ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವರಾಯನ ದವಡೆಯಲ್ಲಿ 14 ಗಂಟೆ ಕಳೆದ ವೃದ್ಧ ದಂಪತಿ

Last Updated 14 ಅಕ್ಟೋಬರ್ 2011, 5:50 IST
ಅಕ್ಷರ ಗಾತ್ರ

ನವಲಗುಂದ: `ದೇವ್ರ ದೊಡ್ಡಾತ. ಮರುಜನ್ಮ ಕೊಟ್ಟ. ನಮ್ನ ಉಳಿಸಾಕ ನೀವೆಲ್ಲ ಹೋರಾಡೀರಿ. ನಿಮ್ ಮಕ್ಳು-ಮರೀಗೆ ಪುಣ್ಯಾ ಬರ‌್ಲಿ~ ಬೆಣ್ಣೆಹಳ್ಳದಲ್ಲಿ ಗುರುವಾರ ಏಕಾಏಕಿ ಕಾಣಿಸಿಕೊಂಡ ಪ್ರವಾಹದಿಂದ ದ್ವೀಪವಾಗಿ ಮಾರ್ಪಟ್ಟಿದ್ದ ತಮ್ಮ ಹೊಲದಲ್ಲಿ 14 ಗಂಟೆಗಳ ಕಾಲ ಕಳೆದು, ಜಿಲ್ಲಾಡಳಿತದ ಕಾರ್ಯಾಚರಣೆಯಿಂದ ಮಧ್ಯರಾತ್ರಿ ಸುರಕ್ಷಿತವಾಗಿ ದಡ ತಲುಪಿದ ಕೂಡಲೇ ನವಲಗುಂದದ ಮಾಬುಸಾಬ್ ಹಾಗೂ ಹಸನ್‌ಬಿ ನದಾಫ್ ದಂಪತಿ ನೀಡಿದ ಪ್ರತಿಕ್ರಿಯೆ ಇದು.

ನದಾಫ್ ದಂಪತಿ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಗೊತ್ತಾಗಿದ್ದು ಮಧ್ಯಾಹ್ನ 2ರ ಸುಮಾರಿಗೆ. ಮಾಬುಸಾಬ್ ಅವರ ಪುತ್ರ ಅಬ್ದುಲ್ ಊಟ ಒಯ್ದಾಗ ಹೊಲಕ್ಕೆ ಹೋಗಲು ಸಾಧ್ಯವಾಗದಂತೆ ಸುತ್ತಲು ನೀರು ಆವರಿಸಿತ್ತು. ತಕ್ಷಣ ಅಪಾಯವನ್ನು ಗುರುತಿಸಿದ ಅಬ್ದುಲ್ ತಂದೆಯನ್ನು ಏರುಧ್ವನಿಯಲ್ಲಿ ಕರೆದು ಪ್ರವಾಹದ ವಿಷಯ ತಿಳಿಸಿದರಲ್ಲದೆ ಎತ್ತರದ ಸ್ಥಳದಲ್ಲಿ ನಿಲ್ಲುವಂತೆ ನಿರ್ದೇಶನ ನೀಡಿದರು.

ತಮ್ಮ ತಂದೆ-ತಾಯಿ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡ ವಿಷಯವನ್ನು ಸಂಬಂಧಿಗಳಿಗೂ ಮುಟ್ಟಿಸಿದರು ಅಬ್ದುಲ್. ಅವರ ಸಂಬಂಧಿಗಳು ತಹಶೀಲ್ದಾರ ವಿನಾಯಕ ಪಾಲನಕರ್ ಅವರ ಗಮನಕ್ಕೆ ಈ ವಿಷಯ ತಂದರು. ಆ ವೇಳೆಗೆ ಮಧ್ಯಾಹ್ನ 4 ಗಂಟೆ ಆಗಿತ್ತು.   ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಪಾಲನಕರ್, ವೃದ್ಧ ದಂಪತಿಯನ್ನು ಸುರಕ್ಷಿತವಾಗಿ ಕರೆತರಲು ಕಾರ್ಯಾಚರಣೆ ಆರಂಭಿಸಿದರು.

ಧಾರವಾಡದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಬೆಂಗಳೂರಿಗೆ ತೆರಳಿದ್ದ ಜಿಲ್ಲಾಧಿಕಾರಿ ದರ್ಪಣ ಜೈನ್ ಅಲ್ಲಿಂದಲೇ ತಹಶೀಲ್ದಾರರಿಗೆ ಅಗತ್ಯ ನಿರ್ದೇಶನ ನೀಡಿದರು.

ಧಾರವಾಡದ ಸಾಧನಕೇರಿಯಿಂದ ಬೋಟ್ ಬೆಣ್ಣೆ ಹಳ್ಳದ ದಡಕ್ಕೆ ಬಂದಿಳಿದಾಗ ರಾತ್ರಿ ಎಂಟು ಗಂಟೆ ಆಗಿತ್ತು. ಬೋಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಬೇಗ ಶುರುವಾಗಲಿಲ್ಲ. ಬೋಟ್ ಜೊತೆಗೆ ಬಂದ ಸಿಬ್ಬಂದಿ ಹಾಗೂ ಹೀಗೂ ಹೆಣಗಾಡಿ ರಾತ್ರಿ 10ರ ಸುಮಾರಿಗೆ ಬೋಟನ್ನು ಚಾಲೂ ಮಾಡಿದರು.

ನುರಿತ ಈಜುಗಾರರನ್ನು ಒಳಗೊಂಡಿದ್ದ ಹೋಂ ಗಾರ್ಡ್ ಸಿಬ್ಬಂದಿ 2-3 ಬ್ಯಾಟರಿಗಳನ್ನು ಜೊತೆಗೆ ತೆಗೆದುಕೊಂಡು ಸರಿಯಾಗಿ 10 ಗಂಟೆಗೆ ಬೆಣ್ಣೆಹಳ್ಳಕ್ಕೆ ಬೋಟ್ ಜೊತೆ ಇಳಿಯಿತು. 15-20 ನಿಮಿಷದಲ್ಲಿ ಬೋಟ್ ವಾಪಸು ಬರುತ್ತದೆ ಎಂದು ಕಾದಿದ್ದವರಿಗೆ ಒಂದು ಗಂಟೆ ಕಳೆದರೂ ಅದರ ಸುಳಿವು ಇಲ್ಲದಿದ್ದಾಗ ದಂಡೆಯಲ್ಲಿ ಆತಂಕ ಮನೆ ಮಾಡಿತ್ತು.

ಕೊನೆಗೆ ರಾತ್ರಿ 11.20ಕ್ಕೆ ಅಜ್ಜ, ಅಜ್ಜಿಯನ್ನು ಹೊತ್ತ ಬೋಟ್ ಸುರಕ್ಷಿತವಾಗಿ ಸೇತುವೆ ಹತ್ತಿರ ಬಂದಾಗ ಮಧ್ಯರಾತ್ರಿಯಾದರೂ ಸೇರಿದ್ದ ನೂರಾರು ಸಂಖ್ಯೆಯ ಜನ ಹರ್ಷೋದ್ಗಾರ ಮಾಡಿದರು. ಮಾಬುಸಾಬ್ ಹಾಗೂ ಹಸನ್‌ಬಿ ಯಾವುದೇ ಆತಂಕಕ್ಕೆ ಒಳಗಾಗದೆ ವಿಶ್ವಾಸದಿಂದ ಇದ್ದುದನ್ನು ಕಂಡು ನೆರೆದವರು ಆಶ್ಚರ್ಯ ಚಕಿತರಾದರು.

`ಹಳ್ಳದಲ್ಲಿ ನೀರು ಬರಲು ಶುರುವಾದಾಗ ಹೊರಡಲು ಅನುವಾಗಿದ್ದೆವು. ಆದರೆ, ಈಕೆ ಹಿಂದೇಟು ಹಾಕಿದ್ದರಿಂದ ಹೊಲದಲ್ಲೇ ಉಳಿದೆವು. ಹಳ್ಳ ಬೇಗ ಇಳಿಯುವ ನಿರೀಕ್ಷೆ ಇತ್ತು. ಹಾಗಾಗದ್ದರಿಂದ ಈಕೆ ಮತ್ತಷ್ಟು ಅಂಜಿದ್ದಳು~ ಎಂದು ತಲೆಗೆ ಟವಲ್ ಸುತ್ತಿದ್ದ ಮಾಬುಸಾಬ್ ಅಜ್ಜ ತನ್ನ ಪತ್ನಿಯನ್ನು ನೋಡುತ್ತಾ ಹಸನ್ಮುಖವಾಗಿ ಹೇಳಿದರು.

ಸಂಸದ ಪ್ರಹ್ಲಾದ ಜೋಶಿ ಕಾರ್ಯಾಚರಣೆ ಮುಗಿಯುವವರೆಗೆ ಘಟನಾ ಸ್ಥಳದಲ್ಲಿ ಹಾಜರಿದ್ದರು. ಎಸ್ಪಿ ಆರ್. ದಿಲೀಪ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಂ. ನೂರ್ ಮನ್ಸೂರ್, ತಹಶೀಲ್ದಾರ ವಿನಾಯಕ ಪಾಲನಕರ್, ಸಿಪಿಐಗಳಾದ ಎಸ್.ಎಸ್. ಪಡವಲ್ಕರ್, ರಾಮನಗೌಡ ಹಟ್ಟಿ, ಪಿಎಸ್‌ಐ ವೆಂಕಟಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎ. ಬ್ಯಾಳಿ ಹಾಜರಿದ್ದರು.

ಪೊಲೀಸರಲ್ಲದೆ ಅಗ್ನಿ ಶಾಮಕ ದಳ, ಹೋಂ ಗಾರ್ಡ್ಸ್ ಸಿಬ್ಬಂದಿ, ನುರಿತ ಈಜುಗಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೋಟ್‌ನಲ್ಲಿ ಹೋಗಿದ್ದ ಸಿಬ್ಬಂದಿ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT