ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಶೇ8 ಅಸಾಧ್ಯವೇನಲ್ಲ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ(ಜಿಡಿಪಿ) ವಾರ್ಷಿಕ ಪ್ರಗತಿಯಲ್ಲಿ ಶೇ 8ರಷ್ಟು ಸಾಧನೆ ತೋರುವುದು ಸುಲಭವಲ್ಲ, ಹಾಗೆಂದು ಪೂರ್ಣ ಅಸಾಧ್ಯವಾದ ಕಾರ್ಯವೇನೂ ಅಲ್ಲ ಎಂದಿದ್ದಾರೆ ಪ್ರಧಾನಿ ಮನಮೋಹನ್ ಸಿಂಗ್. ಅದೇ ವೇಳೆ, ಜಾಗತಿಕ ಆರ್ಥಿಕ ಅನಿಶ್ಚಯತೆಯತ್ತಲೂ ಗಮನ ಸೆಳೆದಿದ್ದಾರೆ.

ಇಲ್ಲಿ ಶುಕ್ರವಾರ `ಸೇನಾ ಮುಖ್ಯಸ್ಥರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಉದ್ಯೋಗ ಕ್ಷೇತ್ರ ಪ್ರವೇಶಿಸಲು ಪ್ರತಿವರ್ಷ 1 ಕೋಟಿ ಜನ ಸಾಲುಗಟ್ಟುತ್ತಿದ್ದಾರೆ. ಇಷ್ಟು ಮಂದಿಗೂ ಉದ್ಯೋಗ ದೊರಕಿಸಬೇಕೆಂದರೆ `ಜಿಡಿಪಿ~ ಪ್ರಗತಿಯನ್ನು ಶೇ 8ರ ಮಟ್ಟಕ್ಕೆ ಒಯ್ಯಬೇಕು. ಇದು ಸಾಧ್ಯವಾದರೆ ಮುಂದಿನ ಮೂರು ವರ್ಷಗಳಲ್ಲಿ ನಮ್ಮಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಶೇ 37ರಿಂದ 38ರ ಮಟ್ಟಕ್ಕೆ ಹೆಚ್ಚಲಿದೆ. ಆಗ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಆಶಾವಾದ ವ್ಯಕ್ತಪಡಿಸಿದರು.

2011-12ರಲ್ಲಿ ಶೇ 8ರಷ್ಟಿದ್ದ ದೇಶದ `ಜಿಡಿಪಿ~ ಪ್ರಗತಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 5.5ಕ್ಕೆ ಕುಸಿದು ತೀವ್ರ ಕಳವಳ ಉಂಟು ಮಾಡಿತ್ತು. ಮೇ ತಿಂಗಳ ನಂತರ ಆಗಸ್ಟ್‌ವರೆಗಿನ ಅವಧಿಯಲ್ಲಿ ರಫ್ತು ಪ್ರಮಾಣ ಭಾರಿ ಕುಸಿತ ಕಂಡಿತ್ತು. ವಿತ್ತೀಯ ಕೊರತೆ ಮೊದಲ ಐದು ತಿಂಗಳಲ್ಲಿ ಶೇ 66ರ ಮಟ್ಟಕ್ಕೇರಿತ್ತು.

`ಯೂರೋ ವಲಯದಲ್ಲಿನ ಬಿಕ್ಕಟ್ಟಿನ ಕಾರಣ ಜಾಗತಿಕ ಆರ್ಥಿಕ ಅಸ್ಥಿರತೆ ಮುಂದುವರಿದಿದೆ. ಏಷ್ಯಾ ದೇಶಗಳಲ್ಲಿನ ಆರ್ಥಿಕ ವ್ಯವಸ್ಥೆ ಮೇಲೂ ಅದರ ಪರಿಣಾಮವಾಗಿದೆ. ಇದರಿಂದಾಗಿ ದೇಶದ ರಫ್ತು ಭಾರಿ ಇಳಿಕೆಯಾಗಿದೆ. ಭಾರತವೂ ಜಾಗತಿಕ ಪರಿಸ್ಥಿತಿಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ~ ಎಂದರು.

ಇತ್ತೀಚೆಗೆ ಕೇಂದ್ರ ಸರ್ಕಾರ ವಿದೇಶಿ ನೇರ ಹೂಡಿಕೆಗೆ ಇದ್ದ ಅಡೆತಡೆಗಳನ್ನು ನಿವಾರಿಸಿ ಕೆಲವು ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಂಡ ನಂತರ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಆಶಾದಾಯಕ ಸೂಚನೆ ಹೊರಹೊಮ್ಮಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT