ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಕೈದಿಗಳ ಆರ್ಭಟ

Last Updated 18 ಫೆಬ್ರುವರಿ 2011, 19:00 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಇಲ್ಲಿನ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಸ್ಥಳಾಂತರದ ಸಂದರ್ಭದಲ್ಲಿ  ಕೈದಿಗಳು ತೀವ್ರ ಸ್ವರೂಪದ ಹಿಂಸಾತ್ಮಕ ದಾಂದಲೆ ನಡೆಸಿದ ಪ್ರಸಂಗ ಶುಕ್ರವಾರ ಬೆಳಿಗ್ಗೆ ನಡೆದಿದೆ.  ಕೈದಿಗಳನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ಘಟನೆಯಲ್ಲಿ ಡಿಸಿಪಿ ಸೇರಿದಂತೆ 24 ಜನ ಪೊಲೀಸರು ಗಾಯಗೊಂಡಿದ್ದಾರೆ.

ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಇದೇ ಪ್ರಥಮ ಬಾರಿಗೆ ಕೈದಿಗಳ ದಾಂದಲೆ ನಡೆದಿದೆ.ವಿಚಾರಣಾಧೀನ ಕೈದಿಯಾಗಿದ್ದ ದುರ್ಗಪ್ಪ ಬಿಜವಾಡ ಎಂಬಾತನನ್ನು ಗುಲ್ಬರ್ಗ ಕಾರಾಗೃಹಕ್ಕೆ ಸ್ಥಳಾಂತರಿಸಲು ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಅವಕಾಶದ ದುರ್ಲಾಭ ಪಡೆದ ಕೈದಿಗಳು ಜೈಲು ಸಿಬ್ಬಂದಿಯತ್ತ ಕಲ್ಲು ಹಾಗೂ ಖಾರದ ಪುಡಿಯನ್ನು ತೂರಿದರು. ಪೊಲೀಸರು ತಮ್ಮತ್ತ ಬರದಂತೆ ತಡೆಯಲು ತುಂಬಿದ ಸಿಲಿಂಡರ್‌ಗಳನ್ನು ಸ್ಫೋಟಿಸಲು ಯತ್ನಿಸಿದರು. ಅಡುಗೆಮನೆ ಹಾಗೂ ವೀಡಿಯೋ ಕಾನ್ಫರೆನ್ಸ್ ಕೊಠಡಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದರು.

ಉಪ ಕಾರಾಗೃಹದ ಎಲ್ಲ ಏಳೂ ಬ್ಯಾರಕ್‌ಗಳ ಬಾಗಿಲುಗಳನ್ನು ಮುರಿದುಕೊಂಡು ಬಂದ ಅಲ್ಲಿದ್ದ 97 ಜನ ಕೈದಿಗಳು ಈ ಗಲಾಟೆಯನ್ನು ಎಬ್ಬಿಸಿದ್ದರು. ವಾಕಿಂಗ್ ಪಾತ್‌ಗೆ ಹಾಕಿದ್ದ ದೊಡ್ಡ ಕಡಪಾ ಕಲ್ಲುಗಳನ್ನು ಕಿತ್ತು ದ್ವಾರದತ್ತ ಎಸೆದರು. ಉಪ ಕಾರಾಗೃಹ ಆವರಣದ ಎಲ್ಲ ಲೈಟುಗಳು ಪುಡಿ-ಪುಡಿಯಾದವು.ಪರಿಸ್ಥಿತಿ ಕೈ ಮೀರಿದ್ದನ್ನು ಗಮನಿಸಿದ ಪೊಲೀಸರು ದೊಂಬಿಯನ್ನು ನಿಯಂತ್ರಿಸಲು 14 ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಲ್ಲದೆ, ರಬ್ಬರ್ ಗುಂಡುಗಳನ್ನೂ ಹಾರಿಸಿದರು.
  
ನಂತರ ಲಾಠಿ ಪ್ರಹಾರ ಮಾಡಿ, ಉದ್ರಿಕ್ತ ಕೈದಿಗಳನ್ನು ಬ್ಯಾರಕ್‌ಗಳಿಗೆ ಕಳುಹಿಸಲಾಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರಿಗೆ ಒಂದೂವರೆ ಗಂಟೆಗೂ ಹೆಚ್ಚಿನ ಕಾಲಾವಕಾಶ ಬೇಕಾಯಿತು.ಘಟನೆಯಲ್ಲಿ ಐವರು ಇನ್ಸ್‌ಪೆಕ್ಟರ್‌ಗಳೂ ಗಾಯಗೊಂಡಿದ್ದಾರೆ. ಹಲವು ಜನ ಕೈದಿಗಳಿಗೂ ಗಾಯಗಳಾಗಿದ್ದು, ಉಪ ಕಾರಾಗೃಹದಲ್ಲೇ ಎಲ್ಲರಿಗೂ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.

ನಗರದ ಕೊಯಿನ್ ರಸ್ತೆಯ ಆಪ್ಸರಾ ಚಿತ್ರಮಂದಿರದ ಮುಂಭಾಗದಲ್ಲಿ ಕೆಲವು ತಿಂಗಳ ಹಿಂದೆ ಹಾಡಹಗಲೇ  ಪಾಲಾಕ್ಷ ವಲ್ಲೂರ (ಪಲ್ಲಿ) ಎಂಬ ಯುವಕನ ಕೊಲೆಯಾಗಿತ್ತು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬಿಜವಾಡ ಕುಟುಂಬವೇ ಈ ಕೊಲೆ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಕೊಲೆ ಸಂಭವಿಸಿ ಕೆಲವು ದಿನಗಳ ನಂತರ ದುರ್ಗಪ್ಪ ಬಿಜವಾಡ ಮತ್ತು ರಜನಿ ಬಿಜವಾಡ ಎಂಬುವವರು ಪೊಲೀಸರಿಗೆ ಶರಣಾಗಿದ್ದರು.

ವಿಚಾರಣಾಧೀನ ಕೈದಿಗಳಾಗಿದ್ದ ಅವರನ್ನು ಇಲ್ಲಿಯ ಉಪ ಕಾರಾಗೃಹದಲ್ಲಿ ಇಡಲಾಗಿತ್ತು. ಕಾರಾಗೃಹದಲ್ಲಿ ಗುಂಪುಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದರಿಂದ ಈ ಇಬ್ಬರನ್ನು ಗುಲ್ಬರ್ಗ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಕೋರ್ಟ್ ಅನುಮತಿ ನೀಡಿತ್ತು.

ರಜನಿ ಬಿಜವಾಡ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಗುರುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ. ಹೀಗಾಗಿ ದುರ್ಗಪ್ಪ ಬಿಜವಾಡ ಒಬ್ಬನನ್ನೇ ಶುಕ್ರವಾರ ಬೆಳಿಗ್ಗೆ 10ಕ್ಕೆ ಬಿಗಿ ಬಂದೋಬಸ್ತ್‌ನಲ್ಲಿ ಗುಲ್ಬರ್ಗಕ್ಕೆ ಕಳುಹಿಸಿಕೊಡಲಾಯಿತು. ದುರ್ಗಪ್ಪ ಬಿಜವಾಡ ನಿರ್ಗಮನದ ಗಳಿಗೆಯನ್ನೇ ಕೈದಿಗಳು ದಾಂದಲೆಗೆ ಬಳಸಿಕೊಂಡರು. ‘ಬಿಜವಾಡ ಗುಂಪಿನ ಸಹವರ್ತಿ ಎನ್ನಲಾದ ಸೈಂಟಿಸ್ಟ್ ಮಂಜ್ಯಾ ಈ ದಾಂದಲೆಯ ನೇತೃತ್ವ ವಹಿಸಿದ್ದ’ ಎಂದು ಪೊಲೀಸ್ ಆಯುಕ್ತ ಕೆ.ರಾಮಚಂದ್ರರಾವ್ ತಿಳಿಸಿದರು.

ದುರ್ಗಪ್ಪನ ಸಂಬಂಧಿಯಾದ ಪಾಲಿಕೆ ಸದಸ್ಯೆ, ಕಾಂಗ್ರೆಸ್‌ನ ಲಕ್ಷ್ಮಿಬಾಯಿ ಬಿಜವಾಡ ಮತ್ತು ಬೆಂಬಲಿಗರು ದುರ್ಗಪ್ಪನನ್ನುಕರೆದೊಯ್ಯುತ್ತಿದ್ದ ವಾಹನದ ಮುಂದೆ ಅಡ್ಡಮಲಗಿ ಸ್ಥಳಾಂತರಕ್ಕೆ ವಿರೋಧಿಸಿದರು. ಗುಲ್ಬರ್ಗ ಜೈಲಿಗೆ ಕಳಿಸಿದರೆ ಅಲ್ಲಿ ದುರ್ಗಪ್ಪನ ವಿರೋಧಿಗಳಿಂದ ಕೊಲೆ ನಡೆಯಬಹುದು ಎಂಬುದು ಅವರ ಅನುಮಾನವಾಗಿತ್ತು. ಪೊಲೀಸರು ಅವರನ್ನು ಚದುರಿಸಿ ವಾಹನ ಕೊಂಡೊಯ್ದರು. ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT