ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸರಾಸರಿ 20.2 ಮಿ.ಮೀ. ಮಳೆ

ತುಂತುರು ಮಳೆ, ಸಂಭ್ರಮಿಸಿದ ಜನರು
Last Updated 4 ಜುಲೈ 2013, 5:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೂರ್ವ ಮುಂಗಾರಿನಲ್ಲಿ ಅಬ್ಬರವೆಬ್ಬಿಸಿ ದಿಢೀರನೇ ನಾಪತ್ತೆಯಾಗಿದ್ದ ಮಳೆ ಬುಧವಾರ ಜಿಲ್ಲೆಯಾದ್ಯಂತ ಹದವಾಗಿ ಸುರಿಯುತ್ತಾ ತಂಪೆರೆಯಿತು.

ಬೆಳಿಗ್ಗೆ 5ಗಂಟೆಗೆ ತುಂತುರು ಹನಿಯೊಂದಿಗೆ ಆರಂಭವಾದ ಮಳೆ ಮಧ್ಯಾಹ್ನ 1 ಗಂಟೆಯವರೆಗೂ ಬಿಡುವು ಕೊಡದೇ ಮುಂದು ವರಿಯಿತು. ಹವಾಮಾನ ಮುನ್ಸೂಚನೆ ಯಿಲ್ಲದೇ ಸುರಿದ ಮಳೆಯಿಂದಾಗಿ ನಗರದಲ್ಲಿ ಜನಜೀವನ ತುಸು ಅಸ್ತವ್ಯಸ್ಥಗೊಂಡಿತ್ತು. ಮಳೆಯಿಂದಾಗಿ ಮಕ್ಕಳು ಛತ್ರಿಯ ಆಸರೆಯಲ್ಲಿ ಶಾಲೆ ತಲುಪುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಚಳ್ಳಕೆರೆ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಮಳೆಯಾಗಿದೆ. ಜಿಲ್ಲೆಯಾದ್ಯಂತ ಒಟ್ಟು 20.2 ಮಿಲಿ ಮೀಟರ್ ಸರಾಸರಿ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 47.2 ಮಿ.ಮೀ, ಹಿರಿಯೂರಿನಲ್ಲಿ 1.5 ಮಿ.ಮೀ, ಹೊಳಲ್ಕೆರೆಯಲ್ಲಿ 42.2 ಮಿ.ಮೀ, ಹೊಸದುರ್ಗದಲ್ಲಿ 28.2 ಮಿ.ಮೀ, ಮೊಳಕಾಲ್ಮುರಿನಲ್ಲಿ 3.2 ಮಿ.ಮೀ ಮಳೆಯಾಗಿದೆ. ಚಳ್ಳಕರೆ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ.

ಜಿಲ್ಲೆಯಾದ್ಯಂತ ಸರಾಸರಿ 20.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಗಳ ಪ್ರಕಟಣೆ ತಿಳಿಸಿದೆ.
ರೈತರ ಮೊಗದಲ್ಲಿ ನಗೆ: ಜಿಟಿ ಜಿಟಿ ಮಳೆ ನಗರದ ನಾಗರಿಕರಿಗೆ ಕಿರಿ ಕಿರಿ ಉಂಟು ಮಾಡಿದರೆ, ರೈತರ ಮೊಗದಲ್ಲಿ ತುಸು ಮಂದಹಾಸ ಬೀರುವಂತೆ ಮಾಡಿದೆ.

ಶೇಂಗಾ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡುವವರಿಗೆ ತುಂತುರು ಮಳೆ ಸಹಕಾರಿಯಾಗಲಿದೆ ಎನ್ನುತ್ತಾರೆ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಚಂದ್ರಪ್ಪ. ಆದರೆ ಮೋಡಕವಿದ ವಾತಾವರಣ ದಿಂದ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆರೋಗ ಬರುವ ಸಾಧ್ಯತೆ ಇದೆ ಈ ಬಗ್ಗೆ ತಜ್ಞರ ಸಲಹೆ ಪಡೆದು ಔಷಧ ಸಿಂಪಡಣೆಗೆ ಮುಂದಾಗಬೇಕೆಂದು ಸೂಚಿಸುತ್ತಾರೆ.

`ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಹದ ಮಳೆಯಾಗಿದ್ದರೂ, ಈ ಮಳೆ ಹತ್ತಿ ಬೆಳೆಗೆ ಏನೂ ಪ್ರಯೋಜನವಿಲ್ಲ' ಎನ್ನುತ್ತಾರೆ ನಂದನಹೊಸೂರಿನ ಹತ್ತಿ ಬೆಳೆಗಾರ ಗುರುಮೂರ್ತಿ.

ಈಗಾಗಲೇ ಈರುಳ್ಳಿ ಬೆಳೆ ಬಿತ್ತನೆಯಾಗಿರುವ ಪ್ರದೇಶಗಳಿಗೆ ತುಂತುರು ಮಳೆ ವರದಾನವಾಗಿದೆ.  ನಿಧಾನಗತಿಯಲ್ಲಿ ಸುರಿಯುವ ಮಳೆಯಿಂದ ಭೂಮಿ ತೇವವಾಗುತ್ತದೆ. ಹಾಗಾಗಿ ಮುಸುಕಿನ ಜೋಳ ಬಿತ್ತನೆಗೆ ಇದು ಸಕಾಲ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT