ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈನಮಿಕ್‌ ಹಾಡು

Last Updated 9 ಜುಲೈ 2014, 19:30 IST
ಅಕ್ಷರ ಗಾತ್ರ

ನಟ ದೇವರಾಜ್ ತುಂಬು ಸಂತಸದಲ್ಲಿದ್ದರು. ಅದಕ್ಕೆ ಕಾರಣ, ಅವರ ಪುತ್ರ ಪ್ರಜ್ವಲ್‌ ನಾಯಕನಾಗಿರುವ, ಅವರದೇ ಸಂಸ್ಥೆಯ ನಿರ್ಮಾಣದ ಮೊದಲ ಚಿತ್ರ ‘ನೀನಾದೆ ನಾ’ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಹಾಡುಗಳ ಸಿ.ಡಿ. ಬಿಡುಗಡೆ ಸಮಾರಂಭವನ್ನು ಅವರು ಅದ್ದೂರಿಯಾಗಿ ಆಯೋಜಿಸಿದ್ದರು. ಪ್ರಜ್ವಲ್‌ ಜನ್ಮದಿನದಂದೇ ನಡೆದ ಕಾರ್ಯಕ್ರಮ ರಂಗುರಂಗಾಗಿತ್ತು.

‘ಬರ್ತ್‌ಡೇ ಬಾಯ್’ ಪ್ರಜ್ವಲ್‌ ಸ್ನೇಹಿತರ ಪ್ರೀತಿಯ ಮಳೆಯಲ್ಲಿ ತೋಯ್ದು ಹೋದಂತಿದ್ದರು. ಆರು ವರ್ಷಗಳ ಚಿತ್ರ ಪಯಣ ತಮಗೆ ಕೆಲವೇ ಕ್ಷಣಗಳಂತೆ ಭಾಸವಾಗಿದೆ. ಇದಕ್ಕೆಲ್ಲ ಅಭಿಮಾನಿಗಳು ಹಾಗೂ ಬಂಧು– ಸ್ನೇಹಿತರು ನೀಡಿದ ಬೆಂಬಲವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಬಹುವರ್ಷಗಳ ಕನಸು ನನಸಾದ ಸಂಭ್ರಮ ದೇವರಾಜ್ ಅವರದು. ‘ನಮಗೆ ಸಿನಿಮಾ ಬಿಟ್ಟರೆ ಇನ್ನೇನು ಕೆಲಸ? ಹೀಗಾಗಿ ಚಿತ್ರ ನಿರ್ಮಾಣ ಮಾಡಬೇಕು ಎಂಬ ಆಸೆ ಕೈಗೂಡಿದೆ’ ಎಂದರು. ನಿರ್ಮಾಣ ಕಾರ್ಯದಲ್ಲಿ ನೆರವಾದ ಪತ್ನಿ ಚಂದ್ರಲೇಖ ಅವರ ಅಚ್ಚುಕಟ್ಟಾದ ಹಣಕಾಸಿನ ನಿರ್ವಹಣೆ ಹಾಗೂ ನಿರ್ದೇಶಕ ಕಂದಾಸ್ ಕಾರ್ಯವೈಖರಿ ಅವರಿಗೆ ದಂಗುಬಡಿಸಿದೆಯಂತೆ! ಮುಂದಿನ ದಿನಗಳಲ್ಲಿ ತಮ್ಮ ‘ಡೈನಮಿಕ್ ವಿಜನ್’ ಸಂಸ್ಥೆಯಿಂದ ಸದಭಿರುಚಿ ಚಿತ್ರಗಳನ್ನು ಜನರಿಗೆ ಕೊಡುವ ಬಯಕೆಯನ್ನು ತೆರೆದಿಟ್ಟರು.

‘ನೀನಾದೆ ನಾ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಎಂಬ ಕೋರಿಕೆಯನ್ನು ದೇವರಾಜ್ ಮುಂದಿಟ್ಟಾಗ ಅರ್ಜುನ್ ಜನ್ಯ ಅವರಿಗೆ ರೋಮಾಂಚನವಾಗಿದೆ. ‘ಬಾಲ್ಯದಿಂದಲೂ ನಾನು ದೇವರಾಜ್ ಅಭಿಮಾನಿ. ಹೀಗಿರುವಾಗ ಅವರಿಂದಲೇ ಈ ಅವಕಾಶ ಸಿಕ್ಕಾಗ ನನಗೆ ಸಿಕ್ಕಾಪಟ್ಟೆ ಖುಷಿಯಾಯಿತು’ ಎಂದ ಅರ್ಜುನ್, ತಾವು ಐದು ಹಾಡುಗಳಿಗೆ ಸಂಯೋಜಿಸಿದ ಸಂಗೀತ ಎಲ್ಲ ವರ್ಗದವರಿಗೂ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಡುಗಳ ಸಿ.ಡಿ. ಬಿಡುಗಡೆಯನ್ನು ಅರ್ಜುನ್ ಅವರೇ ಮಾಡಬೇಕು ಎಂಬ ದೇವರಾಜ್–ಚಂದ್ರಲೇಖ ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು, ಆ ಕೆಲಸ ನಿರ್ವಹಿಸಿದರು. ನಟ ಶ್ರೀನಗರ ಕಿಟ್ಟಿ, ದೊಡ್ಡಣ್ಣ, ನಿರ್ಮಾಪಕ ಕೆ.ಮಂಜು, ವಿತರಕ ಎನ್.ಕುಮಾರ್, ‘ಆನಂದ್ ಆಡಿಯೊ’ದ ಶಾಮ್ ಚಿತ್ರಕ್ಕೆ ಶುಭ ಹಾರೈಸಿದರು. ಒಂದು ಹಾಡಿಗೆ ಪ್ರಜ್ವಲ್ ಹೆಜ್ಜೆ ಹಾಕಿದರು. ಪ್ರಜ್ವಲ್ ಜನ್ಮದಿನಕ್ಕೆ ಶುಭ ಕೋರಲು ಅಭಿಮಾನಿಗಳು ಹಾಗೂ ಸ್ನೇಹಿತರ ದೊಡ್ಡ ದಂಡು ಸಮಾರಂಭಕ್ಕೆ ಬಂದಿತ್ತು.
ನೃತ್ಯ, ಹಾಡುಗಳ ಪ್ರದರ್ಶನ, ಹಿಪ್ನಾಟಿಕ್ ಷೋ ಇತ್ಯಾದಿ ಸಮಾರಂಭಕ್ಕೆ ರಂಗು ತಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT