೆಸರಿನಲ್ಲೇ ಖಾತೆ ತೆರೆದು ತಾಯಿಯನ್ನು ಪೋಷಕರಾಗಿ ಗುರುತಿಸಲಾಗುವುದು. ತಾಯಿ ಇಲ್ಲದಿದ್ದರೆ ಮಾತ್ರವೇ ತಂದೆ ಅಥವಾ ಕಾನೂನು ಪ್ರಕಾರ ಇರುವವರನ್ನು ಪೋಷಕರನ್ನಾಗಿ ಬ್ಯಾಂಕ್ ಖಾತೆಗೆ ಹೆಸರಿಸಲಾಗುವುದು ಎಂದು ಹೇಳಿದರು.

ಆಧಾರ್ ಕಾರ್ಡ್ ನೀಡಲು ವಿಶೇಷ ಶಿಬಿರಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಹಶೀಲ್ದಾರ್ ಕಚೇರಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 50 ಆಧಾರ್ ಕೇಂದ್ರ ತೆರೆಯಲಾಗಿದೆ. ಮೊಬೈಲ್ ಆಧಾರ್ ಕೇಂದ್ರ ಕೂಡ ಕಾರ್ಯ ನಿರ್ವಹಿಸಲಿದೆ. ಆಧಾರ್ ಕಾರ್ಡ್ ಕಳೆಕೊಂಡವರು ಮತ್ತೆ ಆಧಾರ್ ನೋಂದಣಿ ಮಾಡಿಸಬಹುದು. ಕಾರ್ಡ್ ಬಾರದಿದ್ದವರು ನೇರವಾಗಿ ತಹಶೀಲ್ದಾರ್‌ಗೆ ದೂರು ನೀಡಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿ ನೇರ ಸಹಾಯಧನ ಯೋಜನೆಯ ಸಿದ್ಧತೆ ಪರಿಶೀಲಿಸಲು ಹಣಕಾಸು ಸಚಿವ ಪಿ.ಚಿದಂಬರಂ ಡಿ. 29ರಂದು ನಗರಕ್ಕೆ ಆಗಮಿಸುವರು. ನಗರದ ಸಿದ್ದಗಂಗಾ ಕಾಲೇಜು     ಗೆಸ್ಟ್‌ಹೌಸ್‌ನಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಲಿದ್ದು, ಸಚಿವರು, ಅಧಿಕಾರಿಗಳೊಂದಿಗೆ ಸಂವಾದ ನಡೆಸುವರು. ನಂತರ ಹಳ್ಳಿಯೊಂದಕ್ಕೆ ಭೇಟಿ ನೀಡಿ ಜನರೊಂದಿಗೆ ನೇರ ಸಹಾಯಧನ ಯೋಜನೆ ಸಂಬಂಧ ಸಂವಾದ ನಡೆಸಲಿದ್ದಾರೆ ಎಂದು ವಿವರಿಸಿದರು.

ಅನಿಲ ಸಿಲಿಂಡರ್ ಚಿಂತೆ ಬೇಡ
ಗೃಹ ಬಳಕೆ ಅನಿಲಕ್ಕೆ ನೀಡುತ್ತಿರುವ ಸಹಾಯ ಧನವನ್ನು ನೇರ ಸಹಾಯ ಧನ ಯೋಜನೆಯಡಿ ತರಲು ಕೇಂದ್ರ ಚಿಂತಿಸಿದೆ. ಆದರೆ ಸದ್ಯಕ್ಕೆ ಇದು ಜಾರಿ ಇಲ್ಲ. ಫೆಬ್ರುವರಿ ವೇಳೆಗೆ ಅನಿಲ ಸಬ್ಸಿಡಿ, ರಾಸಾಯನಿಕ ಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ನೇರ ಸಹಾಯಧನ ಯೋಜನೆಯಡಿ ತರುವ ಚಿಂತನೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎಂದರು.

ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಬಂದಿಲ್ಲ, ಸಾಕಷ್ಟು ಜನರು ನೋಂದಣಿ ಮಾಡಿಸಿಲ್ಲ ಎಂಬ ಕೂಗಿನ ಹಿನ್ನೆಲೆಯಲ್ಲಿ ಪ್ರತಿ ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯಲಾಗಿದೆ. ಈ ಆಧಾರ್ ಕೇಂದ್ರಗಳು ಆರು ತಿಂಗಳ ಕಾಲ ತಹಶೀಲ್ದಾರ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲಿವೆ.

ಈಗಾಗಲೇ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಯೂ ಕಾರ್ಡ್ ಬಾರದಿದ್ದರೆ, ಕಳೆದಿದ್ದರೆ ಅಂಥವರು ತಹಶೀಲ್ದಾರ್‌ಗೆ ದೂರು ಸಲ್ಲಿಸಿ ಎರಡನೇ ಸಲಕ್ಕೆ ನೋಂದಣಿ ಮಾಡಿಸಬಹುದು. ಹೊಸದಾಗಿ ಮಾಡಿಸುವವರು ಕೂಡ ತಹಶೀಲ್ದಾರ್ ಕಚೇರಿಗೆ ತೆರಳಿ ಆಧಾರ್‌ಗೆ ನೋಂದಣಿ ಮಾಡಿಸಬೇಕು. ಆಧಾರ್ ಯುಐಡಿ ಸಂಖ್ಯೆಯನ್ನು ಬ್ಯಾಂಕ್‌ಗೆ ಸಲ್ಲಿಸುವ ಮೂಲಕ ಬ್ಯಾಂಕ್ ಖಾತೆಗೆ ಅಳವಡಿಸಬೇಕು ಎಂದು ತಿಳಿಸಿದರು.

ಸಾಕಷ್ಟು ಆಧಾರ್ ಕಾರ್ಡ್‌ಗಳು ವಿತರಣೆಯಾಗದೆ ಅಂಚೆ ಕಚೇರಿಯಲ್ಲಿ ಉಳಿದಿದ್ದು, ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT