ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಸ್‌ಎಸ್ ರುಡ್‌ಸೆಟ್‌ಗೆ ಕೇಂದ್ರದ ಪುರಸ್ಕಾರ

Last Updated 2 ಆಗಸ್ಟ್ 2012, 6:15 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಮರಿಯಾಲದ ಜೆಎಸ್‌ಎಸ್ ರುಡ್‌ಸೆಟ್ ಸಂಸ್ಥೆಯ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ `ಎ ಪ್ಲಸ್~ ದರ್ಜೆಯ ಸಂಸ್ಥೆಯೆಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.

`ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಮತ್ತು ಡಾ.ಡಿ. ವೀರೇಂದ್ರ ಹೆಗಡೆ ಸಂಸ್ಥೆಗೆ ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ದೇಶದ 500ಕ್ಕೂ ಹೆಚ್ಚು ರುಡ್‌ಸೆಟ್‌ಗಳ ಕಾರ್ಯವೈಖರಿಯನ್ನು ನಿರ್ವಹಣಾ ವಿಭಾಗದ ಮೂಲಕ ಅಧ್ಯಯನ ನಡೆಸಲಾಗಿತ್ತು. `ಎ ಪ್ಲಸ್~, ಎ, ಬಿ, ಸಿ ಮತ್ತು ಡಿ ದರ್ಜೆಯೆಂದು ಶ್ರೇಣಿಕರಿಸಿತ್ತು. ನಮ್ಮ ಸಂಸ್ಥೆಗೆ ಉತ್ತಮ ಸ್ಥಾನಮಾನ ಲಭಿಸಿದೆ~ ಎಂದು ಜೆಎಸ್‌ಎಸ್ ರುಡ್‌ಸೆಟ್ ಸಂಸ್ಥೆಯ ಸಿಇಒ ಎನ್. ಶೇಖರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮಾನ್ಯತೆ ಪಡೆದಿರುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಜವಾಬ್ದಾರಿ ನೀಡಿ ಬಿಪಿಎಲ್ ಫಲಾನುಭವಿಗಳಿಗೆ ನೇರವಾಗಿ ತರಬೇತಿ ನೀಡುವ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದ ಅವರು, ಮರಿಯಾಲದಲ್ಲಿ ಹೊಸ ಕಟ್ಟಡಕ್ಕೆ 2004-05ರಲ್ಲಿ ರುಡ್‌ಸೆಟ್ ಸಂಸ್ಥೆ ಸ್ಥಳಾಂತರಗೊಂಡಿತು. ಜಿಲ್ಲೆಯ 19 ಸಾವಿರಕ್ಕೂ ಹೆಚ್ಚು ಯುವಜನರು ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ ಎಂದರು.

2005ರಲ್ಲಿ ಅನಕ್ಷರಸ್ಥ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ತರಬೇತಿ ನೀಡಿ ನವೀನ ಕರಕುಶಲ ಕೃತಿಗಳನ್ನು ರಫ್ತು ಮಾಡಲು ತರಬೇತಿ ಮತ್ತು ಉತ್ಪಾದನಾ ಕೇಂದ್ರ ಪ್ರಾರಂಭಿಸಲಾಯಿತು. ಈ ಕೇಂದ್ರ ಹಾಗೂ ಇದರ ವಿಸ್ತರಣಾ ಕೇಂದ್ರಗಳಾದ ಹರವೆ ಮತ್ತು ತಾಳವಾಡಿಯಲ್ಲಿ ಒಟ್ಟು 250 ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಸಂಸ್ಥೆ ಮೂಲಕ ಜಿಲ್ಲಾ ಪಂಚಾಯಿತಿಯ ಹಲವು ಯೋಜನೆಗಳ ಅಧಿಕಾರಿಗಳಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೈದರಾಬಾದಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್ ಸಂಸ್ಥೆಯವರು ಹೊರದೇಶಗಳ ತಜ್ಞರ ಎರಡು ತಂಡಗಳನ್ನು ಸಂಸ್ಥೆಯ ಚಟುವಟಿಕೆಗಳ ಅಧ್ಯ ಯನಕ್ಕಾಗಿ ಪ್ರತಿ ವರ್ಷವೂ ಕರೆತರುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಜೆಕ್ಟ್ ಅಧಿಕಾರಿ ಬಿ.ಕೆ. ಉಮಾಕಾಂತ್, ಈರಪ್ಪಾಜಿ, ಭೈರಪ್ಪ, ಬಿ.ಕೆ. ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT