ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ ಬಿರುಗಾಳಿಗೆ ಸರ್ಕಾರ ಇಕ್ಕಟ್ಟಿನಲ್ಲಿ

Last Updated 26 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪದೇ ಪದೇ ಬಿರುಗಾಳಿ ಎಬ್ಬಿಸುತ್ತಿರುವ `ಜಿ~ ಕೋಟಾ ನಿವೇಶನ ಹಂಚಿಕೆಯ ಅಧಿಕಾರ ರಾಜ್ಯ ಸರ್ಕಾರದ ಕೈಗೆ ಬಂದು ಕೇವಲ 15 ವರ್ಷಗಳಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಿಡಿ ನಿವೇಶನಗಳನ್ನು ವಿವೇಚನಾ ಕೋಟಾದಡಿ ಹಂಚುವ ಅಧಿಕಾರ 1997ರವರೆಗೂ ಬಿಡಿಎ ಬಳಿಯೇ ಇತ್ತು. ನಂತರ ಸರ್ಕಾರದ ಕೈಸೇರಿದ ಅಧಿಕಾರವೇ ಈಗ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ!

ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಗಾಗಿ ಮೊದಲು ನಗರ ಅಭಿವೃದ್ಧಿ ಟ್ರಸ್ಟ್ ಮಂಡಳಿ (ಸಿಐಟಿಬಿ) ಅಸ್ತಿತ್ವಕ್ಕೆ ಬಂತು. 1976ರಲ್ಲಿ ಪ್ರತ್ಯೇಕ ಕಾಯ್ದೆಯೊಂದಿಗೆ ಬಿಡಿಎ ಸ್ಥಾಪನೆ ಆಯಿತು. ನಗರದ ವಸತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಡಾವಣೆ ನಿರ್ಮಾಣದ ಹೊಣೆಯೂ ಬಿಡಿಎ ಹೆಗಲೇರಿತು. ಈವರೆಗೂ ಹತ್ತಾರು ಬಡಾವಣೆಗಳನ್ನು ನಿರ್ಮಿಸಿರುವ ಬಿಡಿಎ, ಹೇಗೆ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡುತ್ತಿತ್ತು ಎಂದು ಹುಡುಕ ಹೊರಟರೆ ಸಿಗುವುದು ಎರಡೇ ಸುತ್ತೋಲೆಗಳು.

ಬಿಡಿ ನಿವೇಶನಗಳು ಲಭ್ಯವಾಗುವುದೇ ವಿಶೇಷ ಸಂದರ್ಭಗಳಲ್ಲಿ. ಕೆಲವೊಮ್ಮೆ ಬಡಾವಣೆ ನಿರ್ಮಾಣವಾದ ಬಳಿಕ ನಕ್ಷೆಯಲ್ಲಿರುವುದಕ್ಕಿಂತಲೂ ಹೆಚ್ಚು ನಿವೇಶನಗಳು ದೊರೆಯುತ್ತವೆ. ಹೆಚ್ಚುವರಿ ನಿವೇಶನಗಳನ್ನು ಬಿಡಿ ನಿವೇಶನಗಳು ಎಂದು ಪರಿಗಣಿಸಲಾಗುತ್ತದೆ. ಕೆಲವು ಫಲಾನುಭವಿಗಳು ಮಂಜೂರಾದ ನಿವೇಶನದ ಮೊತ್ತವನ್ನು ಸಕಾಲಕ್ಕೆ ಬಿಡಿಎಗೆ ಪಾವತಿಸುವಲ್ಲಿ ವಿಫಲರಾಗುತ್ತಾರೆ. ಅವುಗಳ ಹಂಚಿಕೆಯನ್ನೂ ರದ್ದುಮಾಡಿ ಬಿಡಿ ನಿವೇಶನಗಳ ಸಾಲಿಗೆ ಸೇರಿಸಲಾಗುತ್ತದೆ.

ಒತ್ತುವರಿಗೆ ಒಳಗಾದ ಬಿಡಿಎ ಜಮೀನನ್ನು ಮರಳಿ ವಶಕ್ಕೆ ಪಡೆದ ಬಳಿಕ ನಿರ್ಮಿಸುವ ನಿವೇಶನಗಳೂ ಇದೇ ಪಟ್ಟಿಗೆ ಸೇರುತ್ತವೆ. ನ್ಯಾಯಾಲಯದ ಹಂತದಲ್ಲಿ ವಿವಾದ ಬಾಕಿ ಇದ್ದು, ಇತ್ಯರ್ಥವಾದ ಬಳಿಕ ಪ್ರಾಧಿಕಾರದ ಸ್ವತ್ತಾಗುವ ನಿವೇಶನಗಳನ್ನೂ `ಬಿಡಿ~ ಎಂದು ಪರಿಗಣಿಸಲಾಗುತ್ತದೆ. ಹಂಚಿಕೆಯಾದ ನಿವೇಶನಗಳು ಕಟ್ಟಡ ನಿರ್ಮಾಣಕ್ಕೆ ಯೋಗ್ಯವಲ್ಲ ಎಂಬ ಕಾರಣ ನೀಡಿ ಕೆಲವರು ಬದಲಿ ನಿವೇಶನ ಪಡೆಯುತ್ತಾರೆ. ಆಗ, ಮೊದಲಿಗೆ ಹಂಚಿಕೆ ಮಾಡಿದ ನಿವೇಶನಗಳನ್ನು `ಬಿಡಿ~ ನಿವೇಶನವಾಗಿ ಪರಿವರ್ತಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಬಿಡಿ ನಿವೇಶನಗಳು ಆಯಕಟ್ಟಿನ ಸ್ಥಳದಲ್ಲೇ ಇರುತ್ತವೆ.

ಪ್ರಾಧಿಕಾರದ ಕೈಲಿತ್ತು ಅಧಿಕಾರ: ಬಿಡಿಎ ಕಾಯ್ದೆ-1984ರ ಕಲಂ 5ರ ಅಡಿಯಲ್ಲಿ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ 1986 ಮತ್ತು 1989ರಲ್ಲಿ ಸುತ್ತೋಲೆಗಳನ್ನು ಹೊರಡಿಸಲಾಗಿತ್ತು. ಎರಡೂ ಸುತ್ತೋಲೆಗಳಲ್ಲಿ ಬಹುತೇಕ ಸಾಮ್ಯತೆ ಇತ್ತು. ಈ ಪ್ರಕಾರ ಬಿಡಿ ನಿವೇಶನ ಹಂಚಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವೂ ಇರಲಿಲ್ಲ.

ಈ ಸುತ್ತೋಲೆ ಪ್ರಕಾರ ಶೇಕಡ 40ರಷ್ಟು ಬಿಡಿ ನಿವೇಶನಗಳನ್ನು ಹರಾಜಿನ ಮೂಲಕ ಮಾರಾಟ ಮಾಡಬೇಕಿತ್ತು. ಶೇ 20ರಷ್ಟು ನಿವೇಶನಗಳನ್ನು ಕಲೆ, ವಿಜ್ಞಾನ, ಸಾಹಿತ್ಯ, ಕ್ರೀಡೆ, ಶಿಕ್ಷಣ, ವೈದ್ಯಕೀಯ, ಸಮಾಜ ಸೇವೆ, ಸಾರ್ವಜನಿಕ ಆಡಳಿತ ಮತ್ತಿತರ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಹಂಚಿಕೆ ಮಾಡಲು ಬಿಡಿಎ ಆಡಳಿತ ಮಂಡಳಿಗೆ ಅಧಿಕಾರವಿತ್ತು.

ಶೇ 15ರಷ್ಟು ನಿವೇಶನಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯದರ್ಶಿ ಶ್ರೇಣಿಯ ಹಿರಿಯ ಅಧಿಕಾರಿಗಳು, ಡೆಪ್ಯುಟಿ ಜನರಲ್ ಶ್ರೇಣಿಯ ಸೇನಾ ಅಧಿಕಾರಿಗಳು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡಲು ಅವಕಾಶವಿತ್ತು. ಶೇ 5ರಷ್ಟು ಬಿಡಿ ನಿವೇಶನಗಳನ್ನು ರಾಜ್ಯ, ಕೇಂದ್ರ ಸರ್ಕಾರದ ಸಂಸ್ಥೆಗಳು, ವಾಣಿಜ್ಯೇತರ ಸ್ವರೂಪದ ನೋಂದಾಯಿತ ದತ್ತಿ ಸಂಸ್ಥೆಗಳು, ಸಂಘಗಳು ಮತ್ತು ಟ್ರಸ್ಟ್‌ಗಳಿಗೆ ನಾಗರಿಕ ಬಳಕೆಗಾಗಿ ನೀಡಲು ಈ ಸುತ್ತೋಲೆಯಲ್ಲಿ ಅವಕಾಶ ನೀಡಲಾಗಿತ್ತು.

ಬೆಂಗಳೂರಿನಲ್ಲೇ ಕನಿಷ್ಠ 10 ವರ್ಷಗಳಿಂದ ನೆಲೆಸಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಶೇ 5ರಷ್ಟು ನಿವೇಶನಗಳನ್ನು ನೀಡಬಹುದಿತ್ತು. ಸೇವೆಯಲ್ಲಿರುವಾಗಲೇ ಮೃತರಾದ ರಾಜ್ಯ ಸರ್ಕಾರಿ ನೌಕರರ ಅವಲಂಬಿತರಿಗೆ ಶೇ 5ರಷ್ಟು ನೀವೇಶನ ಹಂಚಿಕೆಗೆ ಅವಕಾಶ ಇತ್ತು.

ಕೊನೆಯದಾಗಿ ಶೇ 10ರಷ್ಟು ನಿವೇಶನಗಳನ್ನು ಬಿಡಿಎ ಆಡಳಿತ ಮಂಡಳಿಯು ತನ್ನ ವಿವೇಚನಾ ಅಧಿಕಾರ ಬಳಸಿ ಅರ್ಹ ವ್ಯಕ್ತಿಗಳಿಗೆ ಮಂಜೂರು ಮಾಡಬಹುದಿತ್ತು.

ಒಟ್ಟು ಏಳು ವರ್ಗಗಳ ಅಡಿಯಲ್ಲಿ ಬಿಡಿ ನಿವೇಶನ ಹಂಚಿಕೆಗೆ ನಿಯಮ ರೂಪಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಎ, ಬಿ, ಸಿ, ಡಿ, ಇ, ಎಫ್ ಮತ್ತು ಜಿ ವರ್ಗಗಳೆಂದು ಅವುಗಳನ್ನು ಹೆಸರಿಸಲಾಗಿತ್ತು. ಅಂದಿನಿಂದಲೇ ವಿವೇಚನಾ ಕೋಟಾ `ಜಿ~ ಕೋಟಾ ಎಂದೇ ಪ್ರಚಲಿತದಲ್ಲಿತ್ತು.

ಸರ್ಕಾರದ ಹಸ್ತಕ್ಷೇಪ: 1997ರ ಆಗಸ್ಟ್ 6ರಂದು ಹೊಸ ಸುತ್ತೋಲೆ ಹೊರಡಿಸಿದ ನಗರಾಭಿವೃದ್ಧಿ ಇಲಾಖೆ, ಬಿಡಿ ನಿವೇಶನಗಳ ಹಂಚಿಕೆಯಲ್ಲಿ ಹಲವು ಬದಲಾವಣೆಗಳನ್ನು ತಂದಿತ್ತು. `ಜಿ~ ಕೋಟಾದ ಹಂಚಿಕೆ ಅಧಿಕಾರವನ್ನು ಬಿಡಿಎ ಆಡಳಿತ ಮಂಡಳಿಯಿಂದ ಕಿತ್ತುಕೊಂಡ ಸರ್ಕಾರ, ಅದರ ಪ್ರಮಾಣವನ್ನೂ ಶೇಕಡ 30ಕ್ಕೆ ಹೆಚ್ಚಿಸಿತ್ತು.

ಹೊಸ ಸುತ್ತೋಲೆ ಪ್ರಕಾರ ಹರಾಜಿನ ಮೂಲಕ ವಿಲೇವಾರಿ ಮಾಡಬೇಕಾದ ಬಿಡಿ ನಿವೇಶನಗಳ ಪ್ರಮಾಣವನ್ನು ಶೇ 30ಕ್ಕೆ ತಗ್ಗಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕರ್ನಾಟಕ ಮೂಲದವರಿಗೆ ನೀಡಲು ಶೇ 15ರಷ್ಟು ನಿವೇಶನಗಳನ್ನು ಮೀಸಲಿಡಲು ಈ ಸುತ್ತೋಲೆಯಲ್ಲೇ ಆದೇಶಿಸಲಾಯಿತು.

ಕಲೆ, ವಿಜ್ಞಾನ, ಸಾಹಿತ್ಯ, ಕ್ರೀಡೆ, ಶಿಕ್ಷಣ, ವೈದ್ಯಕೀಯ, ಸಮಾಜ ಸೇವೆ, ಸಾರ್ವಜನಿಕ ಆಡಳಿತ ಮತ್ತಿತರ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗಾಗಿ ಶೇ 10ರಷ್ಟು ನಿವೇಶನ ಹಂಚಿಕೆ ಮಾಡಲು ಬಿಡಿಎಗೆ ಅವಕಾಶ ನೀಡಲಾಯಿತು. ಕರ್ನಾಟಕ ಮೂಲದವರಾಗಿದ್ದು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಶೇ 5ರಷ್ಟು ನಿವೇಶನಗಳನ್ನು ಮಂಜೂರು ಮಾಡುವ ತೀರ್ಮಾನವೂ ಈ ಸುತ್ತೋಲೆಯಲ್ಲಿತ್ತು.

ಕನಿಷ್ಠ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಶೇ 5 ಮತ್ತು ಸೇವೆಯಲ್ಲಿರುವಾಗಲೇ ಮೃತರಾದ ರಾಜ್ಯ ಸರ್ಕಾರಿ ಅಧಿಕಾರಿಗಳ ಅವಲಂಬಿತರಿಗೆ ಶೇ 5ರಷ್ಟು ಬಿಡಿ ನಿವೇಶನಗಳನ್ನು ನೀಡಲು ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು.

ಸಂಘ ಸಂಸ್ಥೆಗಳನ್ನು ಹೊರತುಪಡಿಸಿ ಬಿಡಿ ನಿವೇಶನ ಪಡೆಯುವ ಎಲ್ಲ ವ್ಯಕ್ತಿಗಳಿಗೂ ಬಿಡಿಎ ನಿವೇಶನ ಹಂಚಿಕೆಯ ಸಾಮಾನ್ಯ ನಿಯಮಗಳು ಅನ್ವಯವಾಗುತ್ತವೆ. ಫಲಾನುಭವಿ ಅಪ್ರಾಪ್ತ ವಯಸ್ಕನಾಗಿರಬಾರದು, ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳಿಂದ ನೆಲೆಸಿರಬೇಕು, ಫಲಾನುಭವಿ ಅಥವಾ ಆತನ ಕುಟುಂಬದ ಯಾವುದೇ ಅವಲಂಬಿತ ಸದಸ್ಯರು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿವೇಶನ ಅಥವಾ ಮನೆ ಹೊಂದಿರಬಾರದು ಎಂಬ ಷರತ್ತು ಉಲ್ಲಂಘಿಸುವಂತಿಲ್ಲ.

ತಾನೇ ರಚಿಸಿದ ಉಪ ಸಮಿತಿಯ ಶಿಫಾರಸಿನ ಆಧಾರದಲ್ಲಿ ಎ ವರ್ಗದಿಂದ ಎಫ್ ವರ್ಗದವರೆಗಿನ ಫಲಾನುಭವಿಗಳಿಗೆ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಆಡಳಿತ ಮಂಡಳಿಗೆ ಅಧಿಕಾರವಿದೆ. ಆದರೆ, `ಜಿ~ ಕೋಟಾ ಬಳಕೆ ಅಧಿಕಾರ ಸಂಪೂರ್ಣವಾಗಿ ಸರ್ಕಾರದ್ದು. ಈಗ ಇದೇ ಅಧಿಕಾರ ರಾಜ್ಯದ ಅಧಿಕಾರ ಸೌಧದ ಸುತ್ತವೇ ವಿವಾದದ ಹುತ್ತವಾಗಿ ಬೆಳೆಯುತ್ತಿದೆ.

(ಮುಂದುವರಿಯುವುದು...)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT