ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ಕೊಲೆ: ನ್ಯಾಯಾಂಗ ವಶಕ್ಕೆ ಸಾಫ್ಟ್‌ವೇರ್‌ ಎಂಜಿನಿಯರ್‌

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಖಾಸಗಿ ವಸತಿಗೃಹದಲ್ಲಿ ಕಳೆದ ಅಕ್ಟೋಬರ್‌ 28ರಂದು ತಂದೆಯನ್ನೇ ಕೊಲೆ ಮಾಡಿದ ಆರೋಪಕ್ಕಾಗಿ ಬೆಂಗಳೂರಿನ ಕೋರ­ಮಂಗಲ ಬಡಾವಣೆಯ ನಾಗಾನಂದ ಎಂಬುವವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿದೆ.

ಬೆಂಗಳೂರಿನ ಖಾಸಗಿ ಕಂಪೆನಿ­ಯೊಂದ­­ರಲ್ಲಿ ಸಾಫ್ಟ್‌ವೇರ್‌ ಎಂಜಿನಿ­ಯರ್‌ ಆಗಿರುವ ನಾಗಾನಂದ ತನ್ನ ತಂದೆ ಕಸ್ತೂರಿರಂಗನ್‌ ಹಾಗೂ ತಾಯಿ ರಮಾ ಅವರೊಂದಿಗೆ ಇಲ್ಲಿಗೆ ಬಂದು ವಸತಿಗೃಹದಲ್ಲಿ ತಂಗಿದ್ದರು.

ಅ. 29ರಂದು ವಸತಿಗೃಹದ ಸಿಬ್ಬಂದಿ ಗಮನಿಸಿದಾಗ ಕಸ್ತೂರಿ ರಂಗನ್‌ ಕೊಲೆ­ಯಾಗಿದ್ದರೆ, ರಮಾ ಅವರು ರಕ್ತದ ಮಡು­ವಿನಲ್ಲಿ ನರಳುತ್ತಿದ್ದರು. ನಾಗಾ­ನಂದ ಸ್ಥಳದಿಂದ ಪರಾರಿಯಾಗಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ರಮಾ ಅವ­ರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರು ‘ಕೌಟುಂಬಿಕ ಸಮಸ್ಯೆ ಹಾಗೂ ಸಾಲದ ಬಾಧೆಯ ಕಾರಣ ಮೂವರು ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದೆವು’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು. ‘ಹೇಗೆ ಸಾಯುವುದು ಎಂದು ನಾವು ಗೊಂದಲದಲ್ಲಿದ್ದಾಗ ನಾಗಾನಂದ ತಂದೆ­ಯನ್ನು ಚೂರಿಯಿಂದ ಇರಿದ ನಂತರ ನನ್ನ ಕುತ್ತಿಗೆಗೂ ಚಾಕುವಿನಿಂದ ಇರಿದ’ ಎಂದು ತಿಳಿಸಿದ್ದರು. ರಮಾ ಈಗ ಚೇತರಿಸಿಕೊಂಡಿದ್ದಾರೆ.

ನಂತರ ನ. 2ರಂದು ಜೋಗ ಜಲ­ಪಾ­ತ­ದಲ್ಲಿ ಅನಾಥ ಶವವೊಂದು ಪತ್ತೆ­ಯಾದಾಗ ಇದು ನಾಗಾನಂದನ ಶವ ಇರ­ಬಹುದು ಎಂದು ಪೊಲೀಸರು ಶಂಕಿ­ಸಿ­ದ್ದರು. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಶವವನ್ನು ತಂದಾಗ, ಅಲ್ಲಿಗೆ ಬಂದಿದ್ದ ನಾಗಾನಂದನ ಪತ್ನಿ ಇದು ತಮ್ಮ ಪತಿ­ಯದ್ದೇ ಶವ ಎಂದು ಗುರುತಿಸಿದ್ದರು.

ಪೊಲೀಸರು ನಾಗಾ­ನಂದನ ಶವ­­ದಿಂದ ಡಿ.­ಎನ್‌.ಎ ಪರೀಕ್ಷೆಗೆ ಬೇಕಾದ ಅಂಶಗಳ­ನ್ನು ತೆಗೆದ ನಂತರ ಶಿವಮೊಗ್ಗ­ದಲ್ಲೆ ಅಂತ್ಯಕ್ರಿಯೆ ನೆರ­ವೇರಿ­ಸಲಾಗಿತ್ತು.
ಈ ನಡುವೆ ನಾಗಾನಂದನ ಪತ್ನಿ ದಿವ್ಯಾ ಬೆಂಗಳೂರಿನ ಕೋರಮಂಗಲ ಠಾಣೆಯಲ್ಲಿ ತನ್ನ ಪತಿ, ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಪೊಲೀಸರು ನಾಗಾನಂದನ ಪತ್ತೆಯಲ್ಲಿ ತೊಡಗಿದ್ದರು.

ತಂದೆಯ ಸಾವಿನ ನಂತರ ಗೋವಾ, ಮುಂಬೈ, ಶಿರಡಿ ಮೊದಲಾದ ಊರುಗಳನ್ನು ಸುತ್ತಿದ ನಾಗಾನಂದ ಮಾನಸಿಕವಾಗಿ ತೀವ್ರ ನೊಂದು ಕೆಲವು ದಿನ ಹಿಂದೆ ಕೋರಮಂಗಲ ಪೊಲೀಸ್ ಠಾಣೆಗೆ ಶರಣಾದರು. ಈ ವಿಷಯ ತಿಳಿದ ಇಲ್ಲಿನ ಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾನಂದನನ್ನು ಇಲ್ಲಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನಾಗಾನಂದ ಇಲ್ಲಿನ ನ್ಯಾಯಾಲಯ­ದಲ್ಲಿ ತನ್ನ ಪರವಾಗಿ ವಾದಿಸಲು ಯಾವು­ದೇ ವಕೀಲರನ್ನು ನೇಮಿಸಲು ನಿರಾ­­ಕರಿಸಿದ್ದರಿಂದ ಸರ್ಕಾರದ ಪರವಾಗಿ ವಕೀ­ಲರ ನೆರವು ನೀಡಲಾಗಿದೆ. ಪತ್ನಿ ನೀಡಿದ ದೂರಿನ ಪ್ರಕರಣಕ್ಕೆ ಸಂಬಂಧಿಸಿ­ದಂತೆ ಅವರನ್ನು ಶುಕ್ರವಾರ ಬೆಂಗಳೂ­ರಿನ ಕಾರಾಗೃಹಕ್ಕೆ  ಕರೆದೊಯ್ಯಲಾಗಿದೆ.

ಶಿವಮೊಗ್ಗದಲ್ಲಿ ಅಂತ್ಯಕ್ರಿಯೆ ನಡೆಸಿರುವ ಶವ ಯಾರದ್ದು ಎಂಬುದನ್ನು ಪತ್ತೆ ಮಾಡಬೇಕಾಗಿರುವ ಹೊಣೆ ಈಗ ಪೊಲೀಸರ ಹೆಗಲಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT