ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ರಾಂತಿಗೆ 50 ಸಾವಿರ ಕೋಟಿ

Last Updated 24 ಫೆಬ್ರುವರಿ 2011, 18:35 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೂ 7,800 ಕೋಟಿ  ಅನುದಾನ ನೀಡಲಾಗಿದೆ. 2011-2020ರ ಅವಧಿಯಲ್ಲಿ ರಾಜ್ಯದಲ್ಲಿ ‘ಜಲಕ್ರಾಂತಿ’ ತರುವ ಉದ್ದೇಶಕ್ಕೆ 50 ಸಾವಿರ ಕೋಟಿ ವೆಚ್ಚ ಮಾಡಲು ಸರ್ಕಾರ ನಿರ್ಧರಿಸಿದೆ.

ಹಿಂದಿನ ವರ್ಷದ ಬಜೆಟ್‌ಗೆ ಹೋಲಿಸಿದರೆ ನೀರಾವರಿ ಯೋಜನೆಗಳಿಗೆ ನೀಡಿದ ಅನುದಾನದಲ್ಲಿ ಶೇಕಡ 50ರಷ್ಟು ಹೆಚ್ಚಳ ಆಗಿದೆ. 2011-2020ರ ದಶಕವನ್ನು ‘ನೀರಾವರಿ ದಶಕ’ ಎಂದು ಈಗಾಗಲೇ ಘೋಷಿಸಲಾಗಿದೆ. ಈ ಅವಧಿಯಲ್ಲಿ ರಾಜ್ಯದ ನಿಸರ್ಗದತ್ತ ಜಲ ಸಂಪನ್ಮೂಲಗಳ ಸಂಪೂರ್ಣ ಬಳಕೆಗೆ ಅವಕಾಶ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ನೀರಾವರಿ ವಲಯಕ್ಕೆ ಖಾಸಗಿ ಬಂಡವಾಳ ಆಕರ್ಷಿಸುವ ಸುಳಿವನ್ನು  ನೀಡಿದ್ದು, ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ನೀರಾವರಿ ಯೋಜನೆಗಳಿಗೆ ಪೂರಕವಾಗಿ ಅತ್ಯಾಧುನಿಕ ವಿನ್ಯಾಸ ಕೇಂದ್ರ ಸ್ಥಾಪನೆಗೆ 10 ಕೋಟಿ ರೂಪಾಯಿ ಒದಗಿಸಲಾಗಿದೆ. ನೀರಾವರಿ ಅಣೆಕಟ್ಟುಗಳು ಮತ್ತು ಕಾಲುವೆಗಳ ಸರ್ವೇ ಕಾರ್ಯಕ್ಕೆ ದೇಶದಲ್ಲಿ ಮೊದಲ ಬಾರಿಗೆ ‘ಲೈಡರ್ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್) 3ಡಿ’ ಸರ್ವೇ ತಂತ್ರಜ್ಞಾನ ಬಳಸಲು ಸರ್ಕಾರ ಮುಂದಾಗಿದೆ. ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಸವಳು ಮತ್ತು ಜವಳು ಭೂಮಿಯ ಪುನರುಜ್ಜೀವನಕ್ಕೆ 100 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಿದೆ.

ಪಶ್ಚಿಮ ವಾಹಿನಿ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಮಹತ್ವದ ‘ಪಶ್ಚಿಮ ವಾಹನಿ’ ಯೋಜನೆ ಪ್ರಕಟಿಸಲಾಗಿದೆ. ಈ ಯೋಜನೆಯಡಿ ಪಶ್ಚಿಮಕ್ಕೆ ಹರಿಯುವ ನೀರನ್ನು ಈ ಜಿಲ್ಲೆಗಳಿಗೆ ತಿರುಗಿಸುವ ಉದ್ದೇಶವಿದೆ. ಯೋಜನೆಯ ಮೊದಲ ಹಂತದಲ್ಲಿ ಎತ್ತಿನಹೊಳೆ ನದಿಯಿಂದ ನೀರು ಒದಗಿಸಲಾಗುತ್ತದೆ. ಈ ಯೋಜನೆಗಾಗಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ರೂ 200 ಕೋಟಿ ಒದಗಿಸಲಾಗಿದೆ. ಈ ವರ್ಷ 30 ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ರೂ 674 ಕೋಟಿ ನೀಡಲಾಗಿದೆ.

ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸಹಾಯ ಧನ ನೀಡಲು ರೂ 20 ಕೋಟಿ, ಸಾಗರ ತಾಲ್ಲೂಕಿನ ಬೆಕ್ಕೋಡಿ ಕಾಲುವೆ ನಿರ್ಮಾಣಕ್ಕೆ ರೂ 25 ಕೋಟಿ ಪ್ರಕಟಿಸಲಾಗಿದೆ. ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ನೈಪುಣ್ಯ ಕೇಂದ್ರ ಸ್ಥಾಪನೆಗೆ 50 ಕೋಟಿ ರೂಪಾಯಿ ನೀಡಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಕಿಂಡಿ ಅಣೆಕಟ್ಟು ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ ರೂ 30 ಕೋಟಿ, ಕಾಲು ಸೇತುವೆ (ಸಂಕ) ನಿರ್ಮಾಣಕ್ಕೆ ರೂ 15 ಕೋಟಿ ಒದಗಿಸಲಾಗಿದೆ. ಸೊರಬ ತಾಲ್ಲೂಕಿನ ದಂಡಾವತಿ ನೀರಾವರಿ ಯೋಜನೆ ನಿಗದಿಯಂತೆ ಅನುಷ್ಠಾನಕ್ಕೆ ಬರಲಿದೆ ಎಂಬ ಭರವಸೆಯನ್ನೂ ಸರ್ಕಾರ ನೀಡಿದೆ.

ಕೆರೆಗಳಿಗೆ ಸಾವಿರ ಕೋಟಿ: ವಿವಿಧ ಇಲಾಖೆಗಳ ಮೂಲಕ ರಾಜ್ಯದ ಕೆರೆಗಳ ಪುನಶ್ಚೇತನಕ್ಕೆ 1,000 ಕೋಟಿ ರೂಪಾಯಿ ವೆಚ್ಚ ಮಾಡಲಿ ಸರ್ಕಾರ ತೀರ್ಮಾನಿಸಿದೆ. ಹೂಳು ತೆಗೆಯುವುದು, ತೂಬುಗಳ ದುರಸ್ತಿ, ಕಾಲುವೆಗಳ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಈ ಹಣ ಬಳಕೆಯಾಗಲಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ಕೆರೆಗಳ ಅಭಿವೃದ್ಧಿ ಮತ್ತು ಕಬಿನಿ ನದಿಯಿಂದ ನೀರುವ ತುಂಬುವ ಯೋಜನೆ ಜಾರಿಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಈ ಉದ್ದೇಶಕ್ಕೆ 100 ಕೋಟಿ ರೂಪಾಯಿ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT