ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶ್ರೀಕಂಠದತ್ತರಿಗೆ ಅಂತಿಮ ನಮನ

Last Updated 12 ಡಿಸೆಂಬರ್ 2013, 5:45 IST
ಅಕ್ಷರ ಗಾತ್ರ

ಮಂಡ್ಯ: ಮೈಸೂರಿನ ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌್ ಅವರ ನಿಧನದ ಹಿನ್ನೆಲೆಯಲ್ಲಿ ಬುಧವಾರ ಮಂಡ್ಯ ನಗರದಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್‌ ಆಗಿದ್ದವು. ನೀರವ ಮೌನದೊಂದಿಗೆ ಸೂತಕ ಛಾಯೆ ಆವರಿಸಿತ್ತು.

ಮಂಡ್ಯ, ಪಾಂಡವಪುರದಲ್ಲಿ ಬಹುತೇಕ ಬಂದ್‌ ಆಚರಿಸಲಾಯಿತು, ಉಳಿದೆಡೆಯೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರಸ್ಥರ ಸಂಘದ ವತಿಯಿಂದ ಬೈಕ್‌ ರ್‌್ಯಾಲಿ ನಡೆಸಲಾಯಿತು. ವಾಹನಗಳ ಸಂಚಾರವೂ ವಿರಳವಾಗಿತ್ತು.

ಒಡೆಯರ್‌ ಅವರ ನಿಧನಕ್ಕೆ ಜಿಲ್ಲಾಡಳಿತವೂ ಸೇರಿದಂತೆ ವಿವಿಧ ಸಂಘಟನೆಗಳು ಸಭೆ ಸೇರಿ ಅವರ ಆತ್ಮಕ್ಕೆ ಶಾಂತಿ ಕೋರಿದವು. ಒಡೆಯರ್‌್್ ಕುಟುಂಬ ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಳ್ಳಲಾಯಿತು.

ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಶ್ರೀಕಂಠದತ್ತ ಒಡೆಯರ್‌್ ಅವರ ಭಾವಚಿತ್ರ ನಿಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದ ಫ್ಲೆಕ್ಸ್‌ಗಳು ಅಲ್ಲಲ್ಲಿ ಕಾಣಿಸುತ್ತಿದ್ದವು. ನಾಲ್ಕು ಕಡೆ ಜನರು ಸೇರಿದೆಡೆಯಲ್ಲೆಲ್ಲಾ ಒಡೆಯರ್‌ ಅವರ ನಿಧನ ಹಾಗೂ ಅವರ ಕೊಡುಗೆಯೇ ಚರ್ಚೆಯ ವಿಷಯ ವಸ್ತುವಾಗಿತ್ತು.

ಪೇಟೆಬೀದಿ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಬಂದ್‌್ ಆಗಿದ್ದವು. ಕೆಲವು ಕಡೆಗಳಲ್ಲಿ ಪೆಟ್ರೋಲ್‌ ಬಂಕ್‌್ ಹಾಗೂ ಔಷಧ ಅಂಗಡಿಗಳನ್ನೂ ಬಂದ್‌ ಮಾಡಲಾಗಿತ್ತು.
ಜಿಲ್ಲಾಡಳಿತ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಡೆಯರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ ಮಾತನಾಡಿ, ಕನ್ನಂಬಾಡಿ ಕಟ್ಟೆಯನ್ನು ಕಟ್ಟಿಸುವ ಮೂಲಕ ಜಿಲ್ಲೆಯ ಜನರ ಆರ್ಥಿಕ ಭದ್ರತೆಗೆ ಕಾರಣರಾದ ಒಡೆಯರ್‌ ಕುಟುಂಬದ ಶ್ರೀಕಂಠದತ್ತ ಅವರ ಕುಟುಂಬಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹಾರೈಸಿದರು.

ಜಿಲ್ಲಾ ಪಂಚಾಯಿತಿ  ಸಿಇಒ ಪಿ.ಸಿ. ಜಯಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠ ಪುಟ್ಟಮಾದಯ್ಯ, ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ ಇತರರು  ಪಾಲ್ಗೊಂಡಿದ್ದರು.

ವಕೀಲರ ಸಂಘ: ವಕೀಲರ ಸಂಘದ ಕಚೇರಿಯಲ್ಲಿಯೂ ಒಡೆಯರ್‌ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಂ. ಹರೀಶ್‌, ನಿಂಗೇಗೌಡ, ಎಚ್‌.ಶ್ರೀನಿವಾಸ್‌, ರಾಜಶೇಖರ್‌,  ಡಿ. ರಾಮಲಿಂಗಯ್ಯ ಪಾಲ್ಗೊಂಡಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು: ಪರಿಷತ್‌್ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಒಡೆಯರ್‌ ನಾಡಿನ ಆಸ್ತಿಯಾಗಿದ್ದರು ಎಂದರು.

ಎಚ್‌.ವಿ. ಜಯರಾಂ, ಜಿ.ಟಿ. ವೀರಪ್ಪ, ಎಂ.ವಿ. ಧರಣೇಂದ್ರಯ್ಯ ಚಿಕ್ಕಹಾರೋಹಳ್ಳಿ ಪುಟ್ಟಸ್ವಾಮಿ, ಡಾ.ಕೃಷ್ಣೇಗೌಡ ಹುಸ್ಕೂರು ಮತ್ತಿತರರು ಪಾಲ್ಗೊಂಡಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು: ಪರಿಷತ್ತಿನ ಮಾಸಿಕ ಸಭೆಯಲ್ಲಿ ಒಡೆಯರ್‌ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಾಗೇಂದ್ರ, ರಶ್ಮಿ, ರಾಕೇಶ್‌್್, ಸಿದ್ದರಾಜು ಮತ್ತಿತರರು ಇದ್ದರು.

ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ: ವೇದಿಕೆ ವತಿಯಿಂದಲೂ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇದಿಕೆ ಅಧ್ಯಕ್ಷ ಎಲ್‌. ಸಂದೇಶ್‌್ ಮತ್ತಿತರರು ಪಾಲ್ಗೊಂಡಿದ್ದರು.

ಸ್ವಯಂಪ್ರೇರಿತ ಬಂದ್‌
ಪಾಂಡವಪುರ: ಮೈಸೂರಿನ ರಾಜ ಒಡೆಯರ್ ವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಕ್ಕೆ  ಪಟ್ಟಣದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸಂಪೂರ್ಣ ಬಂದ್ ಆಚರಿಸಿ ಗೌರವ ಸಲ್ಲಿಸಿದರೆ, ತಾಲ್ಲೂಕು ಆಡಳಿತವು ಕೂಡ ನಮನ ಸಲ್ಲಿಸಿತು.

ಬೆಳಿಗ್ಗೆಯಿಂದ ಸಂಜೆವರೆಗೂ ಪಟ್ಟಣದಲ್ಲಿನ ಅಂಗಡಿಗಳು ಮುಚ್ಚಿದವು. ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿಲ್ಲ. ಬ್ಯಾಂಕ್‌ಗಳು, ಆಸ್ಪತ್ರೆಗಳು, ಔಷಧಿ ಅಂಗಡಿ ಹಾಗೂ ಬಸ್ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸಿದರೂ ಜನದಟ್ಟಣೆಯಿಲ್ಲದೆ ಪಟ್ಟಣ ಬಿಕೋ ಎನ್ನುತ್ತಿತ್ತು.

ವಕೀಲರ ಬಹಿಷ್ಕಾರ: ರಾಜ್ಯ ಸರ್ಕಾರ ರಜೆ ಘೋಷಿಸಿದ್ದರೂ ಪಟ್ಟಣದಲ್ಲಿನ ಕಿರಿಯ ಹಾಗೂ ಹಿರಿಯ ಸಿವಿಲ್ ನ್ಯಾಯಾಲಗಳಿಗೆ ರಜೆ ಘೋಷಿಸಿರಲಿಲ್ಲ. ಆದರೆ, ವಕೀಲರು ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿ ಶ್ರೀಕಂಠದತ್ತ ಒಡೆಯರ್ ಅವರಿಗೆ ಗೌರವ ಸಲ್ಲಿಸಿದರು.

ಶ್ರದ್ಧಾಂಜಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಸಾರ್ವಜನಿಕ ಸ್ಥಳಗಳಲ್ಲಿ  ಶ್ರೀಕಂಠದತ್ತ ಒಡೆಯರ್ ಅವರ ಭಾವಚಿತ್ರವಿಟ್ಟು ಹೂಹಾರಹಾಕಿ ಜನತೆ ಶ್ರದ್ದಾಂಜಲಿ ಅರ್ಪಿಸಿದರು.

ತಾಲ್ಲೂಕು ಆಡಳಿತದಿಂದ ನಮನ:  ತಾಲ್ಲೂಕು ಆಡಳಿತವು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಮ್ಮುಖದಲ್ಲಿ  ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶ್ರೀಕಂಠದತ್ತ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛವಿರಿಸಿ ಕೆಲವು ನಿಮಿಷಗಳ ಕಾಲ ಮೌನ ಆಚರಿಸಿ ನಮನ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪುಟ್ಟಣ್ಣಯ್ಯ,  ಮೈಸೂರಿನ ರಾಜ ಒಡೆಯರ್ ಅವರು ಮಂಡ್ಯ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಜನತೆಯ ದೃಷ್ಟಿಯಿಂದ ರಾಜಪ್ರಭುತ್ವಕ್ಕಿಂತ ಪ್ರಜಾಪ್ರಭುತ್ವವೇ ಒಳ್ಳೆಯದು.
ಶ್ರೀಕಂಠದತ್ತ ಒಡೆಯರ್ ಅವರು ರಾಜ ಮನೆತನದಿಂದ ಬಂದಿದ್ದರೂ ಜನಸಾಮಾನ್ಯರ ಜತೆ ಬೆರೆಯುತ್ತ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದರು ಎಂದು ನೆನಪಿಸಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್. ಕೆಂಪೂಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ                               ಎಚ್.ಎಂ. ರಾಮಕೃಷ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ. ಶ್ರೀನಿವಾಸ್, ತಾ.ಪಂ. ಸದಸ್ಯ ಪಿ.ಎಸ್. ಶಾಮಣ್ಣ, ಉಪವಿಭಾಗಾಧಿಕಾರಿ ಬಿ. ವಾಣಿ, ತಹಶೀಲ್ದಾರ್ ಡಿ.ಎಸ್. ಶಿವಕುಮಾರ ಸ್ವಾಮಿ, ರೈತ ಸಂಘದ ಮುಖಂಡರಾದ ಎಲೆಕೆರೆ ಚಂದ್ರಶೇಖರ್, ಮಹಾದೇವಣ್ಣ,  ಜಯರಾಮು, ವೈದ್ಯಾಧಿಕಾರಿ ಡಾ.ಜಯರಾಮ್, ಕೃಷಿ ಸಹಾಯಕ ನಿರ್ದೇಶಕ ಮಹಾದೇವಯ್ಯ, ಸಿಡಿಪಿಒ ಎವಿ ಮ್ಯಾಥ್ಯೂ, ಗ್ರೇಟ್–2 ತಹಶೀಲ್ದಾರ್ ಕೀರ್ತನಾ ಹಾಗೂ ಇತರರು ಭಾಗವಹಿಸಿದ್ದರು.

ವ್ಯಾಪಾರಿಗಳಿಂದ ಬಂದ್‌
ಶ್ರೀರಂಗಪಟ್ಚಣ: ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ನಿಧನದ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀರಂಗಪಟ್ಟಣ ವ್ಯಾಪಾರಸ್ಥರ ಸಂಘದ ಸದಸ್ಯರು ತಮ್ಮ ಅಂಗಡಿ ಮುಂಗಟ್ಟು ಮುಚ್ಚಿ ಬುಧವಾರ ಸ್ವಯಂ ಘೋಷಿತ ಬಂದ್ ಆಚರಿಸಿದರು.

ದೇವಾಲಯದ ಆವರಣದ 50ಕ್ಕೂ ಹೆಚ್ಚು ಅಂಗಡಿಗಳು ಮುಂಜಾನೆಯಿಂದಲೇ ಬಂದ್‌ ಆಗಿದ್ದವು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೆಲವು ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ವರ್ತಕರು ಒಡೆಯರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಸಂಘದ ಅಧ್ಯಕ್ಷ ವಿಶ್ವನಾಥ್‌, ಶಿವಣ್ಣ, ರಂಗಸ್ವಾಮಿ, ರಶೀದ್‌, ಆರ್ಮುಗಂ ಇತರರು ಪಾಲ್ಗೊಂಡಿದ್ದರು. ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಅರ್ಚಕರು ಒಡೆಯರ್‌ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿನ ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಒಡೆಯರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಆಳೆತ್ತರದ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿದರು. ಒಡೆಯರ್‌ ಚಿರಾಯುವಾಗಲಿ ಎಂಬ ಘೋಷಣೆ ಕೂಗಿದರು. ಕರವೇ ತಾಲ್ಲೂಕು ಅಧ್ಯಕ್ಷ ಕೆ.ಬಿ. ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಸಿ. ಸ್ವಾಮಿಗೌಡ, ಚಂದ್ರನಾಗ, ಉಮೇಶ್‌ ಇತರರು ಇದ್ದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ. ಬಲರಾಂ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಒಡೆಯರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪಕ್ಷದ ನಗರ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ, ಯುವ ಅಧ್ಯಕ್ಷ ಎಂ. ಗಿರೀಶ್‌, ಉಮೇಶ್‌ಕುಮಾರ್‌ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT