ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನ ನಡುವೆ ಸೇವಂತಿಗೆ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಣ್ಣ ರೈತರು ಸೇವಂತಿಗೆ, ಗುಲಾಬಿ, ಮಲ್ಲಿಗೆ, ಕನಕಾಂಬರ ಮತ್ತಿತರ ಹೂಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಅನೇಕ ರೈತರು ಅಲ್ಪ ಭೂಮಿಯಲ್ಲಿ ಪ್ರಮುಖ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿ ಹೂ ಬೆಳೆದು ಹಣ ಗಳಿಸುತ್ತಿದ್ದಾರೆ.

ಇಂತಹ ರೈತರು ರಾಜ್ಯದ ಎಲ್ಲೆಡೆ ಸಿಗುತ್ತಾರೆ. ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಗ್ರಾಮದ ಚಿರ್ನಳ್ಳಿಯ ರೈತ ಲಿಂಗಪ್ಪ ಅವರು ತೆಂಗಿನ ತೋಟದಲ್ಲಿ ಸೇವಂತಿಗೆ ಬೆಳೆಯುತ್ತಾರೆ.

ಲಿಂಗಪ್ಪ ಅವರಿಗೆ ಎರಡು ಎಕರೆ ಭೂಮಿ ಇದೆ. ಅದರಲ್ಲಿ ಫಲ ಕೊಡುವ ತೆಂಗಿನ ಮರಗಳಿವೆ. ಮರಗಳ ನಡುವಿನ  ಭೂಮಿಯಲ್ಲಿ ಹೂ ಬೆಳೆಯುವುದು ಅವರ ಕನಸಾಗಿತ್ತು. ಮೈಸೂರು ಜಿಲ್ಲೆಯ ಹಲವು ಊರುಗಳಲ್ಲಿ ರೈತರು ಸೇವಂತಿಗೆ ಬೆಳೆಯುತ್ತಾರೆ.

ಅಂತಹ ರೈತರ ಬಳಿ ಹೋದ ಲಿಂಗಪ್ಪ ಅವರ ಅನುಭವಗಳನ್ನು ಕೇಳಿ ತಿಳಿದುಕೊಂಡರು. ಒಂದು ಎಕರೆಯಲ್ಲಿ ತೆಂಗಿನ ಮರಗಳ ಮಧ್ಯೆ ಸೇವಂತಿಗೆ ಬೆಳೆಯುವ ಮನಸ್ಸು ಮಾಡಿದರು. ನಾಟಿಗೆ ಬೇಕಾದ ಬಿಳಿ ಮತ್ತು ಹಳದಿ ಸೇವಂತಿಗೆ ಸಸಿಗಳನ್ನು ಪರಿಚಯದ ರೈತರಿಂದ ತಂದರು. ಫೆಬ್ರುವರಿ ತಿಂಗಳಲ್ಲಿ ಸೇವಂತಿಯ ಸಸಿಗಳನ್ನು ನಾಟಿ ಮಾಡಿದರೆ ಆಗಸ್ಟ್ ತಿಂಗಳಲ್ಲಿ ಹೂ ಕೊಯ್ಲಿಗೆ  ಬರುತ್ತವೆ.

ತೆಂಗಿನ ಮರಗಳ ನಡುವೆ ಮೂರು ಅಡಿ ಅಂತರದಲ್ಲಿ ಕುಣಿ ತೆಗೆದು ಕೊಟ್ಟಿಗೆ ಗೊಬ್ಬರ ಹಾಕಿ ಸಸಿಗಳನ್ನು ನಾಟಿ ಮಾಡಿದರು. ಒಂದು ಎಕರೆ ತೆಂಗಿನ ತೋಟದಲ್ಲಿ ಒಂದು ಸಾವಿರ ಸೇವಂತಿಗೆ ಸಸಿಗಳನ್ನು ನಾಡಿ ಮಾಡಿದ್ದಾರೆ. ನಾಟಿ ಮಾಡಿದ ಒಂದು ಸಸಿ ಹಲವು ಕವಲೊಡೆದು ಗುಂಪಾಗಿ ಬೆಳೆಯುವುದು ಸೇವಂತಿಗೆ ವೈಶಿಷ್ಟ್ಯ.
 
ಮೂರು ವರ್ಷಗಳಿಂದ ಸೇವಂತಿಗೆ ಬೆಳೆಯುವ ಲಿಂಗಪ್ಪ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವುದಿಲ್ಲ. ಸೇವಂತಿಗೆ ಗಿಡಗಳಿಗೆ ತಗಲುವ ಬೇರು ಹುಳ ರೋಗ, ಎಲೆ ಕೊಳೆ ರೋಗಗಳನ್ನು ಜೀವಾಮೃತ ಬಳಸಿ ನಿಯಂತ್ರಿಸಿದ್ದಾರೆ.

ನಾಟಿ ಮಾಡಿದ ಆರನೆ ತಿಂಗಳಿಗೆ ಹೂಗಳು ಬರುತ್ತವೆ. ಒಂದು ತಿಂಗಳು ಗುಣಮಟ್ಟದ ಹೂಗಳನ್ನು ಪಡೆಯಬಹುದು. ಸೇವಂತಿಗೆ ಹೂಗಳಿಗೆ  ಬೇಡಿಕೆ ಇದೆ. ಲಿಂಗಪ್ಪ ಅವರು ಬೆಳೆದ ಹೂಗಳನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುವುದಿಲ್ಲ. ಮಂಗಳೂರು ಸೇರಿದಂತೆ ಅನೇಕ ಊರುಗಳಿಗೆ ಅವರೇ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಹಬ್ಬದ ಸೀಸನ್‌ಗಳಲ್ಲಿ ಸೇವಂತಿಗೆ ಹೂವಿಗೆ ಭಾರೀ ಬೇಡಿಕೆ ಇರುತ್ತದೆ.
ಗೊಬ್ಬರ, ನೀರು, ಹೂವಿನ ಕೊಯಲು ಮತ್ತು ಮಾಲೆ ಕಟ್ಟುವ ಕೂಲಿ ಇತ್ಯಾದಿಗಳ ಖರ್ಚು ಕಳೆದು ಅವರಿಗೆ 30 ಸಾವಿರ ರೂಪಾಯಿ ನಿವ್ವಳ ಆದಾಯ ಸಿಗುತ್ತದೆ. ಪ್ರತಿ ವರ್ಷ 20 ಹೂವಿನ ಗಿಡಗಳ ಹೂವನ್ನು ಕೊಯ್ಲು ಮಾಡುವುದಿಲ್ಲ. ಅವನ್ನು ಮುಂದಿನ ವರ್ಷದ ಸಸಿಗಳಾಗಿ ಉಪಯೋಗಿಸುತ್ತಾರೆ. ಈ ಗಿಡಗಳ ಚಿಗುರನ್ನು ಹದಿನೈದು ದಿನಕ್ಕೊಮ್ಮೆ ಚಿವುಟುತ್ತಾರೆ. ಹೀಗೆ ಮಾಡುವುದರಿಂದ ಅವು ಕವಲೊಡೆದು ಬೆಳೆಯುತ್ತವೆ.

ಸೇವಂತಿಗೆ, ಕಪ್ಪು ಮತ್ತು ಕೆಂಪು ಮಣ್ಣಿನ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಹೂ ಬೆಳೆಯಲು ಬಯಸುವ ರೈತರು ನಾಟಿಗೆ ಮೊದಲು ಅನುಭವಿ ರೈತರಿಂದ ಅಗತ್ಯ ಮಾಹಿತಿ ಪಡೆಯುವುದು ಉತ್ತಮ.


ಈಗ ಎಲ್ಲೆಡೆ ಹೂ ಬೆಳೆಯುವ ರೈತರು ಸಿಗುತ್ತಾರೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದಲೂ ಅಗತ್ಯವಾದ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಲಿಂಗಪ್ಪ ಅವರ ಮೊಬೈಲ್ ನಂಬರ್ : 9901725385.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT