ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ರೈಲು ಮಾರ್ಗಕ್ಕೆ 8ರಂದು ಶಂಕುಸ್ಥಾಪನೆ

ಹೊಸದುರ್ಗ-ಚಿಕ್ಕಜಾಜೂರು ಕಾಮಗಾರಿ
Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ರಸ್ತೆ-ಚಿಕ್ಕಜಾಜೂರು ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಇದೇ 8ರಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮೈಸೂರು ರಾಜ್ಯ ರೈಲ್ವೆಯು 1889ರಲ್ಲಿ ಬೆಂಗಳೂರು-ಅರಸೀಕೆರೆ-ಬೀರೂರು-ದಾವಣಗೆರೆ-ಹುಬ್ಬಳ್ಳಿ ನಡುವೆ ಮೀಟರ್‌ಗೇಜ್ ಮಾರ್ಗವನ್ನು ನಿರ್ಮಿಸಿತ್ತು. ಈ ಮಾರ್ಗ 1994-95ರಲ್ಲಿ ಬ್ರಾಡ್‌ಗೇಜ್‌ಗೆ ಪರಿವರ್ತನೆಯಾಯಿತು. ಅರಸೀಕೆರೆ-ಚಿಕ್ಕಜಾಜೂರು ನಡುವೆ ಸರಕು ಸಾಗಣೆ ಪ್ರಮಾಣ ಹೆಚ್ಚಾಗಿರುವುದರಿಂದ ರೈಲ್ವೆ ಇಲಾಖೆಯು ಹಂತ ಹಂತವಾಗಿ ಜೋಡಿ ಮಾರ್ಗ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

ಈ ಎರಡು ರೈಲು ನಿಲ್ದಾಣಗಳ ನಡುವಿನ 29.65 ಕಿ.ಮೀ ಕಾಮಗಾರಿಗೆ ರೂ 203.40 ಕೋಟಿ ವಿನಿಯೋಗಿಸಲಿದ್ದು ಎರಡೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜುಲೈನಲ್ಲಿ ಈ ಯೋಜನೆಗೆ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ ಅರಸೀಕೆರೆ-ಅಜ್ಜಂಪುರ ನಡುವಿನ ಕಾಮಗಾರಿ ಪೂರ್ಣಗೊಂಡಿದೆ. ಅಜ್ಜಂಪುರ-ಹೊಸದುರ್ಗ ರಸ್ತೆವರೆಗಿನ ಕಾಮಗಾರಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದೆ.

ಹೊಸದುರ್ಗ ರಸ್ತೆ-ಚಿಕ್ಕಜಾಜೂರು ನಡುವಿನ ಕಾಮಗಾರಿ  ಪೂರ್ಣವಾದರೆ, ಮಂಗಳೂರಿಗೆ ಅದಿರು ಮತ್ತು ಅಲ್ಲಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲು ಇದು ಪ್ರಮುಖ ಮಾರ್ಗವಾಗಲಿದೆ. ಈ ಯೋಜನೆಯ ಅಂಗವಾಗಿ ಹೊಸದುರ್ಗ ರಸ್ತೆ, ಚಿಕ್ಕಜಾಜೂರು, ರಾಮಗಿರಿ ಹಾಗೂ ಹಾಲಕೆರೆ ರೈಲು ನಿಲ್ದಾಣಗಳಿಗೆ ಹೊಸ ಕಟ್ಟಡಗಳು ತಲೆಎತ್ತಲಿವೆ.  ಜತೆಗೆ ಪ್ರಯಾಣಿಕರು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 11 ಕಾವಲುರಹಿತ ಹಾಗೂ ಎರಡು ಕಾವಲುಗಾರರ ಸಹಿತ ಲೆವಲ್ ಕ್ರಾಸಿಂಗ್‌ಗಳು ಈ ಮಾರ್ಗದಲ್ಲಿ ಬರಲಿವೆ. ಅಲ್ಲದೇ, ಚಿಕ್ಕಜಾಜೂರಿನಲ್ಲಿ ಸೌರಶಕ್ತಿ ಮತ್ತು ಪವನ ವಿದ್ಯುತ್ ಘಟಕ ಅಳವಡಿಸುವ ಯೋಜನೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ಶಂಕುಸ್ಥಾಪನೆ ಸಮಾರಂಭ ಹೊಸದುರ್ಗ ತಾಲ್ಲೂಕಿನ ಮಲ್ಲಪ್ಪನಹಳ್ಳಿಯ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT