ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಕೌಶಲದ ಪಾಠ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ. ಶಿಕ್ಷಕರಿಂದ ತರಗತಿಯಲ್ಲಿ ಪಾಠ. 16 ಗಂಟೆಗಳ ಕಾಲ ಜೀವನ ಕೌಶಲದ ಹೆಸರಿನಲ್ಲಿ ಲೈಂಗಿಕ ಶಿಕ್ಷಣ ಜಾರಿ.ಇದು ಶಿಕ್ಷಣ ಇಲಾಖೆಯ ಸ್ವಾಗತಾರ್ಹ ನಿರ್ಧಾರ.
 
ಲೈಂಗಿಕ ಶಿಕ್ಷಣ ಎಂಬುದು ಇಂದಿನ ದಿನಗಳಲ್ಲಿ ಬಹು ಚರ್ಚಿತ ವಿಷಯ. ಆದರೆ ಲೈಂಗಿಕ ಶಿಕ್ಷಣದಂತಹ ಸೂಕ್ಷ್ಮ ವಿಷಯವನ್ನು ತರಗತಿಯಲ್ಲಿ ಹೇಳುವುದು ಹೇಗೆ? ಈಗಾಗಲೇ ಪ್ರಾಥಮಿಕ ಹಂತದಲ್ಲಿ, ಹೆಣ್ಣುಮಕ್ಕಳಿಗಾಗಿ ರಾಷ್ಟ್ರೀಯ ಕಾರ್ಯಕ್ರಮದಡಿಯ `ಕಿಶೋರಿ~ ಕಾರ್ಯಕ್ರಮದಲ್ಲಿ ಸ್ವಲ್ಪಮಟ್ಟಿನ ಮಾಹಿತಿಯನ್ನು ಆರರಿಂದ ಏಳನೇ ತರಗತಿಯ ವಿದ್ಯಾರ್ಥಿನಿಯರು ಪಡೆಯುತ್ತಿದ್ದಾರೆ.
 
ವಿದ್ಯಾವಂತ ಪೋಷಕರು ಮಕ್ಕಳಿಗೆ ತಿಳಿವಳಿಕೆ ನೀಡುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಆಪ್ತ ಸಮಾಲೋಚನೆ ಹಾಗೂ ಸಲಹೆ ಅಗತ್ಯವಾಗಿರುತ್ತದೆ. ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿ ತರಬೇತಿ ರೂಪದಲ್ಲಿ ಅರಿವು ಮೂಡಿಸಲು `ಕಿಶೋರಿ~ ಕಾರ್ಯಕ್ರಮ ಜಾರಿಗೆ ತರಲಾಗಿದೆ.
 
ಬಾಲಕಿಯರಲ್ಲಾಗುವ ಸಹಜ ಬದಲಾವಣೆಗೆ ವೈಜ್ಞಾನಿಕ ಕಾರಣ ಮತ್ತು ವಿವರಣೆಗಳು, ಸಮಾಜದಲ್ಲಿನ ಲಿಂಗ ತಾರತಮ್ಯ, ಜೀವನಕ್ಕೆ ಅಗತ್ಯವಾದ ಕೌಶಲಗಳು, ಮಕ್ಕಳ ಮಾರಾಟ ಮತ್ತು ಸಾಗಾಣಿಕೆ, ಲೈಂಗಿಕ ಕಿರುಕುಳ, ಮಾನವ ದೇಹದ ಭಾಗಗಳ ಪರಿಚಯ, ಋತುಚಕ್ರದ ಅವಧಿಯ ಸ್ವಚ್ಛತೆ, ಏಡ್ಸ್ ಕುರಿತು ಅರಿವು- ಇವೆಲ್ಲವನ್ನೂ ಹೇಳಿಕೊಡುತ್ತಾರೆ.

ಈ ವಿಷಯವನ್ನು ನಿಭಾಯಿಸುವಲ್ಲಿ ಸ್ವಲ್ಪವೇ ಎಡವಿದರೂ ತಪ್ಪು ತಿಳಿವಳಿಕೆಗೆ ಬಲಿಯಾಗುತ್ತಾರೆ ಎಂಬ ಸಂದಿಗ್ಧ, ಆತಂಕ ಬಹು ಜನರನ್ನು ಕಾಡುತ್ತದೆ. ಇದರ ಪರವಾಗಿ ಮಾತನಾಡುವ ಲೈಂಗಿಕ ತಜ್ಞರು, ವಿಚಾರವಾದಿಗಳು, ಬುದ್ಧಿಜೀವಿಗಳು `ಕಡ್ಡಾಯವಾಗಿ ಕಲಿಸಬೇಕು, ಇಲ್ಲದಿದ್ದರೆ ಅನಾಹುತಗಳಿಗೆ ದಾರಿಯಾಗುತ್ತದೆ~ ಎನ್ನುತ್ತಾರೆ.

ಬಾಲ್ಯದಿಂದ ಪ್ರೌಢಾವಸ್ಥೆಗೆ ಕಾಲಿಡುವ ಸಂಕ್ರಮಣ ಕಾಲವೇ ಹದಿಹರೆಯ. ಮಕ್ಕಳು ದೈಹಿಕ, ಜೈವಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಹೊಂದುವುದು ಈಗಲೇ. ಈ ಹಂತದಲ್ಲಿ ನೂರೆಂಟು ಉತ್ತರ ಸಿಗದ ಪ್ರಶ್ನೆಗಳು, ಹತ್ತು ಹಲವು ಒತ್ತಡಗಳು ಅವರನ್ನು ಅತಾರ್ಕಿಕ ಮತ್ತು ಸ್ವೇಚ್ಛಾಚಾರದ ನಡವಳಿಕೆಗೆ ಈಡು ಮಾಡುತ್ತವೆ.ಶಾಲಾ ಶಿಕ್ಷಣದಲ್ಲಿ ಅತಿ ದೊಡ್ಡ ಸಮಸ್ಯೆಯೆಂದರೆ ಮಕ್ಕಳಲ್ಲಿ  ಲೈಂಗಿಕ     ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರಲ್ಲಿರುವ   ತಪ್ಪ ಗ್ರಹಿಕೆಗಳನ್ನು ದೂರಮಾಡಬೇಕಾಗಿರುವುದು.

ಅನವಶ್ಯಕ ಕುತೂಹಲ, ತಪ್ಪು ಗ್ರಹಿಕೆ: ಭಾರತೀಯ ಸಂಸ್ಕೃತಿಯಲ್ಲಿ ಲೈಂಗಿಕತೆಗೆ ಅತೀ ಸೂಕ್ಷ್ಮ ಸ್ಥಾನ ನೀಡಲಾಗಿದೆ.ಅದರ ಬಗ್ಗೆ ನೇರವಾಗಿ ಪ್ರಸ್ತಾಪ ಮಾಡುವುದು ಮುಜುಗರದ ಸಂಗತಿಯಾಗಿರುವುದರಿಂದ ಮಕ್ಕಳಲ್ಲಿ ಅನವಶ್ಯಕ ಕುತೂಹಲ, ತಪ್ಪುಗ್ರಹಿಕೆಗಳಿಂದಾಗಿ ಅವರ ನಡತೆಯ ಮೇಲೆ ವಿಪರೀತ ಪರಿಣಾಮವಾಗುತ್ತಿರುವುದು ಆತಂಕಕಾರಿ ಸಂಗತಿ.

ಶಿಕ್ಷಕರು ಮಕ್ಕಳ ಮನಸ್ಸುಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಕ್ರಮಗಳ ಬಗ್ಗೆ ಮುಂಜಾಗರೂಕತೆಗಳ ಬಗ್ಗೆ ಚರ್ಚಿಸಿ ತಿಳಿ ಹೇಳುವುದು ತೀರಾ ಅನಿವಾರ್ಯವಾಗಿದೆ.
ಜಾಗತಿಕ ಸಮಾಜದೊಂದಿಗೆ ನಮ್ಮ ಮಕ್ಕಳು ಬೆಳೆಯುತ್ತಿದ್ದಾರೆ. ಆಲೋಚನೆಗಿಂತ ಅನುಕರಣೆಯೇ ಪ್ರಭಾವಶಾಲಿಯಾಗಿರುವ ವಿಕಾಸದ ಹಂತದಲ್ಲಿರುತ್ತಾರೆ. ಹೊಸತನದ ಅನ್ವೇಷಣೆಯಲ್ಲಿರುವ ಈ ಮಕ್ಕಳ ಮನಸ್ಸು ಪಾದರಸಕ್ಕಿಂತ ಚುರುಕು.
 

ಆಧುನಿಕ ಜಗತ್ತಿನಲ್ಲಿ ಯಾವುದೇ ಬಗೆಯ ಅಂಕುಶವಿಲ್ಲದೆ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿದೆ. ನಂಬಲರ್ಹವಾದದ್ದು ಯಾವುದು ಮತ್ತು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಅವರ ಪ್ರಶ್ನೆಗಳಿಗೆ, ಗೊಂದಲಗಳಿಗೆ ಸರಿಯಾದ ಉತ್ತರ ದೊರೆಯದೇ ಇದ್ದಾಗ ಅವರು ಯಾವುದೇ ಮೂಲಗಳಿಂದ ಮಾಹಿತಿ ಪಡೆಯಲು ಯತ್ನಿಸಬಹುದು. ಇದರಿಂದ ಉಪಕಾರಕ್ಕಿಂತ ಅಪಾಯವೇ ಹೆಚ್ಚು.
 

ಈ ಹಂತದಲ್ಲೇ  ತಂದೆ-ತಾಯಿಯರ ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನ ಅತ್ಯಗತ್ಯ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ನಿಖರ ಮಾಹಿತಿಯೂ ಅಗತ್ಯವಿದೆ.

ಈ ಒತ್ತಡಗಳನ್ನು ನಿಭಾಯಿಸುವುದು ವಿದ್ಯಾರ್ಥಿಗಳಿಗೆ ಕಷ್ಟ. ಅವರು ಹತಾಶೆ, ಖಿನ್ನತೆಗಳಿಗೆ ಒಳಗಾಗುವ ಸಾಧ್ಯತೆಯಿದೆ. ಈ ಪ್ರಕ್ಷುಬ್ಧ ಮನಃಸ್ಥಿತಿಯಿಂದಾಗಿ ಶಿಕ್ಷಣದಲ್ಲಿ ಹಿನ್ನಡೆ, ಅಪರಾಧಗಳತ್ತ ಒಲವು. ಡ್ರಗ್ಸ್, ಧೂಮಪಾನ, ಕುಡಿತ ದುಶ್ಚಟಗಳಿಗೆ ದಾಸರಾಗುತ್ತಾರೆ. ಪರಿಸ್ಥಿತಿ ಕೈಮೀರಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

ಇಂದಿನ ಯಾಂತ್ರಿಕ ಜೀವನದ ಗೊಂದಲದಲ್ಲಿ ಮುಳುಗಿರುವ ಮತ್ತು ವಿಭಕ್ತ ಕುಟುಂಬಗಳೇ ಹೆಚ್ಚಿರುವ ತಂದೆ-ತಾಯಿಯರಿಗೆ ಮಕ್ಕಳೊಡನೆ ಬೆರೆತು ಮಾತನಾಡುವ ವ್ಯವಧಾನ, ತಾಳ್ಮೆ, ಸಮಯವಿಲ್ಲದಂತಾಗಿದೆ. ಮಕ್ಕಳಿಗೆ ಹೇಳಬೇಕೆಂದಿರುವುದನ್ನು ಹೇಳಲಾಗದೆ ಅವರು ಪರಿತಪಿಸುತ್ತಿದ್ದಾರೆ. ಮಕ್ಕಳು ಸರಿಯಾದ ಮಾಹಿತಿಯಿಂದ ವಂಚಿತರಾಗಿ ಕದ್ದು ಮುಚ್ಚಿ ಅನೈತಿಕ, ಲೈಂಗಿಕ ಶಿಕ್ಷಣ ಪಡೆದು ಸಿಫೀಲಿಸ್, ಗನೋರಿಯ, ಏಡ್ಸ್‌ನಂತಹ  ರೋಗಗಳಿಗೆ ಬಲಿಯಾಗುತಿದ್ದಾರೆ.

ಲೈಂಗಿಕ ಕಿರುಕುಳದಲ್ಲಿ ಅನಗತ್ಯವಾಗಿ ಶರೀರ ಮುಟ್ಟುವುದು, ಪರೋಕ್ಷವಾಗಿ ಲೈಂಗಿಕ ಭಾವನೆಗಳನ್ನು ಕೆದಕುವದು, ಕಿರುಕುಳಕ್ಕೆ ಒಳಪಟ್ಟ ವ್ಯಕ್ತಿಯಲ್ಲಿ ಮನಸ್ಸಿಗೆ ಸಲ್ಲದಂತಹ ವರ್ತನೆಗಳು ಮಾನಸಿಕ ಆಲಸ್ಯ ಹುಟ್ಟು ಹಾಕುವುದರೊಂದಿಗೆ ದೇಹ ಮತ್ತು ಭಾವನೆಗಳಿಗೆ ಹಾನಿ ಮಾಡಬಲ್ಲವು. ಇದಕ್ಕಿಂತ ಮುಖ್ಯವಾಗಿ ಸಾಹಸ ಮತ್ತು ಅತ್ಯುತ್ಸಾಹ ಅಜಾಗರೂಕ ಲೈಂಗಿಕ ನಡೆನುಡಿಗಳಿಗೂ ಕಾರಣವಾಗಬಹುದು.
 
ವಿದ್ಯಾರ್ಥಿಗಳ ಗೆಳೆತನದಲ್ಲಿ ಲೈಂಗಿಕ ಒತ್ತಡಗಳು ಬರುವುದು ಅತಿ ಸುಲಭ. ಇದಲ್ಲದೆ, ಅತಿಯಾದ ಹೊಟ್ಟೆಕಿಚ್ಚು ಅಥವಾ ಅತಿಯೆನಿಸುವ ಒಲವಿನ ಹಿಡಿತವೂ ಇರಬಲ್ಲದು. ಇಂತಹ ಸಂದರ್ಭದಲ್ಲಿ ಅರಿವಿನ ಕೊರತೆಯಿಂದಾಗಿ ಖಿನ್ನತೆ, ಕೀಳರಿಮೆ, ಗಾಬರಿ, ಆತಂಕ, ಹಠ ಮೊದಲಾದ ಸ್ಥಿತಿಗೆ ಒಳಗಾಗುತ್ತಾರೆ. ಪಟ್ಟಣ ಪ್ರದೇಶದ ಮಕ್ಕಳು ಲೈಂಗಿಕತೆ ಕುರಿತ ಹಲವು ಪ್ರಶ್ನೆಗಳಿಗೆ ಮಾಧ್ಯಮ, ಇಂಟರ್‌ನೆಟ್ ಮತ್ತಿತರ ಮಾರ್ಗದ ಮೂಲಕ ಅರಿವು ಹೊಂದುವ ಅವಕಾಶವಿದೆ.

ಮುಖ್ಯವಾಗಿ ಸಮಾಜದಲ್ಲಿನ ಸಂಬಂಧಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳ ಕುರಿತು ಅರಿವು ಮೂಡಿಸುವುದು. ಹಳ್ಳಿಯಿಂದ ಬರುವ ಮಕ್ಕಳಿಗೆ ತಮ್ಮ ಸಮಸ್ಯೆಗಳನ್ನು ಹೇಳುವಂತೆ ಹಾಗೂ ಕೇಳುವಂತೆ ಮನವೊಲಿಸುವದು. ಆಗ ಅವರಿರುವ ಮನೆ ವಾತಾವರಣ, ಊರು, ಶಾಲೆಯಲ್ಲಿ, ಪ್ರಯಾಣದಲ್ಲಿ ಅನುಭವಿಸುವ ಲೈಂಗಿಕ ಕಿರುಕುಳಗಳನ್ನು ಗುರುತಿಸಿ ಹೇಳುತ್ತಾರೆ. ಬೆಳವಣಿಗೆ ಹಾಗೂ ಋತುಚಕ್ರದ ಕೀಳರಿಮೆಯಿಂದ ಹೆಣ್ಣುಮಕ್ಕಳು ಕೊಂಚ ಹೊರಬರಲು ಸಾಧ್ಯವಾಗುತ್ತದೆ.
 
ಹಾಗೆ ನೋಡಿದರೆ ನಮ್ಮ ಸಮಾಜದಲ್ಲಿ ಸುಶಿಕ್ಷಿತ, ವಿದ್ಯಾವಂತ ಪೋಷಕರು ಸಹ ಮಕ್ಕಳೊಂದಿಗೆ ಮುಕ್ತವಾಗಿ ಇಂತಹ ವಿಚಾರಗಳನ್ನು ಚರ್ಚಿಸಲು ಹಿಂಜರಿಯುತ್ತಾರೆ. ಭಾರತೀಯರು ಸೆಕ್ಸ್ ಬಗ್ಗೆ ದೇವಸ್ಥಾನಗಳಲ್ಲಿ ಹೇಳಿದ್ದನ್ನು ಮನೆಗಳಲ್ಲಿ ಹೇಳುವುದಿಲ್ಲ ಎಂಬ ಮಾತಿದೆ. ವಿದ್ಯಾರ್ಥಿಗಳು ಟಿ.ವಿ ಚಾನೆಲ್‌ಗಳಿಂದ ಬೇಕಾದಷ್ಟು ಸೆಕ್ಸ್ ಪಾಠಗಳನ್ನು ಕಲಿಯುತ್ತಾರೆ ಎನ್ನುವುದು ನಿಜ. ಆದರೆ ಬದುಕಿನ ಬಗ್ಗೆ ಅವರಿಗೆ ಇರುವ ತಿಳಿವಳಿಕೆ ಬಹುತೇಕ ಸೊನ್ನೆ.

ನಮ್ಮದು ಉಷ್ಣವಲಯದ ಪ್ರದೇಶ. ಅದರಿಂದ ಹುಡುಗಿಯರು ಬೇಗನೆ ಋತುಮತಿಗಳಾಗುತ್ತಾರೆ. ಆ ಚಿಕ್ಕವಯಸ್ಸಿನಲ್ಲಿ `ಅದರ~ ಬಗ್ಗೆ ಕಲ್ಪನೆ ಇರುವುದಿಲ್ಲ. ಹಳ್ಳಿಯಿಂದ ಬರುವ ಎಷ್ಟೋ ವಿದ್ಯಾರ್ಥಿನಿಯರು ತರಗತಿ ಮಧ್ಯೆ `ಮೇಡಂ ನಾನು ಮನೆಗೆ ಹೋಗುತ್ತೇನೆ~ ಎಂದು ಕೇಳುತ್ತಾರೆ. `ಯಾಕಮ್ಮ?~ ಎಂದು ಕೇಳಿದರೆ ಸಂಕೋಚ, ನಾಚಿಕೆಯಿಂದ, ಮೈಯೆಲ್ಲಾ ಹಿಡಿಯಾಗಿ ನಿಂತಿರುವುದರಿಂದಲೇ ಆ ಬಾಲೆ `ತಿಂಗಳ ತೊಂದರೆ~ಯಿಂದ ನರಳುತ್ತಾಳೆಂದು ಊಹಿಸಿಕೊಳ್ಳಬೇಕು.
 
ಇಂತಹ ಸಂದರ್ಭದಲ್ಲಿ ಅವಳಿಗೆ ಮುಂಜಾಗರೂಕವಾಗಿ ಹೇಗಿರಬೇಕೆಂಬುದನ್ನು ತಿಳಿಸಿ, `ಅದು ಸಹಜ, ಸಾಮಾನ್ಯ~ ಎಂಬುದನ್ನು ಮನಗಾಣಿಸಿದರೆ ಆಕೆಯಲ್ಲಿ ಸ್ವಲ್ಪ ಧೈರ್ಯ ತುಂಬಬಹುದು. ಇಂತಹ ಸಂದರ್ಭದಲ್ಲಿ ತಮ್ಮ ಶರೀರವನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರಾಗುವರು.

ಕೇವಲ ಲೈಂಗಿಕ ಶಿಕ್ಷಣ ಅಷ್ಟೇ ಅಲ್ಲ, ಅದರೊಂದಿಗೆ ನೈತಿಕ ಶಿಕ್ಷಣ, ಮೌಲ್ಯ, ಆರೋಗ್ಯ ಶಿಕ್ಷಣವನ್ನೂ ನೀಡಬೇಕಾಗಿದೆ. `ನನ್ನ ಫ್ರೆಂಡ್ಸೆಲ್ಲಾ ತುಂಬಾ ಫಾಸ್ಟ್ ಇರಬೇಕಾದರೆ ನಾನು ಹೀಗಿದ್ದರೆ ನನಗೆ ಗೌರಮ್ಮ ಅಂತಾರೆ, ಹಳೆಯ ಶತಮಾನದವಳು ಅಂತಾರೆ, ಅವರಂತೆ ನಾನಾಗಬೇಕು, ಅವರೊಪ್ಪಬೇಕು~ ಅನ್ನುವಂತಹ ಸಂಗಾತಿಗಳ ಒತ್ತಡ ಒಂದೆಡೆ, `ಮಾಧ್ಯಮಗಳಲ್ಲಿ ತೋರಿಸೋ ರೀತಿ ನಾನು ಇರಬೇಕು~ ಎನ್ನುವ ವೈಯಕ್ತಿಕ ಒತ್ತಡ ಇನ್ನೊಂದೆಡೆ, ಜೊತೆಗೆ ಪಾಲಕರ ನಿರೀಕ್ಷೆಗಳು.

ಇದರ ಜೊತೆಗೆ ದೈಹಿಕ ಬೆಳವಣಿಗೆ. ಈ ಒತ್ತಡಗಳನ್ನು ನಿಭಾಯಿಸಬೇಕಾದರೆ ದೈಹಿಕ ಬದಲಾವಣೆ ಕುರಿತಂತೆ ಜೀವ ವಿಜ್ಞಾನದ ಅನ್ವಯ ವೈಜ್ಞಾನಿಕ ತಿಳಿವಳಿಕೆಯನ್ನು ವಿದ್ಯಾರ್ಥಿನಿಯಲ್ಲಿ ಮೂಡಿಸಬೇಕು.
 
ಆಗಲೇ ಅವಳಲ್ಲಿ ಒಳ್ಳೆಯ ರೀತಿಯಲ್ಲಿ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. `ನಾನು ಯಾವ ಸಮಸ್ಯೆ ಬಂದರೂಎದುರಿಸಬಲ್ಲೆ~ ಎಂಬ ಧೈರ್ಯ ಬರುವಂತೆ ಶಿಕ್ಷಕರು ವರ್ತಿಸಬೇಕು. ಆಗ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಸಂಗಗಳನ್ನು ಹೆಣ್ಣುಮಕ್ಕಳು ತಪ್ಪಿಸಿಕೊಳ್ಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT