ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಮದ್ದಳೆ ಶ್ರೋತೃಗಳೆಲ್ಲಿ?

Last Updated 4 ಜೂನ್ 2011, 8:40 IST
ಅಕ್ಷರ ಗಾತ್ರ

ಪತ್ತನಾಜೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿಯ ಅಲ್ಲಲ್ಲಿ ತಾಳಮದ್ದಲೆ ಕಾರ್ಯಕ್ರಮ ಚುರುಕು ಪಡೆಯುತ್ತಿತ್ತು. ಕೇಳುಗರು ಹಗಲು ರಾತ್ರಿ ನಿದ್ದೆಗೆಡುವಂತೆ ಕುತೂಹಲ ಹುಟ್ಟಿಸುತ್ತಿದ್ದ, ಚಿಂತನೆಗೆ ಒರೆಹಚ್ಚುತ್ತಿದ್ದ ತಾಳ ಮದ್ದಲೆ ಯಕ್ಷಗಾನ ದಂತೆಯೇ ಪಾಂಡಿತ್ಯಪೂರ್ಣ ಕಲೆ.

ಯಕ್ಷಗಾನ ಬಯಲಾಟ, ಡೇರೆ ಮೇಳಗಳ ಪ್ರದರ್ಶನಗಳ ವೈಭವದ ಯುಗ ಅಂತ್ಯಗೊಳ್ಳುವ ದುಃಶಕುನಗಳು ಕಾಣಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ, ತಾಳಮದ್ದಳೆಯೂ ಅದೇ ಜಾಡು ಹಿಡಿಯುತ್ತಿರುವ ಮುನ್ಸೂಚನೆ ಗೋಚರಿಸಲಾರಂಭಿಸಿದೆ.

ತಾಳಮದ್ದಳೆ ರಂಗದಿಂದ ಮೇರುಕಲಾವಿದರು ಒಬ್ಬರ ಹಿಂದೆ ಒಬ್ಬರಂತೆ ನೇಪಥ್ಯಕ್ಕೆ ಸರಿದ ನಂತರದಲ್ಲಿ ಯಕ್ಷಗಾನ ಕೂಟಗಳು ಸಪ್ಪೆಯಾಗಿವೆ. ಈಚೆಗಂತೂ ಅವು ಶ್ರೋತೃಗಳಿಲ್ಲದೆ ಸೊರಗುತ್ತಿವೆ. ಸಂಖ್ಯೆ ದೃಷ್ಟಿಯಲ್ಲಿ ತಾಳಮದ್ದಳೆ ಕೂಟಗಳು ಹೆಚ್ಚಿರುವಂತೆ ಕಾಣುತ್ತಿದ್ದರೂ ಶ್ರೋತೃಗಳನ್ನು ಆಕರ್ಷಿಸುವಲ್ಲಿ ಅವು ವಿಫಲವಾಗುತ್ತಿವೆ.
 
ಅನೇಕ ಕೂಟಗಳಲ್ಲಿ ಶ್ರೋತೃಗಳ ಸಂಖ್ಯೆ ಅರ್ಥಧಾರಿಗಳ ಸಂಖ್ಯೆಗಿಂತಲೂ ಕಡಿಮೆ! ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ತಾಳಮದ್ದಳೆ ಕೂಟಗಳಲ್ಲೂ ಶೋತೃಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಯುವ ಪೀಳಿಗೆಯವರಂತೂ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ.

ಯಕ್ಷಗಾನ ತಾಳಮದ್ದಳೆ ಕೂಟಗಳಿಗೆ ಸೌಕರ್ಯ-ಸವಲತ್ತು, ಬೆಂಬಲ-ಪ್ರೋತ್ಸಾಹ, ಧಾರಾಳವಾಗಿದ್ದರೂ ಈಗಿನ ಯಕ್ಷಗಾನ ಕೂಟಗಳಲ್ಲಿ ಕೇಳುಗರನ್ನು ಸೆಳೆಯುವ ಗುಣಾಂಶ ಕಾಣುವುದಿಲ್ಲ.ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಗೆ ಕುಂಬ್ಳೆ ಸುಂದರ ರಾವ್ ಸೂತ್ರಧಾರರಾದ ನಂತರ ತಾಳಮದ್ದಳೆ ಕೂಟಗಳಿಗೆ ಧನಸಹಾಯ ನೀಡುವ ಹೊಸ ಪರಿಪಾಟ ಪ್ರಾರಂಭವಾಗಿದ್ದರೂ ಕೂಟಗಳ ಮೌಲ್ಯವರ್ಧನೆಯ ಕಡೆಗೆ ಲಕ್ಷ್ಯ ವಹಿಸಿದಂತಿಲ್ಲ. ಸಹಾಯಧನ ನೀಡಲು ಅಕಾಡೆಮಿಯ ಮಾನದಂಡ ಏನೆಂಬುದೂ ತಿಳಿಯದು.

ತಾಳಮದ್ದಳೆಯ ಗತವೈಭವಕ್ಕೆ ಸ್ವತಃ ಸಾಕ್ಷಿಯಾಗಿದ್ದ ಸುಂದರ ರಾವ್ ಕಾಲದಲ್ಲೇ ತಾಳಮದ್ದಳೆಗೆ ಈ ಗತಿ ಬಂದಿರುವುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ. ಅರ್ಥಗಾರಿಕೆಯ ಅಂದಿನ ವೈಭವ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಶಾಸ್ತ್ರಿ-ಸಾಮಗ-ಶೇಣಿ-ಪೊಲ್ಯ-ಮಟ್ಟಿ-ದೇರಾಜೆ- ಪೆರ್ಲ ಅವರಂತಹ ಮತ್ತೊಂದು ದಿಗ್ಗಜ ಅರ್ಥಧಾರಿಗಳನ್ನು ಮತ್ತೆ ಕಾಣಲು ಸಾಧ್ಯವೇ?.

ತಾಳಮದ್ದಳೆ ಕೂಟಗಳ ಈ ಅವದೆಸೆಯಲ್ಲಿ ಸಂಘಟಕರ, ಸಂಯೋಜಕರ ಪಾತ್ರವೂ ಸಾಕಷ್ಟು. ಇಲ್ಲಿ ಎಲ್ಲವೂ ಬೇಕಾಬಿಟ್ಟಿ. ಅರ್ಥಧಾರಿಗಳಲ್ಲೂ ಸಣ್ಣ ರಾಜಕೀಯ, ಗುಂಪುಗಾರಿಕೆ, ಮತ್ಸರ, ಅಸೂಯೆ! ಶೇಣಿಯವರ ನಿರ್ಗಮನ ನಂತರದಲ್ಲಿ ಈ ರಂಗದಲ್ಲಿ ಆರಾಜಕತೆ ಎದ್ದು ಕಾಣುತ್ತಿದೆ.

ಕೆಲವು ಕೂಟಗಳು `ಮ್ಯಾಚ್ ಫಿಕ್ಸಿಂಗ್~ ರೀತಿಯವು. ಇಂದಿನ ಕೂಟಗಳಲ್ಲಿ ಅಂದಿನ ಗಾಂಭೀರ್ಯವೂ ಇಲ್ಲ, ಸ್ವಾರಸ್ಯವೂ ಇಲ್ಲ. ಮಾಮೂಲು ಧಾಟಿಯ ಕೂಟಗಳು ಹಿರಿತಲೆಮಾರಿನವರಿಗೆ ಹಿಡಿಸುತ್ತಿಲ್ಲ.

ಮತ್ತೊಂದೆಡೆ, ಈಗಿನ ಕೂಟಗಳಲ್ಲಿ ತಾರಾಮೌಲ್ಯದ ಕಲಾವಿದರಿಲ್ಲ. ಸಮಯ ಮಿತಿಯ ಕೂಟಗಳಂತೂ ಬಾನುಲಿ ಕಾರ‌್ಯಕ್ರಮಗಳಾಗಿ ಮಾರ್ಪಟ್ಟಿವೆ. ವಾಸ್ತವದಲ್ಲಿ ಇಂದು ಎ ಶ್ರೇಣಿಯ ಅರ್ಥದಾರಿಗಳೇ ಇಲ್ಲ. ದಿನವೊಂದರಲ್ಲಿ ಮೂರು ಕೂಟಗಳಾದರೆ ಅವುಗಳ ಮೌಲ್ಯ ಏನೇ ಇರಲಿ ಮೂರು `ಕವರ್~ ಕಿಸೆ ಸೇರುತ್ತದಲ್ಲ. ಕಲಾವಿದರ ಈ ವ್ಯಾಪಾರಿ ದೃಷ್ಟಿಯೂ ಕಲೆಯ ಅಪಮೌಲ್ಯಕ್ಕೆ ಕಾರಣ.

ಮತ್ತೊಂದೆಡೆಯಿಂದ ಸಮಯ ಮಿತಿಯ ಪ್ರಯೋಗ ಯಕ್ಷಗಾನ ಪ್ರದರ್ಶನಗಳ ಮಟ್ಟಿಗೆ ಸ್ವೀಕಾರಾರ್ಹ. ಆದರೆ, ಕಾಲಮಿತಿ ಪ್ರಯೋಗ ತಾಳಮದ್ದಳೆ ಬೆಳವಣಿಗೆಗೆ ಮುಳುವಾಗುವ ಅಪಾಯವಿದೆ. ಸಮಯ ಮಿತಿ ಕಲೆಯ ಮೌಲ್ಯವರ್ಧನೆಗೆ ಸಹಕಾರಿ ಎಂಬುದು ಈ ರಂಗದ ತಜ್ಞರ ಅಭಿಮತ.

ಸಾಮಾನ್ಯ ಕೇಳುಗರನ್ನೇ ತಲುಪಲಾಗದ ಇಂದಿನ ಅರ್ಥದಾರಿಗಳು ಹೊಸ ಶ್ರೋತೃಗಳನ್ನುಆಕರ್ಷಿಸುವುದು ಹೇಗೆ? ತಾಳಮದ್ದಳೆ ಕೂಟಗಳು ಈಗ ಉಳಿದುಕೊಂಡಿರುವುದು ಹಿಮ್ಮೇಳದ ಬಲದಿಂದಲೇ ಎಂಬ ಒಂದು ಅಭಿಪ್ರಾಯವೂ ತಾಳಮದ್ದಳೆ ವಲಯಗಳಲ್ಲಿ ಈಚೆಗೆ ಗಟ್ಟಿಯಾಗಿಯೇ ಕೇಳಿಸಲಾರಂಭಿಸಿದೆ.
ಯಕ್ಷಗಾನ ಬಯಲಾಟ ಅಕಾಡೆಮಿ ಈ ಅಪೂರ್ವ ಪ್ರಕಾರದ ಮೌಲ್ಯ ಸಂರಕ್ಷಣೆಯ ದಿಸೆಯಲ್ಲಿ ಗಂಭೀರ ಚಿಂತನೆ ನಡೆಸಬೇಕಾದ ಕಾಲ ಈಗ ಸನ್ನಿಹಿತವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT