ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಿಲ್ಲೆಯಲ್ಲಿ ಬೆಳೆಹಾನಿ: ವಸ್ತುಸ್ಥಿತಿ ವರದಿ ಸಲ್ಲಿಸಿ'

ಪ್ರಕೃತಿ ವಿಕೋಪ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಕಿಮ್ಮನೆ ಸೂಚನೆ
Last Updated 28 ಜುಲೈ 2013, 9:31 IST
ಅಕ್ಷರ ಗಾತ್ರ

ಶಿವಮೊಗ್ಗ:   ಜಿಲ್ಲೆಯಲ್ಲಿ ಮಳೆಹಾನಿ ಕುರಿತಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವಸ್ತುಸ್ಥಿತಿ ವರದಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ  ಸೂಚಿಸಿದರು.

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಸಂಭವಿಸಿರುವ ಅವಘಡಗಳ ಕುರಿತು ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆ ಪ್ರಕೃತಿ ವಿಕೋಪ ಮತ್ತು ಅತಿವೃಷ್ಟಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಹಾನಿ ಪ್ರದೇಶದ ಸ್ಥಳ ಪರಿಶೀಲನೆ ನಡೆಸಬೇಕು. ವರದಿ ನೀಡುವಾಗ ಆರ್ಥಿಕ ನಷ್ಟವನ್ನೂ ಅಂದಾಜಿಸಬೇಕು. ಇದರಲ್ಲಿ ಸಾರ್ವಜನಿಕ ಆಸ್ತಿ, ಖಾಸಗಿ ಆಸ್ತಿ ನಷ್ಟವನ್ನೂ ತೋರಿಸಬೇಕು. ನಷ್ಟ ಪರಿಹಾರ ಅಂದಾಜುವೆಚ್ಚ ಯೋಜನೆಯನ್ನು ಚೌಕಾಸಿ ಮಾಡದೆ ಉದಾರವಾಗಿ ರೂಪಿಸಿಸಬೇಕು  ಎಂದು ಹೇಳಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ರೂ.13.4 ಕೋಟಿ, ನಗರ ಪ್ರದೇಶಗಳಲ್ಲಿ ರೂ. 3.7 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ನೀಡಿದ ಮಾಹಿತಿಯನ್ನು ಅಲ್ಲಗಳೆದ ಸಚಿವರು, `ಇದು ವಾಸ್ತವಕ್ಕೆ ದೂರವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದ್ದರೂ ಕೇವಲ ರೂ.17.10 ಕೋಟಿ ಮಾತ್ರ ನಷ್ಟವಾಗಿದೆ ಎನ್ನುತ್ತಿದ್ದೀರಿ. ವಸ್ತುಸ್ಥಿತಿ ನೋಡಿ, ಹಾನಿ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ವರದಿ ನೀಡಿ' ಎಂದು ಸೂಚಿಸಿದರು.

ಪ್ರಕೃತಿ ವಿಕೋಪ ನಿಧಿಯಿಂದ ನೀಡಲಾಗುವ ಪರಿಹಾರ ಸಾಕಾಗುವುದಿಲ್ಲ. ಕಳೆದ 25 ವರ್ಷಗಳಿಂದಲೂ  ಪರಿಹಾರ ಪ್ರಮಾಣ ಇದೇ ರೀತಿ ಇದೆ. ಈ ಬಗ್ಗೆ ಶಾಸನಸಭೆಗಳಲ್ಲೇ ತಿದ್ದುಪಡಿಯಾಗಬೇಕು. ಈ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಂಭವಿಸಿರುವ ಮಳೆ ಅನಾಹುತಗಳ ಸಂಬಂಧ ವರದಿಗಳನ್ನು ಕ್ರೋಡೀಕರಿಸಿ ಸೋಮವಾರ ಸಂಜೆಯೊಳಗೆ ಸರ್ಕಾರಕ್ಕೆ ಅಂದಾಜು ಯೋಜನೆಯೊಂದಿಗೆ ವರದಿ ಸಲ್ಲಿಸಬೇಕು. ನಂತರ ಜಿಲ್ಲೆಗೆ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಮಳೆಹಾನಿ ಸಂಬಂಧಿತ ವಿಷಯಗಳಿಗೆ ತಕ್ಷಣ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವರು, ಅಧಿವೇಶನ ಮುಗಿಯುವುದರೊಳಗೆ ಜಿಲ್ಲೆಯಲ್ಲಿ ವ್ಯಾಪಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಮಳೆಯಿಂದ ಆದ ಅನಾಹುತಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ಇಲಾಖೆ ನಮಗೆ ಸಂಬಂಧಿಸಿದ್ದಲ್ಲವೆಂದು ಉದಾಸೀನ ತೋರದೇ, ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕು. ಅಧಿಕಾರಿಗಳು ಜನರಿಗೆ ಸ್ಪಂದಿಸದಿದ್ದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಅವರು ಈಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಹೊಸನಗರ, ತೀರ್ಥಹಳ್ಳಿ, ಸೊರಬ ಸೇರಿದಂತೆ  ವಿವಿಧ ತಾಲ್ಲೂಕುಗಳಲ್ಲಿ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕೃಷಿ ಭೂಮಿಗಳು ಜಲಾವೃತವಾಗಿವೆ. ವರಾಹಿ, ಮಾಣಿ ಜಲಾಶಯಗಳು ತುಂಬಿರುವುದರಿಂದ ಹಿನ್ನೀರಿನ ಗ್ರಾಮಗಳು ಹಾಗೂ ಕೃಷಿ ಭೂಮಿ ಅಪಾಯದ ಅಂಚಿನಲ್ಲಿದೆ.   ತೀರ್ಥಹಳ್ಳಿ ಆಸ್ಪತ್ರೆಯಲ್ಲಿ  ಮೂರು ದಿನದಿಂದ ವಿದ್ಯುತ್ ಇಲ್ಲ; ಹಾಗಾಗಿ ಕುಡಿಯುವ ನೀರೂ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ  ಮಲ್ಲಿಕಾರ್ಜುನ್,ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.

ಚರ್ಚೆಯಲ್ಲಿ ಶಾಸಕರಾದ ಎಂ.ಜೆ.ಅಪ್ಪಾಜಿ, ಮಧು ಬಂಗಾರಪ್ಪ, ಕೆ.ಬಿ.ಪ್ರಸನ್ನಕುಮಾರ್, ಶಾರದಾ ಪೂರ‌್ಯನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಪ್ರೊ.ಕೃಷ್ಣಭಟ್  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT