ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಎತ್ತಿದ ರಿಯಲ್ ಎಸ್ಟೇಟ್ ಉದ್ಯಮ

Last Updated 8 ಫೆಬ್ರುವರಿ 2013, 6:30 IST
ಅಕ್ಷರ ಗಾತ್ರ

ಗಜೇಂದ್ರಗಡ: ಕೃಷಿ ಭೂಮಿ ಮೇಲೆ 'ರಿಯಲ್ ಎಸ್ಟೇಟ್' ನರ್ತನ ಮಿತಿ ಮೀರಿರುವ ಕಾರಣ ಈ ಭಾಗದ 'ಅನ್ನದ ಬಟ್ಟಲು' ಬರಿದಾಗುತ್ತಿದೆ.

ತಾಲ್ಲೂಕಿನಲ್ಲಿ ಅನುಷ್ಠಾನಗೊಳ್ಳದ ಶಾಶ್ವತ ನೀರಾವರಿ ಯೋಜನೆ, ರಿಯಲ್ ಎಸ್ಟೇಟ್, ವೇಗವಾಗಿ ಬೆಳೆಯುತ್ತಿರುವ ನಗರ ಇವೆಲ್ಲದರ ಬಿಸಿ ಈ ಭಾಗದ ರೈತರಿಗೆ ಈಗಾಗಲೇ ತಟ್ಟಿದೆ.

`ಅಪರೂಪದ ಅತಿಥಿ'ಯಂತಾಗಿರುವ ಮಳೆಯನ್ನೇ ನಂಬಿರುವ ರೈತರಿಗೆ ದಿನ ದೂಡುವುದು ಸಾಹಸವೇ ಆಗಿದೆ. ನೀರಿನ ಸೌಲಭ್ಯವಿಲ್ಲದೆ  ಬಹಳಷ್ಟು ರೈತರು ಕಂಗಾಲಾಗಿದ್ದಾರೆ. ಕೆಲವರು ಜಮೀನು ಮಾರಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕಾಣದೇ ಇದ್ದ ನಗರೀಕರಣ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ವೇಗ ಪಡೆದುಕೊಂಡಿದೆ.

ಇದರಿಂದಾಗಿ ಗಜೇಂದ್ರಗಡ ನಗರದಲ್ಲಿ 30x40 ವಿಸ್ತೀರ್ಣದ (ಪ್ರತಿಷ್ಠಿತ ಬಡಾವಣೆಗಳಲ್ಲಿ) ನಿವೇಶನಕ್ಕೆ 8ರಿಂದ 10 ಲಕ್ಷದ ವರೆಗೆ ದರವಿದೆ. ಜತೆಗೆ ಎಕರೆ ಜಮೀನಿಗೆ 40 ಲಕ್ಷದಿಂದ 1 ಕೋಟಿವರೆಗೂ ಬೆಲೆ ಇದೆ.  ಹೀಗಾಗಿ ಬಡ ಹಾಗೂ ಕೂಲಿ ಕಾರ್ಮಿಕರು ಸ್ವಂತ ಮನೆ ನಿರ್ಮಿಸಿಕೊಳ್ಳುವ ಅಥವಾ ನಿವೇಶನ ಖರೀದಿಸುವ  ಕನಸು ಮರೀಚಿಕೆಯಾಗಿದೆ.

ಬೃಹತ್ ವಸತಿ ಸಂಕೀರ್ಣ ಮತ್ತು ಬಂಗಲೆಗಳನ್ನು ನಿರ್ಮಿಸಲು ಫಲವತ್ತಾದ ಜಮೀನು ಸೇರಿದಂತೆ ಬರಡು ಜಮೀನು ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರತಿಷ್ಠಿತ ಸಂಸ್ಥೆಗಳು ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿವೆ.

ಗಜೇಂದ್ರಗಡ ಸುತ್ತಮುತ್ತ ಕಲ್ಲು ಗಣಿಗಾರಿಕೆ ವ್ಯಾಪಕವಾಗಿದ್ದು, ಬಹುತೇಕ ಕೃಷಿ ಜಮೀನು ಫಲವತ್ತತೆ ಕಳೆದುಕೊಳ್ಳುತ್ತಿವೆ. ಇದೂ ಕೂಡ ರಿಯಲ್ ಎಸ್ಟೇಟ್ ಚಟುವಟಿಕೆಗೆ ಇನ್ನೊಂದು ಕಾರಣವಾಗಿದೆ. ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಸಂಪೂರ್ಣವಾಗಿ ಕೊಳವೆ ಬಾವಿ ನೀರನ್ನೇ ಅವಲಂಬಿಸಿರುವ ಇಲ್ಲಿನ ಜನರು ಶಾಶ್ವತ ನೀರಾವರಿಗಾಗಿ ದಶಕಗಳಿಂದಲ್ಲೂ ಕಾಯುತ್ತಿದ್ದಾರೆ.

ಬೇಕು ಕಡಿವಾಣ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡು `ರಿಯಲ್ ಎಸ್ಟೇಟ್' ಉದ್ಯಮಕ್ಕೆ ಕಡಿವಾಣ ಹಾಕದಿದ್ದರೆ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಎಲ್ಲ ಜಮೀನುಗಳಲ್ಲಿಯೂ ಕಟ್ಟಡ ನಿರ್ಮಿಸಿದರೆ ಆಹಾರೋತ್ಪನ್ನಕ್ಕೆ ಕಷ್ಟವಾಗಲಿದೆ. ರೈತರ ಆರ್ಥಿಕ ಬಿಕ್ಕಟ್ಟನೇ ಮೆಟ್ಟಿಲನ್ನಾಗಿಸಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿಗಳು ಮುಗ್ಧ ರೈತರನ್ನು ಪುಸಲಾಯಿಸಿ, ರೈತರಿಂದ ಕಡಿಮೆ ಬೆಲೆಗೆ ಜಮೀನುಗಳನ್ನು ಖರೀದಿಸಿ, ಲೇಔಟ್‌ಗಳನ್ನಾಗಿ ಪರಿವರ್ತಿಸಿ ದೊಡ್ಡ ಮೊತ್ತವನ್ನು ನಿಗದಿ ಪಡಿಸಿ, ಅಲ್ಪ ಅವಧಿಯಲ್ಲಿಯೇ ಕೋಟ್ಯಾಧೀಶರಾಗಿ ಮೆರೆಯುತ್ತಿದ್ದಾರೆ ಎಂದು ಈ ಭಾಗದ ಸಾರ್ವಜನಿಕರು ರಿಯಲ್ ಎಸ್ಟೇಟ್ ಚಟುವಟಿಕೆ ವಿರುದ್ಧ ಕಿಡಿಕಾರುತ್ತಾರೆ.

`ರಿಯಲ್ ಎಸ್ಟೇಟ್ ಉದ್ಯಮಿಗಳು ಜಮೀನು ಖರೀದಿಸುವ ಸಂದರ್ಭದಲ್ಲಿ ನೋಂದಣಾಧಿಕಾರಿಗಳಿಗೆ ಹಣದ ಆಮಿಷ ಒಡ್ಡಿ, ಜಮೀನಿನ ಬೆಲೆಯನ್ನು ಕಡಿಮೆ ದರದಂತೆ ನಮೂದಿಸಿ ಸರ್ಕಾರವನ್ನು ವಂಚಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಅಗತ್ಯ' ಎಂದು ಪ್ರಗತಿ ಪರ ರೈತ ಕಳಕಪ್ಪ ಹೂಗಾರ ಆಕ್ರೋಶ ವ್ಯಕ್ತಪಡಿಸುತ್ತಾರೆ.

`ಜನ ವಸತಿ ಪ್ರದೇಶಗಳು ವಿಸ್ತಾರಗೊಳ್ಳುತ್ತಿದ್ದು, ಅರಣ್ಯದ ಜತೆಗೆ ಕೃಷಿ ಭೂಮಿ ಪ್ರಮಾಣವೂ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ  ಎನ್ನುತ್ತಾರೆ' ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ.

`ಗಜೇಂದ್ರಗಡದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವ್ಯಾಪಕ ವಾಗಿರುವುದು ನಿಜ. ಆದರೆ, ಸರ್ಕಾರ ನಿಗಧಿಪಡಿಸಿದ ದರದಲ್ಲಿಯೇ ರೈತರ ಜಮೀನುಗಳ ಖರೀದಿ ಪ್ರಕ್ರಿಯೆ ನಡೆಯುತ್ತಿವೆ. ಬದಲಾಗಿ ಕಾನೂನು ಬಾಹಿರ ಖರೀದಿ ಪ್ರಕ್ರಿಯೆಗೆ ಅವಕಾಶ ಇಲ್ಲ ಎಂದು ಗಜೇಂದ್ರಗಡ ನೋಂದಣಾಧಿಕಾರಿ ಎಂ.ಬಿ. ದುಮ್ಮವಾಳ 'ಪ್ರಜಾವಾಣಿ'ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT