ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ನಕಲಿ ಅಂಗವಿಕಲರ ಹಾವಳಿ!

Last Updated 11 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಬಾಗಲಕೋಟೆ: ಕಲಬೆರಕೆ ಆಹಾರ, ಖೊಟ್ಟಿ ಜಾತಿ ಪ್ರಮಾಣಪತ್ರ, ನಕಲಿ ಡಾಕ್ಟರ್‌ಗಳ ಹಾವಳಿ ಎಲ್ಲೆಡೆ ಮಿತಿಮೀರಿದೆ. ಅಂತಹ ನಕಲಿಗಳ ಸಾಲಿಗೆ ಈಗ ಅಂಗವಿಕಲರು ಸೇರ್ಪಡೆಯಾಗಿದ್ದಾರೆ!ಹೌದು. ಜಿಲ್ಲೆಯಾದ್ಯಂತ ನಕಲಿ ಅಂಗವಿಕಲರ ಹಾವಳಿ ವ್ಯಾಪಕವಾಗಿ ಕಂಡುಬರುತ್ತಿದೆ.

ಕೈ-ಕಾಲು, ಕಣ್ಣುಗಳು, ಕಿವಿ-ಮೂಗು ಎಲ್ಲವೂ ಸರಿಯಾಗಿರುವ ಯುವಕರು ಜೇಬಿನಲ್ಲಿ ‘ಅಂಗವಿಕಲರ ಬಸ್‌ಪಾಸ್’ ಇಟ್ಟುಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅಷ್ಟೇ ಅಲ್ಲ; ತಿಂಗಳು ಕಳೆಯುತ್ತಿದ್ದಂತೆ ಸರ್ಕಾರದಿಂದ ಒಂದು ಸಾವಿರ ರೂಪಾಯಿ ಮಾಸಾಶನವನ್ನೂ ಪಡೆಯುತ್ತಿದ್ದಾರೆ.

ಖೊಟ್ಟಿ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ ಸಾವಿರಾರು ಜನರು ಅಂಗವಿಕಲರ ಬಸ್‌ಪಾಸ್ ಹಾಗೂ ಸರ್ಕಾರದಿಂದ ಮಾಸಾಶನ ಪಡೆದುಕೊಂಡಿರುವ ಪ್ರಕರಣಗಳು ನಿಧಾನವಾಗಿ ಬೆಳಕಿಗೆ ಬರತೊಡಗಿವೆ. ಸಾರ್ವಜನಿಕರಿಂದ 3ರಿಂದ 5 ಸಾವಿರ ರೂಪಾಯಿ ಪಡೆದುಕೊಂಡು ಖೊಟ್ಟಿ ವೈದ್ಯಕೀಯ ಪ್ರಮಾಣಪತ್ರ ನೀಡುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ವೈದ್ಯರ ಸಹಿ, ಆಸ್ಪತ್ರೆಯ ಮೊಹರು ಎಲ್ಲವೂ ಇಲ್ಲಿ ನಕಲಿಯಾಗಿರುತ್ತವೆ.

ಇಂತಹ ಪ್ರಮಾಣಪತ್ರ ಪಡೆದುಕೊಂಡು ಮಾಸಾಶನಕ್ಕೆ ಅರ್ಜಿಗಳನ್ನು ಸಲ್ಲಿಸಲಾಗುತ್ತಿದ್ದರೂ ಕೆಲ ಅಧಿಕಾರಿಗಳು ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.ಕಿವುಡ-ಮೂಕರ ಆಟ: ಅಂಗವಿಕಲರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದು ಕೊಳ್ಳುವುದಕ್ಕಾಗಿ ಕೆಲವರು ಕಿವಿ ಕೇಳಿಸುತ್ತಿದ್ದರೂ ಕಿವುಡರಾಗಿದ್ದು, ಮಾತು ಬರುತ್ತಿದ್ದರೂ ಮೂಕರಾಗಿದ್ದಾರೆ!

ಕೈ-ಕಾಲು ಊನವಾಗಿದ್ದರೆ ಅಥವಾ ದೃಷ್ಟಿಹೀನರಾಗಿದ್ದರೆ ನೋಡಿದ ತಕ್ಷಣವೇ ಗೊತ್ತಾಗುತ್ತದೆ. ಆದ್ದರಿಂದ ವಂಚಕರು ಕಿವುಡ-ಮೂಕರ ಆಟಕ್ಕೆ ಮೊರೆ ಹೋಗುತ್ತಿದ್ದಾರೆ.
ಶೇ.75ಕ್ಕೂ ಅಧಿಕ ಅಂಗವೈಕಲ್ಯವಿದೆ ಎಂಬ ಖೊಟ್ಟಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ಬಳಸಿಕೊಂಡು ಸರ್ಕಾರಿ ಸೌಲಭ್ಯ ಸಲೀಸಾಗಿ ಪಡೆದುಕೊಳ್ಳಲಾಗುತ್ತಿದೆ.

ಬಾಗಲಕೋಟೆ, ಬಾದಾಮಿ, ಹುನಗುಂದ, ಜಮಖಂಡಿ ಸೇರಿದಂತೆ ಎಲ್ಲ ತಾಲ್ಲೂಕಿನಲ್ಲೂ ಇಂತಹ ಕೆಲಸ ನಡೆಯುತ್ತಿದೆ ಎಂಬುದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.ಖೊಟ್ಟಿ ಸಹಿ: ಅಂಗವೈಕಲ್ಯವನ್ನು ಪರಿಶೀಲಿಸಿ ಅದರ ಸ್ವರೂಪ ಹಾಗೂ ಪ್ರಮಾಣವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಧರಿಸಲಾಗುತ್ತದೆ.  ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ನಿಗದಿತ ದಿನಗಳಂದು ತಜ್ಞವೈದ್ಯರು ಅಂಗವೈಕಲ್ಯವನ್ನು ಪರಿಶೀಲಿಸಿ ಪ್ರಮಾಣಪತ್ರವನ್ನು ನೀಡುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ತಜ್ಞವೈದ್ಯರ ಸಹಿಗಳನ್ನೇ ನಕಲು ಮಾಡುವ ಮೂಲಕ ಖೊಟ್ಟಿ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೇ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ. ಎರಡು ದಿನಗಳ ಹಿಂದೆಯಷ್ಟೇ ಅಂಗವಿಕಲ ವ್ಯಕ್ತಿಯೊಬ್ಬ ವೈದ್ಯರ ಖೊಟ್ಟಿ ಸಹಿ ಮಾಡಿದ ಐದು ಫಾರ್ಮ್‌ಗಳ ಸಮೇತ ಸಿಕ್ಕುಬಿದ್ದು, ಮತ್ತೆ ಪರಾರಿಯಾಗಿದ್ದಾನೆ.“ಕಿವಿ-ಮೂಗು-ಗಂಟಲು ತಜ್ಞ ಡಾ.ಅಶೋಕ ಕಿರಗಿ ಅವರ ಖೊಟ್ಟಿ ಸಹಿ ಮಾಡಿದ ಫಾರ್ಮ್‌ಗಳೊಂದಿಗೆ ಆಸ್ಪತ್ರೆ ಆವರಣದಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿಯಲಾಗಿತ್ತು. ಪೊಲೀಸರನ್ನು ಕರೆಸುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ. ಆದರೆ ಇಂತಹ ಪ್ರಕರಣ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ” ಎಂದು ಜಿಲ್ಲಾ ಸರ್ಜನ್ ಡಾ.ಗುಂಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

“ಕೆಲ ದಿನಗಳ ಹಿಂದೆ ಎಲುವು-ಕೀಲು ತಜ್ಞ ಡಾ.ಎಚ್.ಆರ್.ಕಟ್ಟಿ ಅವರು ಸಹಿ ಮಾಡಿದ್ದ 70-80 ಪ್ರಮಾಣಪತ್ರಗಳ ಬಗ್ಗೆ ಸ್ಥಳೀಯ ತಹಸೀಲ್ದಾರಗೆ ಸಂಶಯ ಮೂಡಿತ್ತು. ಈ ಬಗ್ಗೆ ಮರು ಪರಿಶೀಲನೆ ನಡೆಸಿದಾಗ ಅವು ಖೊಟ್ಟಿ ಸಹಿ ಎಂದು ಗೊತ್ತಾಯಿತು” ಎಂದು ಹೇಳಿದರು.ಲಾಡ್ಜ್‌ನಲ್ಲಿ ಠಿಕಾಣಿ: ಅಂಗವೈಕಲ್ಯದ ಖೊಟ್ಟಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಸೃಷ್ಟಿಸಿಕೊಡುತ್ತಿದ್ದ ವ್ಯಕ್ತಿಯೊಬ್ಬ ನವನಗರದಲ್ಲಿರುವ ಜಿಲ್ಲಾ ಆಸ್ಪತ್ರೆ ಬಳಿಯ ವಸತಿಗೃಹವೊಂದರಲ್ಲಿ ರೂಂ ಮಾಡಿಕೊಂಡಿದ್ದ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು ಎಂದು ಡಾ.ಗುಂಡಪ್ಪ ತಿಳಿಸಿದರು.

ಈ ವ್ಯಕ್ತಿಯು 3ರಿಂದ 5 ಸಾವಿರ ರೂಪಾಯಿ ಪಡೆದುಕೊಂಡು ಖೊಟ್ಟಿ ಪ್ರಮಾಣಪತ್ರಗಳನ್ನು ನೀಡುತ್ತಿದ್ದ. ಇದಲ್ಲದೇ ಅಂಗವೈಕಲ್ಯ ಪ್ರಮಾಣ ಕಡಿಮೆ ಇರುವವರಿಗೆ ಶೇ.75ಕ್ಕೂ ಅಧಿಕ ಅಂಗವೈಕಲ್ಯವಿದೆ ಎಂಬ ನಕಲಿ ಸರ್ಟಿಫಿಕೇಟ್ ತಾನೇ ನೀಡುತ್ತಿದ್ದನು. ಎಲ್ಲವೂ ಸರಿಯಿರುವ ಜನರೇ ಖೊಟ್ಟಿ ವೈದ್ಯಕೀಯ ಪ್ರಮಾಣಪತ್ರ ಬಳಸಿಕೊಂಡು ಸರ್ಕಾರಿ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅಂಗವಿಕಲರಿಗೆ ಅನ್ಯಾಯವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT