ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ ಕೆಟಗರಿ: ಹಗಲು ದರೋಡೆ

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಬಿಡಿಎ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿನ ಬಿಡಿ ನಿವೇಶನಗಳನ್ನು `ಜಿ~ ಕೆಟಗರಿ ಅಡಿ ಹಂಚಿಕೆ ಮಾಡುವ ಅಧಿಕಾರ ಮುಖ್ಯಮಂತ್ರಿಯವರ ಕೈಸೇರಿ 15 ವರ್ಷಗಳಾಗಿದೆ. ಈ ಕೋಟಾದಡಿ 1,400ಕ್ಕೂ ಹೆಚ್ಚು ನಿವೇಶನಗಳ ಹಂಚಿಕೆಗೆ ಆದೇಶ ಹೊರಬಿದ್ದಿದೆ.

ಆದರೆ, ಅದರಲ್ಲಿ ಅರ್ಹರಿಗೆ ದೊರೆತ ನಿವೇಶನಗಳು ಎಷ್ಟು, ಅನರ್ಹರ ಪಾಲಾದುದೆಷ್ಟು ಎಂಬುದು ಅಧ್ಯಯನ ಯೋಗ್ಯ ವಿಷಯ. ಮುಖ್ಯಮಂತ್ರಿ ತಮ್ಮ ವಿವೇಚನೆ ಬಳಸಿ ಅರ್ಹರಿಗೆ ನಿವೇಶನ ನೀಡುವ ಉದ್ದೇಶ ಒಳ್ಳೆಯದೇ.

ಆದರೆ, ಇದು ದುರುಪಯೋಗ ಆಗುತ್ತಲೇ ಬಂದಿರುವುದು ದುರದೃಷ್ಟಕರ. ಯಾವುದೇ ವ್ಯಕ್ತಿ ಅಥವಾ ಆ ವ್ಯಕ್ತಿಯ ಅವಲಂಬಿತರು ಬೆಂಗಳೂರಿನಲ್ಲಿ ನಿವೇಶನ ಅಥವಾ ಸ್ಥಿರಾಸ್ತಿ ಹೊಂದಿರದಿದ್ದರೆ ಮಾತ್ರ ಬಿಡಿಎ ನಿವೇಶನ ಪಡೆಯಬಹುದು.

ಆದರೆ, ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು ವಿವೇಚನೆಯನ್ನು ದೂರಕ್ಕೆ ದೂಡಿ ರಾಜಕೀಯ ಉದ್ದೇಶ ಸಾಧನೆಗಾಗಿ ಈ ಕೋಟಾ ಬಳಸಿಕೊಂಡಿದ್ದಾರೆ. ನಿವೇಶನ, ಬಂಗಲೆಗಳನ್ನು ಹೊಂದಿರುವ ಶಾಸಕರು, ಸಚಿವರು, ಸಂಸದರು ಸುಳ್ಳು ಪ್ರಮಾಣ ಸಲ್ಲಿಸಿ ನಿವೇಶನ ಪಡೆದಿದ್ದಾರೆ. ಇದು ನಾಚಿಕೆಗೇಡು.

ಚುನಾವಣಾ ಆಯೋಗಕ್ಕೆ ಇವರೇ ಸಲ್ಲಿಸಿರುವ ಆಸ್ತಿಪಾಸ್ತಿ ಕುರಿತ ಪ್ರಮಾಣ ಪತ್ರದಲ್ಲಿ ಬೆಂಗಳೂರಿನಲ್ಲಿ ಮನೆ, ಬೆಲೆಬಾಳುವ ನಿವೇಶನಗಳನ್ನು ಹೊಂದಿರುವ ವಿವರ ನೀಡಿದ್ದಾರೆ. ಇಂತಹ ಕುಬೇರರೂ ಯಾವುದೇ ಎಗ್ಗಿಲ್ಲದೆ ಬಿಡಿಎ ನಿವೇಶನ ಪಡೆದಿರುವುದು, ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ರಾಜಕಾರಣಿಗಳ ಬಂಧು-ಬಳಗವೂ ಹಗಲು ದರೋಡೆಗೆ ಹಾತೊರೆದಂತೆ ಇದರ ಗರಿಷ್ಠ ಲಾಭ ಪಡೆದಿದೆ.

ಬಿಡಿಎ ನಿವೇಶನ ಹಂಚಿಕೆ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿ ನಿವೇಶನ ಪಡೆದಿರುವುದು ದೃಢಪಟ್ಟರೆ ಅಂತಹ ಮಂಜೂರಾತಿಯನ್ನು ರದ್ದು ಮಾಡಬಹುದು. ನಿವೇಶನ ಪಡೆಯುವಾಗ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದರೆ ಅದು ಅಪರಾಧ ಆಗುತ್ತದೆ. ಈ ರೀತಿಯ ನಿವೇಶನ ಹಂಚಿಕೆ ರದ್ದತಿಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದಕ್ಕೂ ಅವಕಾಶವಿಲ್ಲ. ಶಾಸನ ರೂಪಿಸುವವರೇ ಸುಳ್ಳು ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ವಂಚನೆ ಮಾಡಿರುವುದು ಘೋರ ಅಪರಾಧ.

`ಜಿ ಕೋಟಾದಡಿ ಬಿಡಿ ನಿವೇಶನ ಹಂಚಿಕೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ~ ಎಂದು ಹೈಕೋರ್ಟ್ 2010ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿದ ಬಳಿಕವೂ ಇದೇ ಕೋಟಾದಡಿ ನಿವೇಶನ ಹಂಚಿಕೆ ಆಗಿರುವುದು ಭಂಡತನದ ಪರಮಾವಧಿ.

ತನ್ನ ಬಳಿ ಲಭ್ಯ ಇರುವ ಬಿಡಿ ನಿವೇಶನಗಳ ಬಗ್ಗೆ ಬಿಡಿಎಗೆ ಪೂರ್ಣ ಮಾಹಿತಿಯೂ ಇದ್ದಂತಿಲ್ಲ. ವಿವೇಚನೆ ಕೋಟಾ ಅಂದಮಾತ್ರಕ್ಕೆ ಅದನ್ನು ಬೇಕಾಬಿಟ್ಟಿ ಬಳಸಬಹುದು ಎಂದು ಭಾವಿಸಿರುವುದು ಜನಪ್ರತಿನಿಧಿಗಳ ತಿಳಿವಳಿಕೆಯ ಮಟ್ಟವನ್ನು ತೋರುತ್ತದೆ. ನಿವೇಶನ ಮಂಜೂರಾತಿಗೆ ಮಾನದಂಡ ಇರಬೇಕು.

ಅದನ್ನು ಪರಾಮರ್ಶಿಸಲು ಒಂದು ವ್ಯವಸ್ಥೆ ಇರಬೇಕು. `ಜಿ~ ಕೋಟಾ ಕುರಿತು ಸ್ಪಷ್ಟ ವ್ಯಾಖ್ಯಾನ ಬೇಕು ಮತ್ತು ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಚ್ಚಿಡುವಂತಹದು ಏನೂ ಇಲ್ಲ. ಅಧಿಕಾರದ ಚುಕ್ಕಾಣಿ ಹಿಡಿದವರು ಮೊದಲು ಇದನ್ನು ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT