ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಯುಗಕ್ಕೆ ಸರಿದ ಸಿನಿಮೋತ್ಸವ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ಪರಿಕರಗಳ ತಯಾರಕ ಕೋಡಕ್ ಕಂಪೆನಿ ತನ್ನ ಫಿಲಂ ರೋಲ್ ಉತ್ಪಾದನೆ ಸ್ಥಗಿತಗೊಳಿಸಿರುವುದು ಹಳೆಯ ಸುದ್ದಿ. ಇನ್ನೊಂದೆರಡು ತಿಂಗಳಲ್ಲಿ ಅದರ ಸಂಗ್ರಹದಲ್ಲಿರುವ ರೋಲ್‌ಗಳು ಸಂಪೂರ್ಣ ಖರ್ಚಾಗಲಿವೆ. ಅಲ್ಲಿಗೆ ಚಿತ್ರ ಜಗತ್ತು ಸೆಲ್ಯುಲಾಯ್ಡ ಯುಗದಿಂದ ಸಂಪೂರ್ಣವಾಗಿ ಡಿಜಿಟಲ್ ಯುಗಕ್ಕೆ ಸರಿಯಲಿದೆ. ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೇಲೂ ಈ ಮನ್ವಂತರ ಪರಿಣಾಮ ಬೀರಿದೆ.

ಉತ್ಸವದಲ್ಲಿ ಸುಮಾರು 160 ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಅವುಗಳಲ್ಲಿ 120 ಚಿತ್ರಗಳು ಡಿಜಿಟಲ್ ಸ್ವರೂಪದಲ್ಲಿವೆ. ಬ್ಲೂರೇ ಡಿವಿಡಿಗಳು, ಡಿಸಿಪಿಗಳು (ಡಿಜಿಟಲ್ ಸಿನಿಮಾ ಪ್ಯಾಕೇಜ್) ಕ್ರಮೇಣ `ಪ್ರಿಂಟ್' ಜಾಗದಲ್ಲಿ ನೆಲೆಯೂರುತ್ತಿವೆ. ಕಳೆದ ಬಾರಿಯ ಚಿತ್ರೋತ್ಸವಕ್ಕೆ ಹೋಲಿಸಿದರೆ ಡಿ-ಸಿನಿಮಾಗಳ ಸಂಖ್ಯೆ ದುಪ್ಪಟ್ಟಾಗಿದೆ.

ಈ ಬದಲಾವಣೆ ಕುರಿತಂತೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಉತ್ಸವದ ಕಲಾತ್ಮಕ ನಿರ್ದೇಶಕ ಎಚ್.ಎನ್. ನರಹರಿ ರಾವ್, `ಇದು ಜಗತ್ತಿನ ಎಲ್ಲ ಸಿನಿಮೋತ್ಸವಗಳಲ್ಲಿ ನಡೆಯುತ್ತಿರುವ ವಿದ್ಯಮಾನ. ಕಳೆದ ವರ್ಷ ಗೋವಾದಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿಜಿಟಲ್ ಪ್ರತಿಗಳನ್ನು ನಿರಾಕರಿಸಲಾಗಿತ್ತು. ಈ ಬಾರಿ ಅಲ್ಲಿ ತದ್ವಿರುದ್ಧ ಸ್ಥಿತಿ. ಪ್ರಿಂಟ್‌ಗಳು ಸಂಪೂರ್ಣ ಮಾಯವಾಗುವ ಕಾಲ ದೂರ ಉಳಿದಿಲ್ಲ' ಎನ್ನುತ್ತಾರೆ.

ಸಿನಿಮೋತ್ಸವಕ್ಕೆ ಡಿಜಿಟಲ್ ಚಿತ್ರಗಳನ್ನು ಕಳಿಸುವಲ್ಲಿ ಕನ್ನಡ ಚಿತ್ರ ತಯಾರಕರೂ ಹಿಂದೆ ಬಿದ್ದಿಲ್ಲ. ಪ್ರದರ್ಶನವಾಗುತ್ತಿರುವ ಕನ್ನಡ ಚಿತ್ರಗಳಲ್ಲಿ ಅರ್ಧದಷ್ಟು ಡಿಜಿಟಲ್ ರೂಪದಲ್ಲಿವೆ. ಕಳೆದ ಸಿನಿಮೋತ್ಸವಗಳ ಕನ್ನಡ ವಿಭಾಗದಲ್ಲಿ ಅಲ್ಲೊಂದು ಇಲ್ಲೊಂದು ಡಿಜಿಟಲ್ ಚಿತ್ರಗಳಿದ್ದವು ಎಂಬುದು ಗಮನಾರ್ಹ.

ಪ್ರಿಂಟ್ ಯುಗದಲ್ಲಿ ಸಿನಿಮೋತ್ಸವಗಳ ಸಂಘಟನೆ ಸವಾಲಾಗಿತ್ತು. ಮುಖ್ಯವಾಗಿ 25ರಿಂದ 40 ಕಿಲೋ ತೂಕದ ಪ್ರಿಂಟ್‌ಗಳನ್ನು ಜಗತ್ತಿನ ಮೂಲೆ ಮೂಲೆಗಳಿಂದ ತರಿಸಿಕೊಳ್ಳಬೇಕಿತ್ತು. ವಿಮಾನದಲ್ಲಿ ಅವುಗಳನ್ನು ಆಮದು ಮಾಡಿಕೊಳ್ಳಲು ಹಾಗೂ ಸುರಕ್ಷಿತವಾಗಿ ಮರಳಿಸಲು ಸುಮಾರು ಐವತ್ತು ಸಾವಿರ ರೂಪಾಯಿ ಖರ್ಚಾಗುತ್ತಿತ್ತು. ಅಲ್ಲದೆ ಗಾತ್ರದಲ್ಲಿ ದೊಡ್ಡದಾಗಿರುತ್ತಿದ್ದ ಅವುಗಳನ್ನು ಸಂಗ್ರಹಿಸಿಡುವುದು ಕೂಡ ದೊಡ್ಡ ಸಮಸ್ಯೆಯಾಗಿತ್ತು.

ನಷ್ಟಕ್ಕೆ ತಡೆ: ಹಳೆಯ ಚಿತ್ರಗಳಾಗಿದ್ದರೆ ಅವುಗಳನ್ನು ಕಾಪಾಡಲು ಸಂಘಟಕರು ತಮ್ಮ ಸಮಯ  ಮೀಸಲಿಡಬೇಕಿತ್ತು. ಕೆಲವು ಪ್ರಿಂಟ್‌ಗಳು ಪ್ರದರ್ಶನದ ವೇಳೆ ಸುಟ್ಟು ಹೋಗಿದ್ದೂ ಇದೆ. ಆದರೆ ಡಿಜಿಟಲ್ ತಂತ್ರಜ್ಞಾನ ಇಂತಹ ಸಮಸ್ಯೆಗಳನ್ನು ನಿವಾರಿಸಿದೆ. ಸಾಗಾಟ, ಸಂಗ್ರಹದಲ್ಲಿ ಮಾತ್ರವಲ್ಲ ರೆಸಲ್ಯೂಷನ್ ನಷ್ಟವಾಗದಂತೆ ಚಿತ್ರಗಳನ್ನು ಪ್ರದರ್ಶಿಸುವುದು ಸುಲಭವಾಗಿದೆ.

ಪ್ರಿಂಟ್ ಚಿತ್ರಗಳನ್ನು ಎಷ್ಟು ಬಾರಿ ಬೇಕಾದರೂ ಪ್ರದರ್ಶಿಸಬಹುದಿತ್ತು. ಆದರೆ ಈಗ ಅದಕ್ಕೆ ಪೂರ್ಣ ಕಡಿವಾಣ ಹಾಕಲಾಗಿದೆ. ಕೆಡಿಎಂ ತಂತ್ರಜ್ಞಾನದಿಂದಾಗಿ (ಕೀ ಡೆಲಿವರಿ ಮೆಸೇಜ್) ಚಿತ್ರದ ನಿರ್ಮಾಪಕರು ಪ್ರದರ್ಶನದ ಸಂಖ್ಯೆಯನ್ನು ನಿರ್ಧರಿಸಬಹುದು. ಇದರಿಂದ ಪ್ರದರ್ಶನದ ಹಣ ಸೂಕ್ತ ರೀತಿಯಲ್ಲಿ ನಿರ್ಮಾಪಕರಿಗೆ ತಲುಪುತ್ತದೆ.

ನಿರ್ದೇಶಕ ಪವನ್ ಕುಮಾರ್ ಕೂಡ ಈ ಮಾತುಗಳನ್ನು ಒಪ್ಪುತ್ತಾರೆ. `ಡಿಜಿಟಲ್ ಪ್ರಕ್ರಿಯೆಗೆ ಎಲ್ಲರೂ ಬದಲಾಗುವುದು ಅನಿವಾರ್ಯ. ಫಿಲಂ ಕೊರತೆಯನ್ನು ಈಗಾಗಲೇ ಚಿತ್ರರಂಗ ಎದುರಿಸುತ್ತಿದೆ. ಕೆಲವು ವರ್ಷಗಳ ಹಿಂದೆ ನಾಲ್ಕು ನಿಮಿಷದ ಫಿಲಂ ರೋಲ್ ರೂ 11,000ಕ್ಕೆ ದೊರೆಯುತ್ತಿತ್ತು. ಈಗ ಅದರ ಬೆಲೆ ಹದಿನೈದು ಸಾವಿರ ರೂಪಾಯಿ ದಾಟಿದೆ. ಈ ವರ್ಷದ ಅದ್ದೂರಿ ಚಲನಚಿತ್ರ ಎಂದೇ ಕರೆಸಿಕೊಳ್ಳುತ್ತಿರುವ `ದಿ ಹಾಬಿಟ್' ಅನ್ನು 40 ಡಿಜಿಟಲ್ ಕ್ಯಾಮೆರಾ ಬಳಸಿ ತಯಾರಿಸಲಾಗಿದೆ. ದೊಡ್ಡ ದೊಡ್ಡ ಚಿತ್ರ ತಯಾರಕರೇ ಡಿಜಿಟಲ್ ಯುಗಕ್ಕೆ ಮೊರೆ ಹೋಗಿದ್ದಾರೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ' ಎನ್ನುವುದು ಅವರ ಅಭಿಪ್ರಾಯ.

ನ್ಯೂನತೆ ಮೀರದ ಮಾಧ್ಯಮ: ಹಾಗೆಂದು ಡಿಜಿಟಲ್ ಮಾಧ್ಯಮ ಎಲ್ಲ ನ್ಯೂನತೆಗಳನ್ನು ಮೀರಿದೆ ಎಂದು ಭಾವಿಸಬೇಕಿಲ್ಲ. ಎನ್‌ಕ್ರಿಪ್ಟೆಡ್ ಆಗದ ಡಿ-ಸಿನಿಮಾ ಪ್ರತಿಗಳನ್ನು ಸುಲಭವಾಗಿ ನಕಲು ಮಾಡಬಹುದೆಂಬ ಭೀತಿ ಚಿತ್ರ ತಯಾರಕರಲ್ಲಿದೆ. ಒಮ್ಮೆ ನಕಲು ಸಾಧ್ಯವಾದರೆ ಅದರ ಸಾವಿರಾರು ಪ್ರತಿಗಳನ್ನು ರೆಸಲ್ಯೂಷನ್ ನಷ್ಟವಿಲ್ಲದೆ ತಯಾರಿಸಬಹುದು. ಪೈರಸಿಗರು ಇದರ ಲಾಭ ಪಡೆದು ಸುಲಭವಾಗಿ ಚಿತ್ರ ತಯಾರಕರನ್ನು ಹಳ್ಳಕ್ಕೆ ದೂಡಬಹುದು.

ಸಾಕ್ಷ್ಯಚಿತ್ರಗಳ ತಯಾರಕ ದೀಪು ಅವರ ಪ್ರಕಾರ ಭಾರತದಂತಹ ದೇಶಗಳಲ್ಲಿ ಡಿಜಿಟಲ್ ಸ್ಟುಡಿಯೋಗಳ ಕೊರತೆ ಸಾಕಷ್ಟಿದೆ. ಹೀಗಾಗಿ ಇಂಥ ಚಿತ್ರಗಳ ತಯಾರಿಕೆ ಸುಲಭದ ಮಾತಲ್ಲ. ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು ಮಾರುಕಟ್ಟೆಗೆ ಬಂದಾಗ ಅವುಗಳ ಬೆಲೆ ಸಾಕಷ್ಟಿರುತ್ತದೆ. ಡಿಜಿಟಲ್ ಸಾಧನಗಳಿಗೂ ಈ ಮಾತು ಅನ್ವಯಿಸುವುದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT