ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ನಿರೀಕ್ಷೆಯಲ್ಲಿ ಶಕೀಬ್ ಪಡೆ

Last Updated 13 ಮಾರ್ಚ್ 2011, 15:40 IST
ಅಕ್ಷರ ಗಾತ್ರ

ಚಿತ್ತಗಾಂಗ್ (ಪಿಟಿಐ): ಕ್ವಾರ್ಟರ್ ಫೈನಲ್ ತಲುಪುವ ಆಸೆಯ ಚಿಲುಮೆ ಬತ್ತದಂತೆ ನೋಡಿಕೊಳ್ಳಬೇಕು. ಇದೇ ಬಾಂಗ್ಲಾದೇಶ ತಂಡದ ಆಶಯ. ಆ ನಿಟ್ಟಿನಲ್ಲಿ ಹಾಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಜಯ ಸಾಧಿಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ.

ಹಾಲೆಂಡ್ ತಂಡವನ್ನು ಸೋಮವಾರ ಇಲ್ಲಿ ನಡೆಯಲಿರುವ ವಿಶ್ವಕಪ್ ‘ಬಿ’ ಗುಂಪಿನ ಪಂದ್ಯದಲ್ಲಿ ಉತ್ತಮ ಅಂತರದಿಂದ ಸೋಲಿಸಿದಲ್ಲಿ ಶಕೀಬ್ ಅಲ್ ಹಸನ್ ನಾಯಕತ್ವದ ಪಡೆಯು ಎಂಟರ ಘಟ್ಟದಲ್ಲಿ ಆಡುವ ಕನಸಿನ ಬಿಸಿಲು ಕುದುರೆಯನ್ನು ಬೆನ್ನತ್ತಿಕೊಂಡು ಮುಂದೆ ಸಾಗಬಹುದು. ಗುಂಪಿನ ಎಲ್ಲ ಪಂದ್ಯಗಳು ಮುಗಿಯುವ ಹೊತ್ತಿಗೆ ಲೆಕ್ಕಾಚಾರ ಮಾಡುವ ಮಟ್ಟದಲ್ಲಿ ಉಳಿಯಲು ಸಾಧ್ಯವಾಗುತ್ತದೆ.

ವಿಶ್ವಕಪ್ ಆತಿಥ್ಯದ ಹೊಣೆಯನ್ನು ಹೊತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಬಾಂಗ್ಲಾದೇಶದ ತಂಡವು ಮುಂದಿನ ಹಂತದಲ್ಲಿ ಆಡಬೇಕೆಂದು ಆಶಿಸುವುದು ಸಹಜ. ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಎನ್ನುವ ರೀತಿಯಲ್ಲಿ ಎರಡು ವಿಕೆಟ್‌ಗಳ ಅಂತರದಿಂದ ಗೆದ್ದಿರುವ ಶಕೀಬ್ ಬಳಗವು ವಿಶ್ವಾಸದ ಅಲೆಯ ಮೇಲೆ ತೇಲುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಹ ಸದಸ್ಯ ರಾಷ್ಟ್ರವಾದ ಹಾಲೆಂಡ್ ವಿರುದ್ಧ ಎದುರು ಸುಲಭವಾಗಿ ಜಯ ಪಡೆಯುವುದು ಅದರ ಉದ್ದೇಶ. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಅಂತರದ ಗೆಲುವು ಪಡೆಯಬೇಕು. ಹಾಗೆ ಮಾಡಿದಲ್ಲಿ ಮುಂದೆ ಲೆಕ್ಕಾಚಾರ ಮಾಡುವಂಥ ಪರಿಸ್ಥಿತಿಯಲ್ಲಿ ಕ್ವಾರ್ಟರ್ ಫೈನಲ್ ತಲುಪುವ ತಂಡಗಳ ಪಟ್ಟಿಯಿಂದ ಕೆಳಗೆ ಜಾರುವ ಅಪಾಯ ಇರುವುದಿಲ್ಲ.

ಭಾರತ ಹಾಗೂ ವೆಸ್ಟ್ ಇಂಡೀಸ್ ಎದುರು ನಿರಾಸೆ ಹೊಂದಿದರೂ ಇಂಗ್ಲೆಂಡ್ ವಿರುದ್ಧದ ಅನಿರೀಕ್ಷಿತ ಫಲಿತಾಂಶವು ಬಾಂಗ್ಲಾದೇಶದವರು ಎಂಟರ ಘಟ್ಟದಲ್ಲಿ ಆಡುವ ಆಸೆಯನ್ನು ಬಲಗೊಳಿಸಿದೆ. ಹಾಲೆಂಡ್ ಎದುರು ಜಯ ಸಾಧ್ಯ ಎನ್ನುವ ವಿಶ್ವಾಸವಂತೂ ಇದೆ. ಆದರೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿನ ದವಡೆಗೆ ನೂಕುವುದು ಕಷ್ಟ. ಆದರೂ ಮೂರು ಪಂದ್ಯಗಳ ಗೆಲುವಿನ ಬಲದೊಂದಿಗೆ ಗುಂಪಿನಲ್ಲಿ ಬಲಾಢ್ಯ ತಂಡಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬಾಂಗ್ಲಾ ಬೆಳೆದು ನಿಲ್ಲಲು ಸಾಧ್ಯ. ತಾನಾಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿ, ಎರಡರಲ್ಲಿ ಸೋಲಿನ ಕಹಿ ಪಡೆದಿರುವ ಶಕೀಬ್ ಮುಂದಾಳತ್ವದ ತಂಡವು ನಿರಾಸೆಯಿಂದ ಕೈಚೆಲ್ಲಿ ನಿಲ್ಲುವುದಿಲ್ಲ ಎನ್ನುವುದಂತೂ ಸ್ಪಷ್ಟ.

ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಪೀಟರ್ ಬೋರೆನ್ ನಾಯಕತ್ವದ ಹಾಲೆಂಡ್ ಯಾವುದೇ ಪವಾಡಕ್ಕೆ ಕಾರಣವಾಗದಂತೆ ತಡೆಯುವುದು ಶಕೀಬ್ ಉದ್ದೇಶ. ಆದ್ದರಿಂದ ಎದುರಾಳಿಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಡಲು ತಮ್ಮ ಪಡೆಯನ್ನು ಸಜ್ಜುಗೊಳಿಸಿಕೊಂಡಿದ್ದಾರೆ. ‘ಹುಲಿ’ಗಳ ಪಡೆಯೆಂದೇ ಸ್ಥಳೀಯ ಕ್ರಿಕೆಟ್ ಪ್ರೇಮಿಗಳು ಕರೆಯುವ ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ಹಾಲೆಂಡ್ ವಿರುದ್ಧದ ಪಂದ್ಯವೂ ಮಹತ್ವದ್ದು. ಇಂಥದೊಂದು ತಂಡದ ಕೈಯಲ್ಲಿ ಸೋಲನುಭವಿಸುವುದು ಸಹನೀಯ ಎನಿಸುವುದಿಲ್ಲ.

ಆದರೆ ಹಾಲೆಂಡ್ ತಂಡದವರು ಮಾತ್ರ ಅನಿರೀಕ್ಷಿತ ಸಾಧ್ಯವಾಗಿಸುವ ಆಸೆಯ ಎಳೆಯನ್ನು ಹಿಡಿದು ನಿಂತಿದ್ದಾರೆ. ರಿಯಾನ್ ಟೆನ್ ಡಾಶೆಟ್ ಅವರಂಥ ಪ್ರಭಾವಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ತಮ್ಮ ತಂಡವು ಆತಿಥೇಯರಿಗೆ ಆಘಾತ ನೀಡಬಲ್ಲದೆಂದು ನಾಯಕ ಪೀಟರ್ ಬೋರೆನ್ ಎಚ್ಚರಿಸಿದ್ದಾರೆ.

ಬಾಂಗ್ಲಾದೇಶ
ಶಕೀಬ್ ಅಲ್ ಹಸನ್ (ನಾಯಕ), ತಮೀಮ್ ಇಕ್ಬಾಲ್, ಇಮ್ರುಲ್ ಕಯೇಸ್, ಜುನೈದ್ ಸಿದ್ದಿಕ್, ಶಹ್ರಿಯಾರ್ ನಫೀಸ್, ರಕೀಬುಲ್ ಹಸನ್, ಮೊಹಮ್ಮದ್ ಅಶ್ರಫುಲ್, ಮುಶ್ಫಿಕುರ್ ರಹೀಮ್, ನಯೀಮ್ ಇಸ್ಲಾಮ್, ಮೊಹಮ್ಮದ್ ಮಹ್ಮದುಲ್ಲಾ, ಅಬ್ದುರ್ ರಜಾಕ್, ರುಬೆಲ್ ಹುಸೇನ್, ಶಫಿವುಲ್ ಇಸ್ಲಾಮ್, ನಜ್ಮುಲ್ ಹುಸೇನ್ ಮತ್ತು ಸುಹ್ರಾವಾಡಿ ಶುವೊ.

 ಹಾಲೆಂಡ್
ಪೀಟರ್ ಬೋರೆನ್ (ನಾಯಕ), ಆದಿಲ್ ರಾಜಾ, ವೆಸ್ಲಿ ಬ್ಯಾರೆಸ್ಸಿ, ಮುದಸ್ಸಾರ್ ಬುಖಾತಿರ್, ಆ್ಯಟ್ಸ್ ಬರ್ಮನ್, ಟಾಮ್ ಕೂಪರ್, ಟಾಮ್ ಡೆ ಗ್ರೋಥ್, ಅಲೆಕ್ಸಿ ಕೆರ್ವೆಜಿ, ಬ್ರ್ಯಾಡ್ಲಿ ಕ್ರುಗರ್, ಬೆರ್ನಾಡ್ ಲೂಟ್ಸ್, ಪೀಟರ್ ಸೀಲಾರ್, ಎರಿಕ್ ಸ್ವಾರ್ಕೆಜ್‌ನಸ್ಕಿ, ರಿಯಾನ್ ಟೆನ್ ಡಾಶೆಟ್, ಬೆರೆಂಡ್ ವೆಸ್ಟ್‌ಡಿಕ್ ಮತ್ತು ಬ್ಯಾಸ್ ಜುದೆರೆಂಟ್.

ಅಂಪೈರ್‌ಗಳು: ಅಲೀಮ್ ದಾರ್ (ಪಾಕಿಸ್ತಾನ) ಮತ್ತು ರಾಡ್ ಟರ್ಕರ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಡೆರಿಲ್ ಹಾರ್ಪರ್ (ಆಸ್ಟ್ರೇಲಿಯಾ).
ಮ್ಯಾಚ್ ರೆಫರಿ: ಜೆಫ್ ಕ್ರೋವ್ (ನ್ಯೂಜಿಲೆಂಡ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT