ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರದಿಂದ ಹೊರ ನಡೆದ ನಂದಿ

ವಿಡಿಯೊ ದೃಶ್ಯಾವಳಿ ನೀಡುವಂತೆ ಪೊಲೀಸರ ಕೋರಿಕೆ
Last Updated 27 ಜನವರಿ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಪರಿಶಿಷ್ಟ ಜಾತಿ/ಪಂಗಡ ಮತ್ತು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಅತ್ಯಂತ ಭ್ರಷ್ಟರು ಎಂದು ಇಲ್ಲಿ ಆಯೋಜಿಸಿರುವ ಜೈಪುರ ಸಾಹಿತ್ಯೋತ್ಸವದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಮಾಜಿಕ ಚಿಂತಕ ಮತ್ತು ಲೇಖಕ ಆಶಿಷ್ ನಂದಿ ಅವರ ಭಾಷಣದ ವಿಡಿಯೊ ದೃಶ್ಯಾವಳಿಗಳನ್ನು ನೀಡುವಂತೆ ಪೊಲೀಸರು, ಸಾಹಿತ್ಯೋತ್ಸವದ ಸಂಘಟಕರನ್ನು ಕೋರಿದ್ದಾರೆ.

ಈ ನಡುವೆ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ನಂದಿ ಬಂಧನಕ್ಕೆ ಹಲವರು ಆಗ್ರಹಿಸ್ದ್ದಿದಾರೆ. ನಂದಿ ಉಳಿದ ಕಾರ್ಯಕ್ರಮಗಳಿಗೆ ಹಾಜರಾಗದೆ ಜೈಪುರ ನಗರ ಬಿಟ್ಟು ತೆರಳಿದ್ದಾರೆ. 

`ನಂದಿ ಅವರ ಹೇಳಿಕೆಯ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಸಾಹಿತ್ಯೋತ್ಸವದ ಶನಿವಾರದ ಗೋಷ್ಠಿಯೊಂದರ ವೇಳೆ ಅವರು ಮಾಡಿದ್ದ ಭಾಷಣದ ವಿಡಿಯೊ ದೃಶ್ಯಾವಳಿಗಳನ್ನು ನೀಡುವಂತೆ ಸಂಘಟಕರನ್ನು ಕೇಳಲಾಗಿದೆ.

ನಂದಿ ಅವರು ಭಾನುವಾರ ಜೈಪುರದಿಂದ ಹೊರ ನಡೆದಿದ್ದಾರೆ ಎಂದು ಸಾಹಿತ್ಯೋತ್ಸವ ಸಂಘಟಕರು ಮಾಹಿತಿ ನೀಡಿದ್ದು, ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಜೈಪುರ ಹೆಚ್ಚುವರಿ ಪೊಲೀಸ್ ಆಯುಕ್ತ ಗಿರಿರಾಜ್ ಮೀನಾ ತಿಳಿಸಿದ್ದಾರೆ.

ನಂದಿ ಅವರು ಭಾನುವಾರ ಬೆಳಿಗ್ಗೆ `ಹಿಂದಿ -ಇಂಗ್ಲಿಷ್ ಭಾಯಿ ಭಾಯಿ' ಎನ್ನುವ ಗೋಷ್ಠಿಯಲ್ಲಿ ಮಾತನಾಡಬೇಕಿತ್ತು. ಆದರೆ ಅವರ ಹೇಳಿಕೆಗೆ ರಾಜಸ್ತಾನದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿ, ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಜೈಪುರದಿಂದ ಹೊರ ನಡೆದಿದ್ದಾರೆ.

ನಂದಿ ಅವರ ಹೇಳಿಕೆ ವಿರೋಧಿಸಿ ರಾಜಸ್ತಾನ ಪರಿಶಿಷ್ಟ ಜಾತಿ/ಪಂಗಡ ಮಂಚ್ ಅಧ್ಯಕ್ಷ ರಾಜ್‌ಪಾಲ್ ಮೀನಾ ಪೊಲೀಸರಿಗೆ ದೂರು ನೀಡಿದ್ದು, ಆಶಿಷ್ ನಂದಿ ಮತ್ತು ಸಾಹಿತ್ಯೋತ್ಸವ ಸಂಘಟಕ ಸಂಜೋಯ್ ರಾಯ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಂದಿ ಅವರ ಈ ಹೇಳಿಕೆ ಪರಿಶಿಷ್ಟ ಜಾತಿ/ಪಂಗಡದವರ ಘನತೆಗೆ ಚ್ಯುತಿ ತರುವಂತದ್ದು ಎಂದು ದೂರಿನಲ್ಲಿ ವಿವರಿಸಲಾಗಿದೆ. 

ನಂದಿ ಅವರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ರಾಜಸ್ತಾನ ಪರಿಶಿಷ್ಟ ಜಾತಿ/ಪಂಗಡ ಮಂಚ್‌ನ ಬೆಂಬಲಿಗರು ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ಪ್ರಕರಣದ ತನಿಖಾಧಿಕಾರಿಯು ರಜೆಯ ಮೇಲೆ ತೆರಳಿದ್ದು, ಈ ವಿಚಾರವನ್ನು ಪ್ರತಿಭಟನಾಕಾರರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ತನಿಖಾಧಿಕಾರಿಯು ರಜೆಯಲ್ಲಿರುವ ಕುರಿತು ಅವರಿಂದ ಅಗತ್ಯಬಿದ್ದರೆ ಸ್ಪಷ್ಟನೆ ಕೇಳುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಗಿರಿರಾಜ್ ಮೀನಾ ತಿಳಿಸಿದ್ದಾರೆ. ತನಿಖಾಧಿಕಾರಿ ಸುಮಿತ್ ಗುಪ್ತಾ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. 

ಸಾಹಿತ್ಯೋತ್ಸಕ್ಕೆ ಸಾಗುವ ಮುಖ್ಯರಸ್ತೆಯ ಪ್ರವೇಶ ದ್ವಾರದ ಬಳಿ ಸ್ಥಳೀಯರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ಸೋಮವಾರ ಸಾಹಿತ್ಯೋತ್ಸವದ ಸಮಾರೋಪ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT