ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಶ್ರೀ, ದ್ರಾವಿಡ್‌ಗೆ `ಪದ್ಮ' ಪ್ರದಾನ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಂಗಕರ್ಮಿ ಬಿ. ಜಯಶ್ರೀ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಹಿರಿಯ ನಟಿ ಶರ್ಮಿಳಾ ಟಾಗೋರ್, ಶ್ರೀದೇವಿ ಹಾಗೂ `ಡಿಆರ್‌ಡಿಒ' ಮುಖ್ಯಸ್ಥ ವಿ.ಕೆ. ಸಾರಸ್ವತ್ ಸೇರಿದಂತೆ 54 ಸಾಧಕರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶುಕ್ರವಾರ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು.

ಒಡಿಶಾದ ಖ್ಯಾತ ಶಿಲ್ಪಿ ರಘುನಾಥ ಮಹಾಪಾತ್ರ, ಹಿರಿಯ ವಿಜ್ಞಾನಿ ಯಶಪಾಲ್ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು.

ಡಿಆರ್‌ಡಿಒ (ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ) ಮುಖ್ಯಸ್ಥ ವಿ.ಕೆ. ಸಾರಸ್ವತ್, ನಟಿ ಶರ್ಮಿಳಾ ಟಾಗೋರ್, ತೆಲುಗು ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡು ಮತ್ತು ರಾಹುಲ್ ದ್ರಾವಿಡ್ ಸೇರಿದಂತೆ 10 ಜನರಿಗೆ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರದಾನ ಮಾಡಲಾಯಿತು. ಕರ್ನಾಟಕದ ರಂಗಕರ್ಮಿ ಬಿ. ಜಯಶ್ರೀ, ನಟಿ ಶ್ರೀದೇವಿ, ವಂದನಾ ಲೂತ್ರ, ಪಿ. ಮಾಧವನ್ ನಾಯರ್, ಪಂಡಿತ್ ಸುರೇಶ್ ತಲವಾಲ್ಕರ್ ಸೇರಿದಂತೆ 42 ಜನರಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು.

2013ನೇ ಸಾಲಿನಲ್ಲಿ 108 ಮಂದಿಗೆ ಪದ್ಮ ಪ್ರಶಸ್ತಿ ನೀಡಲಾಗಿದ್ದು, ಅವರ ಹೆಸರನ್ನು ಜನವರಿ 25ರಂದು ಪ್ರಕಟಿಸಲಾಗಿತ್ತು. ಇನ್ನುಳಿದ 54 ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲು ಮತ್ತೊಂದು ದಿನ ಸಮಾರಂಭ ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಪದ್ಮವಿಭೂಷಣಕ್ಕೆ ಭಾಜನರಾಗಿರುವ ಕರ್ನಾಟಕದ ಬಾಹ್ಯಾಕಾಶ ವಿಜ್ಞಾನಿ ರೊದ್ದಂ ನರಸಿಂಹ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಬೇಕಿದೆ.

ಅದ್ಭುತ ಅನುಭವ: ದ್ರಾವಿಡ್
ಪ್ರಶಸ್ತಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, `ಇದೊಂದು ಅದ್ಭುತ ಅನುಭವ. ಶನಿವಾರ ಇಲ್ಲಿ ನಾನು ಐಪಿಎಲ್ ಪಂದ್ಯ ಆಡಲಿದ್ದೇನೆ. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನವಾಗಿರುವುದು ಖುಷಿಯಾಗಿದೆ' ಎಂದರು.

ವೃತ್ತಿಜೀವನದಲ್ಲಿ ಒಟ್ಟು 164 ಟೆಸ್ಟ್ ಪಂದ್ಯಗಳನ್ನು ಆಡಿರುವ ದ್ರಾವಿಡ್, 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. 344 ಏಕದಿನ ಪಂದ್ಯಗಳಲ್ಲಿ 39.16 ಸರಾಸರಿಯಂತೆ 10,889 ರನ್ ಕಲೆಹಾಕಿದ್ದಾರೆ.  ಮಾಜಿ ಬಾಕ್ಸರ್ ಡಿಂಕೋ ಸಿಂಗ್ ಮತ್ತು ರೋಯಿಂಗ್ ಸ್ಪರ್ಧಿ ಆರ್. ಬಜರಂಗ್ ಲಾಲ್ ತಖರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶುಕ್ರವಾರ ಮೂವರು ಕ್ರೀಡಾಪಟುಗಳಿಗೆ ಮಾತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕೆಲವು ದಿನಗಳ ಬಳಿಕ ಇನ್ನೊಮ್ಮೆ ಸಮಾರಂಭ ಏರ್ಪಡಿಸಿ ಉಳಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಲಾಗುತ್ತಿದೆ. ಮಹಿಳಾ ಬಾಕ್ಸರ್ ಎಂ.ಸಿ ಮೇರಿಕೋಮ್ ಅವರು ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು, ಕರ್ನಾಟಕದ ಪ್ಯಾರಾ ಒಲಿಂಪಿಯನ್ ಎಚ್.ಎನ್. ಗಿರೀಶ್, ಶೂಟರ್ ವಿಜಯ್ ಕುಮಾರ್, ಕುಸ್ತಿಪಟು ಯೋಗೇಶ್ವರ್ ದತ್, ಪರ್ವತಾರೋಹಿ ಪ್ರೇಮಲತಾ ಅಗರ್‌ವಾಲ್ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT