ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ 12ರಂದು

Last Updated 4 ಜೂನ್ 2013, 5:20 IST
ಅಕ್ಷರ ಗಾತ್ರ

ಆಲಮಟ್ಟಿ: ನಿಡಗುಂದಿಯ ಜಿ.ವಿ.ವಿ.ಎಸ್. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜೂನ್ 12ರಂದು ನಡೆಸಲು ಉದ್ದೇಶಿಸಿರುವ ಬಸವನಬಾಗೇವಾಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆ, ಉದ್ಘಾಟನಾ ಸಮಾರಂಭ ಸೇರಿ ಮೂರು ಗೋಷ್ಠಿಗಳನ್ನು ನಡೆಸಲು ನಿರ್ಧರಿಸಲಾಯಿತು.

ಪಟ್ಟಣದ ರುದ್ರೇಶ್ವರ ಮಠದಲ್ಲಿ ಭಾನುವಾರ ಸಂಜೆ ಕ.ಸಾ.ಪ. ವತಿಯಿಂದ ನಡೆದ ವಿವಿಧ ಗಣ್ಯರ, ಸಾಹಿತ್ಯಾಭಿಮಾನಿಗಳ, ಕನ್ನಡಾಭಿಮಾನಿಗಳ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ.

ನಿಡಗುಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ವಾಧ್ಯಕ್ಷರ ಹಾಗೂ ನುಡಿ ತೇರಿನ ಅದ್ದೂರಿ ಮೆರವಣಿಗೆ, ಉದ್ಘಾಟನಾ ಸಮಾರಂಭ ನಡೆಯಲಿವೆ. ಇದಲ್ಲದೆ ಕವಿ ಗೋಷ್ಠಿ, ಪ್ರಚಲಿತ ಸಾಹಿತ್ಯಿಕ ವಿಷಯದ ಗೋಷ್ಠಿ, ಕೃಷ್ಣಾ ನದಿ ನೀರು ಹಂಚಿಕೆ, ನೀರಾವರಿ ಪ್ರದೇಶ, ರೈತ ಜಾಗೃತಿಗೋಷ್ಠಿ ನಡೆಸಲು ನಿರ್ಧರಿಸಲಾಯಿತು.

ಪದಾಧಿಕಾರಿಗಳ ಆಯ್ಕೆ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕರಾಗಿ ಶಿವಾನಂದ ಪಾಟೀಲ, ಹಿರಿಯ ಉಪಾಧ್ಯಕ್ಷರಾಗಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ಆಯ್ಕೆ ಮಾಡಿ, ಮೆರವಣಿಗೆ ಸಮಿತಿ, ಹಣಕಾಸು ಸಮಿತಿ, ಶಿಸ್ತುಪಾಲನಾ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಆರೋಗ್ಯ ಸಮಿತಿ, ಸನ್ಮಾನ ಸಮಿತಿ, ಪೆಂಡಾಲ್ ಸಮಿತಿ ಸೇರಿದಂತೆ ಇತರ ಸಮಿತಿ ರಚಿಸಲಾಯಿತು.

ಸಾಂಸ್ಕೃತಿಕ ಕಲೆಯ ಇಂಪು: ಸರ್ವಾಧ್ಯಕ್ಷರ ಮೆರವಣಿಗೆಗೆ ವಿವಿಧ ಜನಪದ ಕಲಾ ತಂಡಗಳನ್ನು ಆಹ್ವಾನಿಸಿ, ಪೂರ್ಣಕುಂಭದೊಂದಿಗೆ ಸ್ವಾಗತ ನೀಡಿ ಮೆರವಣಿಗೆಗೆ ರಂಗು ತರಲು ನಿರ್ಧರಿಸಲಾಯಿತು.

ನಿಡಗುಂದಿಯಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಸಮ್ಮೇಳನವನ್ನು ಅದ್ದೂರಿಯಾಗಿ, ಅಲ್ಲದೇ ಸಾಹಿತ್ಯ ಚಿಂತನೆಗೆ ಒಡ್ಡುವ ಸಮಾರಂಭವನ್ನಾಗಿ ಮಾಡಲು ಜನತೆ ತೀರ್ಮಾನಿಸಿದರು.

ಸರ್ವಾಧ್ಯಕ್ಷರ ಆಯ್ಕೆ: ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ನಿಡಗುಂದಿ ಪಟ್ಟಣದಲ್ಲಿಯೇ ನಡೆಸಬೇಕೆಂದು ನಿವೃತ್ತ ಉಪನ್ಯಾಸಕ ರೇವಡಿ ಒತ್ತಾಯಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ತಾಲ್ಲೂಕು ಘಟಕದ ಧ್ಯಕರು ಹಾಗೂ ತಾಲ್ಲೂಕಿನ ಸಾಹಿತಿಗಳು ಸೇರಿ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬೊಮ್ಮನಳ್ಳಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜನಪದ ಸಾಹಿತಿ ಕಾ.ಹು. ಬಿಜಾಪುರ, ಅಶೋಕ ಹಂಚಲಿ, ವಿವೇಕಾನಂದ ಕಲ್ಯಾಣಶೆಟ್ಟಿ, ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ, ಬಸವರಾಜ ಕುಂಬಾರ ಮಾತನಾಡಿದರು. ರುದ್ರಮುನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಎಪಿಎಂಸಿ ಸದಸ್ಯ ಎಂ.ಕೆ. ಮಾಮನಿ, ಮ.ಚ. ವಾರದ, ಶಿವಾನಂದ ಮುಚ್ಚಂಡಿ, ಗಂಗಾಧರ ವಾರದ, ಗ್ರಾಪಂ ಅಧ್ಯಕ್ಷೆ ಶರಣಮ್ಮೋ ವಾರದ, ಬಸವರಾಜ ಸಾಲಿಮಠ, ಅರವಿಂದ ಕುಲಕರ್ಣಿ, ಸುಮಂಗಲಾ ಕಾಜಗಾರ, ಭಾರತಿ ಖಮೀತಕರ, ವೈ.ಕೆ. ಪತ್ತಾರ, ಬಸವರಾಜ ನಂದಿಹಾಳ, ಬಿ.ಟಿ. ಗೌಡರ, ಎನ್.ಎಸ್. ಬಂಡಿವಡ್ಡರ, ಮಹಾಂತೇಶ ಝಳಕಿ, ರಮೇಶ ಪೂಜಾರ, ಪರಶುರಾಮ ಕಾರಿ, ಹೊನ್ನಪ್ಪ ಗುಳೇದಗುಡ್ಡ, ಎಸ್.ಎಸ್. ಹೊಸಮನಿ, ಆರ್.ಕೆ. ಸುರಪುರ, ನಜೀರ ಗುಳೇದ, ಸಲೀಂ ದಡೇದ, ಎಂ.ಎಂ. ಮುಲ್ಲಾ, ಸಿ.ಐ. ಕುಬಸದ, ಭಾಷಾ ಮನಗೂಳಿ, ಎಸ್.ಎಚ್. ದಾಸರ, ಭೀಮರಾಯ ಹೂಗಾರ, ಮೊದಲಾದವರಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಆರ್.ಕೆ. ಸುರಪುರ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು. ವೈ.ಕೆ. ಪತ್ತಾರ ವಂದಿಸಿದರು.
ಸಮ್ಮೇಳನಕ್ಕೆ 3 ಸಾವಿರ ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಪಾಲ್ಗೊಳ್ಳುವ ಎಲ್ಲರಿಗೂ ಮಧ್ಯಾಹ್ನ ಊಟ ನೀಡಲು, ವೇದಿಕೆಯ ಹಿಂಭಾಗದಲ್ಲಿ 20 ಪುಸ್ತಕ ಮತ್ತು ವಿವಿಧ ವಾಣಿಜ್ಯ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಯಿತು.

ಸ್ಥಳ ಪರಿಶೀಲನೆ
ಆಲಮಟ್ಟಿ: ನಿಡಗುಂದಿಯಲ್ಲಿ ಜೂನ್ 12ರಂದು ಜಿ.ವಿ.ವಿ.ಎಸ್. ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ನಡೆಯಲಿರುವ ಬಸವನಬಾಗೇವಾಡಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳವನ್ನು ವಿವಿಧ ಗಣ್ಯರು ಸೋಮವಾರ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿವಿವಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿದ್ದು ನಾಗಠಾಣ, ಸಾಹಿತ್ಯ ಸಮ್ಮೇಳನಕ್ಕೆ ಬರುವ ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ಬೆಳಿಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯ ಸಂಪೂರ್ಣ ಖರ್ಚು ವೆಚ್ಚವನ್ನು ನೀಡುವ ಭರವಸೆ ನೀಡಿದರು. ಅಲ್ಲದೇ ಸಂಸ್ಥೆಯ ಎಲ್ಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳ, ವಿದ್ಯಾರ್ಥಿಗಳ ಸಹಕಾರವನ್ನು ಸಮ್ಮೇಳನಕ್ಕೆ ಒದಗಿಸುವ ಭರವಸೆ ನಾಗಠಾಣ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಮಾತನಾಡಿ, ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಇಲಾಖೆಯ ವತಿಯಿಂದ ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದರು. ಅಲ್ಲದೇ ಸಮ್ಮೇಳನ ಯಶಸ್ವಿಗೆ ಶಿಕ್ಷಕ ಬಳಗದವರನ್ನು ನಿಯೋಜನೆ ಮಾಡುವುದಾಗಿಯೂ ತಿಳಿಸಿದರು.

ಸುಮಾರು 1500 ಖುರ್ಚಿಗಳು ಹಿಡಿಸುವ ಹಾಗೆ ದೊಡ್ಡ ಪೆಂಡಾಲ್ ಹಾಕಲು ಹಾಗೂ ಪ್ರಧಾನ ವೇದಿಕೆಗೆ ಪ್ರತ್ಯೇಕ ಪೆಂಡಾಲ್ ಹಾಕಲು ಸಾಹಿತಿ ಅಶೋಕ ಹಂಚಲಿ ಹಾಗೂ ಬಿಇಒ ನಾಗೂರ ಸೂಚಿಸಿದರು. ವೇದಿಕೆಯನ್ನು ಸುಂದರವಾಗಿ ಅಲಕಂರಿಸಲು ಪೆಂಡಾಲ್ ಸಮಿತಿಯ ಸದಸ್ಯರಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬೊಮ್ಮನಳ್ಳಿ, ಸಾಹಿತಿ ಅಶೋಕ ಹಂಚಲಿ, ರೈತ ಮುಖಂಡ ಅರವಿಂದ ಕುಲಕರ್ಣಿ, ಶಿಕ್ಷಣ ಸಂಯೋಜಕ ಎಸ್.ಎಸ್. ಹೊಸಮನಿ, ಉದಯಕುಮಾರ ಬಶೆಟ್ಟಿ, ಎ.ಎನ್. ಚಿಮ್ಮಲಗಿ, ಆರ್.ಕೆ. ಸುರಪುರ, ತಾ.ಪಂ. ಸದಸ್ಯ ಗದ್ದೆಪ್ಪ ಮಾದರ, ಎಸ್.ಎಸ್. ಬೊಮ್ಮನಳ್ಳಿ ಮೊದಲಾದವರಿದ್ದರು.

ಕಾರ್ಯಾಲಯ ಉದ್ಘಾಟನೆ: ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಸಲು ಹಾಗೂ ಇನ್ನೀತರ ಕಾರ್ಯಚಟುವಟಿಕೆಗಳಿಗಾಗಿ ಸ್ಥಾಪಿಸಲಾಗಿರುವ ಕಾರ್ಯಾಲಯದ ಉದ್ಘಾಟನೆಯನ್ನು ಜೂನ್ 5 ಬುಧವಾರ ಬೆಳಿಗ್ಗೆ 10 ಕ್ಕೆ ನಡೆಯಲಿದೆ. ರುದ್ರಮುನಿ ಸ್ವಾಮೀಜಿ ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬೊಮ್ಮನಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT