ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ತಣ್ಣಗಾದ ಬಂಡಾಯ

ಹುಣಸೂರಿನಲ್ಲಿ `ರೆಬಲ್' ರಾಜಣ್ಣ
Last Updated 23 ಏಪ್ರಿಲ್ 2013, 6:49 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಬಂಡಾಯ ಕ್ರಮೇಣ  ಇಲ್ಲವಾಗಿದೆ. ಕಾಂಗ್ರೆಸ್, ಬಿಜೆಪಿ, ಕೆಜೆಪಿ ಬಂಡಾಯ ಮುಕ್ತ ಪಕ್ಷಗಳಾಗಿವೆ. ಆದರೆ ಜೆಡಿಎಸ್‌ಗೆ  ಹುಣಸೂರು ಕ್ಷೇತ್ರದಲ್ಲಿ ಬಂಡಾಯ ಎದುರಾಗಿದ್ದು, ಇದನ್ನು ಶಮನ ಮಾಡಲು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಸಾಧ್ಯವಾಗಿಲ್ಲ.

ಆದರೆ, ಎಲ್ಲ ಪ್ರಮುಖ ಪಕ್ಷಗಳಲ್ಲಿ ಇದ್ದ ಕೆಲವೊಂದು ಭಿನ್ನಾಭಿಪ್ರಾಯ, ಭಿನ್ನಮತಕ್ಕೆ ಮುಖಂಡರು ತೇಪೆ ಹಾಕುವ ಕೆಲಸವನ್ನು ಯಶಸ್ವಿ ಯಾಗಿ ಮಾಡಿದ್ದಾರೆ. ಹೀಗಾಗಿ ಬಹಿರಂಗವಾಗಿ ಬಂಡಾಯದ ಕಹಳೆಯನ್ನು ಮೊಳಗಿಸುವ ಧೈರ್ಯ ಯಾರಿಗೂ ಇಲ್ಲವಾಗಿದೆ.

ಕಾಂಗ್ರೆಸ್ ನಿರಾಳ: ನಗರ ಮತ್ತು ಜಿಲ್ಲೆಯ 11 ಕ್ಷೇತ್ರಗಳ ಪೈಕಿ ನರಸಿಂಹರಾಜ, ಚಾಮುಂಡೇಶ್ವರಿ, ವರುಣಾ, ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಹೀಗಾಗಿ ಹಾಲಿ ಶಾಸಕರಿಗೇ ಟಿಕೆಟ್ ದೊರೆತಿರುವುದರಿಂದ ಬಂಡಾಯ ಕಾಣಿಸಿಕೊಂಡಿಲ್ಲ. ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೃಷ್ಣರಾಜದಿಂದ ಕಣಕ್ಕಿಳಿ ಯಲು ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಎಂ.ಕೆ.ಸೋಮಶೇಖರ್ ಹಾಗೂ ಉದ್ಯಮಿ ರಘು ಆಚಾರ್ ನಡುವೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ಹೇಳುವುದೇ ಕಷ್ಟವಾಗಿತ್ತು. ಅಂತಿಮವಾಗಿ ಸೋಮಶೇಖರ್ ಟಿಕೆಟ್ ಗಿಟ್ಟಿಸಿ ಕೊಂಡರು. ಇದರಿಂದ ಬೇಸರಗೊಂಡ ರಘು ಆಚಾರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ ಎನ್ನುವ ಮಾತು ಜೋರಾಗಿ ಕೇಳಿಬಂದಿತು. ಆದರೆ ಪಕ್ಷದ ವರಿಷ್ಠರ ಮಾತಿಗೆ  ಮಣಿದು ಸೋಮಶೇಖರ್ ಜೊತೆ ಕೈ ಜೋಡಿ ಸಿದ್ದಾರೆ. ಹೀಗಾಗಿ ಇಲ್ಲಿ ಬಂಡಾಯ ಮಾಯವಾಗಿದೆ. ಇದೇ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ ಘೋಷಣೆ ಮಾಡಿ ದ್ದರು. ಆದರೆ ಇವರನ್ನು ಸಮಾಧಾನ ಪಡಿಸುವಲ್ಲಿ ಸಚಿವ ಎಸ್.ಎ.ರಾಮದಾಸ್ ಯಶಸ್ವಿಯಾಗಿದ್ದು, ಈಗ ಪಾರ್ಥಸಾರಥಿ ಜೊತೆಯಲ್ಲೇ ಇದ್ದಾರೆ.

ಚಾಮರಾಜ ಕ್ಷೇತ್ರದಲ್ಲಿ ಮಾಜಿ ಮೇಯರ್ ವಾಸು, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಎಂ.ಲಕ್ಷ್ಮಣ್ ಟಿಕೆಟ್‌ಗಾಗಿ ತಮ್ಮ ನಾಯಕರನ್ನು ಹಿಡಿದುಕೊಂಡು ದೆಹಲಿ ಮಟ್ಟದಲ್ಲಿ ಲಾಬಿ ಮಾಡಿದರು. ಕೊನೆಗೆ ಟಿಕೆಟ್ ಧಕ್ಕಿದ್ದು ಎರಡು ಬಾರಿ ಸೋಲುಂಡಿದ್ದ ವಾಸು ಅವರಿಗೆ. ಆದರೆ ಇಲ್ಲಿ ಬಂಡಾಯ ಇಲ್ಲವಾಗಿದೆ.

ಆಡಳಿತಾರೂಢ ಬಿಜೆಪಿಗೆ 11 ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನು ಹೊಂದಿಸುವುದೇ ಕಷ್ಟ ವಾಗಿತ್ತು. ಆದರೂ ನರಸಿಂಹರಾಜ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದಕ್ಕೆ ಮಾಜಿ ಶಾಸಕ ಇ.ಮಾರುತಿ ರಾವ್ ಪವಾರ್ ಮುನಿಸಿಕೊಂಡಿದ್ದರು. ಇವರು ಕೆಜೆಪಿಗೂ ಕಣ್ಣು ಮಿಟುಕಿಸಿದ್ದರು ಎನ್ನುವ ಮಾತು ಕೇಳಿಬಂದಿತ್ತು.

ಆದರೆ ಬಿಜೆಪಿ ನಾಯಕರು ಇವರ ಮನವೊಲಿಸುವಲ್ಲಿ ಸಫಲರಾದರು. ಹೀಗಾಗಿ ಬಿ.ಪಿ.ಮಂಜುನಾಥ್ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಆಕಾಂಕ್ಷಿಯಾಗಿದ್ದರು. ಆದರೆ ಕರ್ನಾಟಕ ವಸ್ತುಪ್ರದರ್ಶನದ ಅಧ್ಯಕ್ಷ ಎಸ್.ಡಿ.ಮಹೇಂದ್ರ ಅವರಿಗೆ ಟಿಕೆಟ್ ನೀಡಿದೆ.

ಸಿ.ಟಿ.ರಾಜಣ್ಣ ಬಂಡಾಯ: ಇಡೀ ಜಿಲ್ಲೆಯಲ್ಲಿ ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳು ಜೆಡಿಎಸ್ ಪಾಲಿಗೆ ಬಿಸಿತುಪ್ಪವಾಗಿದ್ದವು. ಈ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಅರ್ಧ ಡಜನ್ ಮೀರಿತ್ತು. ಇದು ಪಕ್ಷದ ವರಿಷ್ಠರಿಗೆ ದೊಡ್ಡ ತಲೆನೋವಾಗಿತ್ತು. ಮಾಜಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿ ತೊರೆದು ಜೆಡಿಎಸ್ ಸೇರುವುದರೊಂದಿಗೆ ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಬಂಡಾಯ ತಲೆ ಎತ್ತಿತು. ಯಾವುದೇ  ಕಾರಣಕ್ಕೂ ಜಿ.ಟಿ.ಡಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಬಾರದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಟಿ.ರಾಜಣ್ಣ ಸೇರಿದಂತೆ ಪ್ರಮುಖರು ಪಕ್ಷದ ನಾಯಕರ ಮೇಲೆ ಒತ್ತಡ ಹೇರಿದರು. ಆದರೂ ಪಕ್ಷ ಸಂಘಟನೆ ಮತ್ತು ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಜಿ.ಟಿ.ಡಿ ಗೆ ಪಕ್ಷ ಮಣೆ ಹಾಕಿತು. ಇದರಿಂದ ಸಿಟ್ಟಾದ ರಾಜಣ್ಣನ ಗುಂಪಿನವರು ಜಿ.ಟಿ.ಡಿ ಗೆ ಅಸಹಕಾರ ತೋರಿಸಿದರು.

ಒಂದು ವೇಳೆ ಜಿ.ಟಿ.ಡಿ ಗೆ ಟಿಕೆಟ್ ನೀಡಿದರೆ ಬಹಿರಂಗವಾಗಿಯೇ ಬಂಡಾಯ ಏಳುವುದನ್ನು ರಾಜಣ್ಣ, ಗುಂಪು ವರಿಷ್ಠರಿಗೆ ತಿಳಿಸಿತು. ಹೀಗಾಗಿ ಜಿ.ಟಿ.ಡಿ ಹುಣಸೂರು ಕ್ಷೇತ್ರದಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಬರಬೇಕಾಯಿತು. ಈ ನೋವು ಜಿ.ಟಿ.ಡಿಯನ್ನು  ಕಾಡಿತು. ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ನಲ್ಲಿದ್ದ ಕುರುಬ ಸಮುದಾಯದ ಕುಮಾರಸ್ವಾಮಿಯನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿದರು.
ಈ ಕಾರಣಕ್ಕಾಗಿಯೇ ಸಿ.ಟಿ.ರಾಜಣ್ಣ ಜೆಡಿಎಸ್‌ಗೆ ಬಂಡಾಯವಾಗಿ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT