ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ವಿರುದ್ಧ ಈಶ್ವರಪ್ಪ ಸಿಡಿಮಿಡಿ

ನಗರಸಭೆಯಿಂದ ಉಚಿತ ಆಟೊ ಮೀಟರ್ ಅಳವಡಿಕೆಗೆ ಜಿಲ್ಲಾಡಳಿತ ತಡೆ ವಿಚಾರ
Last Updated 2 ಆಗಸ್ಟ್ 2013, 10:40 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರಸಭೆಯಿಂದ ಆಟೊಗಳಿಗೆ ಉಚಿತವಾಗಿ ಮೀಟರ್ ಅಳವಡಿಕೆಗೆ ತಡೆ ಹಾಕಿರುವ ಜಿಲ್ಲಾಡಳಿತದ ನಿರ್ಧಾರ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು.

ಕೆ.ಎಸ್.ಈಶ್ವರಪ್ಪ ಮಾತನಾಡಿ, ಹಿಂದೆ ಚನ್ನಬಸಪ್ಪ ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ಆಟೊಚಾಲಕರಿಗೆ ಮೀಟರ್ ಅಳವಡಿಕೆ ಮಾಡಿಕೊಳ್ಳಲು ಸಹಾಯ ಧನ ನೀಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿಯೇ ರೂ50 ಲಕ್ಷ ಮೀಸಲಿಡಲಾಗಿತ್ತು. ಇದೀಗ ಮೀಟರ್ ಅಳವಡಿಕೆಗೆ ಸಹಾಯಧನ ನೀಡುವುದಿಲ್ಲ ಎಂದು ಹೇಳಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಪುಲ್ ಬನ್ಸಲ್, ಈಗಾಗಲೇ ನಗರಸಭೆಯ ಸಹಾಯಧನ ಅಡಿ ಕೆಲ ಆಟೊಗಳಿಗೆ ಮೀಟರ್ ಅಳವಡಿಸಲಾಗಿದೆ. ಪ್ರಸ್ತುತ ಹಣವಿಲ್ಲದ ಕಾರಣ ಉಚಿತವಾಗಿ ಮೀಟರ್ ನೀಡದಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಉಚಿತವಾಗಿ ಮೀಟರ್ ಅಳವಡಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೇರೆ ಯಾವ ಜಿಲ್ಲೆಯಲ್ಲೂ ಈ ರೀತಿಯ ಸೌಲಭ್ಯ ನೀಡುತ್ತಿಲ್ಲ. ಈ ಹಿಂದೆ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಕೆಲ ಆಟೊ ಚಾಲಕರು ಮೀಟರ್ ಅಳವಡಿಸಿಕೊಂಡಿಲ್ಲ ಎಂದರು.

ಅಧಿಕಾರಿಗಳ ಮಾತಿನಿಂದ ಕೊಂಚ ಸಿಡಿಮಿಡಿಗೊಂಡ ಈಶ್ವರಪ್ಪ, `ಮೀಟರ್ ಅಳವಡಿಕೆಗೆ ನಿರ್ಣಯ ಕೈಗೊಂಡು ರೂ50 ಲಕ್ಷ ಅನುದಾನವನ್ನು ನಗರಸಭೆ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಬಜೆಟ್‌ನಲ್ಲಿ ಘೋಷಿಸಿದ ಹಣವನ್ನು ಬಳಕೆ ಮಾಡಬೇಡಿ ಎಂದು ಹೇಳುವುದಕ್ಕೆ ನಿಮಗೆ ಅಧಿಕಾರವಿಲ್ಲ. ಈ ಹಿಂದಿನ ನಿರ್ಧಾರದಂತೆ ಆಟೋ ಚಾಲಕರಿಗೆ ಉಚಿತವಾಗಿ ಮೀಟರ್ ಅಳವಡಿಕೆ ಮಾಡಿ. ಮೀಟರ್ ಅಳವಡಿಕೆಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಎಷ್ಟು ವೆಚ್ಚವಾಗಿದೆ ಎಂಬುದರ ಮಾಹಿತಿ ನೀಡಿ' ಎಂದು ಆಕ್ರೋಶಭರಿತರಾಗಿ ಹೇಳಿದರು.

ಮೀಟರ್ ಅಳವಡಿಕೆಗೆ ನಗರಸಭೆ ಮೀಸಲಿರಿಸಿದ್ದ ರೂ50 ಲಕ್ಷದಲ್ಲಿ  ಇದುವರೆಗೂ ಸುಮಾರು ರೂ27 ಲಕ್ಷ ಖರ್ಚಾಗಿದೆ ಎಂದು ನಗರಸಭೆ ಎಂಜಿನಿಯರ್ ಗಣೇಶ್ ಪ್ರತಿಕ್ರಿಯಿಸಿದರು.

ವಿಪುಲ್ ಬನ್ಸಲ್ ಮಾತನಾಡಿ, `ಬಾಕಿ ಅನುದಾನದಲ್ಲಿ ಮೀಟರ್ ಅಳವಡಿಕೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ. ಆದರೆ, ಮೀಟರ್ ಅಳವಡಿಕೆಗೆ ಸಹಾಯಧನ ನೀಡಬೇಕೇ? ಬೇಡವೇ? ಎಂಬ ನಿರ್ಧಾರವನ್ನು ನಗರಸಭೆಯ ನೂತನ ಆಡಳಿತ ನಿರ್ಧಾರ ಕೈಗೊಳುತ್ತದೆ. ಸದ್ಯಕ್ಕೆ ಆಟೊ ಚಾಲಕರಿಗೆ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಅರ್ಜಿ ನೀಡಲಾಗುವುದು' ಎಂದು ಹೇಳಿದರು.

ತಕ್ಷಣವೇ ಮೀಟರ್ ಅಳವಡಿಕೆಗೆ ಆಟೋ ಚಾಲಕರಿಗೆ ಅರ್ಜಿ ವಿತರಣೆ ಮಾಡುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.
ತದನಂತರ ಈಶ್ವರಪ್ಪ ಮಾತನಾಡಿ, `ಈ ಕುರಿತಂತೆ ನಗರಸಭೆಯ ನೂತನ ಆಡಳಿತದೊಂದಿಗೆ ಚರ್ಚೆ ಮಾಡುತ್ತೇನೆ' ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT