ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ.ಗಳ ವರ್ಗಾವಣೆಗೆ ಸಿಎಟಿ ತಡೆ

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ಜಿಲ್ಲಾಧಿಕಾರಿಗಳ ವರ್ಗಾವಣೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿ.ಎ.ಟಿ), ಅವರು ಈ ಹಿಂದೆ ಇದ್ದ ಹುದ್ದೆಗಳಿಗೇ ಪುನಃ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಐಎಎಸ್ ಅಧಿಕಾರಿಗಳಾದ ಡಾ. ರಾಮೇಗೌಡ, ಬಿ.ಎನ್. ಕೃಷ್ಣಯ್ಯ, ಎನ್. ಪ್ರಕಾಶ್, ಜಿ.ಸಿ. ಪ್ರಕಾಶ್, ಎಫ್.ಆರ್. ಜಮಾದಾರ್, ಎಸ್.ಎನ್. ನಾಗರಾಜು, ವಿ. ಶ್ರೀರಾಮರೆಡ್ಡಿ, ಎನ್. ಜಯರಾಮ ಅವರನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ವರ್ಗಾವಣೆ ಮಾಡಿ ಸರ್ಕಾರ ಮಾ. 27ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಈ ಅಧಿಕಾರಿಗಳು ಸಿಎಟಿ ಮೊರೆ ಹೋಗಿದ್ದರು.

`ಸರ್ಕಾರದ ಆದೇಶವು ಸಮರ್ಥನೀಯ ಅಲ್ಲ. ನಿಯಮಗಳನ್ನು ಅನುಸರಿಸದೆಯೇ ಆದೇಶ ಹೊರಡಿಸಲಾಗಿದೆ' ಎಂದು ಸಿಎಟಿ, ಮಧ್ಯಂತರ ಆದೇಶದಲ್ಲಿ ಹೇಳಿದೆ. ಇವರನ್ನು ಮಾ. 27ಕ್ಕಿಂತ ಮೊದಲು ಇದ್ದ ಸ್ಥಾನಕ್ಕೇ ಪುನಃ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿ,  ಮೇ 27ಕ್ಕೆ ವಿಚಾರಣೆ ಮುಂದೂಡಿದೆ.
ಗಮನಾರ್ಹ ಸಂಗತಿ ಎಂದರೆ ಇವರೆಲ್ಲ ಕರ್ನಾಟಕ ಮೂಲದ ಅಧಿಕಾರಿಗಳಾಗಿದ್ದು, ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದವರು. ಇವರ ಸ್ಥಾನದಲ್ಲಿ ನೇರವಾಗಿ ಐಎಎಸ್‌ಗೆ ಆಯ್ಕೆಯಾದ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

`ಪರಿಶೀಲಿಸಿ ಕ್ರಮ': ಈ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ, `ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಟಿ ನೀಡಿರುವ ಮಧ್ಯಂತರ ಆದೇಶವನ್ನು ಪರಿಶೀಲಿಸಲಾಗುವುದು. ನಂತರ ನಮ್ಮ ಪ್ರತಿವಾದವನ್ನು ನ್ಯಾಯಪೀಠದ ಮುಂದಿಡಲಾಗುವುದು' ಎಂದರು.

ನಗರ ಪೊಲೀಸ್ ಆಯುಕ್ತರಾಗಿದ್ದ ಜ್ಯೋತಿಪ್ರಕಾಶ್ ಮಿರ್ಜಿ ಅವರೂ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದಾರೆ. ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಸಿಎಟಿ, ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೆ ಈಗಾಗಲೇ ಆದೇಶ ನೀಡಿದೆ. `ಮಿರ್ಜಿ ಪ್ರಕರಣದಲ್ಲಿ ಸಿಎಟಿ ನೀಡಿರುವ ನೋಟಿಸ್ ಆಯೋಗಕ್ಕೆ ತಲುಪಿದೆ. ಇದಕ್ಕೂ ಸೂಕ್ತ ಉತ್ತರ ನೀಡಲಾಗುವುದು' ಎಂದು ಝಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT