ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಸ್ಟ್‌ ಮೂಲಕ ಜಿಲ್ಲೆಯ ಸಮಸ್ಯೆಗಳ ಅರಿವು

Last Updated 12 ಏಪ್ರಿಲ್ 2014, 7:14 IST
ಅಕ್ಷರ ಗಾತ್ರ

ಶಿರಸಿ: ಹಳಿಯಾಳದ ವಿಆರ್‌ಡಿಎಂ ಟ್ರಸ್ಟಿನ ಟ್ರಸ್ಟಿಯಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ ದೇಶಪಾಂಡೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಜನರ ಬಳಿ ಮತ ಯಾಚಿಸುತ್ತಿದ್ದಾರೆ.

ರಾಜಕೀಯದಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಪುತ್ರ ಪ್ರಶಾಂತ ದೇಶಪಾಂಡೆ ಪಕ್ಷದ ಎಲ್ಲರನ್ನೂ ಸೇರಿಸಿಕೊಂಡು ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಪ್ರಚಾರದ ನಡುವೆ ‘ಪ್ರಜಾವಾಣಿ’ ಜೊತೆ ಅವರು ಕೆಲ ಕಾಲ ಮಾತನಾಡಿದರು.

* ಪ್ರಶ್ನೆ: ಚುನಾವಣೆಯಲ್ಲಿ ಗೆಲುವು ಸಾಧಿಸಲು ಪೂರಕ ಅಂಶಗಳು ಏನು ?
 ಉತ್ತರ:
ಕೇಂದ್ರದ ಯುಪಿಎ ಸರ್ಕಾರದ ಜನಪರ ಯೋಜನೆಗಳಾದ ಉದ್ಯೋಗ ಖಾತ್ರಿ, ಬುಡಕಟ್ಟು ಹಾಗೂ ಇತರ ಅರಣ್ಯವಾಸಿಗಳ ಕಾಯ್ದೆ, ರಾಜ್ಯ ಸರ್ಕಾರದ ಆಹಾರ ಭದ್ರತೆ, ಕ್ಷೀರ ಭಾಗ್ಯ, ಇನ್ನಿತರ ಕಾರ್ಯಕ್ರಮಗಳು ಜನರ ಮನ ಗೆದ್ದಿವೆ. ಪಕ್ಷದ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿದ್ದು, ಕಾಂಗ್ರೆಸ್‌ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಒಗ್ಗಟ್ಟಿನ ಬಲದಿಂದ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ.

* ನಿಮ್ಮ ಗೆಲುವಿನಿಂದ ಜಿಲ್ಲೆಯಲ್ಲಿ ತಂದೆ–ಮಗನ ಆಡಳಿತ ಆಗಬಹುದೆಂಬ ಆತಂಕ ಜನರಲ್ಲಿದೆ. ಇದು ನಿಮಗೆ ಹಿನ್ನಡೆಯಾಗಬಹುದೇ ?
ಆರ್‌.ವಿ.ದೇಶಪಾಂಡೆ ಮಗನಾಗಿ ನನ್ನನ್ನು ನೋಡುವುದು ಸಹಜ. ಆದರೆ ಇನ್ನೊಂದು ಮುಖದಲ್ಲಿ ನನ್ನ ವ್ಯಕ್ತಿತ್ವ ನೋಡಿ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿರುವ ನಾನು 2009ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿ ಆಗಿದ್ದೆ. ಟಿಕೆಟ್‌ ವಂಚಿತನಾದಾಗ ತಂದೆ–ಮಗ ಎಂಬ ಮಾತು ಬಂದಿತ್ತಾ? ಈ ಬಾರಿ ಚುನಾವಣೆಯಲ್ಲಿ ನನ್ನ ಹೆಸರು ಪ್ರಸ್ತಾವಕ್ಕೆ ಬಂದಾಗ ಜಿಲ್ಲೆಯ ಎಲ್ಲ ನಾಯಕರು ಪ್ರೋತ್ಸಾಹಿಸಿದ್ದಾರೆ. ಕೇವಲ ನನ್ನನ್ನು ತಂದೆಯ ಮಗನಾಗಿ ನೋಡಬೇಡಿ. ಸಾಧನೆ ಮಾಡಲು ಅವಕಾಶ ಕೊಡಿ. ಐದು ವರ್ಷಗಳಲ್ಲಿ ನಾನು ಏನು ಮಾಡಬಲ್ಲೆ ಎಂಬುದನ್ನು ತೋರಿಸುವೆ. ತಂದೆಯ ಮಗ ಎನ್ನುವ ಹೆಮ್ಮೆ ಇದೆ. ಅದು ನನಗೆ ಹಿನ್ನಡೆ ಆಗದು.

* ಪಕ್ಷದ ಆಂತರಿಕ ಭಿನ್ನಮತ ನಿಮಗೆ ತೊಡಕಾಗಬಹುದೇ? ಇನ್ನೊಬ್ಬ ಟಿಕೆಟ್‌ ಆಕಾಂಕ್ಷಿ ನಿವೇದಿತ್ ಆಳ್ವ ಪ್ರಚಾರದಿಂದ ದೂರ ಇದ್ದಿದ್ದು ಯಾಕೆ ?
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತಿದ್ದೇವೆ. ತಾಲ್ಲೂಕು ಮಟ್ಟದ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಸ್ಥಳೀಯ ಪ್ರಮುಖರು ಅಲ್ಲಿ ಭಾಗವಹಿಸುತ್ತಾರೆ.

ನಿವೇದಿತ್‌ ಆಳ್ವ ಅವರಿಗೆ ಪಕ್ಷದ ಬೇರೆ ಜವಾಬ್ದಾರಿಗಳಿವೆ. ಒಂದೆರಡು ದಿನಗಳಲ್ಲಿ ಅವರು ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ. ಪಕ್ಷದಲ್ಲಿ ಭಿನ್ನಮತ ಎನ್ನುವುದು ಮಾಧ್ಯಮದವರು ಕೇಳುವ ಪ್ರಶ್ನೆ ಅಷ್ಟೆ.

* ಚಿನ್ನದ ಲೋಟದಲ್ಲಿ ಹಾಲು ಕುಡಿದ ಬೆಳೆದ ಪ್ರಶಾಂತ ಅವರಿಗೆ ಜನಸಾಮಾನ್ಯರ ಸಮಸ್ಯೆ ಅರಿವಾಗಬಹುದೇ ಎಂಬ ಭಯ ಜನಸಾಮಾನ್ಯರಲ್ಲಿದೆ, ಏನೆನ್ನುತ್ತೀರಿ ?
ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದು ತಪ್ಪಾ ? ಅದು ದೇವರು ಕೊಟ್ಟ ಆಶೀರ್ವಾದ. ಯಾಕೆ ಇದನ್ನು ನೆಗೆಟಿವ್ ಆಗಿ ನೋಡಬೇಕು. ಪಾಸಿಟಿವ್‌ ಆಗಿ ಇದನ್ನು ಬಳಸಿಕೊಳ್ಳಲು ಸಾಧ್ಯವಿದೆ. ನಾವು ಜನರ ಸಮಸ್ಯೆ ಅರಿತುಕೊಳ್ಳಬೇಕು. ನಮ್ಮ ಟ್ರಸ್ಟ್‌ ಮೂಲಕ ಜಿಲ್ಲೆಯ ಸಾಕಷ್ಟು ಬಡವರಿಗೆ ಶಸ್ತ್ರಚಿಕಿತ್ಸೆ, ವಿದ್ಯಾರ್ಥಿವೇತನ, ಸ್ವ ಉದ್ಯೋಗದ ನೆರವು ನೀಡಲಾಗಿದೆ. ಇದಕ್ಕಾಗಿ ಸುತ್ತಾಡಿದಾಗ ಜಿಲ್ಲೆಯ ಸಮಸ್ಯೆಯೂ ಅರಿವಾಗಿದೆ.

* ದೇಶಪಾಂಡೆ ಪಕ್ಷದಲ್ಲಿ ಉಳಿದ ನಾಯಕರ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ ಎಂಬ ಬಲವಾದ ಮಾತು ಪಕ್ಷದಲ್ಲಿದೆ, ನಿಜವೇ ?
ಈ ಮಾತನ್ನು ಒಪ್ಪಲಾಗದು. ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲ ಸಮುದಾಯದ ನಾಯಕರಿದ್ದಾರೆ. ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಇರಬಹುದು, ಆದರೆ ಒಬ್ಬ ಮನುಷ್ಯನಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಕಾರ್ಯಕರ್ತರ ಬಲ ಇದ್ದಾಗ ಮಾತ್ರ ಪಕ್ಷ ಬೆಳೆಯುತ್ತದೆ. ಭೀಮಣ್ಣ ನಾಯ್ಕ, ಶಾಂತಾರಾಮ ಹೆಗಡೆ, ಶಿವರಾಮ ಹೆಬ್ಬಾರ, ಮಂಕಾಳು ವೈದ್ಯ, ಜೆ.ಡಿ.ನಾಯ್ಕ ಅನೇಕ ನಾಯಕರು ಪಕ್ಷದಲ್ಲಿದ್ದಾರೆ.

* ನೀವು ತಂದೆಯಿಂದ ಕಲಿತ ಪಾಠ ಏನು?
ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು, ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಆರ್‌.ವಿ.ದೇಶಪಾಂಡೆ ಜಿಲ್ಲೆ ಯಲ್ಲಿ ಕೆಲಸ ಮಾಡದಿದ್ದರೆ ಜನ ಅವರನ್ನು ನಿರಂತರವಾಗಿ ಆಯ್ಕೆ ಮಾಡುತ್ತಿರಲಿಲ್ಲ. ಅವರ ಸಾಧನೆ, ಅನುಭವ ನನಗೆ ಹೆಮ್ಮೆ ಇದೆ.

* ಚುನಾವಣೆಯಲ್ಲಿ ಗೆದ್ದರೆ ಮೊದಲ ಆದ್ಯತೆ ಏನು ?
ಪ್ರಧಾನಮಂತ್ರಿ ಗ್ರಾಮ ಸಡಕ್‌ ಸೇರಿದಂತೆ ಜಿಲ್ಲೆಗೆ ಅನುಕೂಲವಾಗುವ ಅನೇಕ ಯೋಜನೆಗಳು ಕೇಂದ್ರ ಸರ್ಕಾರದಲ್ಲಿವೆ. ಇವು ನಮ್ಮ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಕೇಂದ್ರದಲ್ಲಿರುವ ಎಲ್ಲ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯ ಜನರಿಗೆ ತಲುಪಿಸುವುದು ತಕ್ಷಣಕ್ಕೆ ಆಗಬೇಕಾದ ಕೆಲಸ.

ಸಿಆರ್‌ಝಡ್‌ ಸಮಸ್ಯೆ ಪರಿಹಾರ, ಸಂಪರ್ಕ ಸಾಧನ, ಪರಿಸರ ಸ್ನೇಹಿ ಉದ್ಯೋಗ, ವಿಮಾನ ನಿಲ್ದಾಣ ಮುಂತಾದ ದೀರ್ಘಕಾಲೀನ ಯೋಜನೆಗಳನ್ನು ಉತ್ತರಕನ್ನಡ ಜಿಲ್ಲೆಗೆ ತರುವ ಕನಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT