ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ನಿರೀಕ್ಷೆಗೆ ಮೀರಿದ ಗೆಲುವು

Last Updated 6 ಜನವರಿ 2011, 7:05 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನಲ್ಲಿ ನಡೆದ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷೆಗೆ ಮೀರಿದ ಗೆಲುವು ಲಭ್ಯವಾಗಿದ್ದರೆ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಜಿಲ್ಲಾ ಪಂಚಾಯತಿಯ 5 ಸ್ಥಾನ ಹಾಗೂ ತಾ.ಪಂ.ನ 19ರಲ್ಲಿ 13 ಸ್ಥಾನ ಗಳಿಸಿರುವ ಜೆ.ಡಿ.ಎಸ್. ಪಾಳಯದಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದರೆ ಕಾಂಗ್ರೆಸ್ ಪಾಳಯದಲ್ಲಿ ಮೌನ ನೆಲೆಸಿದೆ.
 
ಕಳೆದ ಭಾರಿ ಜಿ.ಪಂ.ನ 5 ಸ್ಥಾನದಲ್ಲಿ ನಾಲ್ಕು ಸ್ಥಾನ ಜೆ.ಡಿ.ಎಸ್. ಪಡೆದಿದ್ದರೆ ಮಲ್ಲಿಪಟ್ಟಣ ಒಂದು ಕ್ಷೇತ್ರದಲ್ಲಿ ಜಿ.ಟಿ.ಕೃಷ್ಣಮೂರ್ತಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಸಮಾಧಾನ ತಂದಿದ್ದರು. ಇವರ ಅಕಾಲಿಕ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಅವರ ಪುತ್ರ ಜಿ.ಟಿ.ಪುನೀತ್ ಗೆಲುವು ಪಡೆದು ಕಾಂಗ್ರೆಸ್‌ಗೆ ಸ್ಥಾನವನ್ನು ಉಳಿಸಿ ಕೊಟ್ಟಿದ್ದರು. ಈ ಭಾರಿ 5 ಸ್ಥಾನಗಳನ್ನು ಜೆ.ಡಿ.ಎಸ್. ತನ್ನ ಬಗಲಿಗೆ ಹಾಕಿ ಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಭಾರಿ ಹೊಡೆತ ನೀಡಿದೆ.

ತಾಲ್ಲೂಕು ಪಂಚಾಯತಿಯ 19 ಸ್ಥಾನಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಏಳು ಸ್ಥಾನ ಪಡೆದುಕೊಂಡು ಬಲವಾದ ವಿರೋಧ ಪಕ್ಷವಾಗಿತ್ತು. ಈ ಭಾರಿ ಇದರಲ್ಲೂ ಎರಡು ಸ್ಥಾನ ಖೋತಾ ಆಗಿ 5 ಸ್ಥಾನಕಷ್ಟೆ ತೃಪ್ತಿಪಟ್ಟುಕೊಂಡಿದೆ. ಅದರಲ್ಲೂ ಸಂತೆಮರೂರು ಕ್ಷೇತ್ರ ಹೊರತು ಪಡಿಸಿದರೆ ಬೆಳವಾಡಿ (119) ಕಟ್ಟೇಪುರ (60) ರುದ್ರಪಟ್ಟಣ (29) ಹುಲಿಕಲ್ (43) ಕ್ಷೇತ್ರಗಳಲ್ಲಿ ಅಲ್ಪ ಬಹುಮತದಲ್ಲಿ ಗೆಲುವು ದಾಖಲಿಸಿದೆ. ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ತಾ.ಪಂ ಕ್ಷೇತ್ರಗಳಲ್ಲಿ ಹಾಗೂ ಜಿ.ಪಂ. ಹೊನ್ನವಳ್ಳಿ ಕ್ಷೇತ್ರದಲ್ಲಿ ಪಕ್ಷವು ಮೂರನೆ ಸ್ಥಾನಕ್ಕೆ ಕುಸಿದಿದೆ. ಪಕ್ಷದ ಶಾಸಕರನ್ನು ಹೊಂದಿಯೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಕಳಪೆ ಸಾಧನೆ ಪಕ್ಷದ ಮುಖಂಡರಿಗೆ ಅಚ್ಚರಿಯ ಜೊತೆಗೆ ಮುಜುಗರಕ್ಕೂ ಕಾರಣವಾಗಿದೆ.

ಬಿ.ಜೆ.ಪಿ. ಜಿಲ್ಲಾ ಪಂಚಾಯತಿಯ 4 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಕೊಣನೂರು ಕ್ಷೇತ್ರದಲ್ಲಿ ತಾನು ಬಿ ಫಾರಂ ನೀಡಿದ ಅಭ್ಯರ್ಥಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಆರೋಪಿಸಿ ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಸಹ ನಡೆಸಿತ್ತು. ಅದರೆ ಸ್ಪರ್ಧಿಸಿದ ನಾಲ್ಕು ಕ್ಷೇತ್ರಗಳಲ್ಲೂ ತೀವ್ರ ಮುಖಭಂಗಕ್ಕೆ ಒಳಗಾಗಿದೆ.

ತಾಲ್ಲೂಕು ಪಂಚಾಯತಿಯ ಎರಡು ಕ್ಷೇತ್ರಗಳಲ್ಲಿ (ಮಲ್ಲಿಪಟ್ಟಣ ಹಾಗೂ ಕತ್ತಿಮಲ್ಲೇನಹಳ್ಳಿ) ಗೆಲುವು ಖಚಿತ ಎಂದು ಪಕ್ಷ ಬಲವಾಗಿ ನಂಬಿತ್ತು. ಆದರೆ ಎರಡೂ ಕ್ಷೇತ್ರಗಳಲ್ಲಿ ಎರಡನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಜೆ.ಡಿ.ಎಸ್.ಗೆ ಇಷ್ಟೊಂದು ಭಾರಿ ಪ್ರಮಾಣದ ಗೆಲುವು ದಕ್ಕುತ್ತದೆ ಎಂದು ಪಕ್ಷದ ವಲಯದಲ್ಲೆ ನಿರೀಕ್ಷೆ ಇರಲಿಲ್ಲ. ಜಿ.ಪಂ.ನಲ್ಲಿ 3 ಹಾಗೂ ತಾ.ಪಂ.ನಲ್ಲಿ 10 ರಿಂದ 12 ಸ್ಥಾನ ದೊರಕುವ ಬಗ್ಗೆ ಪಕ್ಷದ ವೇದಿಕೆಯಲ್ಲೆ ಲೆಕ್ಕಾಚಾರ ನಡೆದಿತ್ತು.

ಆದರೆ ಮತದಾರ ಈ ಲೆಕ್ಕಾಚಾರಗಳನ್ನು ಮೀರಿ ಪಕ್ಷಕ್ಕೆ ಭಾರಿ ಮುನ್ನಡೆ ದೊರಕಿಸಿ ಕೊಟ್ಟಿದ್ದಾನೆ. ಚುನಾವಣೆಗೆ ಎರಡು ದಿನ ಮುಂಚೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಾಲ್ಲೂಕಿನಲ್ಲಿ ಕೈಗೊಂಡ ಪ್ರವಾಸ ಪಕ್ಷಕ್ಕೆ ಭಾರಿ ಪ್ರಮಾಣದ ಚೇತರಿಕೆ ನೀಡಿದ್ದಲ್ಲದೆ ಗೌಡರ ಪ್ರಭಾವ ಮತ್ತು ಹಿಡಿತ ತಾಲ್ಲೂಕಿನ ಮತದಾರರ ಮೇಲೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT