ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಕನಸಲ್ಲಿ ಭಾರತ

ಕ್ರಿಕೆಟ್‌: ದಕ್ಷಿಣ ಆಫ್ರಿಕಾ ಗೆಲುವಿಗೆ ಕಠಿಣ ಗುರಿ
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಭಾರತದ ಗೆಲುವಿಗೆ ಎಂಟು ವಿಕೆಟ್‌ಗಳು ಬೇಕಿದ್ದರೆ, ದಕ್ಷಿಣ ಆಫ್ರಿಕಾ ತಂಡದ ಜಯಕ್ಕೆ 320 ರನ್‌ಗಳ ಅಗತ್ಯವಿದೆ. ಒಟ್ಟಿನಲ್ಲಿ ಅಂತಿಮ ದಿನದಾಟ ಕ್ರಿಕೆಟ್‌ ಪ್ರಿಯರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಗೆಲುವಿಗಾಗಿ ತುರುಸಿನ ಪೈಪೋಟಿ ಏರ್ಪಟ್ಟಿದೆ.

ಜಯ ಸಾಧಿಸಲು 458 ರನ್‌ಗಳ ಕಠಿಣ ಗುರಿ ಪಡೆದಿರುವ ಆತಿಥೇಯ ತಂಡ ನಾಲ್ಕನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ 45 ಓವರ್‌ಗಳಲ್ಲಿ 2 ವಿಕೆಟ್‌ಗೆ 138 ರನ್‌ ಪೇರಿಸಿದೆ.

ಅಂತಿಮ ದಿನವಾದ ಭಾನುವಾರ 320 ರನ್ ಕಲೆ ಹಾಕುವ ಗುರಿ ಗ್ರೇಮ್‌ ಸ್ಮಿತ್‌ ಬಳಗದ ಮುಂದಿದೆ. ಕೈಯಲ್ಲಿ ಎಂಟು ವಿಕೆಟ್‌ಗಳಿವೆ. ಆದರೆ ಈ ವಿಕೆಟ್‌ಗಳನ್ನು ಪಡೆದು ಸ್ಮರಣೀಯ ಗೆಲುವು ಒಲಿಸಿಕೊಳ್ಳುವುದು ಮಹೇಂದ್ರ ಸಿಂಗ್‌ ದೋನಿ ಬಳಗದ ಗುರಿ. ಅಂತಿಮ ದಿನದ ಮೊದಲ ಅವಧಿಯ ಆಟ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಟೆಸ್ಟ್‌ ಇತಿಹಾಸದಲ್ಲಿ ಯಾವುದೇ ತಂಡ ಒಮ್ಮೆಯೂ ಇಷ್ಟು ದೊಡ್ಡ ಮೊತ್ತ ಬೆನ್ನಟ್ಟಿ ಗೆಲುವು ಪಡೆದಿಲ್ಲ. 2003 ರಲ್ಲಿ ಸೇಂಟ್‌ಜಾನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್‌ ಇಂಡೀಸ್‌ 418 ರನ್‌ ಗಳಿಸಿ ಗೆಲುವು ಪಡೆದಿರುವುದು ಇದುವರೆಗಿನ ದಾಖಲೆಯಾಗಿದೆ.

ದಾಖಲೆ ಜೊತೆಯಾಟ: ಎರಡು ವಿಕೆಟ್‌ ನಷ್ಟಕ್ಕೆ 284 ರನ್‌ಗಳಿಂದ ದಿನದಾಟ ಮುಂದುವರಿಸಿದ ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ 120.4 ಓವರ್‌ಗಳಲ್ಲಿ 421 ರನ್‌ಗಳಿಗೆ ಆಲೌಟಾಯಿತು. ಪೂಜಾರ (153, 270 ಎಸೆತ, 21 ಬೌಂ) ಮತ್ತು ವಿರಾಟ್‌ ಕೊಹ್ಲಿ (96, 193 ಎಸೆತ, 9 ಬೌಂ) ತಂಡದ ಇನಿಂಗ್ಸ್‌ಗೆ ಬಲ ತುಂಬಿದರು.

ಇವರಿಬ್ಬರು ಕ್ರಮವಾಗಿ 135 ಹಾಗೂ 77 ರನ್‌ಗಳಿಂದ ಆಟ ಮುಂದುವರಿಸಿದ್ದರು. ಮಾತ್ರವಲ್ಲ ತಮ್ಮ ಜೊತೆಯಾಟವನ್ನು 222 ರನ್‌ಗಳಿಗೆ ವಿಸ್ತರಿಸಿದರು. ಪೂಜಾರ ವಿಕೆಟ್‌ ಪಡೆದ ಜಾಕ್‌ ಕಾಲಿಸ್‌ ಆತಿಥೇಯರಿಗೆ ದಿನದ ಮೊದಲ ಯಶಸ್ಸು ತಂದಿತ್ತರು.

ಇವರ ನಡುವಿನ ಜೊತೆಯಾಟ ಹೊಸ ದಾಖಲೆಗೂ ಕಾರಣವಾಯಿತು. ವಿದೇಶಿ ನೆಲದಲ್ಲಿ ನಡೆದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಪರ ಮೂರನೇ ವಿಕೆಟ್‌ಗೆ ಮೂಡಿಬಂದ ಅತ್ಯುತ್ತಮ ಜೊತೆಯಾಟ ಇದಾಗಿದೆ. ವಿನೂ ಮಂಕಡ್‌ ಮತ್ತು ವಿಜಯ್‌ ಹಜಾರೆ 1952 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 211 ರನ್‌ಗಳ ಜೊತೆಯಾಟ ನೀಡಿದ್ದರು.

ಮೊದಲ ಇನಿಂಗ್ಸ್‌ನಲ್ಲಿ 119 ರನ್‌ ಗಳಿಸಿದ್ದ ಕೊಹ್ಲಿ ಎರಡನೇ ಇನಿಂಗ್ಸ್‌ನಲ್ಲಿ ಶತಕ ಗಳಿಸುವ ಅವಕಾಶವನ್ನು ಕೇವಲ ನಾಲ್ಕು ರನ್‌ಗಳಿಂದ ಕಳೆದುಕೊಂಡರು. ಜೀನ್‌ ಪಾಲ್‌ ಡುಮಿನಿ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ರೋಹಿತ್‌ ಶರ್ಮ (6) ಮತ್ತೆ ವೈಫಲ್ಯ ಅನುಭವಿಸಿದರು. ದೋನಿ (29, 39 ಎಸೆತ) ಮತ್ತು ಜಹೀರ್‌ ಖಾನ್‌ (29, 31 ಎಸೆತ, 3 ಬೌಂ, 2 ಸಿಕ್ಸರ್‌) ಕೊನೆಯಲ್ಲಿ ತಂಡದ ಮೊತ್ತ ಹೆಚ್ಚಿಸಿದರು.

ಉತ್ತಮ ಆರಂಭ: ಭಾರಿ ಸವಾಲನ್ನು ಬೆನ್ನಟ್ಟತೊಡಗಿದ ಆತಿಥೇಯ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಅಲ್ವಿರೊ ಪೀಟರ್‌ಸನ್‌ (ಬ್ಯಾಟಿಂಗ್‌ 76, 148 ಎಸೆತ, 9 ಬೌಂ) ಮತ್ತು ಸ್ಮಿತ್‌ (44, 73 ಎಸೆತ) ಮೊದಲ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನೀಡಿದರು. ಆದರೆ ಇಲ್ಲದ ರನ್‌ಗಾಗಿ ಓಡಿದ ಸ್ಮಿತ್‌ ರನೌಟ್‌ ಆದರು.

ಬಳಿಕ ಬಂದ ಹಾಶಿಮ್‌ ಆಮ್ಲಾ (4) ಕೂಡಾ ಬೇಗನೇ ಮರಳಿದ ಕಾರಣ ಭಾರತದ ಗೆಲುವಿನ ಕನಸಿಗೆ ಹೆಚ್ಚಿನ ಬಲ ಬಂದಿದೆ. ಮೊಹಮ್ಮದ್‌ ಶಮಿ ಎಸೆತದಲ್ಲಿ ಆಮ್ಲಾ ಕ್ಲೀನ್‌ಬೌಲ್ಡ್‌ ಆದರು. ಶಮಿ ಅವರ ಶಾರ್ಟ್‌ ಪಿಚ್‌ ಎಸೆತ ಬೌನ್ಸ್‌ ಆಗಬಹುದೆಂದು ಭಾವಿಸಿ ಆಮ್ಲಾ ಆಡದಿರದಲು ನಿರ್ಧರಿಸಿದರು. ಆದರೆ ತೀರಾ ಕೆಳಮಟ್ಟದಲ್ಲಿ ನುಗ್ಗಿದ ಚೆಂಡು ಸ್ಪಂಪ್‌ಗೆ ಬಡಿಯಿತು. 

ಕೊನೆಯಲ್ಲಿ ನಾಯಕ ದೋನಿ ಕೂಡಾ ಎರಡು ಓವರ್‌ ಬೌಲ್‌ ಮಾಡಿದರು. ಈ ವೇಳೆ ವಿರಾಟ್‌ ಕೊಹ್ಲಿ ವಿಕೆಟ್‌ ಕೀಪರ್‌ನ ಜವಾಬ್ದಾರಿ ನಿರ್ವಹಿಸಿದರು.

                                                               ಸ್ಕೋರ್ ವಿವರ
ಭಾರತ: ಮೊದಲ ಇನಿಂಗ್ಸ್‌ 103 ಓವರ್‌ಗಳಲ್ಲಿ 280

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌ 75.3 ಓವರ್‌ಗಳಲ್ಲಿ 244
ಭಾರತ: ಎರಡನೇ ಇನಿಂಗ್ಸ್‌ 120.4 ಓವರ್‌ಗಳಲ್ಲಿ 421
(ಶುಕ್ರವಾರದ ಆಟದ ಅಂತ್ಯಕ್ಕೆ 78 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 284)
ಚೇತೇಶ್ವರ ಪೂಜಾರ ಸಿ ಡಿವಿಲಿಯರ್ಸ್‌ ಬಿ ಬಿ ಜಾಕ್‌ ಕಾಲಿಸ್‌  153
ವಿರಾಟ್‌ ಕೊಹ್ಲಿ ಸಿ ಡಿವಿಲಿಯರ್ಸ್‌ ಬಿ ಜೀನ್‌ ಪಾಲ್‌ ಡುಮಿನಿ  96
ರೋಹಿತ್‌ ಶರ್ಮ ಬಿ ಜಾಕ್‌ ಕಾಲಿಸ್‌  06
ಅಜಿಂಕ್ಯ ರಹಾನೆ ಸಿ ಸ್ಮಿತ್‌ ಬಿ ಜೀನ್‌ ಪಾಲ್‌ ಡುಮಿನಿ  15
ಮಹೇಂದ್ರ ಸಿಂಗ್‌ ದೋನಿ ಸಿ ಡಿ ಎಲ್ಗರ್‌ (ಸಬ್‌) ಬಿ ವೆರ್ನಾನ್‌ ಫಿಲ್ಯಾಂಡರ್‌  29
ಆರ್‌. ಅಶ್ವಿನ್‌ ಸಿ ಡು ಪ್ಲೇಸಿಸ್‌ ಬಿ ವೆರ್ನಾನ್‌ ಫಿಲ್ಯಾಂಡರ್‌  07
ಜಹೀರ್‌ ಖಾನ್‌ ಔಟಾಗದೆ  29
ಇಶಾಂತ್‌ ಶರ್ಮ ಎಲ್‌ಬಿಡಬ್ಲ್ಯು ಬಿ ಇಮ್ರಾನ್‌ ತಾಹಿರ್‌  04
ಮೊಹಮ್ಮದ್‌ ಶಮಿ ಬಿ ಇಮ್ರಾನ್‌ ತಾಹಿರ್‌  04
ಇತರೆ: (ಬೈ–9, ಲೆಗ್‌ಬೈ–7, ವೈಡ್‌–8)  24
ವಿಕೆಟ್‌ ಪತನ: 1–23 (ಧವನ್‌; 7.3), 2–93 (ವಿಜಯ್‌; 33.5), 3-315 (ಪೂಜಾರ; 93.1), 4-325 (ರೋಹಿತ್‌; 97.5), 5-327 (ಕೊಹ್ಲಿ; 98.4), 6-358 (ರಹಾನೆ; 106.2), 7-369 (ಅಶ್ವಿನ್‌; 109.2), 8-384 (ದೋನಿ; 113.5), 9-405 (ಇಶಾಂತ್‌; 118.6), 10-421 (ಶಮಿ; 120.4)
ಬೌಲಿಂಗ್‌: ಡೇಲ್‌ ಸ್ಟೇನ್‌ 30-5-104-0  (ವೈಡ್‌–2), ವೆರ್ನಾನ್‌ ಫಿಲ್ಯಾಂಡರ್‌ 28-10-68-3 (ವೈಡ್‌–1), ಮಾರ್ನ್‌ ಮಾರ್ಕೆಲ್‌ 2–1–4–0, ಜಾಕ್‌ ಕಾಲಿಸ್‌ 20-5-68-3, ಇಮ್ರಾನ್‌ ತಾಹಿರ್‌ 15.4-1-69-2, ಎಬಿ ಡಿವಿಲಿಯರ್ಸ್‌ 1–0–5–0 (ವೈಡ್‌–1), ಜೀನ್‌ ಪಾಲ್‌ ಡುಮಿನಿ 24-0-87-2


ದಕ್ಷಿಣ ಆಫ್ರಿಕಾ: ಎರಡನೇ ಇನಿಂಗ್ಸ್‌ 45 ಓವರ್‌ಗಳಲ್ಲಿ 2 ವಿಕೆಟ್‌ಗೆ 138
ಅಲ್ವಿರೊ ಪೀಟರ್‌ಸನ್‌ ಬ್ಯಾಟಿಂಗ್‌  76
ಗ್ರೇಮ್ ಸ್ಮಿತ್‌ ರನೌಟ್‌  44
ಹಾಶಿಮ್‌ ಆಮ್ಲಾ ಬಿ ಮೊಹಮ್ಮದ್‌ ಶಮಿ  04
ಫಾಫ್‌ ಡು ಪ್ಲೇಸಿಸ್‌ ಬ್ಯಾಟಿಂಗ್‌  10
ಇತರೆ: (ಲೆಗ್‌ಬೈ-2, ವೈಡ್‌-1, ನೋಬಾಲ್‌-1)  04
ವಿಕೆಟ್‌ ಪತನ: 1-108 (ಸ್ಮಿತ್‌; 30.4), 2-118 (ಆಮ್ಲಾ; 36.2)
ಬೌಲಿಂಗ್‌: ಜಹೀರ್‌ ಖಾನ್‌ 9-029-0, ಇಶಾಂತ್‌ ಶರ್ಮ 9-2-28-0, ಮೊಹಮ್ಮದ್‌ ಶಮಿ 8-1-30-1, ಆರ್‌. ಅಶ್ವಿನ್‌ 16-2-42-0, ಮುರಳಿ ವಿಜಯ್‌ 1-0-3-0, ಮಹೇಂದ್ರ ಸಿಂಗ್‌ ದೋನಿ 2-0-4-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT