ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತು ಉತ್ತಮ ಚಿಂತನೆ ಬಯಸುತ್ತದೆ

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದಿಟ್ಟತನದಿಂದಿರಿ, ಭಿನ್ನವಾಗಿ ಯೋಚಿಸಿರಿ, ಉತ್ತಮ ಚಿಂತನೆಗಳೊಂದಿಗೆ ಮುಂದೆ ಸಾಗಿರಿ, ವಿಫಲವಾಗುವ ಬಗ್ಗೆ ಆತಂಕ ಬೇಡ. ನೀವು ಸಮರ್ಥರಾಗಿದ್ದರೆ ನಿಮ್ಮ ತಪ್ಪುಗಳಿಂದ ನೀವೇ ಹೊರಬರುತ್ತೀರಿ~ ಎಂದು ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿಯ ವಾರ್ತಾಧಿಕಾರಿ ಆನಂದ್ ಕೃಷ್ಣ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂತ ಜೋಸೆಫರ ಕಾಲೇಜಿನಲ್ಲಿ `ಸಂಶೋಧನಾ ಸಹಭಾಗಿತ್ವ, ವಿದೇಶಿ ಅಧ್ಯಯನ ಮತ್ತು ಉದ್ಯೋಗ ಹಾಗೂ ಉದ್ಯಮಶೀಲತೆ~ ಕುರಿತು ಅವರು ಉಪನ್ಯಾಸ ನೀಡಿದರು.

`ನೀವು (ಯುವಜನರು) ಜಾಗತೀಕರಣಗೊಂಡ 21ನೇ ಶತಮಾನವನ್ನು ಮುನ್ನಡೆಸುವವರು. ಜಗತ್ತು ಉತ್ತಮ ಚಿಂತನೆಗಳನ್ನು ಬಯಸುತ್ತದೆ. ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ದುಡಿಯುವವರ ಅಗತ್ಯ ಜಗತ್ತಿಗೆ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.

`ನಮ್ಮ ಸರ್ಕಾರಗಳು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು, ಸಂಸ್ಥೆಗಳಿಗಾಗಿ ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲ ಗುಣಗಳಿಗೆ ನಾವು ಪ್ರೋತ್ಸಾಹ ನೀಡುತ್ತೇವೆ. ಉನ್ನತವಾದುದನ್ನು ಸಾಧಿಸಲು ಅವಕಾಶಗಳಿವೆ. ಅದಕ್ಕೆ ಅಡಿಪಾಯವಾಗಿ ಅತ್ಯುತ್ತಮವಾದ ಜಾಗತಿಕ ಶಿಕ್ಷಣದ ಅಗತ್ಯವಿದೆ. ವಿಶೇಷ ಸಾಧನೆ ಮಾಡಲು ಮುಂದೆ ಬನ್ನಿ~ ಎಂದು ಅವರು ಹೇಳಿದರು.

`ಹತ್ತು ವರ್ಷಗಳ ಹಿಂದೆ ಅಸಾಧ್ಯ ಎಂದೆನಿಸಿದ್ದೆಲ್ಲವೂ ಈಗ ಸಾಧ್ಯವಾಗಿದೆ; ನೋಟ್‌ಬುಕ್ ಗಾತ್ರದ ಕಂಪ್ಯೂಟರ್‌ಗಳ ಮೂಲಕ ಕುಳಿತಲ್ಲಿಂದಲೇ ದೂರ ದೇಶದಲ್ಲಿರುವ ಸ್ನೇಹಿತರನ್ನು ನೋಡುತ್ತಾ ಮಾತನಾಡಲು ಸಾಧ್ಯವೆಂದು ಯಾರು ಯೋಚಿಸಿದ್ದರು? ಚೆನ್ನೈನ ಕಲಾಕ್ಷೇತ್ರದಲ್ಲಿ ನೃತ್ಯ ನೋಡಲು ಅಮೆರಿಕದ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬರುತ್ತಾರೆಂದು ಯಾರು ಅಂದುಕೊಂಡಿದ್ದರು? ಚೆನ್ನೈ ಮತ್ತು ನ್ಯೂಯಾರ್ಕ್‌ನಲ್ಲಿ ಒಂದೇ ದಿನ ರಜನಿಕಾಂತರ ಹೊಸ ಸಿನಿಮಾ ಪ್ರದರ್ಶನ ಪ್ರಾರಂಭವಾಗುತ್ತದೆಂದು ಯಾರು ನಿರೀಕ್ಷಿಸಿದ್ದರು?~ ಎಂದು ಅವರು ನುಡಿದರು.

`50 ವರ್ಷಗಳ ಹಿಂದೆ ಎಚ್.ಪಿ. ಕಂಪೆನಿಯ ಸ್ಥಾಪಕರಲ್ಲಿ ಒಬ್ಬರಾದ ಬಿಲ್ ಹ್ಯಾವೆಲೆಟ್ ಅವರು ತಮ್ಮನ್ನು ದೂರವಾಣಿಯಲ್ಲಿ ಸಂಪರ್ಕಿಸಿದ 12 ವರ್ಷದ ಒಬ್ಬ ಬಾಲಕನಿಗೆ ಬೇಸಿಗೆ ಇಂಟರ್ನ್‌ಶಿಪ್ ನೀಡಿದ್ದರು. ಆ ಬಾಲಕ ಬೇರಾರು ಅಲ್ಲ; ಮುಂದೆ ಆ್ಯಪಲ್ ಕಂಪ್ಯೂಟರ್ಸ್‌ನ ಸಿಇಒ ಆದ ಸ್ಟೀವ್ ಜಾಬ್. ಕ್ರಿಯಾಶೀಲ ಪ್ರತಿಭೆಗೆ ಸ್ಟೀವ್‌ಗೆ ಸರಿಸಾಟಿ ಯಾರೂ ಇಲ್ಲ. ಹೊಸ ಶೋಧಗಳಿಗೆ ಉತ್ತೇಜನ ನೀಡಲು ಅಮೆರಿಕ ಸದಾ ಸಿದ್ಧವಾಗಿರುತ್ತದೆ~ ಎಂದು ಅವರು ಹೇಳಿದರು.

`ಸಂಶೋಧನೆ ಮತ್ತು ಶಿಷ್ಯವೇತನ ಯೋಜನೆಗಳನ್ನು ಪ್ರೋತ್ಸಾಹಿಸಲು ಭಾರತ ಮತ್ತು ಅಮೆರಿಕ ಸರ್ಕಾರಗಳು ಜಂಟಿಯಾಗಿ ಫುಲ್‌ಬ್ರೈಟ್- ನೆಹರು ಶಿಷ್ಯವೇತನಗಳನ್ನು ನೀಡುತ್ತಿವೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ  ಪ್ರತಿಭಾವಂತ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹಾಗೂ ವೃತ್ತಿಪರರಿಗೆ ಈ ಶಿಷ್ಯ ವೇತನಗಳನ್ನು ಕೊಡಲಾಗುತ್ತಿದೆ.

ಈ ಶಿಷ್ಯ ವೇತನದ ವಿವರಗಳಿಗೆ ಭಾರತ- ಅಮೆರಿಕ ಶೈಕ್ಷಣಿಕ ಪ್ರತಿಷ್ಠಾನದ ವೆಬ್‌ಸೈಟ್ (ಡಿಡಿಡಿ.್ಠಜಿಛ್ಛಿ.ಟ್ಟಜ.ಜ್ಞಿ) ನೋಡಬಹುದು ಅಥವಾ ಕಾನ್ಸುಲೇಟ್ ಜನರಲ್ ಕಚೇರಿಗೆ ಭೇಟಿ ನೀಡಿ ವಿಚಾರಿಸಬಹುದು~ ಎಂದು ಅವರು ತಿಳಿಸಿದರು.

`2000ದಲ್ಲಿ ಅಮೆರಿಕ, ವಾರ್ಷಿಕ ಅಂತರರಾಷ್ಟ್ರೀಯ ಶಿಕ್ಷಣ ಸಪ್ತಾಹವನ್ನು ಪ್ರಾರಂಭಿಸಿತು. ಈ ಸಪ್ತಾಹವನ್ನು 100 ದೇಶಗಳಲ್ಲಿ ಆಚರಿಸಲಾಗುತ್ತಿದೆ. ಸದ್ಯ ಅಮೆರಿಕದ ವಿವಿಧ ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ ಒಂದು ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರತಿ ವರ್ಷ ಐದು ಲಕ್ಷ ಭಾರತೀಯರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ 8 ಲಕ್ಷ ಅಮೆರಿಕನ್ನರು ಭಾರತ ಪ್ರವಾಸಕ್ಕೆ ಬರುತ್ತಿದ್ದಾರೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT