ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚನೆ:ಆರು ಜನರ ಬಂಧನ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಇ-ಸುಗಮ್~ ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದ ಆರು ಆರೋಪಿಗಳನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ರಾಜಸ್ತಾನ ಮೂಲದ ತಿಲೋಕ್‌ಚಂದ್, ದಿನೇಶ್‌ಕುಮಾರ್, ರಮೇಶ್‌ಕುಮಾರ್, ಶುಭಸಿಂಗ್, ಚಿಕ್ಕಮಗಳೂರು ಜಿಲ್ಲೆಯ ಸಿ.ಡಿ.ಹುಲಿಯಪ್ಪ ಉರುಫ್ ಶಿವಕುಮಾರ್ ಮತ್ತು ಕಾಡುಗೊಂಡನಹಳ್ಳಿಯ ಜಾಫರ್‌ಬೇಗ್ ಬಂಧಿತರು. ಆರೋಪಿಗಳಿಂದ ನಕಲಿ ದಾಖಲೆಪತ್ರಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

`ಡಿಸ್ಪೆನ್ಸರಿ ರಸ್ತೆಯಲ್ಲಿರುವ ಸ್ಟಾರ್ ಎಂಟರ್‌ಪ್ರೈಸಸ್ ಮತ್ತು ಸೂರ್ಯ ಪ್ರಕಾಶ್ ಏಜೆನ್ಸಿಸ್ ಹೆಸರಿನ ಸೈಕಲ್ ಮಾರಾಟ ಮಳಿಗೆಗಳ ಬಳಕೆದಾರರ ಗುರುತಿನ ಸಂಖ್ಯೆ (ಯೂಸರ್ ಐ.ಡಿ) ಹಾಗೂ ರಹಸ್ಯ ಸಂಕೇತವನ್ನು (ಪಾಸ್ ವರ್ಡ್) ಆರೋಪಿಗಳು ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿದ್ದರು. ಬಂಧಿತರು ಆ ಎರಡು ಮಳಿಗೆಗಳ ಹೆಸರಿನಲ್ಲಿ ಸರ್ಕಾರಕ್ಕೆ 68 ಲಕ್ಷ ರೂಪಾಯಿ ತೆರಿಗೆ ವಂಚನೆ ಮಾಡಿದ್ದರು~ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

`ಇದೇ ರೀತಿ ತೆರಿಗೆ ವಂಚನೆ ಮಾಡುತ್ತಿರುವ ಆರೋಪಿಗಳ ಹಲವು ಗುಂಪುಗಳು ನಗರದ ಸುತ್ತಮುತ್ತ ಕಾರ್ಯ ನಿರ್ವಹಿಸುತ್ತಿವೆ. ಆ ಗುಂಪುಗಳು ಸೈಕಲ್ ವ್ಯಾಪಾರಿಗಳು, ಕಲ್ಲು ಮಾರಾಟಗಾರರು ಮತ್ತು ಸಣ್ಣಪುಟ್ಟ ಅಂಗಡಿಗಳ ಟಿನ್ ನಂಬರ್‌ಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ಮಾಡುತ್ತಿದ್ದಾರೆ.

ಆನೇಕಲ್, ಹೊಸೂರು ರಸ್ತೆ, ಜಿಗಣಿ ಸುತ್ತಮುತ್ತ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ರೀತಿಯ ವಂಚನೆ ದಂಧೆ ನಡೆಯುತ್ತಿದೆ. ಇದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗೆ ನಷ್ಟವಾಗುತ್ತಿದೆ~ ಎಂದು ರಮೇಶ್ ಮಾಹಿತಿ ನೀಡಿದರು.

ವಂಚನೆ ಹೇಗೆ?: ವರ್ತಕರ ಅನುಕೂಲಕ್ಕಾಗಿ ಸರ್ಕಾರ ಇ-ಸುಗಮ್ ವಿಧಾನವನ್ನು ಜಾರಿಗೊಳಿಸಿದೆ. ಈ ವಿಧಾನದ ಅನ್ವಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಸರು ನೋಂದಾಯಿಸುವ ವರ್ತಕರಿಗೆ ಪ್ರತ್ಯೇಕ `ಟಿನ್ ನಂಬರ್~, ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತ ನೀಡಲಾಗಿರುತ್ತದೆ.
 
ವರ್ತಕರು ಆ ಮಾಹಿತಿ ಬಳಸಿ ಆನ್‌ಲೈನ್‌ನಲ್ಲೇ ತೆರಿಗೆ ಪಾವತಿಸಬಹುದು ಮತ್ತು ಸರಕು ಸಾಗಣೆಗೂ ಬಳಸಿಕೊಳ್ಳಬಹುದು. `ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ್ದ ಸ್ಟಾರ್ ಎಂಟರ್‌ಪ್ರೈಸಸ್ ಮತ್ತು ಸೂರ್ಯ ಪ್ರಕಾಶ್ ಏಜೆನ್ಸಿಸ್ ಮಳಿಗೆಗೂ ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತ ನೀಡಲಾಗಿತ್ತು.
 
ಆ ಮಳಿಗೆಗಳ ಲೆಕ್ಕಪರಿಶೋಧನಾ ಕಾರ್ಯ ನಿರ್ವಹಿಸುತ್ತಿದ್ದ ಹುಲಿಯಪ್ಪ ಮಳಿಗೆಗಳ `ಟಿನ್ ನಂಬರ್~, ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತದ ಬಗ್ಗೆ ವಿವರ ಕಲೆ ಹಾಕಿದ್ದ. ಆ ವಿವರಗಳನ್ನು ಇತರೆ ಆರೋಪಿಗಳಿಗೆ ನೀಡಿದ್ದ. ಆರೋಪಿಗಳು ಆ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು  ಮಳಿಗೆಗಳ ಹೆಸರಿನಲ್ಲಿ ಗ್ರಾನೈಟ್ ವ್ಯಾಪಾರಿಗಳಿಗೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿಕೊಟ್ಟಿದ್ದರು.
 
ಗ್ರಾನೈಟ್ ವ್ಯಾಪಾರಿಗಳು ಆ ಮಳಿಗೆಗಳ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದರು ಮತ್ತು ಗ್ರಾಹಕರಿಗೆ ನಕಲಿ ಬಿಲ್‌ಗಳನ್ನು ನೀಡಿದ್ದರು. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿತ್ತು~ ಎಂದು ಇನ್‌ಸ್ಪೆಕ್ಟರ್ ಬದರಿನಾಥ್ ತಿಳಿಸಿದರು.

`ಗ್ರಾನೈಟ್ ವ್ಯಾಪಾರಿಗಳು ಆರೋಪಿಗಳಿಗೆ ತೆರಿಗೆ ಹಣದಲ್ಲಿ ಶೇ 6ರಷ್ಟು ಕಮಿಷನ್ ನೀಡುತ್ತಿದ್ದರು. ಅಲ್ಲದೇ ತೆರಿಗೆಯ ಉಳಿದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದೆ ವಂಚಿಸುತ್ತಿದ್ದರು. ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು~ ಎಂದು ಅವರು ಮಾಹಿತಿ ನೀಡಿದರು.

ಡಿಸಿಪಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಕಬ್ಬನ್‌ಪಾರ್ಕ್ ಉಪ ವಿಭಾಗದ ಎಸಿಪಿ ಡಿ.ದೇವರಾಜ್, ಇನ್‌ಸ್ಪೆಕ್ಟರ್ ಎಸ್.ಬದರಿನಾಥ್, ಕಾನ್‌ಸ್ಟೇಬಲ್ ದಯಾನಂದ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT