ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿತು ಅಪಘಾತ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಸಂಚಾರದ ವಿಷಯ ಬಂದಾಗ ರಾಜಧಾನಿಯ ಜನರಿಗೆ ಕಹಿ ಸುದ್ದಿಯೇ ಹೆಚ್ಚು. ಆ ರಸ್ತೆಯನ್ನು ಬಂದ್ ಮಾಡಲಾಗುತ್ತದೆ, ಈ ರಸ್ತೆಗಳಲ್ಲಿ ಸಂಚರಿಸುವವರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ, ದ್ವಿಮುಖ ಸಂಚಾರ ರದ್ದು ಮಾಡಲಾಗಿದೆ... ಹೀಗೆ ಸಾಗುತ್ತದೆ.
ಆದರೆ ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಇಲ್ಲೊಂದು ಒಳ್ಳೆಯ ಸುದ್ದಿ ಇದೆ. ಅದೇನೆಂದರೆ 2010ಕ್ಕೆ ಹೋಲಿಸಿದರೆ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆಯೂ ಇಳಿಮುಖವಾಗಿದೆ.

2010ರಲ್ಲಿ ಒಟ್ಟು 816 ಗಂಭೀರ ಸ್ವರೂಪದ ಅಪಘಾತಗಳಾಗಿದ್ದವು. ಇದರಲ್ಲಿ 858 ಮಂದಿ ಮೃತಪಟ್ಟಿದ್ದರು. ಆದರೆ 2011ರಲ್ಲಿ 727 ಅಪಘಾತಗಳಾಗಿದ್ದು, 757 ಮಂದಿ ಸಾವನ್ನಪ್ಪಿದ್ದಾರೆ. 2010ರಲ್ಲಿ 5667 ಗಂಭೀರವಲ್ಲದ ಅಪಘಾತಗಳಾಗಿದ್ದು 5343ಮಂದಿ ಗಾಯಗೊಂಡಿದ್ದರು. ಆದರೆ ಹಿಂದಿನ ವರ್ಷ 5297 ಗಂಭೀರವಲ್ಲದ ಅಪಘಾತಗಳಲ್ಲಿ 4976 ಮಂದಿ ಗಾಯಾಳುಗಳಾಗಿದ್ದಾರೆ. ವಾಹನ ಸವಾರರ ಸುರಕ್ಷತೆಗೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. 2012ರಲ್ಲಿ ಅಪಘಾತ, ಸಾವಿನ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ಇನ್ನೂ ಕಡಿಮೆಯಾಗಲಿದೆ ಎಂದು ಭರವಸೆ ನೀಡುತ್ತಾರೆ ಸಂಚಾರ ಪೊಲೀಸರು.

ಸಿಬ್ಬಂದಿಯ ಶ್ರಮವೇ ಅಪಘಾತ ಕಡಿಮೆಯಾಗಲು ಕಾರಣ ಎಂದು ಸಂಚಾರ ವಿಭಾಗದ ಅಧಿಕಾರಿಗಳು ಹೇಳುತ್ತಾರೆ. ಸುಗಮ ಸಂಚಾರಕ್ಕೆ ಅವಕಾಶ ಕೊಡಲು ಸಿಬ್ಬಂದಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದವು. ಈಗ ಆ ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಂಟರ್‌ಸೆಪ್ಟರ್ ವಾಹನಗಳನ್ನು ಬಳಸಿ ಮಿತಿಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

`ಹಿಂದಿನ ಏಳು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಪಘಾತ, ಮೃತಪಟ್ಟವರ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದೆ. ನಿಜಕ್ಕೂ ಇದೊಂದು ಉತ್ತಮ ಬೆಳವಣಿಗೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖ ಜಂಕ್ಷನ್ ಮತ್ತು ರಸ್ತೆಗಳಲ್ಲಿ ಕಾವಲಿರುವ ಪೊಲೀಸರು ಸವಾರರನ್ನು ಪರೀಕ್ಷಿಸಿ ಪ್ರಕರಣ ದಾಖಲಿಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ಅಲ್ಲದೆ ಅಗತ್ಯಕ್ಕೆ ತಕ್ಕಂತೆ ಒನ್ ವೇ, ಟೂ ವೇಗಳನ್ನು ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರ ಸಭೆ ನಡೆಸಿ ಅವರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಅಪಘಾತ ಪ್ರಮಾಣ ಇಳಿಮುಖವಾಗುತ್ತಿದೆ~ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ ಅವರ ಅಭಿಪ್ರಾಯ.

`ಸಾರ್ವಜನಿಕರು ಸಹ ಪೊಲೀಸರಿಗೆ ಸಹಕಾರ ನೀಡಬೇಕು. ನಿಯಮಗಳನ್ನು ಚಾಚುತಪ್ಪದೆ ಪಾಲಿಸಿ ವಾಹನ ಚಾಲನೆ ಮಾಡಬೇಕು. ಪರಸ್ಪರರು ಕೈ ಜೋಡಿಸಿದರೆ ನಗರ ಸಂಚಾರ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆ ತರಬಹುದು~ ಎಂದು ಅವರು ಹೇಳುತ್ತಾರೆ.

ಆದರೆ ಈ ಬಗ್ಗೆ ಜನರನ್ನು ಮಾತನಾಡಿಸಿದರೆ ಅವರು ಹೇಳುವ ಮಾತೇ ಬೇರೆ. `ಬೆಂಗಳೂರಿನಲ್ಲಿ ವಾಹನ ಚಾಲನೆ ಮಾಡಲು ರಸ್ತೆ ಎಲ್ಲಿದೆ ಸ್ವಾಮಿ~ ಎಂದು ಅವರು ಪ್ರಶ್ನಿಸುತ್ತಾರೆ. `ಒಳ್ಳೆಯ ರಸ್ತೆ ಉತ್ತಮ ಸಂಚಾರ ವ್ಯವಸ್ಥೆ ಇದ್ದರೆ ಚಾಲಕರು ವೇಗವಾಗಿ ವಾಹನ ಚಾಲನೆ ಮಾಡಬಲ್ಲರು. ಆದರೆ ವೆುಟ್ರೊ ಕಾಮಗಾರಿ, ಜಲಮಂಡಳಿ ಪೈಪ್ ಅಳವಡಿಕೆ, ಬಿಬಿಎಂಪಿಯ ಕಾಮಗಾರಿಗಾಗಿ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ. ಹೀಗಿರುವಾಗ ಆರಾಮದಾಯಕವಾಗಿ ವಾಹನ ಚಾಲನೆ ಹೇಗೆ ಸಾಧ್ಯ. ವೇಗದ ಪ್ರಮಾಣ ಹದಿನೈದು ಕಿ.ಮೀ ದಾಟುತ್ತಿಲ್ಲ. ಆದ್ದರಿಂದಲೇ ಅಪಘಾತ ಕಡಿಮೆಯಾಗಿದೆ~ ಎನ್ನುತ್ತಾರೆ ಮಹಾಲಕ್ಷ್ಮಿಲೇಔಟ್‌ನ ನಿವಾಸಿ ರಾಮ್.

ಇದೂ ನಿಜವಿರಬಹುದಲ್ಲವೇ? ಏನೇ ಆಗಲಿ ಸಾವು- ನೋವಿನ ಪ್ರಮಾಣ ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಅಂತೆಯೇ ಕಾಮಗಾರಿಗಳೆಲ್ಲ ಪೂರ್ಣಗೊಂಡು ವಾಹನ ಸಂಚಾರಕ್ಕೆ ಪೂರ್ಣ ರಸ್ತೆ ಸಿಗಲಿ. ವಾಹನ ಸವಾರರು ಪ್ರತಿನಿತ್ಯ ಅನುಭವಿಸವ ತೊಂದರೆ ಕಡಿಮೆಯಾಗಲಿ ಎಂಬ ಆಶಯ ವ್ಯಕ್ತಪಡಿಸುತ್ತಾರೆ ವಾಹನ ಸವಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT