ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾದುಗಾರ ಜಗದೀಶ ಶೆಟ್ಟರ್

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಅದೊಂದು ಖಾಲಿ ಪೆಟ್ಟಿಗೆ. ಅದರ ಮುಂದೆ ಕಪ್ಪು ಬಣ್ಣದ ಗೌನ್ ಧರಿಸಿ, ಕೈಯಲ್ಲಿ `ಮಾಂತ್ರಿಕ ದಂಡ~ ಹಿಡಿದು ನಿಂತಿದ್ದ `ಜಾದೂಗಾರ~ ಜಗದೀಶ ಶೆಟ್ಟರ್ (ಮುಖ್ಯಮಂತ್ರಿ) ನೋಡ ನೋಡುತ್ತಿದ್ದಂತೆಯೇ `ಯುವತಿ~  ಸೃಷ್ಟಿಸಿದರು! ನೆರೆದ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಹೌದು. ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಮೈಸೂರಿನ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ಮ್ಯಾಜಿಕ್ ಷೋ~ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಭಿನ್ನವಾಗಿ ಚಾಲನೆ ನೀಡಿದರು.

ಬೆಂಗಳೂರಿನ ಜಾದೂಗಾರ ಕೆ.ಎಸ್.ರಮೇಶ್ ವೇದಿಕೆ ಆಗಮಿಸಿದಾಗ ಸಭಾಂಗಣದಲ್ಲಿ ನೀರವ ಮೌನ ಆವರಿಸಿತ್ತು. ಇದನ್ನು ಗಮನಿಸಿದ ಅವರು ಶೆಟ್ಟರ್ ದಂಪತಿಗೆ ವೇದಿಕೆಗೆ ಬರುವಂತೆ ಮನವಿ ಮಾಡಿದರು. ಬಳಿಕ `ಮಂತ್ರದಂಡ~ ಕೊಟ್ಟು ಖಾಲಿ ಪೆಟ್ಟಿಗೆಗೆ ಮಂತ್ರ ಹಾಕುವಂತೆ ಸೂಚಿಸಿದರು.

ಉಪ ಮುಖ್ಯಮಂತ್ರಿ ಆರ್.ಅಶೋಕ ಪಂಜಿನ ದೀವಟಿಗೆ ಹಿಡಿದು ಪೆಟ್ಟಿಗೆ ಖಾಲಿ ಇರುವುದನ್ನು ಖಾತ್ರಿಪಡಿಸಿದರು. ಯಾವಾಗ ಶೆಟ್ಟರ್ ಮಂತ್ರ ಹಾಕಿದರೋ, ಪೆಟ್ಟಿಗೆಯಿಂದ ಸುಂದರವಾದ ಯುವತಿಯೊಬ್ಬಳು ದಿಢೀರ್ ಪ್ರತ್ಯಕ್ಷಳಾದಳು. ಶೆಟ್ಟರ್ ದಂಪತಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದಳು.


ಇದನ್ನು ನೋಡಿದ ಸಚಿವ ಎಸ್.ಎ.ರಾಮದಾಸ್ ಕ್ಷಣಹೊತ್ತು ಕಕ್ಕಾಬಿಕ್ಕಿಯಾದರು. ಸಚಿವ ಅಶೋಕ್ ಕೂಡ ಯುವತಿ ಪ್ರತ್ಯಕ್ಷಳಾಗಿದ್ದಕ್ಕೆ ಆಶ್ಚರ್ಯಪಟ್ಟರು.

ಬಳಿಕ ಜಾದೂ ಮುಂದುವರಿಸಿದ ರಮೇಶ್, ಕೈಗವುಸುಗಳಿಂದ ಪಾರಿವಾಳ ಸೃಷ್ಟಿಸಿದರು. ಯುವತಿಯನ್ನು ಯಾವುದೇ ವಸ್ತುವಿನ ಸಹಾಯವಿಲ್ಲದೆ ವೇದಿಕೆಯ ನಡುಮಧ್ಯೆ ನಿಲ್ಲಿಸಿ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದರು. ಮುಖ್ಯಮಂತ್ರಿ ಶೆಟ್ಟರ್ ಅವರನ್ನು `ರಾಜ್ಯದ ದೊಡ್ಡ ಜಾದೂಗಾರ~ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT