ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಸಂಭ್ರಮಾಚರಣೆ

ಸಂಸತ್‌ನಲ್ಲಿ 371 ಜೆ ವಿಧೇಯಕ ಮಂಡನೆ
Last Updated 19 ಡಿಸೆಂಬರ್ 2012, 10:31 IST
ಅಕ್ಷರ ಗಾತ್ರ

ರಾಯಚೂರು: ಮಂಗಳವಾರ ಸಂಸತ್‌ನಲ್ಲಿ  ಹೈದರಾಬಾದ್ ಕರ್ನಾಟಕ ವಿಶೇಷ ಅಭಿವೃದ್ಧಿಗಾಗಿ 371 ಜೆ ತಿದ್ದುಪಡಿ ವಿಧೇಯಕಕ್ಕೆ 348 ಸದಸ್ಯರು ಬೆಂಬಲ ವ್ಯಕ್ತಪಡಿಸಿ ವಿಧೇಯಕ ಮಂಡನೆಯಾದ ಹಿನ್ನೆಲೆಯಲ್ಲಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ, ಜನಸಂಗ್ರಾಮ ಪರಿಷತ್ ಸೇರಿದಂತೆ ವಿವಿಧ ಹೋರಾಟ ಸಂಘಟನೆ, ಕನ್ನಡಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದವು.

ಸಂಜೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಸಂಘಟನೆ ಮುಖಂಡರು, ಕಾರ್ಯಕರ್ತರು ಲೋಕಸಭೆಯಲ್ಲಿ 371 ಜೆ ತಿದ್ದುಪಡಿ ವಿಧೇಯಕಕ್ಕೆ ಸಂಸದರ ವ್ಯಾಪಕ ಬೆಂಬಲ ವ್ಯಕ್ತಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ದಿಶೆಯಲ್ಲಿ ಹೋರಾಟ ನಡೆಸಿದ ಸಂಘಟನೆಗಳ ಪ್ರಯತ್ನ, ಜನಪ್ರತಿನಿಧಿಗಳು, ಸಂಸದರ ವಿಶೇಷ ಪ್ರಯತ್ನವನ್ನು ಅಭಿನಂದಿಸಿದರು.

ಹೈ.ಕ ಹೋರಾಟ ಸಮಿತಿಯ ಮುಖಂಡ ರಾಘವೇಂದ್ರ ಕುಷ್ಟಗಿ, ಬಸವರಾಜ ಕಳಸ, ರಜಾಕ ಉಸ್ತಾದ್, ಎಸ್ ಶಿವಕುಮಾರ, ಶಿವಕುಮಾರ ಯಾದವ್, ಅಂಬಣ್ಣ ಅರೋಲಿ, ಜೆ.ಬಿ ರಾಜು, ಕೆ.ಪಿ ಅನಿಲಕುಮಾರ, ಬಿ ನಾಗೇಶ, ಗಂಗಾಧರಯ್ಯಸ್ವಾಮಿ, ಗಿರೀಶ ಕನಕವೀಡು ಹಾಗೂ ಇತರರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ: ಹೈದರಾಬಾದ್ ಕರ್ನಾಟಕ ವಿಶೇಷ ಅಭಿವೃದ್ಧಿಗೆ 371 ಜೆ ತಿದ್ದುಪಡಿ ವಿಧೇಯಕ ಮಂಗಳವಾರ ಮಂಡನೆಯಾಗಿದ್ದು, 348 ಸಂಸದರ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಕಾಲದ ಈ ಭಾಗದ ಜನತೆಯ ಆಶಯ ಈಡೇರಿದಂತಾಗಿದೆ. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ವಿಶೇಷ ಪ್ರಯತ್ನ ಹಾಗೂ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಸಂಸದರ, ಜನಪ್ರತಿನಿಧಿಗಳ ಕಾಳಜಿ, ಸಂಘಟನೆಗಳ ನಿರಂತರ ಹೋರಾಟದ ಪ್ರತಿಫಲ ಇದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ವಸಂತಕುಮಾರ ಹೇಳಿದರು.

ಲೋಕಸಭೆಯಲ್ಲಿ ವಿಧೇಯಕ ಮಂಡನೆಗೆ ಕೈಗೊಳ್ಳಬೇಕಾದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳು, ಸಂಘಟಿತ ಪ್ರಯತ್ನ, ನಿರಂತರ ಪ್ರಯತ್ನವನ್ನು ಕೇಂದ್ರ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ್ದಾರೆ. ಈ ದಿನ ಲೋಕಸಭೆಯಲ್ಲಿ ವಿಧೇಯಕ ಮಂಡನೆ ಆಗಲು ಅವರೇ ಬಹುಮಟ್ಟಿಗೆ ಕಾರಣವಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ ಎಂದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ವಿಜಯೋತ್ಸವ
ಲಿಂಗಸುಗೂರ: ಹೈದರಾಬಾದ್ ಕರ್ನಾಟಕ ಪ್ರದೇಶದ ಜನಸಾಮಾನ್ಯರ ಬಹುದಿನಗಳ ಕನಸಾಗಿದ್ದ ಸಂವಿಧಾನದ ಕಲಂ 371(ಜೆ) ತಿದ್ದುಪಡಿಗೆ ಮಂಗಳವಾರ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ತಾಲ್ಲೂಕಿನಾದ್ಯಂತ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೀದಿಗಿಳಿದು ವಿಜಯೋತ್ಸವ ಆಚರಿಸಿರುವುದು ವರದಿಯಾಗಿದೆ.

ಮಂಗಳವಾರ ಸಂಜೆ ಸುದ್ದಿ ವಾಹಿನಿಗಳಲ್ಲಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಜಯಕರ್ನಾಟಕ, ಕನ್ನಡ ಕ್ರಾಂತಿ ದೀಪ, ದಲಿತ ಸಂಘರ್ಷ ಸಮಿತಿಗಳ ವಿವಿಧ ಬಣಗಳು, ರಾಜಕೀಯ ಪಕ್ಷಗಳ ಮುಖಂಡರು, ಹೈದರಬಾದ ಕರ್ನಾಟಕ ಹೋರಾಟ ಸಮಿತಿ ತಮ್ಮ ಕಾರ್ಯಕರ್ತರೊಂದಿಗೆ ನಾಗರಹಾಳ, ಆನೆಹೊಸೂರು, ಮುದಗಲ್ಲ, ಮತ್ತಿತರೆಡೆ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸಂಸತ್‌ನಲ್ಲಿ ಸಂವಿಧಾನದ ವಿಧೇಯಕ ಮಂಡಿಸುತ್ತಿದ್ದಂತೆ ಪಕ್ಷಾತೀತವಾಗಿ ಸಂಸತ್ ಸದಸ್ಯರು ಸಂವಿಧಾನದ ಕಲಂ 371(ಜೆ)ಗೆ 118ನೇ ತಿದ್ದುಪಡಿ ಮೂಲಕ ಹೈಕ ಪ್ರದೇಶದ ಜಿಲ್ಲೆಗಳ ದಶಕಗಳ ಕನಸು ಸಾಕಾರಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲಿಯೆ ಉತ್ತಮ ರೂಪ ರೇಷಗಳೊಂದಿಗೆ ಅನುಷ್ಠಾನಗೊಳಿಸುವ ವ್ಯವಸ್ಥೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗುವಂತೆ ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ ಒತ್ತಾಯಿಸಿದರು.

ಅಭಿನಂದನೆ: ಹೈದರಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿತ್ತು. ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರ ನಿರಂತರ ಪ್ರಯತ್ನದಿಂದ ಮಂಗಳವಾರ ತಿದ್ದುಪಡಿಗೆ ಅವಕಾಶ ದೊರಕಿದಂತಾಗಿದೆ. ಸಂವಿಧಾನ ತಿದ್ದುಪಡಿಗೆ ಪಕ್ಷಾತೀತವಾಗಿ ಬೆಂಬಲಿಸಿದ ಸರ್ವ ಪಕ್ಷಗಳ ಮುಖಂಡರಿಗೂ, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೂ ಕೂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಣಪ್ಪ ಮೇಟಿ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯೋತ್ಸವದಲ್ಲಿ ಪಾಮಯ್ಯ ಮುರಾರಿ, ಎಚ್.ಬಿ. ಮುರಾರಿ, ರಮೇಶ ಜೋಷಿ, ಪುರದಪ್ಪ ವಕೀಲ, ಬಸವಂತರಾಯ ಕುರಿ, ಅಮೀನ ಪಟೇಲ್, ಅಕ್ತರ್ ಪಟೇಲ, ಶಿವು ನಾಯಕ, ಆಂಜನೇಯ ಭಂಡಾರಿ, ಅಜೀಜಪಾಷ, ರವಿ ಬರಗುಡಿ, ಚಂದ್ರು ನಾಯಕ, ವಿಜಯ ಬಂಡಿ, ಜಿಲಾನಿಹುಸೇನ, ಅಲ್ಲಾವುದ್ದೀನ್, ಸಾದಿಕ್, ಅಮ್ಜದ ಕಂದಗಲ್ಲ, ಎಸ್.ಎ ನಯಿಮ್, ಗ್ಯಾನಪ್ಪ ಕಟ್ಟಿಮನಿ, ಲಿಂಗಪ್ಪ ಪರಂಗಿ, ಭೀಮಣ್ಣ ನಾಯಕ, ಗುರುಸಂಗಯ್ಯ ಗಣಾಚಾರಿ, ಮಲ್ಲಪ್ಪ ಸರ್ಜಾಪುರ ಮತ್ತಿತರರು ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.
ಹರ್ಷ

ಮಸ್ಕಿ: ಹೈದಾರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವ ಕಲಂ 371 ತಿದ್ದುಪಡಿಗೆ ಮಂಗಳವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು ಹರ್ಷದ ಸಂಗತಿ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

ಇದು ಹೈ.ಕ ಪ್ರದೇಶದ ಬಹುದಿನದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂಧಿಸಿದ್ದು ಪ್ರಧಾನಿ ಹಾಗೂ ಗೃಹ ಸಚಿವರನ್ನು ಅವರು ಅಭಿನಂದಿಸಿದ್ದಾರೆ. ಇದರಿಂದ ಈ ಭಾಗಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚನ ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ಬಿ. ಮುರಾರಿ ಲೋಕಸಭೆಯಲ್ಲಿ 371 ಕಲಂ ಅಂಗೀಕಾರಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣೆ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಹಿ ಹಂಚಿ,  ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದವು. ಹಲವು ದಶಕಗಳಿಂದ ಹೈಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ ಕಲಂ ಜಾರಿಗೊಳಿಸುವಂತೆ ಒತ್ತಾಯಿಸಿ ಈ ಭಾಗದ ಅನೇಕ ಕನ್ನಡಪರ ಸಂಘಟನೆಗಳ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ದೊರಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಯ ಅಧ್ಯಕ್ಷ ಅಶೋಕ ಮುರಾರಿ, ಮಲ್ಲಪ್ಪ ಮುರಾರಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣ ಬಳಿ ಕನ್ನಡಪರ ಸಂಘಟನೆಗಳು ನಡೆಸಿದ ವಿಜಯೋತ್ಸವದಲ್ಲಿ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಶೋಕ ಮುರಾರಿ, ಮಲ್ಲಯ್ಯ ಮುರಾರಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರು ಒಡೆಯರ್, ದುರಗಪ್ಪ ವಿಬೂತಿ, ಸಿದ್ದು, ನಭೀ ಸೇಡ್ಮಿ, ಪೀರಸಾಬ, ಗಂಗಾಧರ, ಅಮರೇಶ, ಚಂದ್ರು, ಅನೀಸ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT