ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನು: ವಿಚಾರಣೆ ಮುಂದಕ್ಕೆ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂಹಗರಣದ ಸುಳಿಗೆ ಸಿಲುಕಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕೃಷ್ಣಯ್ಯ ಶೆಟ್ಟಿ ಅವರಿಗೆ ಶುಕ್ರವಾರವೂ ಜಾಮೀನು ಸಿಗಲಿಲ್ಲ.

ಯಡಿಯೂರಪ್ಪ ಹಾಗೂ ಕಟ್ಟಾ ಅವರ ಅರ್ಜಿಯ ವಿಚಾರಣೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಕೃಷ್ಣಯ್ಯ ಶೆಟ್ಟಿ ಅವರ ಅರ್ಜಿಗೆ ಸಂಬಂಧಿಸಿದಂತೆ ಶುಕ್ರವಾರ ವಾದ, ಪ್ರತಿವಾದ ಮುಕ್ತಾಯಗೊಂಡಿದೆ. ಡಿನೋಟಿಫಿಕೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಇದೇ 25ರಂದು ಯಡಿಯೂರಪ್ಪ ಹಾಗೂ ಶೆಟ್ಟಿ ಅವರಿಗೆ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ಕೋರ್ಟ್ ನಿರಾಕರಿಸಿದೆ.
 
ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಚಿಕಿತ್ಸೆಯ ಆಧಾರದ ಮೇಲೆ ಜಾಮೀನು ನೀಡುವಂತೆ ಕೋರಿದ್ದ ಕಟ್ಟಾ ಅವರ ಮನವಿಯನ್ನು ಇದೇ 17ರಂದು ಕೋರ್ಟ್ ತಿರಸ್ಕರಿಸಿದೆ. ಇವುಗಳನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ನಡೆಸುತ್ತಿದ್ದಾರೆ.

ಜಾಮೀನು ನೀಡಬೇಡಿ: ಯಡಿಯೂರಪ್ಪನವರಿಗೆ ಜಾಮೀನು ನೀಡದಂತೆ ದೂರುದಾರ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು ಶುಕ್ರವಾರ ಕೋರ್ಟ್ ಅನ್ನು ಕೋರಿಕೊಂಡರು. `ಇವರು ಮುಖ್ಯಮಂತ್ರಿಗಳಾಗಿದ್ದ ಎರಡು ವರ್ಷಗಳ ಅವಧಿಯಲ್ಲಿಯೇ ಹಲವು ಡಿನೋಟಿಫಿಕೇಷನ್ ಮಾಡಿದ್ದಾರೆ.

ಬೆಂಗಳೂರಿನ ಹೊರವಲಯದ ಮೇಲೂ ಕಣ್ಣು ಇಟ್ಟಿದ್ದ ಅವರು, ಇದೇ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಪ್ರಮುಖ ಖಾತೆಗಳನ್ನು ತಮ್ಮ ವಶದಲ್ಲಿಯೇ ಇಟ್ಟುಕೊಂಡಿದ್ದರು. ಇವರು ಕಂಬಿಯ ಹಿಂದೆ ಇದ್ದರಷ್ಟೇ ಅವರ ವಿರುದ್ಧದ ತನಿಖೆ ಚುರುಕುಗೊಳ್ಳುತ್ತದೆ. ಇಲ್ಲದೇ ಹೋದರೆ ಅದು ಅಲ್ಲಿಗೇ ಸ್ಥಗಿತಗೊಳ್ಳುತ್ತದೆ~ ಎಂದು ಅವರು ವಾದಿಸಿದರು.
 
ಕಟ್ಟಾ ಪ್ರಕರಣದಲ್ಲಿ ನ್ಯಾಯಮೂರ್ತಿಗಳು ಈ ಹಿಂದೆ ನೀಡಿದ್ದ ನಿರ್ದೇಶನದ ಮೇರೆಗೆ ಕ್ಯಾನ್ಸರ್‌ನಿಂದ ಅವರು ಬಳಲುತ್ತಿರುವ ಕುರಿತಾದ ವೈದ್ಯಕೀಯ ವರದಿಯನ್ನು ವಕೀಲರು ಕೋರ್ಟ್ ಮುಂದೆ ಇಟ್ಟರು. ಈ ವರದಿಯನ್ನು ತಾವು ಪರಿಶೀಲಿಸಬೇಕಿರುವ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.

ನಿರೀಕ್ಷಣಾ ಜಾಮೀನು: ಸಿರಾಜಿನ್ ಬಾಷಾ ಅವರ 1, 4 ಮತ್ತು 5ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಉಳಿದ ಪ್ರಕರಣದಲ್ಲಿ (2 ಮತ್ತು 3ನೇ ದೂರು) ತಮಗೆ ಜಾಮೀನು ದೊರೆತರೆ, ಈ ಪ್ರಕರಣದಲ್ಲಿ ಪುನಃ ಬಂಧಿಸುವ ಸಾಧ್ಯತೆ ಇದೆ ಎಂದು ಅವರು ಈ ಅರ್ಜಿ ಸಲ್ಲಿಸಿದ್ದಾರೆ.
 
ಇವರ ಜೊತೆಗೆ ಹಗರಣದಲ್ಲಿ ಸಹ ಆರೋಪಿಗಳಾದ ಅವರ ಮಕ್ಕಳಾದ ಬಿ.ವೈ ರಾಘವೇಂದ್ರ, ಬಿ.ವೈ.ವಿಜಯೇಂದ್ರ ಹಾಗೂ ಅಳಿಯ ಆರ್.ಎನ್.ಸೋಹನ್ ಕುಮಾರ್ ಅವರೂ ನಿರೀಕ್ಷಣಾ ಜಾಮೀನು ನೀಡುವಂತೆ ಹೈಕೋರ್ಟ್ ಅನ್ನು ಕೋರಿದ್ದಾರೆ. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ನ. 3ಕ್ಕೆ ಮುಂದೂಡಿದರು.

ಈ ಮಧ್ಯೆ, ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಬಾಷಾ ಸಲ್ಲಿಸಿರುವ 4 ಮತ್ತು 5ನೇ ದೂರಿನ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ನ.11ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT