ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಕಸದ ರಾಶಿಯಾದ ಕ್ರೀಡಾಂಗಣ

Last Updated 1 ಆಗಸ್ಟ್ 2013, 10:55 IST
ಅಕ್ಷರ ಗಾತ್ರ

ಜಗಳೂರು: ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾಗಿರುವ ತಾಲ್ಲೂಕು ಕ್ರೀಡಾಂಗಣ ಉದ್ದೇಶಿತ ಚಟುವಟಿಕೆಗಳಿಗೆ ಬಳಕೆಯಾಗದೆ ಹಾಳುಬಿದ್ದಿದೆ.

ಪಟ್ಟಣದಲ್ಲಿ ಆರು ವರ್ಷದ ಹಿಂದೆ ಹೊರವಲಯದಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಶಾಸಕರಾಗಿದ್ದ ಟಿ. ಗುರುಸಿದ್ದನಗೌಡ ಅವರ ಕಾಳಜಿಯಿಂದಾಗಿ ಬೋಳು ಗುಡ್ಡವನ್ನು ಭಾರಿ ಯಂತ್ರಗಳಿಂದ ಸಮಗೊಳಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗಿತ್ತು.

ಕೋಟಿಗಟ್ಟಲೆ ಅನುದಾನದಲ್ಲಿ ನಿರ್ಮಾಣಗೊಂಡ ಕ್ರೀಡಾಂಗಣಕ್ಕೆ ಆರು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಪಟ್ಟಣದಿಂದ ದೂರದಲ್ಲಿದೆ ಎಂಬ ಕಾರಣಕ್ಕೆ ಯಾವುದೇ ಕ್ರೀಡಾ ಚಟುವಟಿಕೆಗಳು ಇಲ್ಲಿ ನಡೆದಿಲ್ಲ. ವಸತಿ ಪ್ರದೇಶದಿಂದ ದೂರ ಇರುವ ತಾಲ್ಲೂಕು ಕ್ರೀಡಾಂಗಣಕ್ಕೆ ದಿಕ್ಕುದೆಸೆ ಇಲ್ಲದಂತಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿರುವ ಎಲ್ಲಾ ಐದು ಕೊಠಡಿಗಳ ಬಾಗಿಲಿಗೆ ಬೀಗ ಹಾಕದ ಕಾರಣ ಸದಾ ತೆರೆದಿರುತ್ತದೆ. ಹಾಗಾಗಿ, ಕುಡುಕರು ಹಾಗೂ ಜೂಜುಕೋರರ ಆಶ್ರಯ ತಾಣವಾಗಿದೆ.

ಆಧುನಿಕ ಮಾದರಿಯಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳು ದುಸ್ಥಿತಿ ತಲುಪಿದ್ದು, ದುರ್ನಾತ ಬೀರುತ್ತಿವೆ. ತೆರೆದ ಕೊಠಡಿಗಳಲ್ಲಿ ಮದ್ಯದ ಬಾಟಲಿಗಳು, ಒಡೆದ ಗಾಜಿನ ಚೂರುಗಳು, ಸುಟ್ಟ ಸಿಗರೇಟ್‌ಗಳು ಹಾಗೂ ಇಸ್ಪೀಟ್ ಎಲೆಗಳ ಕಸದ ರಾಶಿಯೇ ಕ್ರೀಡಾಂಗಣದಲ್ಲಿ ಬಿದ್ದಿದೆ.

ಕೊಠಡಿಗಳ ಕಿಟಕಿಗಳಿಗೆ ಅಳವಡಿಸಲಾಗಿರುವ ಬೆಲೆ ಬಾಳುವ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಸ್ವಿಚ್‌ಬೋರ್ಡ್‌ಗಳನ್ನು ಕಲ್ಲಿನಿಂದ ಜಜ್ಜಿದ್ದಾರೆ. ವಿದ್ಯುತ್ ಬಲ್ಪ್‌ಗಳನ್ನು ಒಂದೂ ಬಿಡದಂತೆ ಕಳವು ಮಾಡಿದ್ದಾರೆ. ಕಳಪೆ ಕಾಮಗಾರಿ ಪರಿಣಾಮ ಕ್ರೀಡಾಂಗಣದ ಉತ್ತರ ಭಾಗದಲ್ಲಿ ಕಾಂಪೌಂಡ್ ಕಟ್ಟಡ  ಕುಸಿದು ಬಿದ್ದಿದ್ದು, ಶಿಥಿಲಾವಸ್ಥೆ ತಲುಪಿದೆ.

ಕ್ರೀಡಾಂಗಣದ ಸ್ಥಿತಿ ಹೀಗಿದ್ದರೂ, ಯುವಜನ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT