ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಪರ-ವಿರೋಧ, ಸಾಹಿತ್ಯದ ಚಿಂತನಮಂಥನ

Last Updated 25 ಸೆಪ್ಟೆಂಬರ್ 2019, 12:08 IST
ಅಕ್ಷರ ಗಾತ್ರ

ಹಾಸನ: ದೇಶದ ಯುವಕರ ಮುಂದಿರುವ ಸವಾಲುಗಳು, ತಂತ್ರಜ್ಞಾನದ ಪ್ರಯೋಜನ ಮತ್ತು ದುಷ್ಪರಿಣಾಮ, ಓದಿನಿಂದ ದೂರವಾಗುತ್ತಿರುವ ಯುವಕರು, ಸಾಹಿತ್ಯ ಇವೆಲ್ಲವುಗಳನ್ನು ಹೇಗೆ ಸಮನ್ವಯಮಾಡುತ್ತ ಹೋಗಬೇಕು ಎಂಬ ವಿಚಾರಗಳು ಹಾಸನ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಗೋಷ್ಠಿಗಳಲ್ಲಿ ಚರ್ಚೆಯಾದವು.

ಗೋಷ್ಠಿಗಳು ಬೇರೆಬೇರೆಯಾಗಿದ್ದರೂ ಕೆಲವು ವಿಚಾರಗಳು ವಿಶೇಷವಾಗಿ ತಂತ್ರಜ್ಞಾನದ ಮುನ್ನಡೆ ಮತ್ತು ಮಾಧ್ಯಮಗಳ ವಿಚಾರ ಎಲ್ಲ ಗೋಷ್ಠಿಗಳಲ್ಲಿ ಉಲ್ಲೇಖವಾಗುತ್ತ ಹೋದವು.

ಭಾನುವಾರ ಮುಂಜಾನೆ ನಡೆದ ಮೊದಲ ಗೋಷ್ಠಿ `ಯುವಜನರ ಮುಂದಿರುವ ಸವಾಲುಗಳು ಮತ್ತು ಮೌಲ್ಯಗಳು' ಎಂಬ ವಿಷಯದ್ದಾಗಿತ್ತು.
ಗೋಷ್ಠಿಯಲ್ಲಿ `ಮೌಲ್ಯಗಳ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ' ವಿಷಯದ ಬಗ್ಗೆ ವಿಚಾರ ಮಂಡಿಸಿದ ಲೇಖಕಿ ಡಾ. ಜಾನಕಿ ಸುಂದರೇಶ್, `ಸಾಹಿತ್ಯದ ಮೂಲಕ ಮೌಲ್ಯಗಳ ಪ್ರತಿಪಾದನೆ ಈಗ ಕಷ್ಟ. ಮಕ್ಕಳಲ್ಲಿ ಮೌಲ್ಯಗಳ ಬೀಜವನ್ನು ಬಿತ್ತಿ ಗೊಬ್ಬರ ಹಾಕುವ ಕಾರ್ಯವನ್ನು ಕೌಟುಂಬಿಕ ಮಟ್ಟದಲ್ಲೇ ಆಗಬೇಕು. ಅದಕ್ಕೆ ನೀರೆರೆದು ಪೋಷಿಸುವ ಕೆಲಸವನ್ನು ಮಾತ್ರ ಸಾಹಿತ್ಯ ಮಾಡಬಹುದು' ಎಂದರು.

`ಇಂದಿನ ಯುವ ಜನಾಂಗ ತಪ್ಪು ಹಾದಿ ಹಿಡಿದಿದೆ ಎಂಬ ಮಾತು ತಲೆತಲಾಂತರದಿಂದ ಹೇಳುತ್ತಲೇ ಇದ್ದೇವೆ. ಯುವಕರು ಅನುಸರಿಸುತ್ತಿರುವ ಮತ್ತು ನಮಗೆ ಇಷ್ಟ ವಾಗದ ವಿಚಾರಗಳನ್ನು ಎತ್ತಿ ಅವರನ್ನು ದೂಷಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಇನ್ನೊಂದು ಚಿಂತೆಯ ವಿಚಾರವೆಂದರೆ ಅಗ್ಗದ ಪ್ರಚಾರಕ್ಕಾಗಿ ಸಾಹಿತ್ಯದೊಳಗೆ ಅನಗತ್ಯವಾಗಿ ಪ್ರಚೋದನಕಾರಿ ಅಂಶಗಳನ್ನು ಸೇರಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ. ಮಾಧ್ಯಮಗಳೂ ಸ್ವಲ್ಪ ಮಟ್ಟಿಗೆ ಇಂಥ ಕೆಲಸಗಳನ್ನು ಮಾಡುತ್ತಿರುವುದು ಕಳವಳಕಾರಿ' ಎಂದರು.

ಎಸ್‌ಡಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಗುರುಬಸವರಾಜ ಯಲಗಚ್ಚಿನ ಅವರು ಯುವಕರ ವ್ಯಕ್ತಿತ್ವ ನಿರ್ಮಾಣದ ಕಡೆಗೆ ಒತ್ತು ನೀಡಿ ಮಾತನಾಡಿದರು. `ಒಳ್ಳೆಯ ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ದೇಶ ಕಟ್ಟಲು ಸಾಧ್ಯ. ಸ್ವಸ್ಥ ಮನಸ್ಸುಗಳಿಲ್ಲದೆ ಒಳ್ಳೆಯ ಸಮಾಜ ನಿರ್ಮಾಣವಾಗದು.

ಪಾಲಕರು ತಮ್ಮ ಮಕ್ಕಳಲ್ಲಿ ಯಾವ್ಯಾವ ಗುಣಗಳನ್ನು ಕಾಣಲು ಬಯಸುತ್ತಾರೋ ಆ ಗುಣಗಳನ್ನು ಮೊದಲು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಯುವಜನರಿಗೆ ಮಾದರಿಯಾಗಬಲ್ಲಂಥ ಸಾಕಷ್ಟು ಜನರು ನಮ್ಮ ಮಧ್ಯದಲ್ಲಿದ್ದಾರೆ. ಆದರೆ ಅವರಿಗೆ ವೇದಿಕೆಗಳು ಸಿಗುತ್ತಿಲ್ಲ. ಮಾಧ್ಯಮಗಳ ಹೆಚ್ಚು ಹೆಚ್ಚಾಗಿ ನಕಾರಾತ್ಮಕ ವಿಚಾರಗಳನ್ನೇ ಬಿಂಬಿಸುತ್ತವೆ' ಎಂದರು.

`ನಮ್ಮ ನೆರೆಮನೆಯವರ ಪರಿಚಯವಿಲ್ಲದಿದ್ದರೂ ಫೇಸ್‌ಬುಕ್ ಮೂಲಕ ದೂರದ ಯಾವುದೋ ದೇಶದಲ್ಲಿದ್ದವರ ಜತೆಗೆ ಸಂವಹನ ಮಾಡುತ್ತೇವೆ. ತಂತ್ರಜ್ಞಾನ ಇಂಥ ಅಪಾಯವನ್ನು ತಂದೊಡ್ಡಿದೆ ಎಂದು ಯಲಗಚ್ಚಿನ ನುಡಿದರು.

ಅಧ್ಯಕ್ಷತೆ ವಹಿಸಿ ಎಲ್ಲವನ್ನೂ ಸಮನ್ವಯಗೊಳಿಸಿ ಮಾತನಾಡಿದ ಲೇಖಕ ವಸುಧೇಂದ್ರ, `ಯುವಕರಿಗೆ ಎಲ್ಲ ಕಾಲದಲ್ಲೂ ಸವಾಲುಗಳಿದ್ದವು. ಅವುಗಳ ರೀತಿ ಬದಲಾಗಿದೆ. ಇಂದು ಆಯ್ಕೆಗಳು ನೂರಾರು ಇವೆ. ಅದರಲ್ಲಿ ಯಾವುದು ಒಳ್ಳೆಯದು ಎಂದು ಅರಿತು ಅದನ್ನು ಮಾತ್ರ ಎತ್ತಿಕೊಳ್ಳುವುದು ಮುಖ್ಯ' ಎಂದರು.

`ಆಧುನಿಕ ಜಗತ್ತು ಹಲವು ಆಕರ್ಷಣೆಗಳನ್ನು ಮುಂದಿಟ್ಟಿದೆ. ಇವುಗಳ ಜತೆಯಲ್ಲೇ ಬದುಕುವ ಕಲೆಯೂ ಅತಿ ಮುಖ್ಯ. ಆಧುನಿಕ ಸವಾಲುಗಳನ್ನು ಗೆದ್ದು ಬದುಕುವುದು ಯುವಕರ ಮುಂದಿರುವ ದೊಡ್ಡ ಸವಾಲು. ಇದರ ಜತೆಗೆ ಸಾಹಿತ್ಯವೂ ಆಧುನಿಕತೆಯ ಆಯ್ಕೆಗಳ ಜತೆಗೆ ಸ್ಪರ್ಧಿಸಿ ಗೆಲ್ಲಬೇಕಾಗಿದೆ ಎಂದರು.

`ತಂತ್ರಜ್ಞಾನ ನಾವಂದುಕೊಂಡಷ್ಟು ಕೆಟ್ಟದ್ದಲ್ಲ. ನಾವು ಅದರ ಕಡೆಗೆ ತೆರೆದುಕೊಳ್ಳಬೇಕು. ವಿಶಾಲತೆಯತ್ತ ತೆರೆದುಕೊಳ್ಳುವಂಥದ್ದು ವೃದ್ಧಿಸುತ್ತದೆ, ಸಂಕುಚಿತವಾಗುತ್ತ ಹೋಗುವ ವಸ್ತು ನಾಶವಾಗುತ್ತದೆ. ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ಬದಲಾಗದಿದ್ದರೆ ನಮ್ಮ ಯುವ ಸಮುದಾಯ ನಿರರ್ಥಕವಾಗುವ ಅಪಾಯವಿದೆ ಎಂದು ವಸುಧೇಂದ್ರ ನುಡಿದರು.

`ಯುವಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂಬುದು ಸ್ವಲ್ಪ ಮಟ್ಟಿಗೆ ನಿಜ. ನಾವು ಸಾಹಿತ್ಯಕ್ಕಿಂತ ಹೆಚ್ಚಿನ ಗಮನವನ್ನು ವಿಜ್ಞಾನದ ಕಡೆಗೆ ಕೊಡುತ್ತಿದ್ದೇವೆ. ಆದ್ದರಿಂದ ಓದು ದೂರವಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಓದುವಂಥ ಹವ್ಯಾಸ ಮೂಡಿಸುವ ಕಾರ್ಯವನ್ನು ಪಾಲಕರು ಮಾಡಬೇಕು. ಇದರ ಜತೆಗೆ ಯುವಜನಾಂಗದಲ್ಲಿ ಸ್ವತಂತ್ರವಾಗಿ ಮೌಲ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ ಎಂದರು.

ಲೇಖಕ ಸಿ.ಕೆ. ಹರೀಶ್ ಆಶಯ ನುಡಿಗಳನ್ನಾಡಿದರು. ಡಾ. ಶ್ರೀಹರ್ಷ, ಸಿ. ನಾಗೇಶ್ ಹಾಗೂ ಶ್ರುತಿ ಶರ್ಮಾ ಸಂವಾದದಲ್ಲಿ ಪಾಲ್ಗೊಂಡರು.

`ಸಾಹಿತ್ಯ ಕಾಡಾಗಬೇಕು'
ಮಧ್ಯಾಹ್ನ ನಡೆದ `ಸಾಹಿತ್ಯದ ಹೊಸ ಸಾಧ್ಯತೆಗಳು' ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, `ಕನ್ನಡ ಸಾಹಿತ್ಯ ನಂದನವನವಲ್ಲ, ಎಲ್ಲವನ್ನೂ ಒಳಗೊಂಡಂಥ ಕಾಡಾಗಬೇಕು. ಅಲ್ಲಿ ಸೃಜನಶೀಲ ಸಾಹಿತ್ಯ, ವಿಜ್ಞಾನ, ಕಂಪ್ಯೂಟರ್, ತಂತ್ರಜ್ಞಾನ ಎಲ್ಲವೂ ಅಡಕವಾಗಿರಬೇಕು' ಎಂದರು.

`ಜನರು ಓದಿನಿಂದ ದೂರವಾಗುತ್ತಿದ್ದಾರೆ ಎಂಬುದು ಕೆಲವೇ ಕೆಲವು ಮಂದಿ ಹಬ್ಬಿಸಿದ ಹಸಿ ಸುಳ್ಳು. ಜನರು ಈಗಲೂ ಒಳ್ಳೆಯ ಕೃತಿಗಳನ್ನು ಓದುತ್ತಿದ್ದಾರೆ. ಮುಂದೆಯೂ ಪರಿಸ್ಥಿತಿ ಹೀಗೇ ಇರುತ್ತದೆ ಎಂದು ಹೇಳಲಾಗದು. ಭಾಷೆ, ಸಾಹಿತ್ಯಗಳ ಸಾಮಾನ್ಯ ಜ್ಞಾನವೂ ಇಲ್ಲದವರು ಈಗ ಉಪನ್ಯಾಸಕರಾಗುತ್ತಿದ್ದಾರೆ. ಇಂಥವರಿಂದ ಭಾಷೆಗೆ ಅನುಕೂಲಕ್ಕಿಂತ ಹಾನಿಯೇ ಹೆಚ್ಚಾಚ್ಚು ಎಂದರು.

`ಸಾಹಿತ್ಯದ ಓದು ಸಹ ಒಂದು ಧ್ಯಾನ. ಓದು ಹಾಗೂ ಚಳುವಳಿಗಳು ನಮ್ಮಲ್ಲಿ ಧೈರ್ಯ ತುಂಬುತ್ತವೆ. ನಮ್ಮಳಗೊಬ್ಬ ಓದುಗ ಅಥವಾ ಲೇಖಕ ಇಲ್ಲದಿದ್ದರೆ ಜೀವನ ಬರಿದಾಗುತ್ತದೆ. ಹೊಸ ಪುಸ್ತಕಗಳ ಜತೆಗೆ ಹಳೆಯ ಕಾವ್ಯಗಳನ್ನು, ಶ್ರೇಷ್ಠ ಕೃತಿಗಳನ್ನು ಜನಪ್ರಿಯಗೊಳಿಸುವಂಥ ಕೆಲಸವನ್ನು ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು ಮಾಡಬೇಕು' ಎಂದು ಕುಂ.ವೀ. ಸಲಹೆ ನೀಡಿದರು.

ಇದಕ್ಕೂ ಮೊದಲು ನವ್ಯೋತ್ತರ ಸಾಹಿತ್ಯದ ಹೊಸ ಬೆಳವಣಿಗೆಗಳು ಕುರಿತು ಮಾತನಾಡಿದ ಲೇಖಕಿ ಜ.ನಾ. ತೇಜಶ್ರೀ, `ಗಂಭೀರ ಸಾಹಿತ್ಯದ ಓದು ಹಾಗೂ ಸಾಹಿತ್ಯದ ಗಂಭೀರ ಓದು ಎರಡೂ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ' ಎಂದರು.

`ಹಿರಿಯ ಸಾಹಿತಿಗಳ, ಕವಿಗಳ ಒಂದು ಸಾಲು ಹಲವು ಅರ್ಥಗಳನ್ನು ಹೊಮ್ಮಿಸುತ್ತಿತ್ತು. ಅಂಥ ಪದಬಳಕೆಯ ಕೌಶಲ ಈಗ ಕಾಣೆಯಾಗುತ್ತಿದೆ. ಬೇಂದ್ರೆ ಹಲವು ವರ್ಷಗಳ ಹಿಂದೆಯೇ ಇದನ್ನು ಹೇಳಿದ್ದರು.

ಒಂದು ಪದ ಒಂದೇ ಅರ್ಥಕ್ಕೆ ಸೀಮಿತವಾಗಿರುವಂಥ ಕಾವ್ಯ ಇಂದು ಸೃಷ್ಟಿಯಾಗುತ್ತಿದೆ. ಹಾಸ್ಯ ಮತ್ತು ಚುಟುಕು ಸಾಹಿತಿಗಳು ಇಂದು ಹೆಚ್ಚಿನ ಪ್ರಾಶಸ್ತ್ಯಪಡೆಯುತ್ತಿದ್ದಾರೆ ಇವೆಲ್ಲವೂ ಆತಂಕದ ವಿಚಾರಗಳೇ ಆಗಿವೆ' ಎಂದರು.

ಉಪನ್ಯಾಸಕ ಡಾ. ಎಚ್.ಎಲ್. ಮಲ್ಲೇಶಗೌಡ ಕನ್ನಡ ಸಾಹಿತ್ಯ ಪರಂಪರೆ ಬಗ್ಗೆ ಮಾತನಾಡಿದರು. ಗೊರೂರು ಶಿವೇಶ್ ಆಶಯ ನುಡಿಗಳನ್ನಾಡಿದರು.

ಮಾನವೀಯತೆಯೇ ಸುಳ್ಳು
ಭಾನುವಾರ ನಡೆದ ಎರಡನೇ ಗೋಷ್ಠಿಯಲ್ಲಿ ಸಾಹಿತ್ಯ ಪರಂಪರೆಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದ್ದರೆ ಮಾನಸ ಗಂಗೋತ್ರಿಯ ಉಪನ್ಯಾಸಕ ಡಾ. ಕುಶಾಲ್ ಬರಗೂರು ಅವರು ಸಾಹಿತ್ಯವೇ ಸುಳ್ಳು, ಮಾನವೀಯತೆ ಎಂಬುದು ಇಲ್ಲವೇ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

ವರ್ತಮಾನ ಸಾಹಿತ್ಯದ ಸಾಧ್ಯತೆಗಳ ಬಗ್ಗೆ ಮಾತನಾಡಿದ ಅವರು, `ಸಾಹಿತ್ಯಕ್ಕೆ ನಾಟಕ, ಕಾವ್ಯ. ಕಾದಂಬರಿ ಮುಂತಾದ ಪ್ರಕಾರಗಳು ಮಾತ್ರ ಇಲ್ಲ. ಅದು ಸಾಹಿತ್ಯದ ಒಂದು ಭಾಗ ಮಾತ್ರ. ಇದರ ಜತೆಗೆ ಕೋರ್ಟ್ ಸಾಹಿತ್ಯ, ಮನೆ ಸಾಹಿತ್ಯ ಮುಂತಾದ ಆರು ಪ್ರಕಾರಗಳೂ ಇವೆ. ಇದರ ಬಗ್ಗೆ ಜನರಿಗೆ ತಿಳಿದಿಲ್ಲ. ನನಗೆ ಎಲ್ಲ ಗೊತ್ತಿದೆ, ನಿಮ್ಮಲ್ಲಿ ಯಾರಿಗಾದರೂ ಸಂದೇಹವಿದ್ದರೆ ಕೇಳಿ ಸೂಕ್ತ ಉತ್ತರ ನೀಡಲು ನಾನು ಸಿದ್ಧ' ಎಂದರು.

`ಈಗ ಯಾವುದನ್ನು ಸಾಹಿತ್ಯ ಎಂದು ಕರೆಯುತ್ತೇವೋ ಅದು ಸಾಹಿತ್ಯ ಅಲ್ಲ. ನಮ್ಮ ಸಾಹಿತ್ಯದಲ್ಲಿ ಮನುಷ್ಯ ಮುಖ್ಯವಾಗಿ ಮರ-ಗಿಡ, ಪ್ರಾಣಿ ಪಕ್ಷಿಗಳು ಅದಕ್ಕೆ ಪೂರಕವಾಗಿ ಬರುತ್ತಿವೆ. ಇದರ ಬದಲು ಪ್ರಾಣಿ ಪಕ್ಷಿಗಳು ಮುಖ್ಯವಾಗಿ, ಮನುಷ್ಯ ಅದಕ್ಕೆ ಪೂರಕವಾಗಿ ಬರಬೇಕು ಅದೇ ನಿಜವಾದ ಸಾಹಿತ್ಯ. ಸಾಹಿತ್ಯದಲ್ಲಿ ಮಾನವೀಯತೆ ಎಂಬುದು ಇಲ್ಲವೇ ಇಲ್ಲ ಅದು ಬರಿಯ ಸುಳ್ಳು... ಹೀಗೆ ಬರಗೂರು ಅವರು ವಾದ ಸರಣಿ ಮುಂದುವರಿಸಿದರು.

ಕೊನೆಯಲ್ಲಿ ವೇದಿಕೆಯನ್ನು ಬೌದ್ಧ ಧರ್ಮ ಪ್ರಚಾರಕ್ಕೆ ಬಳಸಿಕೊಂಡ ಅವರು, ಭಾರತದ ಇತಿಹಾಸದಲ್ಲಿ ಹಿಂದೂ ಧರ್ಮದ ಉಲ್ಲೇಖ ಎಲ್ಲೂ ಇಲ್ಲ. ಬೌದ್ಧ ಧರ್ಮವೊಂದೇ ನಿಜವಾದ ಬೆಳಕು. ಎಲ್ಲರೂ ಅದರತ್ತ ನಡೆಯಬೇಕು' ಎಂದರು. ಮೊದಲೇ ಸಮಯದ ಅಭಾವ ಇದ್ದುದರಿಂದ ಆಯೋಜಕರು ಬಾರಿ ಬಾರಿ ಚೀಟಿ ಕಳುಹಿಸಿ ಅವರ ಮಾತಿಗೆ ಕಡಿವಾಣ ಹಾಕಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT