ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು ತೋಟ, ತರಕಾರಿಯೂ ಮಾರಾಟ

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅಡಿಕೆ ತೋಟ, ತೆಂಗು, ಬಾಳೆ ಹಾಗೂ ಭತ್ತದ ಕೃಷಿಯ ಜೊತೆ ಜೊತೆಗೆ ತರಕಾರಿಯನ್ನೂ ಬೆಳೆಯಬಹುದು, ಅಧಿಕ ಲಾಭವನ್ನೂ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹಿರೇಮೈಥಿ ಗ್ರಾಮದ ಮಂಜಪ್ಪ ಪಿ. ಅಡಿಕೆ, ತೆಂಗು ಇತ್ಯಾದಿ ಬೆಳೆಯುವ ರೈತರು ತರಕಾರಿ ಕೃಷಿ ಕೈಗೊಳ್ಳುವುದು ಅತಿ ವಿರಳ. ಇಂಥ ಒಂದು ಸಾಹಸಕ್ಕೆ ಕೈಹಾಕಿ ತೋಟದ ಕೃಷಿಯ ಜೊತೆ ಜೊತೆಗೆ ವರ್ಷವಿಡೀ ಒಂದಲ್ಲ ಒಂದು ಬಗೆಯ ತರಕಾರಿ ಬೆಳೆದು ಮನೆ ಮನೆಗೆ ಮಾರಿ ಆದಾಯಗಳಿಸುತ್ತಿದ್ದಾರೆ ಮಂಜಪ್ಪ.

ಇವರು 4 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿದ್ದು, ಒಂದು ಎಕರೆ ವಿಸ್ತೀರ್ಣದಲ್ಲಿ ಅಡಿಕೆ ತೋಟ, ಅರ್ಧ ಎಕರೆಯಷ್ಟು ಕಬ್ಬು, ಒಂದೂವರೆ ಎಕರೆಯಷ್ಟು ವಿಸ್ತೀರ್ಣದಲ್ಲಿ ಭತ್ತದ ಕೃಷಿ ನಡೆಸುತ್ತಿದ್ದಾರೆ. ಇನ್ನು ಒಂದು ಎಕರೆಯಷ್ಟು ಜಾಗದಲ್ಲಿ ಚಿಕ್ಕ ಚಿಕ್ಕ ವಿಭಾಗ ಮಾಡಿಕೊಂಡು ನಿರಂತರವಾಗಿ ತರಕಾರಿ ಬೆಳೆಯುತ್ತಾರೆ. ಹರಿವೆ, ಕೊತ್ತಂಬರಿ, ಬಸಳೆ, ಬದನೆ, ಅವರೆಕಾಯಿ, ಬೀನ್ಸ್, ಮೂಲಂಗಿ, ಸೌತೆ, ಮೊಗೆಕಾಯಿ, ಬೆಂಡೆ, ಹೀರೆ ಹೀಗೆ ಬಗೆ ಬಗೆಯ ತರಕಾರಿ ಬೆಳೆಯುವ ಇವರು ಸದಾ ಕೃಷಿ ನಿರತರು.

ತರಕಾರಿಗಾಗಿ ಮೀಸಲಿಟ್ಟ ಜಮೀನಿನ ಈ ಭಾಗದಲ್ಲಿ ಚಿಕ್ಕ ಚಿಕ್ಕ ವಿಭಾಗದಲ್ಲಿ ಬೇರೆ ಬೇರೆ ತರಕಾರಿ ಬೆಳೆಯುತ್ತಾರೆ. ಒಂದು ಅಂಕಣದಲ್ಲಿ ಬೆಳೆದ ಒಂದು ಬಗೆಯ ತರಕಾರಿ ಫಸಲು ಆರಂಭವಾಗುತ್ತಿದ್ದಂತೆ ಇನ್ನೊಂದು ಅಂಕಣದಲ್ಲಿ ಬೀಜ ಬಿತ್ತಿ ತರಕಾರಿ ಕೃಷಿ ಆರಂಭಿಸುತ್ತಾರೆ. ತಾವು ಬೆಳೆದ ಸೊಪ್ಪು ಮತ್ತು ತರಕಾರಿಗಳನ್ನು ಇವರು ವರ್ಷವಿಡೀ ಸ್ವತಃ ಮಾರಾಟಮಾಡಿ ಬರುತ್ತಾರೆ. ಬೈಕ್‌ನಲ್ಲಿ ತರಕಾರಿ ಹೊರೆ ಕಟ್ಟಿಕೊಂಡು ಕೋಡೂರು, ಬಟ್ಟೆಮಲ್ಲಪ್ಪ, ಬಾಣಿಗ, ಮಾರುತಿಪುರ, ಮಂಡ್ರಿ, ರಿಪ್ಪನ್‌ಪೇಟೆ ಗ್ರಾಮಗಳಿಗೆ ಸಾಗಿ ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಾರೆ.

ವಾರದ ದಿನಗಳಲ್ಲಿ ಪ್ರತಿ ದಿನ ಒಂದೊಂದು ಗ್ರಾಮಕ್ಕೆ ಹೋಗುತ್ತಾರೆ. ತರಕಾರಿ ಅಥವಾ ಸೊಪ್ಪುಗಳನ್ನು ಮುಂಚಿನ ದಿನ ಸಂಜೆ ಕಿತ್ತು ಚೆನ್ನಾಗಿ ತೊಳೆದು ಕಟ್ಟುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಸೌತೆ,  ಹೀರೆ, ಬೀನ್ಸ್, ಬೆಂಡೆ ಕಾಯಿಗಳನ್ನು ತೂಕದ ಲೆಕ್ಕದಲ್ಲಿ ಮಾರಿದರೆ ಮೂಲಂಗಿ ಹಾಗೂ ಸೊಪ್ಪುಗಳನ್ನು ಕಟ್ಟಿನ ಲೆಕ್ಕದಲ್ಲಿ ಮಾರುತ್ತಾರೆ. ಬೆಳಿಗ್ಗೆ 7ರ ಸುಮಾರಿಗೆ ಮನೆಯಿಂದ ಹೊರಡುವ ಇವರು ಆಯಾ ಗ್ರಾಮದಲ್ಲಿ ಮನೆ ಮನೆಗೆ ಸಾಗಿ ಮಾರಾಟ ಮಾಡಿ ಬೆಳಿಗ್ಗೆ 11ರ ಸುಮಾರಿಗೆ ಮನೆಗೆ ಹಿಂತಿರುಗುತ್ತಾರೆ. ಉಳಿದ ಸಮಯದಲ್ಲಿ ಕೃಷಿ ನಿರತರಾಗುವ ಇವರು ತರಕಾರಿಯನ್ನು ಉಪ ಬೆಳೆಯಾಗಿ ಬೆಳೆದು ವರ್ಷದ ಎಲ್ಲಾ ವಾರಗಳಲ್ಲಿ ಆದಾಯ ಗಳಿಸುತ್ತಾರೆ.

ಹೊಲದ ಒಂದು ಮೂಲೆಯಲ್ಲಿ ತೆರೆದ ಬಾವಿ ನಿರ್ಮಿಸಿ ಪಂಪ್ ಅಳವಡಿಸಿಕೊಂಡಿರುವ ಇವರು ಮಳೆಗಾಲದ ನಂತರದ ದಿನಗಳಲ್ಲಿ ತರಕಾರಿ ಹೊಲಕ್ಕೆ ನೀರು ಹಾಯಿಸಿ ಕೃಷಿ ನಡೆಸುತ್ತಾರೆ. ಅಡಿಕೆ, ತೆಂಗು, ಕಬ್ಬು ಇತ್ಯಾದಿ ವಾಣಿಜ್ಯ ಬೆಳೆಗಳ ಆದಾಯವಿದ್ದರೂ ವರ್ಷವಿಡೀ ತರಕಾರಿ ಬೆಳೆದು ಆದಾಯಗಳಿಸುವ ಇವರ ಪರಿಶ್ರಮ ಮತ್ತು ಯಶಸ್ಸಿನ ಹಾದಿ ಗ್ರಾಮದ ಉಳಿದ ರೈತರಿಗೆ ಮಾದರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT