ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಡುಗುತ್ತಿಗೆಯಲ್ಲಿ ನಿಯಮ ಉಲ್ಲಂಘನೆ

ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ, ಅಸಮಾಧಾನ
Last Updated 10 ಜನವರಿ 2014, 8:19 IST
ಅಕ್ಷರ ಗಾತ್ರ

ಕೋಲಾರ: ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ ಕಾಮಗಾರಿಗಳನ್ನು ಅನುಷ್ಠಾನ­ಗೊಳಿ­ಸಲು ತುಂಡುಗುತ್ತಿಗೆ ಮತ್ತು ಪ್ಯಾಕೇಜ್ ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮ­ಗಳನ್ನು ಉಲ್ಲಂಘಿಸಲಾಗಿದೆ. ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವು ಸದಸ್ಯರು ಆಗ್ರಹಿಸಿದ ಘಟನೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕಾಮಗಾರಿಗಳನ್ನು ಯಾವ ಆಧಾ­ರದ ಮೇಲೆ ತುಂಡುಗುತ್ತಿಗೆಯಡಿ ನಡೆಸಲಾಗುತ್ತಿದೆ? ಅವುಗಳಿಗೆ ಇರುವ ಕರಾರುಗಳೇನು? ಹಲ ಕಾಮಗಾರಿಗಳಿಗೆ 2-3 ಬಾರಿ ಮರು ಟೆಂಡರುಗಳನ್ನು ಕರೆದ ಉದ್ದೇಶವೇನು? ಕಾಮಗಾರಿಗಳ ಪೈಕಿ ಎಷ್ಟು ಪೂರ್ಣಗೊಂಡಿವೆ? ಎಂದು ಸದಸ್ಯರು ಅಸಮಾಧಾನದಿಂದ ಕೂಡಿದ ಹಲವು ಪ್ರಶ್ನೆಗಳನ್ನು ಸದಸ್ಯರಾದ ಡಿ.ವಿ.­ಹರೀಶ್, ಎ.ಎಂ.­ಲಕ್ಷ್ಮಿನಾರಾ­ಯಣ, ನಾರಾಯಣರೆಡ್ಡಿ ಮಂಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ದೇವ­ರಾಜ್, ₨ 5 ಲಕ್ಷ ವೆಚ್ಚದ ಒಳಗಿನ ಕಾಮ­ಗಾರಿಗಳನ್ನು ತುಂಡುಗುತ್ತಿಗೆಯಡಿ ನೇರವಾಗಿ ನೀಡಬಹುದು. ಅದಕ್ಕೂ ಮೇಲ್ಪಟ್ಟ ವೆಚ್ಚದ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ನೀಡಬೇಕು. ಜಿಲ್ಲೆಯಾದಾದ್ಯಂತ 3850 ಕಾಮಗಾರಿಗಳ ಪೈಕಿ 900 ಕಾಮಗಾರಿ­ಗಳಿಗೆ ಟೆಂಡರ್ ನೀಡಲಾಗಿದೆ. 1600 ಕಾಮಗಾರಿಗಳನ್ನು ತುಂಡುಗುತ್ತಿಗೆಯಡಿ ನೀಡಲಾಗಿದೆ. ಉಳಿದ 1350 ಕಾಮಗಾರಿಗಳು ಕ್ರಿಯಾಯೋಜನೆ ಹಂತದಲ್ಲಿದೆ ಎಂದು ಉತ್ತರಿಸಿದರು.

ತಮ್ಮ ಕ್ಷೇತ್ರದಲ್ಲಿ ಈವರೆಗೂ ಒಂದೇ ಒಂದು ಪ್ಯಾಕೇಜ್ ಕಾಮಗಾರಿ ನಡೆಸಿ­ರುವುದು ಕೂಡ ಗಮನಕ್ಕೆ ಬಂದಿಲ್ಲ. ಪ್ಯಾಕೇಜ್ ಕಾಮಗಾರಿಗಳನ್ನು ಆಯಾ ಕ್ಷೇತ್ರದ ಸದಸ್ಯರ ಗಮನಕ್ಕೆ ಏಕೆ ತರುವು­ದಿಲ್ಲ ಎಂದು ಸದಸ್ಯ ಲಕ್ಷ್ಮಿನಾರಾಯಣ ಆಕ್ಷೇಪಿಸಿದರು.

ಕ್ರಿಯಾ ಯೋಜನೆ ರೂಪಿಸುವಾಗ ₨ 5 ಲಕ್ಷದ ಒಳಗೆ ರೂಪಿಸಿ ಎಂದು ಹೇಳಿ­ದ್ದರೂ ಅದಕ್ಕಿಂತಲೂ ಹೆಚ್ಚು ವೆಚ್ಚದ ಕಾಮಗಾರಿಗಳನ್ನೇ ಅಧಿಕಾರಿಗಳು ರೂಪಿಸಿದ್ದಾರೆ ಎಂದು ಸದಸ್ಯ ನಾರಾ­ಯಣರೆಡ್ಡಿ ಆರೋಪಿಸಿದರು.

2-3 ಕಾಮಗಾರಿಗಳನ್ನು ಒಟ್ಟಾಗಿಸಿ ಕ್ರಿಯಾ ಯೋಜನೆಯನ್ನು 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ರೂಪಿಸಿ ಅದಕ್ಕೆ ಟೆಂಡರ್ ಕರೆಯಲಾಗುತ್ತಿದೆ. ತುಂಡು ಗುತ್ತಿಗೆ ಮಾಡಿದರೆ ಜಿ.ಪಂ. ಸದಸ್ಯರು ಸೂಚಿಸಿದವರಿಗೇ ನೀಡಬೇಕಾಗುತ್ತದೆ ಎಂಬ ಹುನ್ನಾರವನ್ನು ಅಧಿಕಾರಿಗಳು ನಡೆಸಿದ್ದಾರೆ ಎಂದು ಸದಸ್ಯ ಹರೀಶ್ ದೂರಿದರು,

ಕಾಮಗಾರಿಗಳಲ್ಲಿ ನಿಯಮ ಉಲ್ಲಂಘಿ­ಸಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾ­ರಸು ಮಾಡಬೇಕು ಎಂದು ಈ ಸದಸ್ಯರು ಆಗ್ರಹಿಸಿದರು.

ತಮ್ಮ ಕ್ಷೇತ್ರದಲ್ಲಿ ನೀರಿನ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಿದ್ದರೂ ಅವು­ಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಬಹ­ಳಷ್ಟು ಕಾಮಗಾರಿಗಳು ಪೂರ್ಣ­ಗೊಳ್ಳದೆ ಬಾಕಿ ಉಳಿದಿವೆ ಎಂದು ಸದಸ್ಯ ಸೋಮಶೇಖರ ರೆಡ್ಡಿ ದೂರಿದರು.

ವಿಶೇಷ ಸಭೆ: ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಆರ್.ನಾರಾಯಣಸ್ವಾಮಿ, ನೀರಿಗೆ ಸಂಬಂಧಪಟ್ಟಂತೆ ಎಲ್ಲ ಅಧಿ­ಕಾರಿಗಳನ್ನು ವಿಶೇಷ ಸಭೆಯನ್ನು ಏರ್ಪಡಿಸಬೇಕು ಎಂದು ದೇವರಾಜ್ ಅವರಿಗೆ ಸೂಚಿಸಿದರು.

ಗೊಂದಲ ನಿವಾರಿಸಿ: ಕುಡಿಯುವ ನೀರು ಯೋಜನೆಗಳಲ್ಲಿ ಯಾವುದು ಕೇಂದ್ರ ಸರ್ಕಾರದ್ದು, ಯಾವುದು ರಾಜ್ಯ ಸರ್ಕಾರದ್ದು ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುವುದಿಲ್ಲ ಎಂದು ರಾಮಸ್ವಾಮಿರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವ­ಹಣಾಧಿಕಾರಿ ಎಸ್.ಎಂ.ಜುಲ್ಫಿಕರ್ ಉಲ್ಲಾ, ರಾಷ್ಟ್ರೀಯ ಗ್ರಾಮೀಣ ಕುಡಿ­ಯುವ ನೀರು ಯೋಜನೆಯು ಕೇಂದ್ರ ಸರ್ಕಾರದ್ದಾಗಿದೆ. ಉಳಿದಂತೆ ಕೆಲವು ಕೇಂದ್ರ ಮತ್ತು ರಾಜ್ಯ ಸರ್ಕಾರವೆರಡರ ಅನುದಾನ ಹಂಚಿಕೆಯಲ್ಲಿ ನಡೆಯು­ತ್ತಿವೆ ಎಂದು ಸ್ಪಷ್ಟನೆ ನೀಡಿದರು.

ಬೇಸಿಗೆ ಕಾಲ ಸಮೀಪಿಸುತ್ತಿರುವು­ದರಿಂದ ಮುನ್ನೆಚ್ಚರಿಕೆಯಾಗಿ ಕೈಗೊಳ್ಳ­ಬೇಕಾದ ಕ್ರಮಗಳ ಕಡೆ ಗಮನ ಹರಿ­ಸಬೇಕು. ಕಾಲುಬಾಯಿ ಜ್ವರದಿಂದ ಸಾವನ್ನ­ಪ್ಪಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರವನ್ನು ಶೀಘ್ರ ದೊರಕಿಸಬೇಕು ಎಂದು ಸದಸ್ಯ ಎಸ್.ಬಿ.­ಮುನಿವೆಂಕಟಪ್ಪ ಹೇಳಿದರು. ಉಪಾ­ಧ್ಯಕ್ಷೆ ಅಲುವೇಲಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT