ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬಲಾ ಆಲಯ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಶಿರಬಾಗಿ ಅಡಿಯಿಡು ಈ ನಾದ ದೇಗುಲಕೆ..' ದಾ ಧಿನ್ ಧಿನ್ ದಾ.. ತಬಲಾದ ಈ ಠೇಕಾ ಆ ತಬಲಾ ವಿದ್ಯಾಲಯದ ಗೇಟ್ ತೆಗೆದು ಒಳಹೊಕ್ಕಾಗ ಹಿತವಾಗಿ ಕೇಳುತ್ತದೆ. ತೀನ್ ತಾಲ್, ಏಕ್‌ತಾಲ್, ದಾದ್ರಾ, ಝಪ್‌ತಾಲ್‌ಗಳ ಮೇಳ ಕೇಳುವುದೇ ಪರಮಾನಂದ.

ಪುಟ್ಟ ಪುಟ್ಟ ಮಕ್ಕಳು, ಶಾಲೆಗೆ ಹೋಗುವ ಹುಡುಗಿಯರು, ಕಚೇರಿಗೆ ಹೋಗುವ ವೃತ್ತಿಪರರು ಒಂದೇ ಹಾಲ್‌ನಲ್ಲಿ ತಬಲಾ ಸೆಟ್ ಹಿಡಿದು ತಬಲಾ ನುಡಿಸುವುದನ್ನು ನೋಡುವುದೇ ಒಂದು ಖುಷಿ. ಪುಟಾಣಿಗಳು ತಬಲಾದ ಬೋಲ್‌ಗಳನ್ನು ಬಾಯಿಯಲ್ಲಿ ಹೇಳುತ್ತಾ ಕೈಬೆರಳುಗಳನ್ನು ತಬಲಾ, ಡಗ್ಗಾಗಳ ಮೇಲೆ ಕ್ರಮಬದ್ಧವಾಗಿ, ಲಯಬದ್ಧವಾಗಿ ಹಾಕುತ್ತಾ ನುಡಿಸುವುದು ಒಂದು ನಾದದ ಹಬ್ಬವೇ.

ಗೇಟ್‌ನೊಳಗೆ ಹೋಗಿ ಗೋಡೆಯ ಮೇಲೆ ನೋಡಿದರೆ ಅದು ತಬಲಾ ತಾಳದ ಬರಹ. ಹೀಗೆ ಅತ್ಯಂತ ವೈಶಿಷ್ಟ್ಯಪೂರ್ಣವಾಗಿರುವ ಈ ತಬಲಾ ವಿದ್ಯಾಲಯದ ಬಾಗಿಲ ಬಳಿ ಅಡಿ ಇಡುವಾಗಲೇ `ಶಿರಬಾಗಿ ಅಡಿಯಿಡು ಈ ನಾದ ದೇಗುಲಕೆ' ಎಂಬ ಬರಹ ಸ್ವಾಗತಿಸುತ್ತದೆ. ವಿದ್ಯಾಲಯದ ಹಾಲ್‌ನ ಒಳಗೆ ತಬಲಾ ವಿದ್ವಾಂಸರ ಫಲಕಗಳು, ದೇವರ ಚಿತ್ರಪಟ, ಗುರುಗಳ ಚಿತ್ರಗಳು, ತಬಲಾ ಬಗೆಗಿನ ವಿವಿಧ ಮಾಹಿತಿಗಳು ನಿಜವಾಗಿಯೂ ಇದು `ನಾದ ದೇಗುಲ' ಎಂಬುದನ್ನು ಸಾಬೀತುಪಡಿಸುತ್ತವೆ. ಅದುವೇ ಬನಶಂಕರಿ ಮೂರನೇ ಹಂತದ ಕತ್ತರಿಗುಪ್ಪೆಯಲ್ಲಿರುವ ಕಲ್ಲೂರ ಮಹಾಲಕ್ಷ್ಮಿ ತಬಲಾ ಮಹಾವಿದ್ಯಾಲಯ.

ಈ ತಬಲಾ ಶಾಲೆ ಮೊದಲು ಪ್ರಾರಂಭವಾದದ್ದು 1985ರಲ್ಲಿ, ಧಾರವಾಡದಲ್ಲಿ. ಬೆಂಗಳೂರಿನಲ್ಲಿ ಶಾಲೆ ಶುರುವಾದದ್ದು 1997ರಲ್ಲಿ. ಇಲ್ಲಿ ನಾಲ್ಕು ವರ್ಷದಿಂದ 76 ವರ್ಷ ವಯಸ್ಸಿನವರೆಗಿನ ಶಿಷ್ಯಂದಿರು ತಬಲಾ ಕಲಿಯುತ್ತಾರೆ. ಪಂ. ರಾಜಗೋಪಾಲ್ ಕಲ್ಲೂರ್‌ಕರ್ ಈ ತಬಲಾ ಸಂಸ್ಥೆಯ ಪ್ರಾಂಶುಪಾಲರು.

ಶಿಸ್ತು, ಅಚ್ಚುಕಟ್ಟುತನ ಮತ್ತು ಕ್ರಮಬದ್ಧ ಪಾಠ ಈ ಶಾಲೆಯ ವೈಶಿಷ್ಟ್ಯ. ಇಲ್ಲಿನ ಮಕ್ಕಳಿಗೆ ಡ್ರೆಸ್‌ಕೋಡ್ ಇದೆ. ಮಕ್ಕಳು ಜುಬ್ಬ-ಕುರ್ತಾ ಹಾಕಿಕೊಂಡೇ ತರಗತಿಗೆ ಬರಬೇಕಾದದ್ದು ಕಡ್ಡಾಯ.  ಒಳಗೆ ಬಂದು ದೇವರು, ತಬಲಾ ಗುರುವಿಗೆ ವಂದಿಸಿ ನಂತರ ಪಾಠ ಕಲಿಯಬೇಕು. ಈ ರೀತಿಯ ಸಂಸ್ಕಾರ ಮಕ್ಕಳಲ್ಲಿ ಶಿಸ್ತು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎನ್ನುತ್ತಾರೆ ಈ ತಬಲಾ ಗುರು.

ಮಕ್ಕಳು, ತಾಯಿ-ಮಗ, ಅಣ್ಣ- ತಂಗಿ, ತಂದೆ-ಮಗಳು ಹೀಗೆ ಇಲ್ಲಿ ಜೋಡಿ ಜೋಡಿಯಾಗಿ ತಬಲಾ ಕಲಿಯುವ ಶಿಷ್ಯಂದಿರು ಕೂಡ ಇದ್ದಾರೆ. ವಾರದಲ್ಲಿ ನಾಲ್ಕು ದಿನ ಎರಡೆರಡು ಬ್ಯಾಚ್‌ಗಳಲ್ಲಿ ಕ್ಲಾಸ್‌ಗಳು ನಡೆಯುತ್ತವೆ. ಇಷ್ಟೂ ಮಂದಿಗೆ ಗುಂಪಿನಲ್ಲಿ ಪಾಠ ಹೇಳಿಕೊಡದೆ ಪ್ರತ್ಯೇಕವಾಗಿಯೇ ಪಾಠ ಮಾಡಲಾಗುತ್ತದೆ.

ಇಲ್ಲಿ ತರಬೇತಿ ಪಡೆದ ಅನೇಕ ಮಕ್ಕಳು ಇಂದು ದೊಡ್ಡ ದೊಡ್ಡ ಸಂಗೀತ ಸಭಾಗಳಲ್ಲಿ ನುಡಿಸುತ್ತಿದ್ದಾರೆ. ಸುಮಾರು 100 ಮಕ್ಕಳು ಇಲ್ಲಿ ತಬಲಾ ಕಲಿಯುತ್ತಾರೆ. 10 ಮಂದಿ ಹುಡುಗಿಯರೂ ಇದ್ದಾರೆ. ಕೆಲವು ಮಕ್ಕಳು ಈಗಾಗಲೇ ಅನೇಕ ವೇದಿಕೆಗಳಲ್ಲಿ ಸೋಲೊ ಮತ್ತು ಸಾಥ್ ನೀಡಿ ಹೆಸರು ಮಾಡಿದ್ದಾರೆ. ಆದರ್ಶ ಶೆಣೈ, ಕಾರ್ತಿಕ್ ಭಟ್, ಕೃಷ್ಣ, ಸರ್ವೋತ್ತಮ, ರೂಪಕ್ ಕಲ್ಲೂರ್‌ಕರ್, ಅಮಿತ್‌ರಾಜ್, ಸುದತ್ತಾ, ಯೋಗೇಶ್ ಸ್ವತಂತ್ರವಾಗಿ ಕಛೇರಿ ಕೊಡುವಷ್ಟರ ಮಟ್ಟಿಗೆ ತಯಾರಾಗಿದ್ದಾರೆ.

ಈ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸಂಗೀತ ಶಿಕ್ಷಣ ಮಂಡಳಿ ಶಿಫಾರಸು ಮಾಡಿದ ಪಠ್ಯಕ್ರಮ, ಮುಂಬಯಿಯ ಗಂಧರ್ವ ಮಹಾವಿದ್ಯಾಲಯಗಳ ಪಠ್ಯಕ್ರಮದ ರೀತಿಯಲ್ಲೇ ತಬಲಾ ಕಲಿಸಲಾಗುತ್ತದೆ. ಮಕ್ಕಳು ಜೂನಿಯರ್, ಸೀನಿಯರ್, ವಿದ್ವತ್ ಹಂತದ ಪರೀಕ್ಷೆಗಳನ್ನು ಎದುರಿಸುವಂತೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಹಿರಿಯ ವಿದ್ವಾಂಸರನ್ನು ಆಗಾಗ ಇಲ್ಲಿಗೆ ಕರೆಸಲಾಗುತ್ತದೆ. ಪ್ರತಿ ತಿಂಗಳು ಬೈಠಕ್ ಇರುತ್ತದೆ. ಇಲ್ಲಿ ಶಿಷ್ಯಂದಿರು ತಾವು ಕಲಿತ, ಅಭ್ಯಾಸ ಮಾಡಿದ ಪಾಠಗಳನ್ನು ವೇದಿಕೆ ಮೇಲೆ ನುಡಿಸಬೇಕಾಗುತ್ತದೆ. ಇದಕ್ಕಾಗಿಯೇ `ಲಯಕಾರಿ' ಎಂಬ ಹೊಸ ಕಾರ್ಯಕ್ರಮ ರೂಪಿಸಿ ಪ್ರತಿಯೊಬ್ಬ ವಿದ್ಯಾರ್ಥಿಯೂ ವೇದಿಕೆ ಹತ್ತಲು ಅವಕಾಶ ನೀಡಲಾಗುತ್ತದೆ ಎನ್ನುತ್ತಾರೆ ಪಂ. ಕಲ್ಲೂರ್‌ಕರ್.

`ಗುರು ಪೂರ್ಣಿಮಾ' ಇಲ್ಲಿ ಆಚರಿಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಸೇರಿದೆ. ಅಂದು ಈ ತಬಲಾ ಶಾಲೆಯಲ್ಲಿ ವಿಶೇಷ ಆಚರಣೆ ಇದೆ. ತಬಲಾದಲ್ಲಿ ಉನ್ನತ ಸಾಧನೆ ಮಾಡಿದವರಿಗೆ `ಲಯಶ್ರೀ ಕಮಲ' ಎಂಬ ಬಿರುದು ನೀಡಿ ಸನ್ಮಾನ ಮಾಡುವ ಕಾರ್ಯಕ್ರಮವೂ ವರ್ಷಕ್ಕೊಮ್ಮೆ ನಡೆಸಲಾಗುತ್ತದೆ.

ಸಂಗೀತದ ಘಟಾನುಘಟಿಗಳೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ. ದಿ.ಪಂ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಪಂ. ಬಸವರಾಜ ರಾಜಗುರು, ಪಂ. ನಯನ್ ಘೋಷ್, ಪಂ. ಮಾಧವ ಗುಡಿ, ಪಂ. ವೆಂಕಟೇಶ್ ಕುಮಾರ್ ಮುಂತಾದ ದಿಗ್ಗಜರು ಈ ಶಾಲೆಯ ಕಾರ್ಯವೈಖರಿ, ಬೋಧನಾ ಶೈಲಿಯನ್ನು ಮೆಚ್ಚಿದ್ದಾರೆ. ಈಗಲೂ ಅನೇಕ ಹಿರಿಯ ವಿದ್ವಾಂಸರನ್ನು ಕರೆಸಿ ಮಾರ್ಗದರ್ಶನ, ಸಲಹೆ ಪಡೆಯಲಾಗುತ್ತದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಮಕ್ಕಳ ಆಸಕ್ತಿ ಹೆಚ್ಚಿಸಲೂ ಸಹಕಾರಿಯಾಗುತ್ತದೆ. ಇನ್ನೂ ಕಲಿಯುವ ಸ್ಫೂರ್ತಿ ಬೆಳೆಯುತ್ತದೆ. ಇಲ್ಲಿ ತಬಲಾ ವಿದ್ಯಾಲಯ ಆರಂಭಿಸಲು ಹಿರಿಯ ತಬಲಾ ವಾದಕ ಪಂ. ರವೀಂದ್ರ ಯಾವಗಲ್ ಅವರ ಪ್ರೋತ್ಸಾಹವೇ ಕಾರಣ  ಎನ್ನುತ್ತಾರೆ ಅವರು.

ತಬಲಾ ವಿದ್ವಾಂಸ ಪಂ. ಗಿರೀಶ್ ಆವಟೆ ಅವರಿಂದ ತಬಲಾ ಕಲಿತ ಪಂ. ಕಲ್ಲೂರ್‌ಕರ್ ಮೂರು ಹೊಸ ತಾಳಗಳನ್ನೂ ಸೃಷ್ಟಿಸಿದ್ದಾರೆ. 11 ಮಾತ್ರೆಗಳ `ವಿರಾಜಕ್', 9 ಮಾತ್ರೆಗಳ `ಶ್ರೀಕಮಲ್' ಮತ್ತು 6 ಮಾತ್ರೆಗಳ `ಶಿಕಾವತೆ' ಇವರು ಸೃಷ್ಟಿಸಿದ ಹೊಸ ತಾಳಗಳು. ಲಯದಲ್ಲಿ ನಡೆಸಿದ ಇವರ ಪ್ರಯೋಗಗಳು ಕೂಡ ಜನಪ್ರಿಯವಾಗಿವೆ. ತಬಲಾದಲ್ಲಿ ಬರುವ ಕಾಯಿದಾ, ತುಕಡಾ, ಮುಕಡಾ, ಪೇಶ್‌ಕಾರ್‌ಗಳಲ್ಲಿ ಸ್ಪಷ್ಟತೆ ಕೂಡ ಇವರ ಪ್ರಯೋಗಶೀಲತೆ ಮತ್ತು ವಿದ್ವತ್ತಿಗೆ ಸಾಕ್ಷಿಯಾಗಿದೆ.

ತಬಲಾ ಪಾಠಕ್ಕೆ ಪೂರಕವಾದ `ಅವನದ್ಧ' ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿರುವ ಪಂ. ಕಲ್ಲೂರಕರ್ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದು ಹೊರತಂದಿದ್ದಾರೆ. ಇದು ತಬಲಾ ಕಲಿಯುವ ಮಕ್ಕಳು ಬಹು ಉಪಯುಕ್ತ ಕೃತಿಯಾಗಿದೆ.

ರಾಜ್ಯ ಸಂಗೀತ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಇವರು ವಿವಿಧ ತಾಳವಾದ್ಯ ಪರೀಕ್ಷೆಗಳ ಮೇಲ್ವಿಚಾರಕರಾಗಿಯೂ ಕೆಲಸ ಮಾಡುತ್ತಾರೆ. ಪತ್ನಿ ವಿಜಯಲಕ್ಷ್ಮಿ ಕೂಡ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು, ಮಗ ರೂಪಕ್ ಉತ್ತಮ ತಬಲಾ ವಾದಕನಾಗಿ ರೂಪುಗೊಂಡಿದ್ದಾನೆ.

ವಿಳಾಸ: ಕಲ್ಲೂರ್ ಮಹಾಲಕ್ಷ್ಮಿ ತಬಲಾ ಮಹಾವಿದ್ಯಾಲಯ, ನಂ. 3/9 ಬಿಎಸ್‌ಕೆ ಮೂರನೇ ಹಂತ, ಕತ್ರಿಗುಪ್ಪೆ ಈಸ್ಟ್, ಬೆಂಗಳೂರು 85, ಫೋನ್: 98452 05803/ 94806 12234.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT