ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ತೆರೆ

Last Updated 21 ಮಾರ್ಚ್ 2011, 7:15 IST
ಅಕ್ಷರ ಗಾತ್ರ

ಹಾಸನ: ಯಾವುದೇ ಹೊಸ ನಿರ್ಣಯಗಳನ್ನು ಅಂಗೀಕರಿಸದೆ, ಕಳೆದ ವರ್ಷದ ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳನ್ನೇ ಪುನಃ ಅಂಗೀಕರಿಸುವ ಮೂಲಕ ಭಾನುವಾರ ಸಂಜೆ ಹಾಸನ ಜಿಲ್ಲಾಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಎಳೆಯಲಾಯಿತು.‘ಪಶ್ಚಿಮ ಘಟ್ಟವನ್ನು ಶಾಶ್ವತ ಜೀವ ವೈವಿಧ್ಯ ನೆಲೆ ಎಂದು ಘೋಷಿಸಬೇಕು, ಮಲೆನಾಡು ಪ್ರದೇಶದಲ್ಲಿ ವೈವಿಧ್ಯಮಯ ಸಸ್ಯ ಸಂಪತ್ತನ್ನು ಬೆಳೆಯಬೇಕು ಹಾಗೂ ಮೇಲೂರು ಅಥವಾ ಹಳೇಬೀಡಿನಲ್ಲಿ ಶಿಲ್ಪಕಲಾ ಕಾಲೇಜು ಆರಂಭಿಸಬೇಕು’ ಎಂಬ ಮೂರು ನಿರ್ಣಯಗಳನ್ನು ಕಳೆದ ಬಾರಿಯ ಸಮ್ಮೇಳನದಲ್ಲಿ ಅಂಗೀಕರಿಸಲಾಗಿತ್ತು. ಇದರಲ್ಲಿ ಯಾವ ಬೇಡಿಕೆಯೂ ಈಡೇರಿಲ್ಲ. ಆದ್ದರಿಂದ ಅದೇ ನೀರ್ಣಯಗಳನ್ನು ಪುನಃ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

‘ನಾನು ಇಂದು ಭಾವುಕನಾಗುವುದಿಲ್ಲ’ ಎನ್ನುತ್ತಲೇ ಮಾತು ಆರಂಭಿಸಿದ ಸಮ್ಮೇಳನಾಧ್ಯಕ್ಷ ಎಚ್.ಬಿ. ರಮೇಶ್, ಕೆಲವೇ ಕ್ಷಣದಲ್ಲಿ ಮತ್ತೆ ಭಾವಾವೇಶಕ್ಕೆ ಒಳಗಾಗಿ ಆನಂದ ಭಾಷ್ಪಗಳನ್ನಿಟ್ಟರು. ‘ಕನ್ನಡಿಗರಿಗೆ ಬದುಕೇ ಕನ್ನಡವಾಗಬೇಕು. ಕನ್ನಡಿಗರು ವಿಶ್ವದೆಲ್ಲೆಡೆ ಹೋಗಬೇಕು ಆದರೆ ಹೃದಯದಲ್ಲಿ ಕನ್ನಡವನ್ನಿಟ್ಟುಕೊಂಡೇ ಬದುಕಬೇಕು. ಎಂಜಿನಿಯ ರಿಂಗ್, ವೈದ್ಯಕೀಯ, ಎಂಬಿಎ ಮುಂತಾಗಿ ಉನ್ನತ ವ್ಯಾಸಂಗಕ್ಕೆ ಸಂಬಂಧಪಟ್ಟ ಕೃತಿಗಳು ಕನ್ನಡಕ್ಕೆ ಭಾಷಾಂತರವಾಗಬೇಕು’ ಎಂದು ರಮೇಶ್ ನುಡಿದರು.

ಸಮಾರೋಪ ಭಾಷಣ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ, ‘ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ನಾಡಿನ ಜನರ ಬೇಡಿಕೆಗಳಾಗಿರುತ್ತವೆ.ಇದನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಜಿಲ್ಲಾ ಮಟ್ಟ ಮಾತ್ರವಲ್ಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಿಗೂ ಸರ್ಕಾರ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಅಂತ್ಯದಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಸಂಪ್ರದಾಯವನ್ನೇ ಕೈಬಿಡುವುದು ಒಳಿತು ಎಂದರು.

‘ನಾಡಿನಲ್ಲಿ ನೂರಾರು ಸಮಸ್ಯೆಗಳು ದಶಕಗಳಿಂದ ಪರಿಹಾರ ಕಾಣದೆ ಉಳಿದುಕೊಂಡಿವೆ. ನಮ್ಮ ಜನಪ್ರತಿನಿಧಿಗಳು ಇವುಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ. ನಮ್ಮ ಭಾಷೆ, ನೆಲ-ಜಲವನ್ನು ನಾವೇ ಪ್ರೀತಿಸದಿದ್ದರೆ ಮುಂದಿನ ದಿನಗಳಲ್ಲಿ ನಮ್ಮನಾಡಿನಲ್ಲಿ ನಾವೇ ಪರಕೀಯರಾಗುವ ದಿನಗಳು ಬರಬಹುದು’ ಎಂದರು.ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಉದಯರವಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬಿಇಓ ಎನ್.ಕೆಂಚೇಗೌಡ, ವೈ.ಎನ್. ಸಿದ್ದೇಗೌಡ, ನಗರಸಭೆಯ ಅಧ್ಯಕ್ಷ ಸಿ.ಆರ್. ಶಂಕರ್, ಟಿ.ಎಂ. ಶಿವಶಂಕರಪ್ಪ, ಮಂಗಳಾ ವೆಂಕಟೇಶ್, ವೈ.ಎಸ್. ವೀರಭದ್ರಪ್ಪ. ಡಾ. ಜನಾರ್ದನ  ವೇದಿಕೆಯಲ್ಲಿದ್ದರು. ಪರಿಷತ್ ಆವರಣದ ಹೊರಗೆ ಅರಸೀಕೆರೆಯ ಸಿಡಿಮದ್ದು ಸಿಡಿಸುವ ಮೂಲಕ ಸಮ್ಮೇಳನಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಕೊನೆಯಲ್ಲಿ ಸುಧಾ ಬರಗೂರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT