ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಸರ್‌ಎಂವಿ ಸ್ಮರಣೆ

Last Updated 16 ಸೆಪ್ಟೆಂಬರ್ 2011, 8:55 IST
ಅಕ್ಷರ ಗಾತ್ರ

ಮಂಡ್ಯ: ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಜಿಲ್ಲೆಯನ್ನು ಹಸಿರಾಗಿಸಲು ಕಾರಣರಾದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಅವರನ್ನು ಸ್ಮರಿಸುವ ಕಾರ್ಯಕ್ರಮ ನಡೆಯಿತು.

ಕಾವೇರಿ ವನದಲ್ಲಿ ಇರುವ ಸರ್ ಎಂ.ವಿ. ಅವರ ಪ್ರತಿಮೆಗೆ ನಗರಸಭೆ, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾಲಾರ್ಪಣೆ ಮಾಡುವ ಮೂಲಕ ಸರ್ ಎಂ.ವಿ ಕೊಡುಗೆಯನ್ನು ಸ್ಮರಿಸಿದರು.
ನಗರಸಭೆಯ ಪರವಾಗಿ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಅಧ್ಯಕ್ಷ ಎಂ.ಪಿ. ಅರುಣ್‌ಕುಮಾರ್, ಆಯುಕ್ತ ಪ್ರಕಾಶ್, ಸಮಾಜವಾದಿ ಸುರೇಂದ್ರ ಕೌಲಗಿ, ಸಂಸ್ಕೃತಿಕ ಸಂಘಟನೆಯ ಕೆ.ಪ್ರಹ್ಲಾದರಾವ್, ನಗರಸಭೆ ಸದಸ್ಯರಾದ ಹೊಸಹಳ್ಳಿ ಬೋರೇಗೌಡ, ನಾಗಮಣಿ, ಶ್ರೀಧರ್ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಅವರೂ ಹಾಜರಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ: ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಮ.ಸೋ.ಚಿದಂಬರ್, ಅಶೋಕ್, ಪಿಗ್ಮಿಬಾಬು, ನಾರಾಯಣ ಇದ್ದರು.

ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್: ಮಂಡ್ಯದ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ನಲ್ಲಿ ನಡೆದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನ ಕಾರ್ಯಕ್ರಮದಲ್ಲಿ ನಬಾರ್ಡ್‌ನ ಬಿಂದು ಮಾಧವ ವಡವಿ ಅವರು ಸರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಲೀಡ್‌ಬ್ಯಾಂಕ್‌ನ ಸುರೇಶ್‌ರಾವ್, ಸತ್ಯಾನಂದಸ್ವಾಮಿ, ಮಲ್ಲಾರಾಧ್ಯ ಪ್ರಸನ್ನ ಉಪಸ್ಥಿತರಿದ್ದರು.

ಎಚ್.ಮಲ್ಲಿಗೆರೆ: ಮಂಡ್ಯ ತಾಲ್ಲೂಕು ಎಚ್. ಮಲ್ಲಿಗೆರೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಮಾಲಾರ್ಪಣೆ ಮಾಡಿದರು. ಜಿಪಂ ಸದಸ್ಯ ಸಿ.ಮಾದಪ್ಪ, ಮಾಯಿಗೌಡ, ಎಂ.ಕೆ.ಜ್ಞಾನಮೂರ್ತಿ, ಎಂ.ಮಾದೇಗೌಡ ಅವರು ಇದ್ದರು.

ಜೆಡಿಎಸ್: ಜಿಲ್ಲಾ ಜೆಡಿಎಸ್ ಪರವಾಗಿ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಅಧ್ಯಕ್ಷ ಡಿ.ರಮೇಶ್, ನಗರಸಭೆಯ ಸದಸ್ಯರಾದ ಎಂ.ಜೆ.ಚಿಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಗೌರೀಶ್ ಅವರೂ ಇದ್ದರು.

`ಪ್ರಪಂಚದ ಅದ್ಭುತ ವಿಜ್ಞಾನಿ~
ಭಾರತೀನಗರ: ಪ್ರಪಂಚ ಕಂಡ ಅದ್ಭುತ ವಿಜ್ಞಾನಿಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಜಿ.ಮಾದೇಗೌಡ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ರುದ್ರಯ್ಯಶೆಟ್ಟಹಳ್ಳಿ ಹೇಳಿದರು.

ಇಲ್ಲಿನ ಬಿಇಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಎಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್.ಎಂ.ವಿ ಪರಿಶ್ರಮದಿಂದ ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕ ಕಾರ್ಖಾನೆ, ಶಿವನಸಮುದ್ರದಲ್ಲಿ ವಿದ್ಯುತ್ ಸ್ಥಾವರ ಘಟಕ, ಕೋಲಾರದಲ್ಲಿ ಚಿನ್ನದ ಗಣಿ ತಲೆ ಎತ್ತಿ ನಿಂತಿವೆ ಎಂದರು.

ಭಾರತೀ ಪದವಿ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಸ್.ರೇವಣ್ಣ ಮಾತನಾಡಿದರು. ಬಿಇಟಿ ಕಾರ್ಯಾಧ್ಯಕ್ಷ ಬಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಜಿ.ಕೃಷ್ಣ ಹಾಜರಿದ್ದರು.

ಸರ್‌ಎಂವಿ ನೆನೆದ ಮಕ್ಕಳು
ಕಿಕ್ಕೇರಿ: ಪಟ್ಟಣದ ರೋಹಿತ್ ಕಾನ್ವೆಂಟ್ ಮಕ್ಕಳು ಸರ್‌ಎಂವಿಯನ್ನು ಗುರುವಾರ ಜನ್ಮದಿನಾಚರಣೆ ಅಂಗವಾಗಿ ಮನತುಂಬಿ ನೆನೆದರು.

ಮಕ್ಕಳಿಂದ ಆರಂಭವಾದ ಕಾರ್ಯಕ್ರಮದಲ್ಲಿ ಎಲ್ಲವೂ ಲವಲವಿಕೆಯಿಂದ ಕೂಡಿದ ಸಂಗತಿ ವಿಶೇಷವೆನಿಸಿತು. ಶಿಕ್ಷಕರ ಮಾರ್ಗದರ್ಶನದಲ್ಲಿ ಸರ್‌ಎಂವಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಭಾರತ ರತ್ನ ಸರ್‌ಎಂವಿಗೆ ಭಾವಪೂರ್ಣ ನಮನ ಸಲ್ಲಿಸಿದರು.

ಶಕುಂತಲಾ, ನಾಗರತ್ನ, ಯೋಗಮಣಿ, ನಟೇಶ್ ಅವರು ಸರ್‌ಎಂವಿ ಸಾಧನೆ, ಜೀವನ ಚರಿತ್ರೆ, ಕೊಡುಗೆಗಳಳ ಗುಣಗಾನ ಮಾಡಿದರು. ರಶ್ಮಿ ಪ್ರಾರ್ಥಿಸಿ, ಧಾರ್ಮಿಕ ಸ್ವಾಗತಿಸಿ, ಅಭಿ ವಂದಿಸಿದರು.

ಮದ್ದೂರು: ಸರ್‌ಎಂವಿ ಜಯಂತಿ
ಮದ್ದೂರು: ಪಟ್ಟಣದ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸರ್.ಎಂ.ವಿಶ್ವೇಶ್ವರಯ್ಯ ಅವರ 151ನೇ ಜನ್ಮದಿನವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಹಳೇ ಒಕ್ಕಲಿಗರ ಬೀದಿ ಆವರಣದಲ್ಲಿ ಮದ್ದೂರಮ್ಮ ಯುವಕರ ಬಳಗದ ವತಿಯಿಂದ ಸರ್‌ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ 151ನೇ ಜಯಂತಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಪುರಸಭಾ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹಾಗೂ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು.

ದೇಶಹಳ್ಳಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂ.ಎಸ್.ಸಿದ್ದರಾಜು ಕ್ರೀಡಾ ಬಳಗ, ಸ್ವಾಮಿ ವಿವೇಕಾನಂದ ಕ್ರೀಡಾ ಸಾಂಸ್ಕೃತಿಕ ಕ್ರೀಡಾ ಸಂಘ ಹಾಗೂ ಚಾಮನಹಳ್ಳಿ ರಿ ಕ್ರಿಯೇಷನ್ ವತಿಯಿಂದ ಸರ್.ಎಂ.ವಿ ಜಯಂತಿ ಸಂಭ್ರಮದಿಂದ ನಡೆಯಿತು.

ಎಪಿಎಂಸಿ ಅಧ್ಯಕ್ಷ ಕೆ.ಶಂಕರ್ ನೋಟ್‌ಬುಕ್‌ಗಳನ್ನು ವಿತರಿಸಿದರು. ಚಾಮನಹಳ್ಳಿ ರಿ ಕ್ರಿಯೇಷನ್ ಅಧ್ಯಕ್ಷೆ ರೂಪ ರಾಜೀವ್ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.  ಅಧ್ಯಯನ ವಿದ್ಯಾ ಟ್ರಸ್ಟ್ ವತಿಯಿಂದ ಜಿಲ್ಲಾ ಸಂಯೋಜಕ ಅಂಬರಹಳ್ಳಿಸ್ವಾಮಿ ಶಾಲಾ ಗ್ರಂಥಾಲಯಕ್ಕೆ 100 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದೇಶಹಳ್ಳಿ ಆರ್.ಮೋಹನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಚಿಕ್ಕೋನು, ಮನ್‌ಮುಲ್ ಮಾಜಿ ನಿರ್ದೇಶಕ ಕುಮಾರ್‌ಕೊಪ್ಪ, ಕೆ.ಎಂ.ಶಂಕರ್, ಉಮೇಶ್, ನಂದೀಶ್, ಸಂಸ್ಥೆಯ ಕಾರ್ಯದರ್ಶಿ ಲಾರಾ ಪ್ರಸನ್ನ, ಮುಖ್ಯಶಿಕ್ಷಕರಾದ ನಾಗರಾಜು, ರತ್ನಮ್ಮ, ರಿ ಕ್ರಿಯೇಷನ್ ಕ್ಲಬ್‌ನ ಸವಿತಾ ಉಪಸ್ಥಿತರಿದ್ದರು.

ಆಲೂರು: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಅಧ್ಯಯನ ವಿದ್ಯಾಟ್ರಸ್ಟ್ ಜಿಲ್ಲಾ ಸಂಯೋಜಕ ಅಂಬರಹಳ್ಳಿಸ್ವಾಮಿ ಉದ್ಘಾಟಿಸಿ ಸರ್.ಎಂ.ವಿ ಅವರ ಬದುಕು ಸಾಧನೆ ಕುರಿತು ಮಾತನಾಡಿದರು.

ಮುಖ್ಯಶಿಕ್ಷಕ ಕೆ.ಪಿ.ಜಯಮುದ್ದು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಜಿ.ಜೆ.ಸುರೇಶ್, ಬಿ.ಎಸ್.ಮಹದೇವಸ್ವಾಮಿ, ಬಿ.ಎಲ್.ಮಧುಸೂದನ, ಎಚ್.ವಿ.ಕುಮಾರ್, ಕೆ.ಎಚ್.ಶ್ರೀನಿವಾಸ್, ಜಿ.ಕೆ.ಮಾಲತಿ, ಕಚೇರಿ ಸಹಾಯಕಿ ಅನ್ನಪೂರ್ಣೇಶ್ವರಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಳೆಗೆರೆಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮದ ಮುಖ್ಯವೃತ್ತದಲ್ಲಿನ ಸರ್.ಎಂ.ವಿ ಅವರ ಪುತ್ಥಳಿಗೆ ಗ್ರಾಪಂ ಅಧ್ಯಕ್ಷ ಚಿಕ್ಕಮರಿಯಪ್ಪ ಹಾರ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.  ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಸರ್‌ಎಂವಿ ಬದುಕು ಸಾಧನೆ ಕುರಿತು ಮಾತನಾಡಿದರು.

ಮಾಜಿ ಅಧ್ಯಕ್ಷ ವಿ.ಟಿ.ಪುಟ್ಟಸ್ವಾಮಿಗೌಡ, ಸದಸ್ಯ ದಯಾನಂದ, ತಾಲ್ಲೂಕು ಅಧ್ಯಕ್ಷ ಅಶೋಕ್, ಮುಖಂಡರಾದ ಮಹದೇವು, ಮುತ್ತೇಶ್, ಸೋಮಣ್ಣ, ಚಂದ್ರಹಾಸ್, ಮಧು, ಕೋಟಿಕೃಷ್ಣ, ಬಾಬು, ಶಿವರಾಮು, ತೀರ್ಥಚಾರ್, ಈರಪ್ಪ, ಸತೀಶ್, ಸಿದ್ದು, ಕೆಂಚಪ್ಪ, ಮಂಜು, ವಿಶ್ವನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

`ಶಿಸ್ತಿನಿಂದ ದುಡಿದವರು~
ಪಾಂಡವಪುರ: ಸರ್ ಎಂ.ವಿಶ್ವೇಶ್ವರಯ್ಯನವರು ತಮ್ಮ ಶಿಸ್ತು, ಶ್ರಮ ಹಾಗೂ ಪ್ರಾಮಾಣಿಕತೆಯಿಂದ ಮೈಸೂರು ಪ್ರಾಂತ್ಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಉಪನ್ಯಾಸಕ ಎನ್.ಎಂ.ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಪಟ್ಟಣದ ಸಿದ್ದಿವಿನಾಯಕ ಮಂಟಪದಲ್ಲಿ ಗುರುವಾರ ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಸೆಸ್ಕ್ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವೆರಯ್ಯನವರ 151ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಬಿಇಓ ಸ್ವಾಮಿ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಎ.ಎಲ್.ಕೆಂಪೂಗೌಡ ಸರ್‌ಎಂವಿ ಭಾವಚಿತ್ರ ಅನಾವರಣಗೊಳಿಸಿದರು. ಪ.ಪಂ. ಅಧ್ಯಕ್ಷ ಸಿದ್ದೇಗೌಡ, ಎಲ್.ಸೋಮರಾಜು, ಎಚ್.ಎಂ.ಗುರುಮೂರ್ತಿ, ಎ.ಕೆ.ದುರ್ಗಪ್ಪ, ಶಿವಯೋಗಿ, ಶಶಿಧರ್, ಜನಾರ್ದನ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಣಿಪಾಲ್ ಗ್ರೂಪ್ಸ್ ಆಫ್ ಕಂಪೆನಿ ನಿರ್ದೇಶಕ ಸುಬ್ಬರಾಮೇಗೌಡ ಅವರನ್ನು ಸನ್ಮಾನಿಸಲಾಯಿತು.

ಸರ್‌ಎಂವಿ ಆದರ್ಶ ಪಾಲಿಸಲು ಸಲಹೆ
ಶ್ರೀರಂಗಪಟ್ಟಣ: ಎಂಜಿನಿಯರ್‌ಗಳು ತಮ್ಮ ಕರ್ತವ್ಯದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಆದರ್ಶ ಪಾಲಿಸಬೇಕು ಎಂದು ರಾಜ್ಯ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಚನ್ನಪ್ಪನಾಯಕ್ ಸಲಹೆ ನೀಡಿದರು.

ಗುರುವಾರ ತಾಲ್ಲೂಕಿನ ಕೆಆರ್‌ಎಸ್‌ನ ರಾಜ್ಯ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್‌ಎಸ್) ಆವರಣದಲ್ಲಿ ನಡೆದ ಸರ್‌ಎಂವಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್‌ಎಂವಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಸಮಯ ಪಾಲನೆ. ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ವಿಶ್ವೇಶ್ವರಯ್ಯ ಅವರು ರಾಜ್ಯ ಹೊರ ರಾಜ್ಯಗಳಲ್ಲಿ ತಮ್ಮ ಅನುಪಮ ಸೇವೆ ಸಲ್ಲಿಸಿದ್ದಾರೆ. ಬರಡು ನೆಲಗಳಿಗೆ ನೀರು ಹರಿಸಿ ರೈತರಿಗೆ ಉಸಿರು ನೀಡಿದ್ದಾರೆ. ಮಂಡ್ಯ, ಮೈಸೂರು ಜಿಲ್ಲೆಗಳ ಜನರ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಅಂತಹ ಮಹನೀಯರ ದಾರಿಯಲ್ಲಿ ಮುನ್ನಡೆಯಬೇಕು ಎಂದರು.

ಕೆಆರ್‌ಎಸ್ ಜಲಾಶಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸರ್‌ಎಂವಿ ಅಣೆಕಟ್ಟೆಗೆ ವಿಶಿಷ್ಟ ಗೇಟ್ ಅಳವಡಿಸಿ ಗಮನ ಸೆಳೆದಿದ್ದಾರೆ ಎಂದು. ಸ್ವಾಮಿನಾಥನ್, ಶ್ರೀನಿವಾಸ್, ನಾರಾಯಣ, ಸುಮಿತ್‌ಕುಮಾರ್, ಶಿವಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT