ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್: ಕಾಂಗ್ರೆಸ್‌ನಲ್ಲಿ ಅಸಮಾಧಾನ

Last Updated 31 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ.   ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಂಪು ಮತ್ತು ವೀರಶೈವ ಮುಖಂಡರು `ತಮ್ಮವರಿಗೆ~ ಅವಕಾಶ ದೊರೆಯದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.  ತಮ್ಮ ಬೇಡಿಕೆಯನ್ನು ಈಡೇರಿಸದಿರುವುದು ಗುಂಪಿನಲ್ಲಿರುವವರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಿ ಪ್ರಕಟವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, `ನಾನು ಟಿಕೆಟ್‌ಗಾಗಿ ಒತ್ತಾಯಿಸಿರಲಿಲ್ಲ. ಆದರೆ, ಪಕ್ಷದ ರಾಜ್ಯ ಉಸ್ತುವಾರಿ ಮಧುಸೂದನ ಮಿಸ್ತ್ರಿ ಅವರು ಚುನಾವಣೆಯಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದರು. ಈಗ  ಈಡೇರಿಸಿಲ್ಲ. ಈ ಬೆಳವಣಿಗೆಯಿಂದ  ನೋವಾಗಿದೆ. ನನಗಿಂತಲೂ ಸಿದ್ದರಾಮಯ್ಯ ಅವರಿಗೆ ಹೆಚ್ಚು ನೋವಾಗಿದೆ~ ಎಂದು ಹೇಳಿದರು.

ತುರ್ತು ಸಭೆ: ಸಿದ್ದರಾಮಯ್ಯ ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ತುರ್ತು ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಇಬ್ರಾಹಿಂ, ಶಾಸಕ ಡಾ.ಎಚ್.ಸಿ.ಮಹದೇವಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೈಕಮಾಂಡ್‌ಗೆ ತಮ್ಮ ಅಸಮಾಧಾನವನ್ನು ತಲುಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ವೀರಶೈವರಿಗೂ ಅಸಮಾಧಾನ: ಇತ್ತೀಚೆಗೆ ನಡೆದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಗುರುವಂದನೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶೇಷ ಆಸಕ್ತಿ ವಹಿಸಿ ಭಾಗವಹಿಸಿದ್ದರು. ಇದರಿಂದ ಈ ಬಾರಿ ಪರಿಷತ್ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿ ವೀರಶೈವ ಮುಖಂಡರು ಇದ್ದರು. ಆದರೆ, ಈ ಸಮುದಾಯದ ಒಬ್ಬರಿಗೂ ಟಿಕೆಟ್ ದೊರೆಯದಿರುವ ಬಗ್ಗೆ ವೀರಶೈವ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಮಾಜಿ ಶಾಸಕ ಕೈಲಾಶನಾಥ್ ಪಾಟೀಲ್, `ಗುರುವಂದನೆ ಸಮಾರಂಭದಲ್ಲಿ ಸೋನಿಯಾ ಅವರು ಪಾಲ್ಗೊಂಡ ಬಳಿಕ ಪಕ್ಷದಲ್ಲಿ ವೀರಶೈವರಿಗೆ ಪ್ರಾತಿನಿಧ್ಯ ದೊರೆಯಬಹುದು ಎಂಬ ಭರವಸೆ ಮೂಡಿತ್ತು. ಕಾಂಗ್ರೆಸ್‌ನಿಂದ ದೂರ ಸರಿದಿರುವ ವೀರಶೈವರನ್ನು ಮತ್ತೆ ಪಕ್ಷದತ್ತ ಸೆಳೆಯಲು ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿದಿದ್ದೆವು. ಆದರೆ, ಈಗ ಎಲ್ಲವೂ ಸುಳ್ಳಾಗಿದೆ~ ಎಂದರು.

`ವೀರಶೈವರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಉದ್ದೇಶ ಹೈಕಮಾಂಡ್‌ಗೆ ಇದ್ದಿದ್ದರೆ ಸಮುದಾಯದ ಒಬ್ಬರಿಗಾದರೂ ಟಿಕೆಟ್ ನೀಡುತ್ತಿದ್ದರು. ಸೋನಿಯಾ ಅವರು ನಮ್ಮ ಸಮುದಾಯದತ್ತ ವಿಶೇಷ ಆಸಕ್ತಿ ಹೊಂದಿದ್ದಾರೆ ಎಂಬುದಾಗಿ ತಿಳಿದಿದ್ದ ಎಲ್ಲರಿಗೂ ಈಗ ಆಘಾತವಾಗಿದೆ. ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಾಂಗ್ರೆಸ್‌ನಲ್ಲಿರುವ ವೀರಶೈವ ಮುಖಂಡರೆಲ್ಲರೂ ಶುಕ್ರವಾರ ಬೆಂಗಳೂರಿನಲ್ಲಿ ಸಭೆ ಸೇರಿ ಈ ಕುರಿತು ಚರ್ಚೆ ನಡೆಸುತ್ತೇವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT