ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ತುಳುಕುತ್ತಿರುವ ಕಸ

Last Updated 6 ಜೂನ್ 2011, 9:00 IST
ಅಕ್ಷರ ಗಾತ್ರ

ತುಮಕೂರು: ತಂಗಾಳಿ ಸುಳಿದು ಬಂದರೆ ಎಲ್ಲೆಡೆ ಪಸರಿಸುವ ಗಬ್ಬು ವಾಸನೆ. ಅಕ್ಕಪಕ್ಕದ ಮನೆಗಳಲ್ಲಿ ಕೆಮ್ಮುತ್ತಾ ಹೊರಗೆ ಬರುವ ಮಕ್ಕಳ ಮುಖದ ಮೇಲೆಲ್ಲಾ ಸೊಳ್ಳೆ ಕಚ್ಚಿದ ಕಲೆಗಳು...

ನಗರದ ಪೂರ್‌ಹೌಸ್ ಕಾಲೊನಿಯಲ್ಲಿ ಮೋರಿಗಳು ಹರಿಯುವುದನ್ನೇ ಮರೆತಿವೆ. ಮೋರಿಯಿಂದ ಎತ್ತಿ ಹಾಕಿದ ಕಸ ಮಳೆ ನೀರಿನೊಂದಿಗೆ ಬೆರೆತು ಮತ್ತೆ ಮೋರಿಯನ್ನೇ ಸೇರುತ್ತಿದೆ. ಎಲ್ಲ ಕಂಟೈನರ್‌ಗಳಲ್ಲೂ ಕಸ ತುಂಬಿ ಚೆಲ್ಲಾಡುತ್ತಿವೆ. ಮೊದಮೊದಲು ಮೂಗುಮುಚ್ಚಿ ಓಡಾಡುತ್ತಿದ್ದ ನಾಗರಿಕರು ಈಚೆಗೆ ಕೊಳೆತ ಕಸದ ವಾಸನೆಗೆ ತಡೆಯಲಾರದೆ ಒದ್ದಾಡುತ್ತಿದ್ದಾರೆ.

`ಮನೆ ಮುಂದಿರುವ ಖಾಲಿ ನಿವೇಶನದಲ್ಲಿ ಸುತ್ತಮುತ್ತಲ ಮನೆಯವರು ಕಸ ಹಾಕುತ್ತಾರೆ. ಪಕ್ಕದ ಬೀದಿಯಲ್ಲಿರುವ ಕಸದ ಕಂಟೈನರ್ ತುಂಬಿ ತುಳುಕುತ್ತಿದ್ದರೂ ನಗರಸಭೆ ಸಿಬ್ಬಂದಿ ಅದನ್ನು ಸಾಗಿಸುವ ಆಲೋಚನೆ ಮಾಡಿಲ್ಲ. ಸೊಳ್ಳೆಗಳ ಕಾಟದಲ್ಲಿ ನಿದ್ದೆಯೇ ಬರುವುದಿಲ್ಲ~ ಎಂದು ಅಳಲು ತೋಡಿಕೊಂಡರು  ದಿಲ್‌ಷಾದ್ ಉನ್ನಿಸಾ.

`ಒಂದು ಕಸದ ಕಂಟೈನರ್ ತುಂಬಿ ತುಳುಕಿ ಚೆಲ್ಲಾಡಿ ಇಡೀ ಪ್ರದೇಶದಲ್ಲಿ ದುರ್ವಾಸನೆ ಬೀರಿದ ನಂತರ ನಗರಸಭೆ ಸಿಬ್ಬಂದಿ ಅದನ್ನು ಖಾಲಿ ಮಾಡಿ ಇನ್ನೊಂದು ಇಡುತ್ತಾರೆ. ಅಷ್ಟೊತ್ತಿಗೆ ಮೂರು ಕಂಟೈನರ್ ತುಂಬುವಷ್ಟು ಕಸ ಅದರ ಸುತ್ತ ಬಿದ್ದಿರುತ್ತದೆ. ಕಸವನ್ನು ನಿಯಮಿತವಾಗಿ ಸಾಗಿಸಲು ನಗರಸಭೆ ಸಿಬ್ಬಂದಿ ಯಾಕೆ ಗಮನ ಹರಿಸುವುದಿಲ್ಲ?~ ಎಂದು ಪ್ರಶ್ನಿಸುತ್ತಾರೆ ಬಿ.ಜಿ.ಕಾಲೊನಿಯ ತಬ್ರೇಜ್.

ನಗರದಲ್ಲಿ ಕಸ ಸಂಗ್ರಹಿಸುವ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಕಾರಣ ಅನೇಕರು ಕಸವನ್ನು ನೇರವಾಗಿ ಚರಂಡಿಗೆ ಸುರಿಯುತ್ತಿದ್ದಾರೆ. ಕೆಲವರು ಕಸದ ತೊಟ್ಟಿ, ಖಾಲಿ ನಿವೇಶನಗಳಿಗೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿ ಎಸೆಯುತ್ತಿದ್ದಾರೆ. ಮಳೆ ನೀರಿನೊಂದಿಗೆ ಕಸವೂ ಹರಿದು ಚರಂಡಿ ಸೇರಿ ಅಲ್ಲಲ್ಲಿ ಕಟ್ಟಿಕೊಂಡು ಸಮಸ್ಯೆ ಸೃಷ್ಟಿಸುತ್ತಿದೆ.

`ನಗರಸಭೆ ಆಡಳಿತ ತಮಗೆ ಮನಸ್ಸು ಬಂದಾಗ ಚರಂಡಿಗಳಿಂದ ಕಸ ತೆಗೆದು ಹಾಕ್ತಾರೆ. ಚರಂಡಿ ಕ್ಲೀನ್ ಮಾಡಿದ ದಿನವೇ ಕಸ ಸಾಗಿಸ್ತಾರೆ ಅಂತಿಲ್ಲ. ಕಸ ಸಾಗಿಸೋ ಹೊತ್ಗೆ ಚರಂಡಿಯಿಂದ ಎತ್ತಿರೋ ಕಸ ಮತ್ತೆ ಚರಂಡಿಗೇ ಬಿದ್ದಿರುತ್ತೆ. ಇಲ್ಲಾಂದ್ರೆ ಬೀದಿಯಲ್ಲಿ ಚೆಲ್ಲಾಡಿರುತ್ತೆ~ ಎಂದು ಮಾತಿಗಿಳಿದರು ಚಿಲ್ಲರೆ ಅಂಗಡಿ ವ್ಯಾಪಾರಿ ಮಹಮದ್.

`ಇದೆಲ್ಲಾ ಬಡವರು ಬದ್ಕೋ ಜಾಗ. ಮಕ್ಕಳಿಗೆ ಸೊಳ್ಳೆ ಕಚ್ಚಿ ಗುಳ್ಳೆಗಳಾಗಿವೆ. ಕೆಟ್ಟ ವಾಸನೆಯಿಂದ ಊಟ ಕೂಡ ಸೇರಲ್ಲ. ಮಲೇರಿಯಾ ಜ್ವರದ ಭಯ ಹೋಗಿಲ್ಲ~ ಎಂದು ಅಳಲು ತೋಡಿಕೊಂಡರು.

ನಗರದ ನಜರಾಬಾದ್, ಗಾಂಧಿನಗರ, ಶಾಂತಿನಗರ, ಬನಶಂಕರಿ, ಮಹಾಲಕ್ಷ್ಮಿ ಬಡಾವಣೆ, ಚಿಕ್ಕಪೇಟೆ, ಅಗ್ರಹಾರ, ಎಂ.ಜಿ.ರಸ್ತೆ ಎರಡನೇ ಅಡ್ಡರಸ್ತೆ ಸೇರಿದಂತೆ ನಗರದ ಬಹುತೇಕ ಬಡಾವಣೆಗಳಲ್ಲಿ ಇದೇ ಸ್ಥಿತಿ ಇದೆ.

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪ್ರಸ್ತಾವನೆ
ತುಮಕೂರು:
ಶಿರಾ ರಸ್ತೆ ಸೀಬಿ ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರ್ಕಾರಕ್ಕೆ ಜಿಲ್ಲಾ ಆಡಳಿತ ಪ್ರಸ್ತಾವನೆ ಸಲ್ಲಿಸಿದೆ.

ಸೀಬಿ ಸಮೀಪ ಸುಮಾರು 80 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತ್ಯಾಜ್ಯ ವಿಲೇವಾರಿ ಘಟಕದ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಸಮ್ಮತಿಸಿದೆ. ಕಂದಾಯ ಇಲಾಖೆಯಿಂದ ಅನುಮೋದನೆ ಸಿಗಬೇಕಿದೆ. 15 ದಿನದಲ್ಲಿ ಸ್ಥಳ ಮಂಜೂರಾಗಬಹುದು. ಇನ್ನೊಂದು ತಿಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಕೊಳೆಯುವ ಕಸ ಮತ್ತು ಕೊಳೆಯದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಪರಿಹಾರ ತಡ
ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸ್ಥಳ ಸಿಕ್ಕಿಲ್ಲ. ನಗರದಲ್ಲಿ ಸಂಗ್ರಹವಾದ ಕಸವನ್ನು ಎಲ್ಲಿಗೆ ಹಾಕಬೇಕು ಎಂಬ ಚಿಂತನೆ ನಡೆಯುತ್ತಿದೆ. ಇದೀಗ ಜಿಲ್ಲಾಧಿಕಾರಿಗಳು ಶಿರಾ ರಸ್ತೆಯ ಸೀಬಿ ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳ ಗುರುತಿಸಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಆಗುವವರೆಗೆ ಕಂಟೈನರ್‌ಗಳನ್ನು ನಿಯಮಿತವಾಗಿ ಖಾಲಿ ಮಾಡಲು ಸಾಧ್ಯವಾಗುತ್ತಿಲ್ಲ.
- ಯಶೋಧಾ, ನಗರಸಭೆ ಅಧ್ಯಕ್ಷರು

ಬೆಂಬಲ ಬೇಕು
ಸಂಗ್ರಹಿಸಿದ ಕಸ ಎಲ್ಲಿ ಸುರಿಯಬೇಕು ಅನ್ನೋದೆ ದೊಡ್ಡ ಸಮಸ್ಯೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಸಿಕ್ಕ ತಕ್ಷಣ ಕಂಟೈನರ್‌ಗಳನ್ನು ಲಿಫ್ಟ್ ಮಾಡುತ್ತೇವೆ. ಸದ್ಯಕ್ಕೆ ದಾಬಸ್‌ಪೇಟೆ ಕಡೆಗೆ ಸ್ವಲ್ಪ ಕಸ ಕಳುಹಿಸಲಾಗುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ಕಸದ ಅರ್ಧದಷ್ಟು ಪ್ರಮಾಣವನ್ನೂ ಸಾಗಿಸಲು ಸಾಧ್ಯವಾಗುತ್ತಿಲ್ಲ.
- ಅನುರಾಗ್ ತಿವಾರಿ, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT