ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗದ ಮೈಸೂರು ಬಂಗಲೆ ಕೆಪಿಸಿಗೆ ಕೈ ತಪ್ಪಲಿದೆಯೇ?

ನಾಲ್ಕು ದಶಕಗಳ ಒಡೆತನಕ್ಕೆ ಕುತ್ತು
Last Updated 11 ಸೆಪ್ಟೆಂಬರ್ 2013, 5:12 IST
ಅಕ್ಷರ ಗಾತ್ರ

ಕಾರ್ಗಲ್: ಐತಿಹಾಸಿಕ ಮತ್ತು ಪಾರಂಪರಿಕವಾಗಿ ಜೋಗ ಜಲಪಾತದ ಎದುರಿನಲ್ಲಿ ನೆಲೆನಿಂತಿರುವ ಮೈಸೂರು ಬಂಗಲೆ ಪ್ರವಾಸಿಗರಿಗೆ ಜಲಪಾತದ ಸವಿಯನ್ನು ಉಣಬಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.  ಸುಮಾರು 4ದಶಕಗಳಿಂದ ನಿರ್ವಹಿಸಿಕೊಂಡು ಬಂದಿರುವ ಕೆಪಿಸಿಗೆ ಇದು ಹೆಮ್ಮೆ ಮತ್ತು ಹೆಗ್ಗಳಿಕೆಯಾಗಿತ್ತು.

ಆದರೆ, ಈಚೆಗೆ ಜೋಗ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳಿಂದ, ನಿರ್ವಹಣೆ ಹೊಣೆ ಕೆಪಿಸಿಯ ಕೈತಪ್ಪಲಿದೆಯೇ ಎಂಬ ಪ್ರಶ್ನೆ ಈ ಭಾಗದ ಜನರನ್ನು ಕಾಡುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತವನ್ನು ನೋಡಿದವರು ಇಲ್ಲಿನ ಮೈಸೂರು ಬಂಗಲೆಯನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಜಲಪಾತದ ಸಂಪೂರ್ಣ ಸೌಂದರ್ಯವನ್ನು ಸವಿಯಬೇಕಾದರೆ ಮೈಸೂರು ಬಂಗಲೆಯ ಮುಂಭಾಗದಲ್ಲಿ ನಿಂತು ನೋಡಲೇ ಬೇಕು. ಮೈಸೂರು ಬಂಗಲೆಯಂಥ ವೀಕ್ಷಣಾ ಪ್ರದೇಶ ಇರುವ ಏಕೈಕ ಕಾರಣಕ್ಕೆ ಮಾತ್ರ ಜಲಪಾತದ ಅದ್ಭುತ ಸೌಂದರ್ಯವನ್ನು ಪ್ರವಾಸಿಗರು ಸವಿಯಲು ಸಾಧ್ಯ ಎಂಬುದು ಪ್ರವಾಸಿಗರು ಮತ್ತು ಪ್ರಕೃತಿ ಆಸ್ವಾದಕರ ಅಭಿಪ್ರಾಯ.

1886ರಲ್ಲಿ ಮೈಸೂರು ಅರಸರು ಕಟ್ಟಿಸಿರುವ ಈ ಬಂಗಲೆಯಲ್ಲಿ ಮಹಾರಾಜರ ಆದಿಯಾಗಿ, ಬ್ರಿಟೀಷ್ ವೈಸ್‌ರಾಯ್‌ ಗಳು, ಸೇನಾಪತಿಗಳು, ಗಣ್ಯಾತಿಗಣ್ಯರು ಸೇರಿದಂತೆ ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರಿಂದ ಹಿಡಿದು ಮಾಜಿ ರಾಷ್ಟ್ರಪತಿಗಳಾದ ದಿ. ವೆಂಕಟರಾಮನ್ ಅವರೂ ಕೂಡ ಬಂದು ಇಲ್ಲಿನ ಬಂಗಲೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂಬುದು ಈ ಬಂಗಲೆಯ ವಿಶೇಷ. ಇಷ್ಟೊಂದು ಮಹತ್ವಪೂರ್ಣವಾದ ಬಂಗಲೆಯನ್ನು ಸ್ವಾತಂತ್ರ್ಯ ನಂತರ 4ದಶಕಗಳ ಕಾಲ ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡ ಬಂದ ಹೆಗ್ಗಳಿಕೆ ಕೆಪಿಸಿ ಇಲಾಖೆಗೆ ಸೇರಿದೆ. ಆದರೆ ಕೆಪಿಸಿಯ ನಿರ್ವಹಣೆ ಮತ್ತು ಒಡೆತನದಿಂದ ಈ ಬಂಗಲೆ ಕೈ ತಪ್ಪುವ ಲಕ್ಷಣಗಳು ಕಂಡು ಬಂದಿದೆ.

ಸ್ವಾತಂತ್ರ್ಯ ಪೂರ್ವದ ಬ್ರಿಟೀಷರ ಆಳ್ವಿಕೆಯಲ್ಲಿ ಜೋಗ ಜಲಪಾತದ ಕಣಿವೆ ಮುಂಬಯಿ ಪ್ರಾಂತ್ಯ ಮತ್ತು ಮೈಸೂರು ಪ್ರಾಂತ್ಯದ ಗಡಿಭಾಗವಾಗಿದ್ದ ಕಾರಣ ಕಣಿವೆಯ ಎರಡು ದಂಡೆಗಳಲ್ಲಿರುವ ವಿಶ್ರಾಂತಿ ಗೃಹಗಳು 2ಪ್ರಾಂತ್ಯದ ಹೆಸರಿನಲ್ಲಿ ಗುರುತಿಸಲ್ಪಟ್ಟಿತ್ತು. ರಾಜಾ, ರೋರರ್ ಫಾಲ್ಸ್ ಮತ್ತು ಬ್ರಿಟಿಷ್ ಬಂಗಲೆಯನ್ನು ಒಳಗೊಂಡ ಪ್ರದೇಶ ಕಾರವಾರ ಜಿಲ್ಲೆಯ ಗಡಿಗೆ ಸೇರಿದ್ದಾದರೆ, ರಾಕೆಟ್ ರಾಣಿ ಫಾಲ್ಸ್ ಮತ್ತು ಮೈಸೂರು ಬಂಗಲೆಯನ್ನು ಒಳಗೊಂಡ ಪ್ರದೇಶ ಶಿವಮೊಗ್ಗ ಜಿಲ್ಲೆಯ ಗಡಿಗೆ ಸೇರಿದ್ದಾಗಿದೆ. ಮುಂಬೈ ಬಂಗಲೆಯನ್ನು ಬ್ರಿಟಿಷ್‌ ಆಡಳಿತ ನಿರ್ಮಾಣ ಮಾಡಿದ್ದರೆ, ಮೈಸೂರು ಬಂಗಲೆಯನ್ನು ಮಹಾರಾಜರು ಕಟ್ಟಿಸಿದ್ದು ಎಂಬ ಖ್ಯಾತಿಯಿದೆ.

ಸ್ವಾತಂತ್ರ್ಯ ನಂತರ ಮೈಸೂರು ಬಂಗಲೆ ಲೋಕೋಪಯೋಗಿ ಇಲಾಖೆಯ ನಿರ್ವಹಣೆಗೆ ಒಳಪಟ್ಟಿತ್ತು. ಬದಲಾದ ಕಾಲಘಟ್ಟದಲ್ಲಿ ಮೈಸೂರು ಪವರ್ ಕಾರ್ಪೋರೇಷನ್ ಎಂಬ ಅರೆ ಸರ್ಕಾರಿ ಸಂಸ್ಥೆ ಉದಯವಾದಾಗ ಈ ಬಂಗಲೆ ಕಾರ್ಪೋರೇಶನ್ ಒಡೆತನಕ್ಕೆ ವರ್ಗವಾಗಿತ್ತು. ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಆದಾಗ, ಪವರ್ ಕಾರ್ಪೋರೇಷನ್ ಹೆಸರೂ ಕೂಡ  ಕರ್ನಾಟಕ ಪವರ್ ಕಾರ್ಪೋರೇಷನ್ ಎಂದು ಬದಲಾಗಿ ಸದರಿ ಬಂಗಲೆಯನ್ನು ಕೆಪಿಸಿ ಗೆಸ್ಟ್ ಹೌಸ್ ಎಂದು ಕರೆಯಲಾಗುತ್ತಿದೆ.

ಈಚೆಗೆ ನಡೆದ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ ಅಧ್ಯಕ್ಷ ಆರ್.ವಿ. ದೇಶಪಾಂಡೆಯವರ ಅಧ್ಯಕ್ಷತೆ ಮತ್ತು ಪ್ರಾಧಿಕಾರದ ರೂವಾರಿಯಾಗಿರುವ ಕಾಗೋಡು ತಿಮ್ಮಪ್ಪ ಅವರ ಉಪಸ್ಥಿತಿಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಮಂಡಿಸಿರುವ ಅಭಿವೃದ್ಧಿ ಪಥದ ಮಾರ್ಗದಲ್ಲಿರುವ ಪ್ರಮುಖ ಅಂಶಗಳಲ್ಲಿ ಜೋಗ ಪ್ರಾಧಿಕಾರದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲಾಡ್ಜ್‌ಗಳು, ಅತಿಥಿ ಗೃಹಗಳು, ಹೋಟೆಲ್ ಮತ್ತಿತರರ ಪ್ರಮುಖ ಕಟ್ಟಡಗಳನ್ನು ಪ್ರಾಧಿಕಾರದ ನಿರ್ವಹಣಾ ವ್ಯಾಪ್ತಿಗೆ ಒಳಪಡಿಸಬೇಕು  ಎಂಬುದು ಒಂದಾಗಿದೆ.

ಈ ವಿಷಯದ ಮೇಲೆ ಚರ್ಚೆಯಾದಾಗ ಕೆಪಿಸಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಕಾಂಬಳೆ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.  ವಿಷಯದ ಮೇಲೆ ಸಭೆ ಸಹಮತ ಸೂಚಿಸಿ ಸರ್ವಾನುಮತದಿಂದ ಪ್ರಮುಖ ನಿರ್ಣಯಗಳಿಗೆ ಒಪ್ಪಿಗೆ ಪಡೆದಿದೆ. ಈ ನಿಟ್ಟಿನಲ್ಲಿ ಅವಲೋಕನ ನಡೆಸಿದಾಗ ಪ್ರಾಧಿಕಾರದ ಭೌಗೋಳಿಕ ವ್ಯಾಪ್ತಿಯಲ್ಲಿರುವ ಕೆಪಿಸಿ ಗೆಸ್ಟ್ ಹೌಸ್‌ ಕೆಪಿಸಿ ನಿರ್ವಹಣೆಯಿಂದ ಕೈತಪ್ಪಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT