ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ನಿಯ ಬೆನ್ನೇರಿ ಬಂತು ಕಲ್ಪನಾ ವಿಲಾಸ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

 ಇವೊತ್ತೇನು ಚಿತ್ರ ಬರೆಯೋಣ? ಡಿಸ್ನಿ ಚಾನೆಲ್‌ನ ಕಲಾವಿದ ಗೌರವ್‌ ಬೆಂಗಳೂರಿನ ಮಕ್ಕಳಿಗೊಂದು ಪ್ರಶ್ನೆ ಕೇಳಿದರು.
`ಪೆಡಂಭೂತ~ ಒಕ್ಕೊರಲಿನ ಉತ್ತರ ಬಂತು.
ಹೇಗಿರುತ್ತೆ ಪೆಡಂಭೂತ? ಗೊತ್ತಿಲ್ಲ!
ಗೌರವ್‌ಗೂ ಗೊತ್ತಿಲ್ಲ..!
ಒಂದೊಂದೇ ಉತ್ತರಗಳು ಬಂದವು.

ದೊಡ್ಡ ಮುಖ! ಉದ್ದ ಕೂದಲು! ಮೂರು ಕಣ್ಣು, ಮೊಸಳೆ ಬಾಲ, ಹೆಜ್ಜೆ ಇಟ್ಟಾಗ ಬೆಂಕಿಯುಗುಳುವ ಕಾಲು... ಮತ್ತೇನು? ಪೆಡಂಭೂತ ಅಲ್ಲವೇ... ದೊಡ್ಡ ಹೊಟ್ಟೆ...!
ಮಕ್ಕಳ ಕಲ್ಪನಾಲೋಕ ವಿಸ್ತರಿಸುತ್ತಲೇ ಹೋಗತ್ತಿತ್ತು. ಇನ್ನು ಯಾವುದಕ್ಕೆ ಯಾವ ಬಣ್ಣ...
ಮತ್ತವೇ ಉತ್ತರಗಳು. ಕಡುಕೆಂಪು ಕಣ್ಣು, ಹಸಿರು ಬಣ್ಣ, ನೀಲಿ ಕೂದಲು... ಹೀಗೆ...
ಇಂಥದ್ದೊಂದು ಪೆಡಂಭೂತ ಇರಬಹುದೇ? ಇರಲಿಲ್ಲ. ಆದರೆ ಗೌರವ್‌ನ ಒಂದು ಪ್ರಶ್ನೆ ಮಕ್ಕಳ ಕಲ್ಪನೆ ಗರಿಗೆದರುವಂತೆ ಮಾಡಿತು.

ನರಪೇತಲ ಭೂತ ಮಾಡೋಣವೇ ಎಂದಿದ್ದಕ್ಕೆ ಅವರೆಲ್ಲ ಭೂತದಂತೆಯೇ ಗಹಗಹಿಸಿದ್ದರು.

ಇದು ಡಿಸ್ನಿ ಚಾನೆಲ್‌ನವರ ಆರ್ಟ್ ಆಟ್ಯಾಕ್ ಶಿಬಿರದಲ್ಲಿ ಕಲಾವಿದ ಗೌರವ್ ಬೆಂಗಳೂರಿನ ಮಕ್ಕಳೊಂದಿಗೆ ನಡೆಸಿದ ಸಂವಾದ ಹಾಗೂ ಕಲೆಯ ಚಿತ್ರಣ.

ಕರಕುಶಲ ಕಲೆಗೆ ಈಗ ಹೊಸತನದ ಮೆರುಗು ಬಂದಿದೆ. ಕರಕೌಶಲದ ಅಭಿವ್ಯಕ್ತಿಗಾಗಿಯೇ ಇಂದು ಹಲವಾರು ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಮುಖ್ಯವಾಹಿನಿಗೆ ಕಲೆಯನ್ನೂ ಗಂಭೀರ ವಿಷಯವಾಗಿ ಪರಿಗಣಿಸಲಿ ಎಂಬ ಆಶಯ ಇವರದ್ದು. ಇದಕ್ಕೆ ತಕ್ಕಂತೆ ಕೆಲವು ಖಾಸಗಿ ವಾಹಿನಿಗಳು ಮಕ್ಕಳ ಸೃಜನಶೀಲ ಮನಸ್ಸಿಗೆ ಕಸರತ್ತು ನೀಡುವಂಥ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿವೆ. ಪೊಗೊ ಚಾನೆಲ್‌ನ ಮ್ಯಾಡ್ ಅಂಕಲ್ ಇಂದು ಎಲ್ಲ ಮಕ್ಕಳಿಗೂ ಚಿರಪರಿಚಿತ.

ಇದಲ್ಲದೆ ಈಗ ಗಮನ ಸೆಳೆಯುತ್ತಿರುವ ಇನ್ನೊಂದು ಕಾರ್ಯಕ್ರಮ ಈ ಆರ್ಟ್ ಅಟ್ಯಾಕ್. ಗೌರವ್ ಇದರ ನಿರೂಪಕ. ಮಕ್ಕಳೊಂದಿಗೆ ಸರಳವಾಗಿ ಬೆರೆಯುವ ಕಲಾವಿದನೂ ಹೌದು.

ಐದನೆ ವಯಸ್ಸಿನಿಂದ ಮೇಲ್ಪಟ್ಟ ಎಲ್ಲ ಮಕ್ಕಳಿಗಾಗಿ ಕುಶಲ ಕಲೆ ಆಸಕ್ತಿದಾಯಕ ವಿಷಯವಾಗಿದೆ, ಆದರೆ ಮುಖ್ಯ ವಾಹಿನಿಯಲ್ಲಿಲ್ಲ. ಆದರೆ ಇದನ್ನೂ ಒಂದು ಕ್ಷೇತ್ರವಾಗಿ ಬೆಳೆಸಬೇಕಿದೆ ಎನ್ನುತ್ತಾರೆ ಡಿಸ್ನಿಯಲ್ಲಿ ಆರ್ಟ್ ಅಟ್ಯಾಕ್ ಕಾರ್ಯಕ್ರಮ ನಿರೂಪಿಸುವ ಗೌರವ್.

ಡೆಹ್ರಾಡೂನ್ ಮೂಲದ  ಗೌರವ್ ತಂದೆ ವಿಜ್ಞಾನಿ. ಆದರೆ ಮಗ ಮುಖ್ಯ ವಾಹಿನಿಯಿಂದ ಕಲಾ ಕ್ಷೇತ್ರಕ್ಕೆ ಲಗ್ಗೆ ಇಟ್ಟಾಗ ಯಾವುದೇ ಅಡೆತಡೆ ಒಡ್ಡಲಿಲ್ಲ. ಅಸಮಾಧಾನವಿತ್ತು. ಆದರೆ ಗೌರವ್ ಮೇಲೆ ನಂಬಿಕೆಯೂ.

ಗೌರವ್‌ನ ಸೃಜನಶೀಲ ಸ್ವಭಾವವನ್ನು ಹುರಿದುಂಬಿಸುತ್ತ ಬಂದರು. ಪರಿಣಾಮ ಗೌರವ್ ಈಗ ಪ್ರತಿಷ್ಠಿತ ಚಾನೆಲ್ ಒಂದರಲ್ಲಿ `ಆರ್ಟ್ ಅಟ್ಯಾಕ್~ ಕಾರ್ಯಕ್ರಮದ ನಿರೂಪಕ. ಲಕ್ಷಾಂತರ ಮಕ್ಕಳ ಅಭಿಮಾನದ ಗೌರವ್ ಅವರಿಗೆಲ್ಲ ಏಕಲವ್ಯನ ದ್ರೋಣಾಚಾರ್ಯ ಇದ್ದಂತೆ.

ಪ್ರತಿ ಭಾನುವಾರ ಬೆಳಿಗ್ಗೆ 9.30ಕ್ಕೆ ಪ್ರಸಾರವಾಗುವ ಈ ಕಾರ್ಯಕ್ರಮ ಮಕ್ಕಳಿಗೆ ಪರಿಸರ ಸ್ನೇಹಿ ಆಟಗಳನ್ನೂ, ಅವರ ಕಲ್ಪನಾ ಶಕ್ತಿಗೆ ಕ್ರಿಯಾತ್ಮಕ ಶಕ್ತಿಯನ್ನೂ ನೀಡುವ ಕೆಲಸ ಮಾಡುತ್ತದೆ.

ಶಾಲೆಗಳಲ್ಲಿ ಕೇವಲ ಒಂದೆರಡು ತರಗತಿಯವರೆಗೂ ಆರ್ಟ್ ಅಂಡ್ ಕ್ರಾಫ್ಟ್ ಕಲಿಸಲಾಗುತ್ತದೆ. ಆದರೆ ಇಲ್ಲಿಯೂ ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಇರುವುದಿಲ್ಲ. ಸಿದ್ಧ ಚಿತ್ರಗಳಿಗೆ ಬಣ್ಣ ಹಾಕುವುದು, ಚಿತ್ರಗಳ ಪ್ರತಿಕೃತಿ ಮಾಡುವುದು ಮುಂತಾದವು ಮಾತ್ರ ಆಗುತ್ತವೆ. ಆದರೆ ಅವರೊಳಗಣ ಲೋಕಕ್ಕೆ ಅಭಿವ್ಯಕ್ತಿಯ ಶಕ್ತಿ ನೀಡಬೇಕು ಎನ್ನುವುದು ಗೌರವ್ ಅವರ ಅಭಿಮತ.

ಆರ್ಟ್ ಅಟ್ಯಾಕ್‌ನ ಎರಡನೆಯ ಸೀಸನ್ ಆರಂಭವಾಗಿದೆ. ಡಿಸ್ನಿ ಚಾನೆಲ್‌ನೊಂದಿಗೆ ಗೌರವ್ ಇಡೀ ದೇಶ ಸುತ್ತಿದ್ದಾರೆ.

ಎಲ್ಲ ಕಡೆಯೂ ಮಕ್ಕಳಿಂದ ಆಪ್ತ ಸ್ವಾಗತ ಸಿಗುತ್ತದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಶಿಕ್ಷಕರಲ್ಲಿಯೂ ಕಲಿಯುವ ತಹತಹಿಕೆ ಇದೆ. ಅವರು ಮಕ್ಕಳಿಗಷ್ಟೇ ಅಲ್ಲ, ಶಿಕ್ಷಕರಿಗೆಂದೇ ಒಂದು ಶಿಬಿರ ಏರ್ಪಡಿಸಿ ಎಂಬ ಬೇಡಿಕೆಯನ್ನೂ ಇತ್ತಿದ್ದಾರೆ ಎಂದು ಸಂತಸದಿಂದ ಹೇಳುತ್ತಾರೆ ಗೌರವ್.

ಹೊಸ ಸೀರೆಯೊಳಗಣ ರಟ್ಟಿನಿಂದ ಮನೆ ಮಾಡಿ, ಹಳೆ ಗುಂಡಿ, ಆಮಂತ್ರಣ ಪತ್ರಿಕೆ ಕತ್ತರಿಸಿ ಮನೆ ಮಾಡಿ ಸಂಭ್ರಮ ಪಡುತ್ತಿದ್ದ ಹಿರಿಯರ ಬಾಲ್ಯವನ್ನು ನೆನಪಿಸುವಂತೆಯೇ ಈಗ ಕರಕೌಶಲಕ್ಕೆ ಸಮಕಾಲೀನ ಸ್ಪರ್ಶ ನೀಡಲಾಗುತ್ತಿದೆ. ಅದಕ್ಕೆಂದೇ ವಿಶೇಷ ಕತ್ತರಿ, ಅಂಟು ಇನ್ನಿತರ ಅಗತ್ಯದ ಉತ್ಪನ್ನಗಳೂ ಮಾರುಕಟ್ಟೆಯಲ್ಲಿವೆ.

ಖರೀದಿಸಲು ಸಾಧ್ಯವಿರುವುದೆಲ್ಲವೂ ಮಾರುಕಟ್ಟೆಯಲ್ಲಿದೆ. ಆದರೆ ಮಕ್ಕಳ ಸೃಜನಶೀಲ ಗುಣ ಮತ್ತು ಕ್ರಿಯಾಶೀಲ ಮನಸು ಇವನ್ನು ಮಾತ್ರ ಪೋಷಕರೇ ಚಿವುಟಿ ಹಾಕದಂತೆ ನೋಡಿಕೊಳ್ಳಬೇಕಿದೆ.

ಇದಕ್ಕೆ ಗೌರವ್ ಹೇಳುವುದು ಒಂದೇ ಮಾತು, ಕಲೆಯನ್ನು ಗೌರವಿಸಿ, ಮಕ್ಕಳನ್ನು ಮಾತನಾಡಲು ಬಿಡಿ. ಅವರ ಕತೆಗಳನ್ನು ಕೇಳಿ. ಸಮಯ ಇದೆಯೇ? ಇಲ್ಲದಿದ್ದರೆ ಆರ್ಟ್ ಅಟ್ಯಾಕ್‌ಆದರೂ ನೋಡಲು ಬಿಡಿ!  
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT