ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಅಕ್ರಮ ಗಣಿಗಾರಿಕೆಯ ಸಮಗ್ರ ತನಿಖೆ: ಸಚಿವ ಸಿ.ಪಿ. ಯೋಗೇಶ್ವರ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರು ಕನಕಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗ್ರಾನೈಟ್ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಬುಧವಾರ ಇಲ್ಲಿ ತಿಳಿಸಿದರು.

`ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರು ಈ ಕೃತ್ಯ ಎಸಗುತ್ತಿದ್ದಾರೆ. ಇದಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರವೂ ಇದೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ನೇರ ಆರೋಪ ಮಾಡಿದರು.

`ಅರಣ್ಯದ ಮಧ್ಯ ಭಾಗದಲ್ಲೇ ಗಣಿಗಾರಿಕೆ ನಡೆಸುತ್ತಿದ್ದರೂ ದಾಖಲೆಗಳಲ್ಲಿ ಅದು ಪಟ್ಟಾ ಭೂಮಿ ಎನ್ನುವ ಹಾಗೆ ತಿದ್ದಲಾಗಿದೆ. ಗುಣಮಟ್ಟದ ಗ್ರಾನೈಟ್ ಇರುವುದು ಖಚಿತವಾಗುತ್ತಿದ್ದಂತೆ ಸರ್ವೆ ನಂಬರ್‌ಗಳನ್ನೇ ಬದಲಿಸಲಾಗುತ್ತಿದೆ. ಜಿಪಿಎಸ್ ಮೂಲಕ ನೋಡಿದರೂ ಈ ಅಕ್ರಮ ಪತ್ತೆ ಮಾಡಲು ಸಾಧ್ಯವಾಗದಷ್ಟು ಚಾಕಚಕ್ಯತೆಯಿಂದ ಈ ಕೃತ್ಯ ಎಸಗಲಾಗಿದೆ. ಈ ಕುರಿತು ಗಣಿ, ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಅವರಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ~ ಎಂದು ಅವರು ವಿವರಿಸಿದರು.

`ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಆದಕಾರಣ ಇದರ ತನಿಖೆಯನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅರಣ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗುವುದು. ಯಾವ ಬೆದರಿಕೆಗಳಿಗೂ ಜಗ್ಗುವುದಿಲ್ಲ~ ಎಂದು ಹೇಳಿದರು.

`ಕನಕಪುರ ವ್ಯಾಪ್ತಿಯಲ್ಲಿ ಗ್ರಾನೈಟ್ ಗಣಿಗಾರಿಕೆಗೆ 351 ಸಂಸ್ಥೆಗಳು ಪರವಾನಗಿ ಪಡೆದಿವೆ. ಆದರೆ, ಪ್ರತಿನಿತ್ಯದ ಗ್ರಾನೈಟ್ ಸಾಗಣೆಗೆ ಅನುಮತಿ ಪಡೆಯುತ್ತಿರುವುದು ಕೇವಲ 23 ಸಂಸ್ಥೆಗಳು. ಇವಷ್ಟೇ ಗಣಿಗಾರಿಕೆಯಲ್ಲಿ ತೊಡಗಿರುವುದು ದಾಖಲೆಗಳಿಂದ ಗೊತ್ತಾಗುತ್ತದೆ. ವಾಸ್ತವವಾಗಿ ಸುಮಾರು 200 ಕಡೆ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿದೆ. 15ಕ್ಕೂ ಹೆಚ್ಚು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು, ಇದರಲ್ಲಿ ಶಿವಕುಮಾರ್ ಮತ್ತು ಸುರೇಶ್ ನೇರವಾಗಿ ಭಾಗಿಯಾಗಿದ್ದಾರೆ~ ಎಂದು ಸಚಿವರು ಆರೋಪಿಸಿದರು.

ಇದು ಸೇಡಿನ ಕ್ರಮವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಅರಣ್ಯದಲ್ಲಿ ಅಕ್ರಮ ನಡೆದರೆ ಅದನ್ನು ತಡೆಯುವುದು ಸಚಿವನಾಗಿ ನನ್ನ ಕರ್ತವ್ಯ. ನಾನು ಆ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ. ಇದು ಸೇಡಿನ ಕ್ರಮವಲ್ಲ~ ಎಂದು ಸ್ಪಷ್ಟಪಡಿಸಿದರು.

`ಅಕ್ರಮ ತಡೆಯುವಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಇಡೀ ಇಲಾಖೆಯೇ ನಿಷ್ಕ್ರಿಯಗೊಂಡಿದೆ. ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಅರಣ್ಯದಲ್ಲಿನ ಅಕ್ರಮ ಗಣಿಗಾರಿಕೆಯಿಂದ ಎಂಬುದು ಸ್ಥಳಕ್ಕೆ ಭೇಟಿ ನೀಡಿದಾಗ ಗೊತ್ತಾಯಿತು. ದಟ್ಟಾರಣ್ಯದಲ್ಲೂ ಗಣಿಗಾರಿಕೆ ನಡೆಯುತ್ತಿದೆ. ಅದು ಹೇಗೆ ಕಾನೂನುಬದ್ಧ ಆಗಿರಲು ಸಾಧ್ಯ~ ಎಂದು ಸಚಿವರು ಪ್ರಶ್ನಿಸಿದರು.

`ಇತ್ತೀಚೆಗೆ ಜಿಲ್ಲಾಧಿಕಾರಿ ದಾಳಿ ನಡೆಸಿ, ಹತ್ತು ಚಕ್ರದ ಲಾರಿಗಳಲ್ಲಿ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದನ್ನು ಪತ್ತೆಹಚ್ಚಿದ್ದಾರೆ. ಈಗ ಮೇಲಿಂದ ಮೇಲೆ ದಾಳಿ ನಡೆಸುತ್ತಿದ್ದು, ಅಕ್ರಮ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಮಂಗಳವಾರದ ನಂತರ ಕೆಲವು ಕಡೆ ಗಣಿಗಾರಿಕೆ ಸ್ಥಗಿತಗೊಂಡಿದೆ. ಅದನ್ನು ಶಾಶ್ವತವಾಗಿ ನಿಲ್ಲಿಸುವುದಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚಿಂತನೆ ನಡೆದಿದೆ~ ಎಂದು ಹೇಳಿದರು.

ಪರ್ಯಾಯ ಸರ್ಕಾರ: `ಕನಕಪುರ ತಾಲ್ಲೂಕಿನಲ್ಲಿ ಪರ್ಯಾಯ ಸರ್ಕಾರವೇ ಇದೆ. ಅಲ್ಲಿ ಯಾವ ಕಾನೂನು ಕಟ್ಟಲೆಗಳಿಗೂ ಬೆಲೆ ಇಲ್ಲ. 25 ವರ್ಷಗಳಿಂದ ಕನಕಪುರ ತಾಲ್ಲೂಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಶಿವಕುಮಾರ್ ಮತ್ತು ಅವರ ಕುಟುಂಬದವರು ಹೇಳಿದಂತೆಯೇ ಎಲ್ಲವೂ ನಡೆಯುತ್ತಿದೆ. ಅಲ್ಲಿನ ಜನರು ಯಾವುದೇ ಸರ್ಕಾರಿ ಸವಲತ್ತು ಪಡೆಯಬೇಕೆಂದರೂ ಅರ್ಜಿಯನ್ನು ಮೊದಲು ಶಿವಕುಮಾರ್ ಟ್ರಸ್ಟ್‌ಗೆ ಕೊಡಬೇಕು.

ನಂತರ ಅಲ್ಲಿಂದ ಸೌಲಭ್ಯ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಹಶೀಲ್ದಾರ್ ಕಚೇರಿ ಒಂದು ರೀತಿ ಟ್ರಸ್ಟ್‌ನ ಕಚೇರಿಯಾಗಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಯೋಗೇಶ್ವರ್ ದೂರಿದರು.

`ಕನಕಪುರದಲ್ಲಿ ತಹಶೀಲ್ದಾರ್‌ಗಳು ಇರುವುದಕ್ಕೇ ಇಷ್ಟಪಡುತ್ತಿಲ್ಲ. ಇತ್ತೀಚೆಗೆ ವರ್ಗವಾಗಿದ್ದ ಮಹಿಳಾ ತಹಶೀಲ್ದಾರರೊಬ್ಬರು ಹೆದರಿ ಪುನಃ ಅತ್ತ ಕಡೆಯೇ ಹೋಗಿಲ್ಲ.

ಈಗ ತಾತ್ಕಾಲಿಕವಾಗಿ ಒಬ್ಬರನ್ನು ನಿಯೋಜಿಸಲಾಗಿದೆ. ಯಾರಿಗೂ ಅಲ್ಲಿ ಕಾನೂನು ಪ್ರಕಾರ ಕೆಲಸ ಮಾಡಲು ಅವಕಾಶವನ್ನೇ ನೀಡುತ್ತಿಲ್ಲ~ ಎಂದು ಆರೋಪಿಸಿದರು.

ಸಮೀಕ್ಷೆಗೆ ಸೂಚನೆ: ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಆಗಿರುವ ನಷ್ಟ ಎಷ್ಟು? ಈ ಕುರಿತು ಸಮೀಕ್ಷೆ ಮಾಡಿ 15 ದಿನಗಳಲ್ಲಿ ವರದಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಮುಖ್ಯಮಂತ್ರಿ ಜತೆಗೂ ಚರ್ಚಿಸಿರುವುದಾಗಿ ಹೇಳಿದರು.

`ಗಣಿಗಾರಿಕೆ ನಡೆಯುತ್ತಿರುವ ಕನಕಪುರ ತಾಲ್ಲೂಕಿನ ಹಲವು ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಕೆಲವರು ಬೆದರಿಕೆ ಕೂಡ ಹಾಕಿದರು. ಕೆಲವು ಕಡೆ ಪ್ರವೇಶಕ್ಕೇ ನಿರಾಕರಿಸಿದರು.
ಹೇರಂದಪ್ಪನಹಳ್ಳಿಯಲ್ಲಿ ರಸ್ತೆಯನ್ನೇ ಅಗೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.

 ಆ ಸಂದರ್ಭದಲ್ಲಿ ನನ್ನ ಜೊತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಇದ್ದವರು ವಾಹನದಿಂದಲೇ ಇಳಿಯಲಿಲ್ಲ.
ಹೀಗಾಗಿ ಹೆಚ್ಚಿನ ಭದ್ರತೆಯೊಂದಿಗೆ ಮತ್ತೊಮ್ಮೆ ಎಲ್ಲ ಪ್ರದೇಶಗಳಿಗೂ ಭೇಟಿ ನೀಡಿ, ಅಕ್ರಮ ಪತ್ತೆ ಹಚ್ಚಲಾಗುವುದು. ಯಾವ ಬೆದರಿಕೆಗಳಿಗೂ ಹೆದರುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT