ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಇಂಧನ: ಜತ್ರೊಪಾ ಬೆಳ್ಳಿಕಿರಣ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಬಳಕೆಯಾಗುತ್ತಿರುವ ಒಟ್ಟು ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಶೇ. 80ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶ ನಮ್ಮದಾಗಿದೆ.

ಪ್ರತಿ ನಿತ್ಯ ದೇಶದಲ್ಲಿ 7-8 ಕೋಟಿ ಟನ್‌ಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಬೇಡಿಕೆ 13 ಕೋಟಿ ಟನ್‌ಗಳನ್ನೂ ಮೀರಿದೆ. ಹೀಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಕಚ್ಚಾತೈಲದ ಮೇಲೆ ನಿಗದಿಪಡಿಸುವ ಬೆಲೆ ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಕ್ಯಾಂಟೀನ್ ಕಾಫಿಯಿಂದ ಹಿಡಿದು ಹಾರಾಡುವ ವಿಮಾನ, ಖರೀದಿಸುವ ಬಟ್ಟೆ, ದಿನಬಳಕೆ ವಸ್ತುಗಳ ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಇಂಧನದ ಬೇಡಿಕೆಯೂ ಏರುತ್ತಲಿದೆ. ಹೀಗಾಗಿ ಪರ್ಯಾಯ ಇಂಧನ ಹುಡುಕಾಟ ಭಾರತದ ಸದ್ಯದ ಜರೂರು. ಈ ಹುಡುಕಾಟದಲ್ಲಿ ಭರವಸೆಯ ಮಿಣುಕಿನಂತೆ ಕಾಣಿಸುತ್ತಿದೆ ಜೈವಿಕ ಇಂಧನ.

ಬ್ಯಾಟರಿ ಚಾಲಿತ ಕಾರನ್ನು ರೇವಾ ಪರಿಚಯಿಸಿದ್ದರೂ ಅದು ಬಹುತೇಕ ನಗರ ಸಂಚಾರಕ್ಕೆ ಸೀಮಿತಗೊಂಡಿದೆ. ಜತೆಗೆ ಇದರ ದುಬಾರಿ ಬೆಲೆ ಕೂಡಾ ಸಾಮಾನ್ಯರಿಂದ ದೂರವೇ ಉಳಿಯುವಂತೆ ಮಾಡಿತು. ಈ ಹಂತದಲ್ಲಿ ಜೈವಿಕ ಇಂಧನ ಬಹಳಷ್ಟು ಭರವಸೆ ಮೂಡಿಸಿದೆ. ಭಾರತದಲ್ಲಿನ 380 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೇವಲ 180-190 ದಶಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಉಳಿದ 200 ದಶಲಕ್ಷ ಹೆಕ್ಟೇರ್ ಭೂ ಪ್ರದೇಶವು ಇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಹೀಗೆ ಕೃಷಿಗೆ ಬಳಕೆಯಾಗದ ಭೂ ಪ್ರದೇಶದಲ್ಲಿ ಜೈವಿಕ ಇಂಧನಕ್ಕೆ ಉಪಯೋಗವಾಗಬಹುದಾದ ಜತ್ರೊಪಾ ಕರ್ಕಾಸ ಗಿಡವನ್ನು ಬೆಳೆಯುವುದರಿಂದ ಪ್ರತಿ ಹೆಕ್ಟೇರ್‌ಗೆ ಒಂದು ಟನ್‌ನಂತೆ ಜೈವಿಕ ಇಂಧನ ಪಡೆಯಬಹುದು.

ಜತ್ರೊಪಾ ಕರ್ಕಾಸ್ ಎಂಬ ಗಿಡದ ಬೀಜದಿಂದ ಉತ್ಪಾದಿಸಲಾಗುವ ಎಣ್ಣೆ ಡೀಸೆಲ್ ಜತೆಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದ್ದರಿಂದ ಜತ್ರೋಪ ಜೈವಿಕ ಇಂಧನ ಉತ್ಪಾದನೆಗೆ ಸೂಕ್ತ ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ಬೀಜ ಹಾಕಿ ನೆಟ್ಟ ಕೇವಲ ಒಂದೇ ವರ್ಷದಲ್ಲಿ ಹಣ್ಣು ಬಿಡುವ ಜತ್ರೊಪಾದ ಗಿಡದ ಬೀಜಗಳನ್ನು ಈಸ್ಟರೀಕರಿಸಿ ಅದನ್ನು ಡೀಸೆಲ್ ಜತೆ ಬೆರೆಸಿದಾಗ ಜೈವಿಕ ಡೀಸೆಲ್ ತಯಾರಾಗುತ್ತದೆ.

ವಾರ್ಷಿಕ 200 ಮಿಮೀ ಮಳೆ ಬೀಳುವ ಪ್ರದೇಶದಿಂದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲೂ ಇದನ್ನು ಬೆಳೆಯಬಹುದು. ಜತೆಗೆ ಯಾವುದೇ ಮಣ್ಣಿನ ಗುಣದಲ್ಲೂ ಬೆಳೆಯುವ ಸಾಮರ್ಥ್ಯ ಜತ್ರೊಪಾ ಕರ್ಕಾಸ್ ಗಿಡಕ್ಕಿದೆ. ಸದ್ಯಕ್ಕೆ ಮಲೆನಾಡಿನ ರೈತರ ಬೇಲಿಗಳಿಗಷ್ಟೇ ಸೀಮಿತವಾಗಿ ಉಳಿದಿರುವ ಈ ಕಳ್ಳಿಗಿಡ ಭವಿಷ್ಯದಲ್ಲಿ ದುಡ್ಡಿನ ಗಿಡವಾಗಬಹುದು.

ಪೆಟ್ರೋಲಿಯಂ ಡೀಸೆಲ್‌ಗೆ ಹೋಲಿಸಿದಲ್ಲಿ ಜೈವಿಕ ಇಂಧನ 38.20ರಷ್ಟು ಆಸಿಡ್, 195.2ರಷ್ಟು ಸಫಾನಿಫಿನೇಕಷನ್, 31ರಷ್ಟು ಸಾಂದ್ರತೆ ಹೊಂದಿದೆ. ಡೀಸೆಲ್‌ಗೆ ಹೋಲಿಸಿದಲ್ಲಿ ಜೈವಿಕ ಡೀಸೆಲ್‌ನ ಗುರುತ್ವಾಕರ್ಷಣ ಮೌಲ್ಯ 0.9186 (ಪೆಟ್ರೋಲಿಯಂ ಡೀಸೆಲ್ 0.82-0.84). ಕಿಡಿ ಏಳುವ ಸಾಮರ್ಥ್ಯ 1100ಸಿ (500ಸಿ), ಇಂಧನ ಹೊರಸೂಸುವಿಕೆಯ ಪ್ರಮಾಣ ಶೇ. 0.06 (ಶೇ. 0.12ಕ್ಕಿಂತ ಕಡಿಮೆ), ಕ್ಯಾಲೊರಿ ಮೊತ್ತ 9.470ಕೆ ಕ್ಯಾಲ್/ಕೆ.ಜಿ. (10/170ಕೆ ಕ್ಯಾಲ್/ಕೆ.ಜಿ.), ಸಿಟೇನ್ ಮೊತ್ತ 51 (50).

ಈ ಮೇಲಿನ ರಾಸಾಯನಿಕ ತುಲನಾ ಫಲಿತಾಂಶವನ್ನು ನೋಡಿದರೆ, ಜೈವಿಕ ಡೀಸಲ್ ಹೆಚ್ಚು ಶುದ್ಧ ಇಂಧನ ಎಂಬುದು ಖಾತ್ರಿ. ಇದರೊಂದಿಗೆ ಇನ್ನಿತರ ಶುದ್ಧ ಇಂಧನಗಳೆಂದರೆ ಟಂಗ್, ಮಹುವಾ, ಪೂಂಗಾಮಿಯಾ-ಪಿನ್ನಟ್ಟ, ರಬ್ಬರ್ ಇತ್ಯಾದಿ.

ಆದರೆ ಈ ಗಿಡಗಳು ಬೆಳೆಯಲು ಜತ್ರೊಪಾ ಗಿಡಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಜತೆಗೆ ಇದರ ಕಿಚ್ಚು ಹಚ್ಚುವ ಸಾಮರ್ಥ್ಯ ಅಧಿಕವಾಗಿರುವುದರಿಂದ ಸಾರಿಗೆ ಬಳಕೆಗೆ ಉತ್ತಮ ಎಂದು ಹೇಳಲಾಗುತ್ತದೆ. ಇದರಲ್ಲಿ ಕಾರ್ಬನ್ ಮೊನಾಕ್ಸೈಡ್ ಪ್ರಮಾಣ ಇಲ್ಲದಿರುವುದು ಹಾಗೂ ಕಡಿಮೆ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುವುದರಿಂದ ಪರಿಸರ ಸ್ನೇಹಿ ಎಂಬ ಮನ್ನಣೆಯನ್ನೂ ಪಡೆದಿದೆ.

ಪರಿಸರ ಸ್ನೇಹಿ ಜೈವಿಕ ಡೀಸಲ್ ನೀಡಬಲ್ಲ ಹಲವಾರು ಸಸ್ಯಗಳು ನಮ್ಮ ನಡುವೆ ಇದ್ದರೂ, ಜತ್ರೊಪಾ ಹಾಗೂ ಹೊಂಗೆ ಗಿಡಗಳು ನಮ್ಮ ವಾತಾವರಣಕ್ಕೆ ಹೆಚ್ಚು ಸೂಕ್ತ.

ಕೃಷಿ ಭೂಮಿ, ಮಲೆನಾಡು, ಬಯಲುಸೀಮೆ, ನಗರ ಪ್ರದೇಶ, ಹೆದ್ದಾರಿ ಹೀಗೆ ಎ್ಲ್ಲಲಿ ಬೇಕಾದರೂ ಬೆಳೆಯಬಹುದಾದ ಈ ಗಿಡಗಳು ಮೊದಲ ವರ್ಷ ಮಾತ್ರ ನಿರ್ವಹಣೆ ಬೇಡುತ್ತವೆ. ಮಳೆಗಾಲ ಹೊರತುಪಡಿಸಿ ಉಳಿದ ಕಾಲದಲ್ಲಿ ಇದರ ಬೀಜಗಳು ಲಭ್ಯ.

ಇದರಿಂದ ಬೀಜಗಳ ಸಂಗ್ರಹ ಹಾಗೂ ಅವುಗಳಿಂದ ಎಣ್ಣೆ ತೆಗೆಯುವುದೂ ಸುಲಭ. ಎಣ್ಣೆ ತೆಗೆದ ನಂತರ ಉಳಿದ ಹಿಂಡಿಯು ಅತ್ಯುತ್ತಮ ಸಾವಯವ ಗೊಬ್ಬರವಾಗಬಲ್ಲದು. ಜತ್ರೊಪಾದ ತ್ಯಾಜ್ಯ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲಿದೆ.

ಜೈವಿಕ ಇಂಧನದ ಸಮಸ್ಯೆಗಳು
ಜತ್ರೊಪಾ ಗಿಡದ ಬೀಜದಿಂದ ತೆಗೆಯಬಹುದಾದ ಜೈವಿಕ ಡೀಸಲ್ ಕೇಳಲು ಹಾಗೂ ಓದಲು ಬಹಳ ಸುಲಭ ಎನಿಸಿದರೂ ಪ್ರಾಯೋಗಿಕ ಬಳಕೆಯಲ್ಲಿ ಕೆಲವೊಂದು ಸಮಸ್ಯೆಗಳಿವೆ. ಡೀಸೆಲ್‌ನೊಂದಿಗೆ ಬೇರಾವುದೇ ತೈಲ ಸ್ವಲ್ಪವೇ ಬೆರೆತರೂ, ಸರಿಯಾಗಿ ಉರಿಯದಿರುವ ಸಾಧ್ಯತೆ ಹೆಚ್ಚು. ಸಮಸ್ಯೆಯ ಸಂಕೀರ್ಣತೆಯ ಆಧಾರದ ಮೇಲೆ ವಾಹನ ಕೆಟ್ಟು ನಿಲ್ಲಬಹುದು. ಆದರೆ ಕೊಂಚ ಮಾರ್ಪಾಡು ಮಾಡಿಕೊಳ್ಳುವ ಮೂಲಕ ಎಂಜಿನ್ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಇದಕ್ಕಿರುವ ದೊಡ್ಡ ಸಮಸ್ಯೆ ಎಂದರೆ, ಡೀಸೆಲ್‌ನೊಂದಿಗೆ ಜೈವಿಕ ಇಂಧನ ಬೆರೆಸುವ ಪ್ರಕ್ರಿಯೆ ಬಹಳ ಕ್ಲಿಷ್ಟಕರವಾದ ಕೆಲಸ. ಈ ಪ್ರಕ್ರಿಯೆಗೆ ಇನ್ನಷ್ಟು ಅಧ್ಯಯನ ಹಾಗೂ ಪ್ರಯೋಗಗಳ ಅಗತ್ಯವಿದೆ.

ಜೈವಿಕ ಇಂಧನ ಉತ್ಪಾದಿಸಲು ಬಹಳಷ್ಟು ಭೂಮಿಯ ಅಗತ್ಯವಿದೆ. ಜತೆಗೆ ನೀರಿನ ಪೂರೈಕೆಯೂ ಅತ್ಯಗತ್ಯ. ಹೀಗಾಗಿ ಈ ಯೋಜನೆಗೆ ಬಹಳಷ್ಟು ಕೋಟಿ ರೂಪಾಯಿಯ ಅಗತ್ಯವಿದೆ. ಆದರೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳು ಜೈವಿಕ ಇಂಧನದಿಂದ ಚಲಿಸುತ್ತಿವೆ. ಕರ್ನಾಟಕ ಸರ್ಕಾರದಂತೆ ಕೆಲವೊಂದು ರಾಜ್ಯ ಸರ್ಕಾರಗಳು ಜೈವಿಕ ಇಂಧನವನ್ನು ಸರ್ಕಾರಿ ಬಸ್ಸುಗಳಿಗೆ ಬಳಸುತ್ತಿವೆ.
 
ಆದರೆ ಇದು ಎಲ್ಲಾ ವಾಹನಗಳ ಬಳಕೆಗೂ ಬಂದಂತಾದಲ್ಲಿ ಉದ್ದೇಶ ಈಡೇರಬಹುದು. ಒಟ್ಟಿನಲ್ಲಿ ಪರ್ಯಾಯ ಇಂಧನ ಹುಡುಕಾಟದಲ್ಲಿ ಜತ್ರೊಪಾ ಒಂದು ಸ್ಪಷ್ಟ ಉದಾಹರಣೆ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT